ಅನುಭವ–ಶ್ರೀಕ್ಷೇತ್ರ ಕೈಲಾಸ ಎನ್ನುವ ‘ ನಿತ್ಯಜಾಗೃತಿ’ ಕೇಂದ್ರ–ಬಸವರಾಜ ಕರೆಗಾರ

ಮಹಾಶೈವ ಧರ್ಮಪೀಠದ ಆಧ್ಯಾತ್ಮಿಕ ಕೇಂದ್ರವಾದ ಶ್ರೀಕ್ಷೇತ್ರ ಕೈಲಾಸವು ನಿತ್ಯ ಜಾಗೃತಿಯ ಕೇಂದ್ರವಾಗಿದೆ.ಐದಾರು ವರ್ಷಗಳಿಂದ ನಾನು ಮಹಾಶೈವ ಧರ್ಮಪೀಠದ ಧಾರ್ಮಿಕ,ಸಾಹಿತ್ಯಕ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಅಲ್ಲಿ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವ ಮತ್ತು ಕ್ಷೇತ್ರೇಶ್ವರಿ ದುರ್ಗಾದೇವಿಯರು ನಿತ್ಯಲೋಕೋದ್ಧಾರದ ಲೀಲೆಯನ್ನಾಡುತ್ತಿರುವುದನ್ನು ಅನುಭವಿಸಿದ ಅಸಂಖ್ಯಾತ ಜನರಲ್ಲಿ ನಾನೂ ಒಬ್ಬ.ಪ್ರತಿ ರವಿವಾರ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ನಡೆಸುತ್ತಿರುವ ‘ ಶಿವೋಪಶಮನ ಕಾರ್ಯ’ ವನ್ನು ಕಂಡಾಗ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ‘ ಮಾತನಾಡುವ ಮಹಾದೇವ’ ಎನ್ನುವುದು ಅನುಭವಕ್ಕೆ ಬರುತ್ತದೆ.ಕೈಲಾಸ ಕ್ಷೇತ್ರವನ್ನರಸಿ ಬರುವ ಭಕ್ತರುಗಳ ಎಲ್ಲ ಸಮಸ್ಯೆಗಳಿಗೆ ವಿಶ್ವೇಶ್ವರನು ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಮೂಲಕ ಪರಿಹಾರ ಸೂಚಿಸುತ್ತಿದ್ದಾನೆ.ಕೈಲಾಸ ಕ್ಷೇತ್ರವನ್ನರಸಿ ನಾನಾ ಬಗೆಯ ಸಮಸ್ಯೆಗಳನ್ನು ಹೊತ್ತು ಬರುವ ಜನರು ಅವರ ಸಮಸ್ಯೆಗಳನ್ನು ಪರಿಹರಿಸಿಕೊಂಡೇ ಹೋಗುತ್ತಾರೆ.ಇಲ್ಲಿ ಶಿವನು ತನ್ನ ಲೋಕೋದ್ಧಾರದ ಲೀಲೆಯನ್ನಾಡುತ್ತಿದ್ದಾನೆ.ಕ್ಷೇತ್ರದಲ್ಲಿ ಪವಾಡಸದೃಶ ಘಟನೆಗಳು ನಡೆಯುವುದು ಸಾಮಾನ್ಯ ಸಂಗತಿಯಾಗಿದೆ.ಅಂತಹವುಗಳನ್ನು ಇತ್ತೀಚಿನ ಘಟನೆ ಒಂದನ್ನು ಉಲ್ಲೇಖಿಸುವೆ.

