ವಿಮರ್ಶೆ:ಪ್ರೀತಿಯ ಅರ್ಥವಿಸ್ತರಿಸಿದ ಪ್ರೀತಿ ಇಲ್ಲದ ಮೇಲೆ:ಮುಕ್ಕಣ್ಣ ಕರಿಗಾರ

ವಿಮರ್ಶೆ

ಪ್ರೀತಿಯ ಅರ್ಥವಿಸ್ತರಿಸಿದ ಪ್ರೀತಿ ಇಲ್ಲದ ಮೇಲೆ

ಮುಕ್ಕಣ್ಣ ಕರಿಗಾರ

ಸಗರನಾಡಿನ ಕವಿಮಿತ್ರ ಬಸವರಾಜ ಸಿನ್ನೂರ ಅವರು ‘ ಪ್ರೀತಿ ಇಲ್ಲದ ಮೇಲೆ’ ಎನ್ನುವ ಎರಡನೇ ಕವನ ಸಂಕಲನ ಪ್ರಕಟಿಸಿದ್ದಾರೆ.ಸಾಹಿತ್ಯಸಂಘಟನೆ, ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಸದಾ ಕ್ರಿಯಾಶೀಲರಾಗಿರುವ ಬಸವರಾಜ ಸಿನ್ನೂರ ಅವರ ‘ಪ್ರೀತಿ ಇಲ್ಲದ ಮೇಲೆ’ ಕವನ ಸಂಕಲನದಲ್ಲಿ ಕೆಲವು ಹನಿಗವನಗಳು ಸೇರಿದಂತೆ ಎಂಬತ್ತೇಳು ಕವನಗಳಿವೆ.

ಯುವಪ್ರೇಮಿಯೊಬ್ಬನ ಪ್ರೀತಿಯ ಹಂಬಲ,ಪ್ರೇಮದ ಕಾತರತೆ,ಕನಸು- ಕನವರಿಕೆಗಳು ಕವನಸಂಕಲದನದ ವಸ್ತವಾದರೂ ಪ್ರಣಯಿಗಳಿಬ್ಬರ ಪ್ರೇಮ ಅನುರಾಗದ ಆಲಾಪನೆಯ ಆಚೆಗೂ ಪ್ರೇಮದ ಅರ್ಥವು ವಿಸ್ತಾರಗೊಂಡು ಮನುಷ್ಯ ಪ್ರೀತಿಯ ಅರ್ಥವನ್ನು ತನ್ನೊಡಲಲ್ಲಿ ಗರ್ಭೀಕರಿಸಿಕೊಂಡಿದೆ ಎನ್ನುವುದು ಈ ಕೃತಿಯ ವೈಶಿಷ್ಟ್ಯ.ಕಾಲೇಜುದಿನಗಳಲ್ಲಿ ತನ್ನ ಪ್ರೇಯಸಿಗಾಗಿ ಹಾತೊರೆದು ಹಂಬಲಿಸುತ್ತಿದ್ದ ತರುಣನೊಬ್ಬ ತನ್ನ ಪ್ರೇಮಸೋತರೂ ತಾನು ಮನುಷ್ಯಪ್ರೀತಿಯನ್ನು ಅಪ್ಪುವ ಮೂಲಕ ಗೆಲ್ಲುತ್ತಾನೆ.ತನ್ನ ಪ್ರೇಮದರಸಿ ತನ್ನಿಂದ ದೂರವಾದರೇನಂತೆ ‘ ಬದುಕು ಬಲುದೊಡ್ಡದಿದೆ,ಪ್ರೀತಿಸುವೆ ನಾನು ಬದುಕನ್ನು’ ಎಂದು ಹೊಸ ಭರವಸೆಯೊಂದಿಗೆ ನಡೆಯುವ ಕವಿ ರೈತರ ನೋವು,ಬವಣೆ,ಬಡವರ ಕಷ್ಟ ಪರಿತಾಪಗಳನ್ನು ಕಂಡು ಮರುಗುತ್ತಾನೆ,ಅವರ ಪರವಾಗಿ ಪ್ರಾರ್ಥಿಸುವ ಮೂಲಕ ಪ್ರೇಮಕ್ಕೆ ಸಾರ್ಥಕತೆ ತಂದುಕೊಡುತ್ತಾರೆ,ಕಾಮವು ಕರಗಿ ಮನುಷ್ಯಪ್ರೇಮವಾಗಿ ಮಾರ್ಪಡುತ್ತದೆ ಎನ್ನುವುದು ‘ ಪ್ರೀತಿ ಇಲ್ಲದ ಮೇಲೆ’ ಕವನ ಸಂಕಲನದ ವಿಶೇಷತೆ.

