ಕಾಂಗ್ರೆಸ್ ಕಾರ್ಯಕರ್ತರ ಕಡೆಗಣನೆ: ಹಿರಿಯರ ವಿರುದ್ಧ ಯುವ ನಾಯಕರ ಆಕ್ರೋಶ !

ಬಸವರಾಜ ಕರೆಗಾರ
basavarajkaregar@gmail.com

ಯಾದಗಿರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಕಳೆದ ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ಹಿರಿಯ ನಾಯಕರು ಕೆಲವರಿಗೆ ಕಾಂಗ್ರೆಸ್ ಸದಸ್ಯತ್ವ ಪಡೆದಿಲ್ಲ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಪಾದಯಾತ್ರೆಯಲ್ಲಿ ಅವಕಾಶ ಕೊಟ್ಟಿಲ್ಲ ಎನ್ನುವ ಕೂಗು ಬಲವಾಗಿ ಕೇಳಿ ಬರುತ್ತಿದೆ.ಯಾದಗಿರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ನ ಕೆಲ ಯುವ ನಾಯಕರು ಬೆಳೆಯುತ್ತಿರುವುದನ್ನು ಕೆಲವರು ಸಹಿಸದೆ ಹೋಗುತ್ತಿದ್ದಾರೆ. ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎನ್ನುವ ಬಲವಾದ ಆರೋಪ ಕಾಂಗ್ರೆಸ್ ನಲ್ಲಿ ಕೇಳಿ ಬರುತ್ತಿದೆ.

ಇತ್ತೀಚಿಗೆ ಕಾಂಗ್ರೆಸ್ ಪಕ್ಷದಲ್ಲಿ ಯುವ ಪಡೆಯ ಜೊತೆಗೆ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಕೂಗು ಇದೆ.ಯುವ ಜನರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನು ಸಹಿಸದ ಜಿಲ್ಲೆಯ ಹಿರಿಯ ನಾಯಕರು ಸಹಿಸಿಕೊಳ್ಳಲಾಗುತ್ತಿಲ್ಲ. ಹೆಸರು ಹೇಳಲು ಇಚ್ಛಿಸದ ಕೆಲವು ಕಾರ್ಯಕರ್ತರು ಹಿರಿಯ ನಾಯಕರಿಗೆ ಅಧಿಕಾರಕ್ಕೋಸ್ಕರ ಪದವಿ ಬೇಕು. ಪಕ್ಷ ಸಂಘಟನೆ ಅವರಿಗೆ ಬೇಕಿಲ್ಲ. ಪಕ್ಷ ಸಂಘಟನೆ ಮಾಡಲು ನಮಗೂ ಬಿಡುತ್ತಿಲ್ಲ. ಕೆಲವು ನಾಯಕರಂತೂ ದೊಡ್ಡ ನಾಯಕರೆಂದು ಗುರುತಿಸಿಕೊಳ್ಳುತ್ತಿದ್ದಾರೆ.ಸಮಾರಂಭದಲ್ಲಿ ಬೊಗಳೆ ಭಾಷಣ ಬಿಗಿದರೆ ಮತ ಬರುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ, ನೆಲದ ಮೇಲೆ ಓಡಾಡಿ ಬೂತ್ ಮಟ್ಟದಲ್ಲಿ ಸಂಘಟನೆ ಮಾಡಬೇಕು ಎನ್ನುತ್ತಾರೆ ಕಾಂಗ್ರೆಸ್ ಯುವ ನಾಯಕರು.ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಲವಾಗಿ ಬೇರೂರುತ್ತಿದ್ದಾರೆ. ಇದನ್ನು ಕೆಲವು ಹಿರಿಯ ನಾಯಕರು ಸಹಿಸುತ್ತಿಲ್ಲ.

ಕೆಲವು ನಾಯಕರಂತು ತಮಗೆ ಬೇಕಿದ್ದವರಿಗೆ ಆಯಾ ಕಟ್ಟಿನ ಸ್ಥಾನ ಸಿಗುವಂತೆ ಮಾಡಿ ತಮ್ಮ ಹಿಂದೆಯೇ ಇರುವಂತೆ ಮಾಡಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ! ,ಇದರಿಂದ ಪಕ್ಷಕ್ಕೆ ಯಾವ ರೀತಿಯ ಲಾಭವು ಇಲ್ಲ !