ಮೊನ್ನೆ ಅಗಸ್ಟ್ 12 ರ ನೂಲ ಹುಣ್ಣಿಮೆಯಂದು ಮಹಾಶೈವ ಧರ್ಮಪೀಠದಲ್ಲಿ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳ 113 ನೇ ಹುಟ್ಟುಹಬ್ಬ ಆಚರಿಸಲಾಯಿತು.ಕಾರ್ಯಕ್ರಮವನ್ನು ಪ್ರತಿವರ್ಷ ಬೆಳಿಗ್ಗೆ ಹನ್ನೊಂದಕ್ಕೆ ಪ್ರಾರಂಭಿಸಿ ಮಧ್ಯಾಹ್ನ ಎರಡು ಘಂಟೆಗೆ ಮುಕ್ತಾಯಗೊಳಿಸಲಾಗುತ್ತಿತ್ತು.ಆದರೆ ಈ ಬಾರಿಯ’ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ ಪ್ರಶಸ್ತಿ’ ಯನ್ನು ಸ್ವೀಕರಿಸಲಿದ್ದ ಹಿರಿಯ ಸಾಹಿತಿ ಡಾ ಎಚ್ ಎಸ್ ಶಿವಪ್ರಕಾಶ ಅವರು ಅಂದೇ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ಮುಗಿಸಿಕೊಂಡು ಗಬ್ಬೂರಿಗೆ ಬರಬೇಕಿದ್ದರಿಂದ ಪ್ರಶಸ್ತಿ ಪ್ರದಾನ ಸಮಾರಂಭ ಸಂಜೆ ಆರು ಘಂಟೆಗೆ ಎಂದು ನಿಗದಿಪಡಿಸಲಾಯಿತು.ಇದರಿಂದ ನಾನು ಸೇರಿದಂತೆ ಶ್ರೀ ಮಠದ ವ್ಯವಸ್ಥಾಪಕ ಮಂಡಳಿಯವರು,ಕಾರ್ಯಕರ್ತರು ಭಯ- ಆತಂಕಕ್ಕೆ ಈಡಾಗಿದ್ದೆವು.ಕಳೆದ ಒಂದು ವಾರದಿಂದ ಬೆಳಿಗ್ಗೆ ಮತ್ತು ಸಾಯಂಕಾಲ ಮಳೆಯಾಗುತ್ತಿತ್ತು.ದಿನದ ಬಹುಸಮಯ ಮೋಡಕವಿದ ವಾತಾವರಣವೇ ಇರುತ್ತಿತ್ತು.ಇಂತಹದ್ದರಲ್ಲಿ ನಮ್ಮ ಕಾರ್ಯಕ್ರಮ,ಅದರಲ್ಲೂ ಸಂಜೆಯ ಹೊತ್ತು.ಕಾರ್ಯಕ್ರಮಕ್ಕೆ ಗಬ್ಬೂರಿನವರಷ್ಟೇ ಅಲ್ಲ,ಸುತ್ತ ಮುತ್ತಣ ಹಳ್ಳಿಗಳ ಮಹಾಶೈವ ಧರ್ಮಪೀಠದ ಭಕ್ತರುಗಳು ಬರುವವರಿದ್ದರು.ಸಂಜೆ ಕಾರ್ಯಕ್ರಮದ ಹೊತ್ತಿಗೆ ಮಳೆ ಬಂದರೆ? ಅಥವಾ ಕಾರ್ಯಕ್ರಮ ಪ್ರಾರಂಭವಾದಗ ಮಳೆ ಬಂದರೆ? ಸಮುದಾಯ ಭವನದ ವೇದಿಕೆಯ ಮುಂಭಾಗವು ಮೇಲ್ಭಾಗ ಮಾತ್ರ ಹೊದಿಕೆ ಇದ್ದು ಎರಡೂ ಕಡೆ ಸರಾಗವಾಗಿ ಗಾಳಿ ಆಡುತ್ತಿರುವುದರಿಂದ ಮಳೆ ಬಂದರೆ ಈಸರು ಬಂದು ಕುಳಿತುಕೊಂಡವರು ತೋಯಿಸಿಕೊಳ್ಳುವಂತೆ ಆಗುತ್ತದೆ.ಮಳೆಗಾಲದ,ಪ್ರತಿದಿನವೂ ಮಳೆ ಬೀಳುತ್ತಿರುವ ಈ ದಿನಗಳಲ್ಲಿ ಹಗಲು ಕಾರ್ಯಕ್ರಮ ಆಗಿದ್ದರೆ ಸ್ವಲ್ಪ ನೆಮ್ಮದಿಯಿಂದ ಇರಬಹುದಿತ್ತು.ಕಾರ್ಯಕ್ರಮ ಮುಗಿಯಲು ಕನಿಷ್ಟ ಮೂರು ಘಂಟೆಗಳು ಹಿಡಿಯುತ್ತಿದ್ದುದರಿಂದ ನಮ್ಮೆಲ್ಲರಲ್ಲೂ ಚಿಂತೆ ಮನೆ ಮಾಡಿತ್ತು.ಇದನ್ನು ಪೀಠಾಧ್ಯಕ್ಷರ ಮುಂದೆ ಹೇಳಿಕೊಂಡಾಗ ಅವರು ಸ್ಷಷ್ಟವಾಗಿ ಹೇಳಿದರು–” ಶಿವ ಕಾಯುತ್ತಾನೆ,ಎರಡು ದಿನ ಮಳೆ ಬರುವುದಿಲ್ಲ.ಕಾರ್ಯಕ್ರಮಕ್ಕೆ ತೊಂದರೆ ಆಗುವುದಿಲ್ಲ” ಅಂತ.