ತಾರುಣ್ಯದಲ್ಲಿ ಪ್ರೇಯಸಿಯೇ ಸರ್ವಸ್ವವಾಗಿದ್ದ ಕವಿಗೆ ನಂತರದ ದಿನಗಳಲ್ಲಿ ಪ್ರೀತಿಯಿಂದ ನೋಡದ ಹೊರತು ಜಗತ್ತು ಶೂನ್ಯವಾಗುತ್ತದೆ,ಶುಷ್ಕವಾಗುತ್ತದೆ ಎನ್ನಿಸುತ್ತಿದೆ.ದಯೆ,ಪ್ರೀತಿ,ಅನುಕಂಪಗಳಂತಹ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು ಜಗತ್ತು ಎಂದು ಆಶಿಸುವ ಮಟ್ಟಿಗೆ ಕವಿಯ ಪ್ರೀತಿಯ ಅರ್ಥ ವಿಕಸಿಸಿದೆ,ವಿಶಾಲಾರ್ಥ ಪಡೆದಿದೆ.ಮಾನವ ಪ್ರೀತಿಯ ಹುಡುಕಾಟದಲ್ಲಿದ್ದಾಗ ಕವಿಗೆ ಕಂಡಿದ್ದಾರೆ ಬಸವಣ್ಣ,ಕಿತ್ತೂರು ರಾಣಿ ಚೆನ್ನಮ್ಮ ಅವರಂತಹ ಮಹಾನ್ ವ್ಯಕ್ತಿಗಳು ಲೋಕಕರುಣೆಯ ಕುರುಹಾಗಿ.ಆ ದಿವ್ಯತ್ವದ ಬೆಳಕಿನಲಿ ನಡೆಹಿಡಿಯಬೇಕಿದೆ ಜಗತ್ತು ಎನ್ನುವುದು ಕವಿಯ ಆಶಯ,ಹಂಬಲ.

‘ ವಿಶ್ವಗುರು ಬಸವಣ್ಣ’ ಕವನದ ಈ ಸಾಲುಗಳು ಕವಿಯ ಯೌವ್ವನದ ಕಾಮೋತ್ಸಾಹದ ಕಾವು ಮನುಷ್ಯಪ್ರೇಮವಾಗಿ,ಕಲ್ಯಾಣಗುಣವಾಗಿ ಮಾರ್ಪಡುತ್ತಿರುವುದಕ್ಕೆ ನಿದರ್ಶನ

ಜಗದೊಳು ನೊಂದಿರುವ ಮನವ ಸಂತೈಸಿ
ಬಂದ ಭಕ್ತರಿಗೆ ವಚನಾಮೃತ ಉಣಬಡಿಸಿ
ಕಂದಾಚಾರ ಮೌಢ್ಯಗಳಿಂದ ಮುಕ್ತಿಗೊಳಿಸಿ
ಜ್ಞಾನದ ಬೆಳಕಿನೊಳಗೆ ಸನ್ಮಾರ್ಗ ತೋರಿಸಿ.

ನಿಜಾಮರ ಆಳ್ವಿಕೆಯ ಕಾಲದಲ್ಲಿ ಭೀಕರವಾಗಿ ಕಾಡಿದ್ದ ಕ್ಷಾಮದ ಬಗ್ಗೆ ನಿಜಾಮ ಮತ್ತು ಆತನ ಪ್ರತಿನಿಧಿಗಳು ತೋರಿದ್ದ ಅಸಡ್ಡೆ ಭಾವನೆಯನ್ನು ಸಹಿಸದೆ ರೊಚ್ಚಿಗೆದ್ದ ಜನತೆಯ ಕಿಚ್ಚನ್ನು ‘ ಬರಗಾಲ’ ಕವನವು ಬಣ್ಣಿಸುತ್ತದೆ.

