ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಕೊಂಡ ಸಾಧಕರುಗಳಿಗೆ ಮಹಾಶೈವ ಧರ್ಮಪೀಠದಿಂದ ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’

ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದ್ದಿಲ್ಲದೆ ದುಡಿಯುತ್ತಿರುವ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ ಗಬ್ಬೂರಿನ ಮಹಾಶೈವ ಧರ್ಮಪೀಠವು ಯುಗಾದಿ ಹಬ್ಬದಂದು ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಯನ್ನಿತ್ತು ಸತ್ಕರಿಸಲಿದೆ.ಪ್ರತಿವರ್ಷ ಯುಗಾದಿಹಬ್ಬದಂದು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ‘ ಯುಗಾದಿ ಉತ್ಸವ’ ವನ್ನು ಆಚರಿಸುತ್ತಿದ್ದು ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸನ್ಮಾನಿಸಿ,ಗೌರವಿಸಲಾಗುತ್ತಿದೆ.

ಎಪ್ರಿಲ್ 02,2022 ರ ಶುಭಕೃತ್ ಸಂವತ್ಸರದಾರಂಭದ ಯುಗಾದಿಯಂದು ಸಮಾಜೋದ್ಧಾರದ ಬದ್ಧತೆಯಿಂದ ದುಡಿಯುತ್ತಿರುವ ಸಾಧಕರುಗಳನ್ನು ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ” ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ”ಯನ್ನಿತ್ತು ಸನ್ಮಾನಿಸಲಿದ್ದಾರೆ.

ಈ ವರ್ಷದ ‘ ಶ್ರೀ ವಿಶ್ವೇಶ್ವರಾನುಗ್ರಹ ಪ್ರಶಸ್ತಿ’ ಗೆ ಆಯ್ಕೆಯಾದ ಸಾಧಕರುಗಳು.

ಬಸವರಾಜ ಸಿನ್ನೂರು

   ಯಾದಗಿರಿ ಜಿಲ್ಲೆಯ ಶಹಾಪುರ ನಿವಾಸಿಗಳಾದ ಶ್ರೀಯುತರು ಕವಿ,ಸಾಹಿತಿ,ಸಾಹಿತ್ಯ ಚಟುವಟಿಕೆಗಳಲ್ಲಿ ಸಂಘಟಕರಾಗಿ ಹೆಸರು ಮಾಡಿದ್ದಾರೆ.’ಕಲಾನಿಕೇತನ ಟ್ರಸ್ಟ್’ ಮೂಲಕ ಶಹಾಪುರ ಪಟ್ಟಣದಲ್ಲಿ ಸದಾ ಒಂದಿಲ್ಲೊಂದು ಸಾಹಿತ್ಯಕ ಕಾರ್ಯಕ್ರಮ,ಚಟುವಟಿಕೆಗಳನ್ನು ಸಂಘಟಿಸುತ್ತಿರುತ್ತಾರೆ.ಯಾದಗಿರಿ ಜಿಲ್ಲೆಯಾದ್ಯಂತ ಎಪ್ಪತ್ತಕ್ಕೂ ಹೆಚ್ಚು ಜನ ಯುವಕವಿಗಳನ್ನು ಗುರುತಿಸಿ,ಅವರಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.’ಹನಿಅಮೃತ’ ಮತ್ತು ‘ ಪ್ರೀತಿ ಇಲ್ಲದ ಮೇಲೆ’ ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.

ಬಸವರಾಜ ಭೋಗಾವತಿ

 ರಾಯಚೂರು ಜಿಲ್ಲೆಯ ಮಾನ್ವಿ ನಿವಾಸಿಗಳಾದ ಶ್ರೀಯುತರು ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರು.ಪ್ರಜಾವಾಣಿಯ ತಾಲೂಕಾ ವರದಿಗಾರರಾಗಿದ್ದು ಇತ್ತೀಚೆಗೆ ಕಾರ್ಯನಿರತ ಪತ್ರಕರ್ತರ ರಾಯಚೂರು ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಗೊಂಡಿರುವ ಬಸವರಾಜ ಭೋಗಾವತಿಯವರು ಸಾಹಿತ್ಯಕ- ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಾನ್ವಿಯ ಸಾಂಸ್ಕೃತಿಕ ಸೊಗಡು ಹೆಚ್ಚಲು ಕಾರಣರಾಗಿದ್ದಾರೆ.ಸಮಾಜಮುಖಿ ಕಾರ್ಯಚಟುವಟಿಕೆ,ಜನಪರ ಮತ್ತು ಪರಿಸರ ಪ್ರಜ್ಞೆಯ ಲೇಖನ,ಬರಹಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.ಹಲವಾರು ಜನ ಯುವ ಬರಹಗಾರರನ್ನು ಗುರುತಿಸಿ ಬೆಳಕಿಗೆ ತಂದಿರುವ ಬಸವರಾಜ ಭೋಗಾವತಿಯವರು ‘ ಬೆವರ ಸಿರಿಯ ಕಥೆಗಳು’ ಎನ್ನುವ ರಾಯಚೂರು ಜಿಲ್ಲೆಯ ಪ್ರತಿಭಾವಂತ ಕಥೆಗಾರರ ಪ್ರಾತಿನಿಧಿಕ ಕಥಾ ಸಂಕಲನ ಒಂದನ್ನು ಪ್ರಕಟಿಸಿದ್ದಾರೆ.

