ಮಾಜಿ ಹಾಲಿ ಶಾಸಕರ ಟಾಕ್ ವಾರ್:ಆರೋಪ ಪ್ರತ್ಯಾರೋಪ:ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಬಸವರಾಜ ಕರೆಗಾರ

ಶಹಾಪೂರ:ಶಹಾಪುರ ಮತಕ್ಷೇತ್ರದಲ್ಲಿ ಹಾಲಿ ಶಾಸಕರು ಮತ್ತು ಮಾಜಿ ಶಾಸಕರ ನಡುವೆ ಟಾಕ್ ವಾರ್ ಆರಂಭವಾಗಿದೆ. ಚುನಾವಣೆ ಸಮಿತಿಸುತ್ತಿರುವ ಸಂದರ್ಭದಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಪ್ರತ್ಯಾರೋಪಗಳು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ವೈರಲ್ ಆಗುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲವೂ ಸಹಜವಾದರೂ ಇಂತಹ ಆರೋಪಗಳು ಇದೆ ಮೊದಲು ಎನ್ನಬಹುದು. ಇಷ್ಟು ದಿನಗಳ ಕಾಲ ಮುಸುಕಿನ ಗುದ್ದಾಟವೇ ನಡೆಯುತ್ತಿತ್ತು. ಈಗ ಬಹಿರಂಗಕ್ಕೆ ಬಂದಿದೆ ಎಂದು ಸಾರ್ವಜನಿಕರು ಅಂದುಕೊಳ್ಳುತ್ತಿದ್ದಾರೆ. ಆಶ್ರಯ ಮನೆಗಳ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ತಕ್ಷಣವೇ ಆಶ್ರಯ ಮನೆಗಳ ಲಾಟರಿ ಆಯ್ಕೆಯನ್ನು ರದ್ದು ಮಾಡಿ, ಜಿಲ್ಲಾಡಳಿತ ನೇತೃತ್ವದಲ್ಲಿ ಮನೆಗಳ ಆಯ್ಕೆ ನಡೆಯಲಿ ಎಂದು ಬಿಜೆಪಿ ಮುಖಂಡರ ಜೊತೆ ಅಹೋರಾತ್ರಿ ನಗರ ಸಭೆಯ ಆವರಣದಲ್ಲಿ ಮಾಜಿ ಶಾಸಕರಾದ ಗುರು ಪಾಟೀಲ ಶಿರವಾಳ್ ಆಶ್ರಯ ಸಮಿತಿಯ ವಿರುದ್ಧ ರೊಚ್ಚಿಗೆದ್ದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.

ಇದನ್ನು ಮೊದಲ್ಗೊಂಡು ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಮಾಜಿ ಶಾಸಕರ ವಿರುದ್ಧ ಹರಿಹಾಯ್ದು ನಾವು ಯಾವುದೇ ಆಮಿಷಯಕ್ಕೆ ಒಳಗಾಗಿಲ್ಲ. ರಾಜ್ಯಸಭೆ ಚುನಾವಣೆಯಲ್ಲಿ ಹಣ ತೆಗೆದುಕೊಂಡು ಮತದಾನ ಮಾಡಿದವರು ಯಾರು ಎಂದು ಪರೋಕ್ಷವಾಗಿ ಮಾಜಿ ಶಾಸಕರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದರು.ಬಿಜೆಪಿ ಸರಕಾರ 40% ಸರ್ಕಾರ ಎಂದು ಆರೋಪಿಸಿದ್ದರು. ನಂತರದ ದಿನದಲ್ಲಿ ಮಾಜಿ ಶಾಸಕರಾದ ಗುರುಪಾಟೀಲ ಶಿರವಾಳ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋದ ಮೂಲಕ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಅವರಿಗೆ ತಿರುಗೇಟು ನೀಡುತ್ತಾ, ಕಾಂಗ್ರೆಸ್ಸಿನ ಇಕ್ಬಾಲ್ ಅಹಮದ್ ಸರಡಗಿಯವರನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲಿಸಿದವರು ಯಾರು ಎಂದು ಅರಿತುಕೊಳ್ಳಬೇಕು. ಆ ಸಂದರ್ಭದಲ್ಲಿ ಹಣ ತೆಗೆದುಕೊಂಡವರು ಯಾರು. ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಕಾಂಗ್ರೆಸ್ಸಿನ ಸರಡಗಿಯವರನ್ನು ಸೋಲಿಸಿದ್ದರು ಎಂದು ಆರೋಪಿಸಿದರು.

ಇದರಿಂದ ಕುಪಿತಗೊಂಡ ಶಾಸಕರಾದ ಶರಣಬಸಪ್ಪಗೌಡ ದರ್ಶನಪುರ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಾ,ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು.ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ.ಪ್ರಸ್ತುತ ಇಕ್ಬಾಲ್ ಅಹಮದ್ ಸರಡಗಿ ಕಲಬುರ್ಗಿಯಲ್ಲಿ ಆರೋಗ್ಯವಂತರಾಗಿದ್ದಾರೆ.ಅವರನ್ನು ವಿಚಾರಿಸೋಣ. ಬಹಿರಂಗ ಚರ್ಚೆಯಾಗಲಿ ಎಂದರು.ಜೆಡಿಎಸ್ ಅಭ್ಯರ್ಥಿಯ ನಾಮಪತ್ರಕ್ಕೆ ಸಹಿ ಹಾಕಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದವರು ಯಾರು. ಇದು ಮಾಧ್ಯಮದಲ್ಲಿಯೇ ಚರ್ಚೆಯಾಗಿದೆ.ನಮಗೂ ಹೆಚ್ಚುವರಿಯಾಗಿ 24 ಮತಗಳಿದ್ದವು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ ಹಾಕಲು ತಿಳಿಸಿದರು.ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತನಾದ ಕಾರಣ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ತಿಳಿಸಿದರು.ಹಾಲಿ ಮತ್ತು ಮಾಜಿ ಶಾಸಕರ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ಚರ್ಚೆಯಾಗುತ್ತಿವೆ.

About The Author