ಬಹಳ ವರ್ಷಗಳಿಂದ ಪಕ್ಷದಲ್ಲಿ ಹಳಬರು ಬೇರು ಬಿಟ್ಟಿರುವುದರಿಂದ ಸಂಘಟನೆಗೆ ಒತ್ತು ಕೊಡಲಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರಂತು ಯುವ ಘಟಕವನ್ನು ಕಂಡರೆ ಆಗುತ್ತಿಲ್ಲ. ಅವರ ಏಳಿಗೆಯಿಂದ ಮುಂದಿನ ದಿನಗಳಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿದೆ. ಇದರಿಂದಾಗಿಯೇ ದೇಶಾದ್ಯಂತ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ !

ಬಿಜೆಪಿ ಪಕ್ಷದ ಹಾಗೆ ಆರ್ ಎಸ್ ಎಸ್ ಸಂಘದಿಂದ ಹಿಡಿದು ತಮ್ಮದೇ ರೀತಿಯಲ್ಲಿ ಸರ್ವೇ ಮಾಡುತ್ತಿರುವುದನ್ನು ನಾವು ನೋಡಿ ಕಲಿಯಬೇಕಿದೆ. ಒಂದು ಕ್ಷೇತ್ರದಲ್ಲಿ ಆರ್ ಎಸ್ ಎಸ್ ಸಂಘಟನೆ ಬಂದು ನೆಲೆಯೂರಿತೆಂದರೆ ಅಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದೇ ಅರ್ಥ. ಆ ರೀತಿಯಲ್ಲಿ ಸಂಘಟನಾತ್ಮಕವಾಗಿ ಮನಪರಿವರ್ತನೆ ಮಾಡುವರು.ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹಾಗಿಲ್ಲ. ಎಲ್ಲವೂ ಹಿರಿಯರ ಹಾಗೆ ನಡೆಯುತ್ತಿದೆ.ಕಾರ್ಯಕರ್ತರ ಸ್ಥಿತಿ ಹೇಳತೀರದು. ಮಾತನಾಡಿಸುವುದೇ ಇಲ್ಲ. ಇದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಸಾಧ್ಯವೇ ಎನ್ನುವ ಕೂಗು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿದೆ.

ಯುವಕರ ಏಳಿಗೆಯನ್ನು ಕಂಡು, ನೀವು ಅಷ್ಟೊಂದು ಮುಂದುವರಿಯಬೇಡಿ ಪಕ್ಷ ಸಹಿಸುವುದಿಲ್ಲ ಎನ್ನುತ್ತಾರೆ ಹಿರಿಯ ನಾಯಕರು.ಇದರಿಂದ ಯಾವ ರೀತಿಯಾಗಿ ಸಂಘಟನೆ ಮಾಡಲು ಸಾಧ್ಯ ಎನ್ನುತ್ತಾರೆ ಕಾರ್ಯಕರ್ತರು. ಪಕ್ಷಕ್ಕೆ ಯುವ ಪಡೆ ಬೇಕಿದೆ. ಕಾರ್ಯಕರ್ತರು ಜೀವಾಳ. ಅವರನ್ನೇ ಕಡೆಗಣಿಸಿದರೆ ಪರಸ್ಥಿತಿ ಬಿಗಡಾಯಿಸಬಹುದು.