ಈರಣ್ಣ ಮರ್ಲಟ್ಟಿ

ಮಾನ್ವಿ ತಾಲೂಕಿನ ಪೋತ್ನಾಳ ಗ್ರಾಮದವರಾದ ಶ್ರೀಯುತರು ಮಾನ್ವಿಯ ಎಸ್ ಆರ್ ಎಸ್ ವಿ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮಾನ್ವಿಯಲ್ಲಿ ನೆಲೆಸಿದ್ದಾರೆ.ಬಸವರಾಜ ಭೋಗಾವತಿ ಅವರ ಜೊತೆಗೂಡಿ ಮಾನ್ವಿಯಲ್ಲಿ ಸಾಹಿತ್ಯಕ- ಸಾಂಸ್ಕೃತಿಕ ವಾತಾವರಣವನ್ನು ನಿರ್ಮಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಘಟಕದ ವಿಶೇಷ ಆಹ್ವಾನಿತರಾಗಿರುವ ಈರಣ್ಣ ಮರ್ಲಟ್ಟಿಯವರು ಸ್ವಯಂ ಪ್ರತಿಭಾವಂತರಾಗಿದ್ದು ಹಲವಾರು ಜನ ಸ್ಪರ್ಧಾಕಾಂಕ್ಷಿಗಳು ಸ್ಪರ್ಧಾ ಪರೀಕ್ಷೆಗಳನ್ನು ಬರೆಯಲು ಪ್ರೋತ್ಸಾಹಿಸಿದ್ದಾರೆ.

ರಘುನಾಥ ರೆಡ್ಡಿ ಮನ್ಸಲಾಪುರ –

ಸಾಹಿತಿ,ಪತ್ರಕರ್ತರಾಗಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ರಾಯಚೂರು ತಾಲೂಕಿನ ಮನ್ಸಲಾಪುರ ಗ್ರಾಮದವರಾಗಿದ್ದು ರಾಯಚೂರು ಜಿಲ್ಲೆಯ ಪ್ರತಿಭಾವಂತ ಬರಹಗಾರರಲ್ಲೊಬ್ಬರು.ಸದ್ಯ ‘ ಪ್ರಜಾ ಪ್ರಸಿದ್ಧ’ ದಿನಪತ್ರಿಕೆಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತರು ರಾಯಚೂರುವಾಣಿ ದಿನಪತ್ರಿಕೆಯ ವರದಿಗಾರರಾಗಿ ಐದು ವರ್ಷಗಳು ಹಾಗೂ ಸುದ್ದಿಮೂಲ ದಿನಪತ್ರಿಕೆಯ ವರದಿಗಾರರು,ಉಪಸಂಪಾದಕರಾಗಿ ಇಪ್ಪತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.ಹಲವಾರು ಕಥೆ,ಕವನ,ಲೇಖನ,ವಿಡಂಬನೆಗಳನ್ನು ಬರೆದಿರುವ ರಘುನಾಥ ರೆಡ್ಡಿ ಮನ್ಸಲಾಪುರ ಅವರು ಸಾಹಿತ್ಯಕ ಸಾಧನೆಗಾಗಿ ಹಲವಾರು ಪದವಿ- ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ ವಚನ ಜ್ಯೋತಿ’ ಎನ್ನುವ ಆಧುನಿಕ ವಚನಗಳ ಕೃತಿಯನ್ನು ಪ್ರಕಟಿಸಿರುವ ರಘುನಾಥರೆಡ್ಡಿ ಮನ್ಸಲಾಪುರ ಅವರು ರಾಯಚೂರು ಜಿಲ್ಲೆಯ ಸತ್ವಯುತ ಬರಹಗಾರರಲ್ಲಿ ಒಬ್ಬರಾಗಿದ್ದು ಅವರ ಅಪ್ರಕಟಿತ ಕೃತಿಗಳೇನಕವುಗಳು ಪ್ರಕಟಗೊಳ್ಳಬೇಕಿವೆ.