ರೈತರ ಬದುಕು – ಬವಣೆಗಳ ಮೇಲೆ ಬೆಳಕು ಚೆಲ್ಲುವ,ಕಾವ್ಯ ಜನಪದರ ಧ್ವನಿಯಾಗುವ ಅರ್ಥಪೂರ್ಣ ಸಾಲುಗಳು

ಇಳಿಹೊತ್ತು ಜಾರಿ ನೆತ್ತಿ ಮೇಲೆ ಕೈನೂರಿ
ಬಾನೆತ್ತರಕ್ಕೆ ಮಂದಹಾಸದ ಮುಖ ತೋರಿ
ಕಾದು ಕಾದು ಸಾಕಾಯಿತು ಮಳೆಯ ದಾರಿ
ಬಾನಿಂದ ಬಿದ್ದಿಲ್ಲ ಇಂದಿಗೂ ಒಂದನಿ ಜಾರಿ

ಪ್ರಸ್ತುತ ದಿನಗಳ ಕೋಮುದ್ವೇಷದ ಕ್ರೌರ್ಯಕ್ಕೆ ಕರಗುತ್ತಾನೆ ಕವಿ.ಹಿಂದೂ ಮುಸ್ಲಿಂ ಬೌದ್ಧ- ಪಾರ್ಸಿ ಕ್ರೈಸ್ತರೆಲ್ಲ ಒಬ್ಬಳೇ ತಾಯಿ ಭಾರತಿಯ ಮಕ್ಕಳು ಎನ್ನುವ ದೇಶಬಾಂಧವ್ಯ ಸಾರುತ್ತದೆ ‘ ನಾವೆಲ್ಲರೂ ಒಂದೇ’ ಕವನ.

‌ಗ್ರಾಮೀಣ ಜನ ಜಾನುವಾರುಗಳಿಗೆ ಆಸರೆಯಾಗಲು ಸರಕಾರವು ಕೆರೆಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಜನರ ಹೆಸರಿನಲ್ಲಿ ದುಡ್ಡನ್ನು ಜೇಬಿಗಿಳಿಸುವ ರಾಜಕಾರಣಿಗಳು,ಸರಕಾರಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳಾಗಿ ಬದಲಾದ ಗ್ರಾಮದ ಧನದಾಹಿಗಳ ದಾಹವನ್ನು ‘ ನಮ್ಮೂರ ಕೆರೆ’ ಕವನವು ಸಮರ್ಥವಾಗಿ ಅಭಿವ್ಯಕ್ತಿಸಿದೆ ;

ಕಾಲುವೆ ನೀರು ಕಳ್ಳರಿಂದ ಕಾಯುವವರಾರು
ಹೊಡದಾಡಿ ಬಡದಾಡಿ ಸಾಯುವವರಾರು
ನೋವಿನ ಸಂಕಟ ಕೇಳುವವರಾರು
ಸತ್ಯ ನ್ಯಾಯ ನೀತಿಯಲಿ ಬದುಕುವರಾರು

ಸರಕಾರ ಸಾಕಷ್ಟು ಸಹಾಯ ಮಾಡಿದೆ
ಪುಂಡ ಪುಢಾರಿಗಳ ಜೇಬುತುಂಬಿದೆ
ನ್ಯಾಯ ‌ನೀತಿ ಧರ್ಮ ಸತ್ತು ಹೋಗಿದೆ
ಇಂದು ಬಡವರ ಬದುಕು ಬರಡಾಗಿದೆ

