ರಾಯಚೂರು ಬ್ಯಾನರ್ ನಲ್ಲಿ ಸಿದ್ದರಾಮಯ್ಯ ಫೋಟೋ ಮಾಯ: ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಅಭಿಮಾನಿಗಳ ಆಕ್ರೋಶ

ಯಾದಗಿರಿ:-ರಾಯಚೂರಿನಲ್ಲಿ ಕಾಂಗ್ರೆಸ್ ಮುಖಂಡರಾದ ರಾಹುಲಗಾಂಧಿ ಪಾದಯಾತ್ರೆಯ ಭಾರತ್ ಜೋಡೋ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯ ಬ್ಯಾನರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಫೋಟೋ ಮಾಯವಾಗಿರುವುದನ್ನು ಯಾದಗಿರಿ ಜಿಲ್ಲಾ ಸಿದ್ದರಾಮಯ್ಯ ಯುವ ಬ್ರಿಗೇಡ್ ಅಧ್ಯಕ್ಷರಾದ ಬಸವರಾಜ ಅತ್ನೂರು ಖಂಡಿಸಿದ್ದಾರೆ.

ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತವಿದ್ದು, ಯಾದಗಿರಿ ಮತ್ತು ರಾಯಚೂರಿನಲ್ಲಿ ಅತಿ ಹೆಚ್ಚು ಜನರು ಇದ್ದಾರೆ. ಮಾಜಿ ಮುಖ್ಯಮಂತ್ರಿಯ ಫೋಟೋ ಇರುವುದನ್ನು ಇರದೇ ಇರುವುದು ಅತಿ ಖಂಡನೀಯ.ಇದನ್ನು ಕೆಪಿಸಿಸಿ ಜಿಲ್ಲೆಯ ನಾಯಕರು ಗಮನಹರಿಸಿಲ್ಲವೇ ?, ರಾಜ್ಯ ಕೆಪಿಸಿಸಿ ಅಧ್ಯಕ್ಷರ ಮೇರೆಗೆ ಸಂಚು ನಡೆದಿದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ?. ರಾಜ್ಯದಲ್ಲಿ ಉತ್ತಮ ಮುಖ್ಯಮಂತ್ರಿ ಎನ್ನುವ ಪ್ರಶಸ್ತಿಗೆ ಭಾಜನರಾದ ಧೀಮಂತ ನಾಯಕರು ಸಿದ್ದರಾಮಯ್ಯನವರು.

ಸಿದ್ದರಾಮಯ್ಯ ಇರದೆ ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ?.
ಎಲ್ಲಾ ಸಮಾಜದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳಿದ್ದಾರೆ.ಇದರ ಬಗ್ಗೆ ಕಾಂಗ್ರೆಸ್ ಕೇಂದ್ರ ನಾಯಕರಿಗೂ ಗೊತ್ತು. ಡಿಕೆ. ಶಿವುಕುಮಾರವರ ಸರ್ವಾಧಿಕಾರತ್ವ ಧೋರಣೆ ನಡೆಯುವುದಿಲ್ಲ. ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಮತ್ತೆ ಕಾಂಗ್ರೆಸ್ಸಿಗೆ ವಿರೋಧ ಪಕ್ಷದಲ್ಲಿಯೂ ಸ್ಥಾನ ಸಿಗುವುದಿಲ್ಲ ಎಂದು ಕಿಡಿಕಾರಿದರು.ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರೆದರೆ ರಾಜ್ಯಾದ್ಯಂತ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಅಭಿಯಾನ ಹಮ್ಮಿಕೊಳ್ಳಬೇಕಾದೀತು ಎಂದು ಎಚ್ಚರಿಸಿದರು.
ಯಾದಗಿರಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಮತ್ತು ಕುರುಬ ಸಮಾಜದ ಮತಗಳಿದ್ದು, ಇದೇ ರೀತಿ ಸಿದ್ದರಾಮಯ್ಯನವರನ್ನು ಅವಮಾನಿಸಿದರೆ ಕಾಂಗ್ರೆಸ್ಗೆ ವಿರೋಧ ಮಾಡಬೇಕಾದಿತು ಎಂದು ಹೇಳಿದರು.ಕೂಡಲೇ ರಾಯಚೂರು ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಿವಿ. ನಾಯಕ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯಾಚಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.