ಸಿದ್ಧನಗೌಡ ಮಾಲಿಪಾಟೀಲ್

 ರಾಯಚೂರು ಜಿಲ್ಲೆಯ ಮನ್ಸಲಾಪುರ ಗ್ರಾಮದವರಾದ ಶ್ರೀಯುತರು ಕೃಷಿಕ ಕುಟುಂಬದಿಂದ ಬಂದವರಾಗಿದ್ದು ಧಾರ್ಮಿಕ,ಪೌರಾಣಿಕ ಕೃತಿಗಳ ಅಧ್ಯಯನ ಮತ್ತು ಕವಿ ಸಾಹಿತಿಗಳು,ಮಠ- ಪೀಠಗಳ ಸಂಪರ್ಕದಿಂದ ಕೃಷಿಯೊಂದಿಗೆ ಸಾಹಿತ್ಯಕೃಷಿಯನ್ನೂ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.‌’ ಶ್ರೀ ಸಿದ್ಧಲಿಂಗೇಶ್ವರ ಸ್ವರಸ್ತೋತ್ರ ಚಂದ್ರಿಕೆ ಹಾಗೂ ಜೋಡು ತಾರಾವಳಿಗಳು’ , ‘ಹೂವಿನ ತೋಟದ ಆಂಜನೇಯನ ಸ್ವರ ಸ್ತೋತ್ರ ಕೌಮುದಿ ಹಾಗೂ ಶತಕ ಸಂಪದ’ ಮತ್ತು ‘ ಸೌಂದರ್ಯಮದನ ತಿಲಕ ಹಾಗೂ ನೀತಿ ವೈರಾಗ್ಯ ಅಭಿಪ್ಲುತ’ ಇವರ ಪ್ರಕಟಿತ ಕೃತಿಗಳು.ಉತ್ತಮವಾಗ್ಮಿಯಾಗಿರುವ ಸಿದ್ಧನಗೌಡ ಮಾಲಿಪಾಟೀಲ್ ಅವರು ಜಿಲ್ಲೆಯಾದ್ಯಂತ ಅಲ್ಲಲ್ಲಿ ಪ್ರವಚನಗಳನ್ನು ನೀಡಿ ಜ್ಞಾನದಾಸೋಹ ಉಣಬಡಿಸಿದ್ದಾರೆ.

ಭೀಮರಾಯ ಬಿರಾದರ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವನದುರ್ಗ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿರುವ ಭೀಮರಾಯ ಬಿರಾದರ ಅವರು ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನವರು.2010 ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮೊದಲ ಬ್ಯಾಚಿನ ಪಿಡಿಒ ಆಗಿ ಸೇವೆಗೆ ಸೇರಿದ ಭೀಮರಾಯ ಬಿರಾದರ ಗ್ರಾಮೀಣ ಜನರಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ‘ ಸ್ಪಂದನಶೀಲ ಪಿಡಿಒ’ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಯಾದಗಿರಿ ಜಿಲ್ಲಾಡಳಿತದಿಂದ ‘ ಸರ್ವೋತ್ತಮ ಪ್ರಶಸ್ತಿ’ ಪುರಸ್ಕೃತರಾದ ಭೀಮರಾಯ ಬಿರಾದರ ಅವರು ಗ್ರಾಮ ಪಂಚಾಯತಿ ಆಡಳಿತವನ್ನು ಜನಮುಖಿಯನ್ನಾಗಿ,ಜನಸ್ನೇಹಿಯನ್ನಾಗಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

ರಘುನಂದನ್ ಪೂಜಾರಿ

ಪ್ರಸ್ತುತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಘುನಂದನ್ ಪೂಜಾರಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಯನ್ನಾರಂಭಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ೨೦೧೮ ರಲ್ಲಿ ಪಿಡಿಒ ಹುದ್ದೆಗೆ ಆಯ್ಕೆಯಾಗಿ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಪಿಡಿಒ ಹುದ್ದೆಯಲ್ಲಿ ಸೇವೆಸಲ್ಲಿಸಿದ್ದಾರೆ.ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾವಂತರಾಗಿದ್ದ ರಘುನಂದನ್ ತಾವು ಶಿಕ್ಷಕರಾಗಿದ್ದ ಅವಧಿಯಲ್ಲಿ ಹಾಗೂ ಪ್ರಸ್ತುತ ಪಿಡಿಒ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತ ಹಲವಾರು ಜನ ಬಡಪ್ರತಿಭಾವಂತ ವಿದ್ಯಾರ್ಥಿಗಳನ್ನು ಓದಿಸುತ್ತ,ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದಾರೆ.ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾನುಯಾಯಿಯಾಗಿರುವ ರಘುನಂದನ್ ಪೂಜಾರಿ ಅವರು ಬಡವರು,ದುರ್ಬಲರಿಗೆ ತಮ್ಮಿಂದಾದ ಸೇವೆ,ನೆರವು ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ.ಮೂಲತಃ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನವರಾದ ರಘುನಂದನ್ ಪೂಜಾರಿ ತಮ್ಮ ಸಮಾಜಮುಖಿ ಚಟುವಟಿಕೆಗಳಿಂದ ಗಮನಸೆಳೆದಿದ್ದಾರೆ.

About The Author