ಚಿಂತೆ- ದುಗುಡಗಳಲ್ಲಿಯೇ ನಾವೆಲ್ಲರೂ ಕಾರ್ಯಕ್ರಮದ ಸಿದ್ಧತೆಯಲ್ಲಿದ್ದೆವು.ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರು ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದೆ ನಿಶ್ಚಿಂತೆಯಿಂದ ಕಾರ್ಯಕ್ರಮದ ಮಾರ್ಗದರ್ಶನ ಮಾಡುತ್ತಿದ್ದರು,ಮೇಲ್ವಿಚಾರಣೆ ಮಾಡುತ್ತಿದ್ದರು.ಕಾರ್ಯಕ್ರಮದ ಸಂಘಟಕ ಮಂಡಳಿಯ ಗುರುಬಸವ ಹುರಕಡ್ಲಿ ಮತ್ತು ಶಿವಪುತ್ರ ಕರಿಗಾರ ಅವರಿಬ್ಬರು ಪೀಠಾಧ್ಯಕ್ಷರೆದುರು ಮಳೆಬಂದರೆ ಹೇಗೆ ಎನ್ನುವ ಸಂದೇಹ ವ್ಯಕ್ತಪಡಿಸಿ,ಪ್ರೇಕ್ಷಕರು ಕುಳಿತುಕೊಳ್ಳುವೆಡೆ ಮಳೆನೀರು ಬರದಂತೆ ವ್ಯವಸ್ಥೆ ಮಾಡೋಣವೆ ಎಂದಾಗ ಪೀಠಾಧ್ಯಕ್ಷರು ‘ ಅದರ ಅಗತ್ಯವಿಲ್ಲ,ನಮ್ಮ ಕಾರ್ಯಕ್ರಮದ ದಿನ ಮತ್ತು ಮರುದಿನ ಮಳೆ ಬರುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದರು.ಗುರುಬಸವ ಹುರುಕಡ್ಲಿಯವರಿಗೆ ಪೀಠಾಧ್ಯಕ್ಷರ ಆಧ್ಯಾತ್ಮಿಕ ಶಕ್ತಿ,ತಪೋಸಾಮರ್ಥ್ಯದ ಬಗ್ಗೆ ಚೆನ್ನಾಗಿ ಗೊತ್ತಿದ್ದರಿಂದ ಅವರು ನಿಶ್ಚಿಂತರಾದರು.ಆದರೆ ನಮಗೆಲ್ಲ ಸಂದೇಹ,ಅಳುಕು ಕಾಡುತ್ತಲೇ ಇತ್ತು.