ಹಣ ಕೊಟ್ಟರೆ ಮತ ಹಾಕುವರು ಎನ್ನುವ ಕಾಲ ಮುಗಿಯಿತು. ಐದು ವರ್ಷದಲ್ಲಿ ನಿಮ್ಮ ಸಾಧನೆ ಏನು ಎಂದು ಕೇಳುವ ಜನರಿದ್ದಾರೆ. ನಿಮ್ಮ ಕೆಲಸ ಮಾಡುವ ಭಟ್ಟಂಗಿಗಳಿಗೆ ಮಾತ್ರ ಮಣೆ ಹಾಕಿ ಇತರರನ್ನು ಕಡೆಗಣಿಸಿದರೆ ನಿಮ್ಮವರೇ ನಿಮಗೆ ವೋಟು ಹಾಕುವುದಿಲ್ಲ ಎನ್ನುತ್ತಾರೆ.ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದೆ.ಇನ್ನು ಪಕ್ಷದ ಟಿಕೆಟ್ ಗಾಗಿ ಪೈಪೋಟಿ ನಡೆಯುತ್ತಿದೆ. ಕೇವಲ ಏಳು ತಿಂಗಳಲ್ಲಿ ಕ್ಷೇತ್ರದಾಧ್ಯಂತ ಸುತ್ತಾಡಲು ಪಕ್ಷ ಸಂಘಟಿಸಲು ಸಾಧ್ಯವೇ! ಚುನಾವಣೆ ಬಂದಾಗ ಮತದಾರರನ್ನು ಮಾತನಾಡಿಸುವ ನಮ್ಮ ಮಾತನ್ನು ಮತದಾರರು ಕೇಳಲು ಸಾಧ್ಯವೇ! ಯೋಚಿಸಬೇಕಿದೆ. ಇಲ್ಲದಿದ್ದರೆ ಕಂಡರಿಯದ ಸೋಲು ಅನುಭವಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಕಾಂಗ್ರೆಸ್ಸಿನ ಹಿರಿಯ ನಾಯಕರನ್ನು ಎಚ್ಚರಿಸಿದ್ದಾರೆ. ಕಾರ್ಯಕರ್ತರನ್ನು ಕಡೆಗಣಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.

ಹಿರಿಯರು ಮಾಜಿ ಸಚಿವರೊಬ್ಬರು ಪಕ್ಷ ತ್ಯಜಿಸಿದ ನಂತರ ಪಕ್ಷದಲ್ಲಿ ಕೊಂಚ ಒಗ್ಗಟ್ಟಿನ ಕೊರತೆ ಉಂಟಾಗಿದ್ದು ನಿಜ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರು ಕಿರಿಯರೆನ್ನದೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ.ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ನಾಯಕರು ಸೇರಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ಹಳ್ಳಿಗಳಲ್ಲಿಯೂ ಯುವಕರೆಲ್ಲರು ಒಗ್ಗೂಡಿ ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ.

” ಮಲ್ಲಪ್ಪ ಶಿವಪುರ
ಅಧ್ಯಕ್ಷರು ಯುವ ಕಾಂಗ್ರೆಸ್ ಯಾದಗಿರಿ ಬ್ಲಾಕ್”

 

ಕಾಂಗ್ರೆಸ್ ಪಕ್ಷ ಯುವಕರಿಗೆ ಬೆಲೆ ಕೊಡುತ್ತಿಲ್ಲ. ಕೆಲ ಮುಖಂಡರು ನಮ್ಮ ಏಳಿಗೆಯನ್ನು ಸಹಿಸುತ್ತಿಲ್ಲ. ಇದು ಮುಂದುವರೆದರೆ ಮುಂದಿನ ದಿನಗಳಲ್ಲಿ ಪಕ್ಷ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಮುಕೇಶ ಯುವ ಕಾಂಗ್ರೆಸ್ ಮುಖಂಡರು ಹಯ್ಯಳ ಬಿ “

 

ಜಿಲ್ಲೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು ಗ್ರಾಮೀಣ ಪ್ರದೇಶದ ಕಾರ್ಯಕರ್ತರನ್ನೇ ಕಡೆಗಣಿಸುತ್ತಿದ್ದಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ ತಮ್ಮ ಹಿಂದಿರುವವರನ್ನಷ್ಟೆ ಕರೆದುಕೊಂಡು ಹೋಗುವರು. ಇದಕ್ಕೆ ಸಿದ್ದರಾಮೋತ್ಸವ ಕಾರ್ಯಕ್ರಮವೇ ಸಾಕ್ಷಿ. ನಾವಾರು ಕಣ್ಣಿಗೆ ಕಾಣುತ್ತಿಲ್ಲ.ಹಲವು ವರ್ಷಗಳಿಂದ ಪಕ್ಷದಲ್ಲಿದ್ದರೂ ಸ್ಥಾನಮಾನ ಸಿಗದೇ ಇರುವುದು ಬೇಸರ ತಂದಿದೆ.

 ” ಮರಿಗೌಡ ಚಿಕ್ಕಮೇಟಿ  ಯುವ ಕಾಂಗ್ರೆಸ್ ಮುಖಂಡರು  ಬಸಂತಪುರ  “

About The Author