ಅಗಸ್ಟ್ ೧೨ ರಂದು ಮಳೆ ಬರಲಿಲ್ಲ ಮಾತ್ರವಲ್ಲ ಗಾಳಿಯ ಅಬ್ಬರವೂ ಇಲ್ಲದೆ ನಿರಭ್ರ ಆಕಾಶದಲ್ಲಿ ಹುಣ್ಣಿಮೆಯ ಚಂದ್ರನ ಬೆಳದಿಂಗಳು ಪಸರಿಸಿತ್ತು.ರಾತ್ರಿ ಎಂಟು ಘಂಟೆಯಿಂದ ಹತ್ತು ಘಂಟೆಯವರೆಗೆ ಎಚ್ ಎಸ್ ಶಿವಪ್ರಕಾಶ ಅವರಿಗೆ ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಪೀಠಾಧ್ಯಕ್ಷರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕೊನೆಗೆ ” ವಿಶ್ವೇಶ್ವರನ ಆಣತಿಯಂತೆ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ- ಆತಂಕಗಳನ್ನುಂಟು ಮಾಡದೆ ಸಹಕರಿಸಿದ್ದಕ್ಕೆ ವರುಣ ಮತ್ತು ವಾಯುದೇವರಿಬ್ಬರೂ ಕೃತಜ್ಞತಾಪೂರ್ವಕ ನಮನಗಳನ್ನು ಸಲ್ಲಿಸುವೆ” ಎಂದಾಗಲೇ ನಮಗೆ ಅರ್ಥವಾಗಿದ್ದು ಪ್ರಕೃತಿಪತಿಯಾದ ವಿಶ್ವೇಶ್ವರ ಶಿವನ ಮಹಾತ್ಮೆ.ಪೀಠಾಧ್ಯಕ್ಷರು ಹೇಳಿದ್ದಂತೆ ಹನ್ನೆರಡು ಹದಿಮೂರರ ಎರಡು ದಿನಗಳಂದು ಮಳೆ ಬರಲಿಲ್ಲ! ಆದರೆ ಹದಿನಾಲ್ಕನೇ ತಾರೀಖಿನ ಸಂಜೆ ಆರುಮುವ್ವತ್ತರಿಂದ ಜೋರಾಗಿ ಮಳೆಬೀಳತೊಡಗಿ,ಅಂದು ರಾತ್ರಿಯಿಡೀ ಮಳೆಬಂದಿತು.ಆ ಮಳೆಯನ್ನು ಕಂಡು ನಾವೆಲ್ಲ” ಇದೇ ಮಳೆ ಫಂಕ್ಷನ್ ದಿನ ಬಂದಿದ್ದರೆ ಏನು ಗತಿ?” ಎಂದು ಮಾತನಾಡಿಕೊಂಡು ವಿಶ್ವೇಶ್ವರನಿಗೆ ಭಕ್ತಪೂರ್ವಕ ನಮನಗಳನ್ನು ಸಲ್ಲಿಸಿದೆವು.ಪೀಠಾಧ್ಯಕ್ಷರು ನಗುತ್ತ ಹೇಳಿದರು –” ಆಳಿನ ಅಭಿಮಾನ ಅರಸನಿಗೆ.ನಮ್ಮ ಕಾರ್ಯಕ್ರಮಕ್ಕೆ ಯಶಸ್ಸನ್ನು ತಂದು ಕೊಡುವ ಜವಾಬ್ದಾರಿಯು ಶಿವ ವಿಶ್ವೇಶ್ವರನೇ ಹೊತ್ತಿದ್ದಾಗ ನಾವೇಕೆ ಉದ್ವೇಗಕ್ಕೆ ಒಳಗಾಗಬೇಕು?ನಾನು ಮಾಡುವೆ ಎಂದಾಗ ಸೋಲುತ್ತೇವೆ,ಮಾನಪಮಾನ ನಿನ್ನದಯ್ಯ ತಂದೆ ಶಿವನೆ ಎಂದು ಶರಣು ಹೋದರೆ ಕಾಯುತ್ತಾನೆ ವಿಶ್ವೇಶ್ವರ” ಎಂದರು.ಪೀಠಾಧ್ಯಕ್ಷರ ಮೈಮನಗಳನ್ನಾವರಿಸಿರುವ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಕ್ಷೇತ್ರೇಶ್ವರ ಶಿವನ ಲೋಕೋದ್ಧಾರದ ಅನಂತ ಲೀಲಾಮಯ ಪ್ರಸಂಗಗಳಲ್ಲಿ ಇದು ಒಂದಷ್ಟೆ.

ಬಸವರಾಜ ಕರೆಗಾರ
ಸಂಪಾದಕರು ” ಕರುನಾಡವಾಣಿ”

About The Author