ಕವನದ ಈ ಸಾಲುಗಳು ಕೆರೆಯ ಜೀರ್ಣೋದ್ಧಾರದ ಹೆಸರಿನಲ್ಲಿ ಪುಂಢಪೋಕರಿಗಳು ಉಂಡು ಮೇಯ್ದು ನುಣ್ಣಗೆ ಆಗುತ್ತಿರುವ ಕಟುವಾಸ್ತವವನ್ನು ತೆರೆದಿಟ್ಟಿವೆ. ಹಾಗೆಯೇ ಬಡವರ ನೋವು,ನಿರಾಶೆ,ಅಸಹಾಯಕತೆಗಳ ಚಿತ್ರಣವೂ ಇಲ್ಲಿದೆ.ರಾಜಕಾರಣಿಗಳ ಕಪಟ- ಕುತಂತ್ರಗಳ ವಿರುದ್ಧ ಸಿಡಿದೇಳುವ ಕವಿ ಸ್ವಾರ್ಥಿಗಳಾದ ರಾಜಕಾರಣಿಗಳು ಬೇಡವೇ ಬೇಡ ಎಂದು ಗಟ್ಟಿಯಾಗಿ ಘರ್ಜಿಸುವ ಮೂಲಕ ಸಂಕಲನದ
ಕವನಗಳಿಗೆ ಶಕ್ತಿತುಂಬುತ್ತಾರೆ

ತ್ಯಾಗ ಬಲಿದಾನ ದೇಶಾಭಿಮಾನದ
ಬಡವರ ಬಗ್ಗೆ ಚೂರೂ ಕನಿಕರವಿರದ
ಮಹಾತ್ಮ ಹುತಾತ್ಮರ ಚರಿತ್ರೆ ಅರಿಯದ
ರಾಜಕಾರಣಿಗಳು ನಮಗೆ ಬೇಡವೇ ಬೇಡ ಎಂದು ಸಾಗುವ ‘ ರಾಜಕಾರಣಿ ಬೇಡ’ ಕವನದ ಸಾಲುಗಳು ಸೋಗಿನ ರಾಜಕಾರಣಿಗಳ ನಯವಂಚಕತನವನ್ನು ಎತ್ತಿತೋರಿಸಿವೆ.ಕವನದ ಕೊನೆಯ ಸಾಲುಗಳಲ್ಲಿ ಕವಿಯ ಜನಪರನಿಲುವು ವ್ಯಕ್ತಗೊಂಡಿದೆ

ಬಡವರ ದಲಿತರ ಪರ ದನಿ ಎತ್ತದ
ನ್ಯಾಯಕ್ಕಾಗಿ ನಿಂತು ಹೋರಾಡದ
ಜನರ ನೋವು ನಲಿವುಗಳಿಗೆ ಸ್ಪಂದಿಸದ
ರಾಜಕಾರಣಿಗಳು ನಮಗೆ ಬೇಡವೇ ಬೇಡ

ಸ್ವಸ್ಥ ಸಮಾಜದ ನಿರ್ಮಾಣ ಮತ್ತು ಸಮಾಜದ ಕಲ್ಯಾಣಕ್ಕೆ ಆಶಿಸುವ ಸಾಕಷ್ಟು ಕವನಗಳಿರುವ,ಹಲವಾರು ಉತ್ತಮ ಕವನಗಳನ್ನು ಹೊಂದಿರುವ ‘ ಪ್ರೀತಿ ಇಲ್ಲದ ಮೇಲೆ’ ಕವನ ಸಂಕಲನವು ಬಸವರಾಜ ಸಿನ್ನೂರ ಅವರಿಂದ ಮುಂದೆ ಉತ್ತಮಕೃತಿಗಳು ಬರಬಹುದು ಎಂದು ಭರವಸೆ ನೀಡುವ ಕವನ ಸಂಕಲನ.ಕವನ ಸಂಕಲನದಲ್ಲಿ ಕೆಲವು ದೋಷಗಳಿವೆ,ಪ್ರೇಮವನ್ನು ಅಭಿವ್ಯಕ್ತಿಸುವಲ್ಲಿ ಕವಿಸರಿಯಾದ ಪದಗಳಿಲ್ಲದೆ ಮುಗ್ಗರಿಸುತ್ತಾರೆ,ಭಾಷೆಯೂ ಪಕ್ವಗೊಳ್ಳಬೇಕಿದೆ,ಶಬ್ದಗಳನ್ನು ದುಡಿಸಿಕೊಳ್ಳುವ ಅವರ ಸಾಮರ್ಥ್ಯವು ಹಿಗ್ಗಬೇಕಿದೆ,ಜೊತೆಗೆ ವ್ಯಾಕರಣದ ಬಗ್ಗೆ ಗಮನಹರಿಸುವ ಅಗತ್ಯವೂ ಇದೆ ಎನ್ನಿಸುತ್ತಿದೆ ಕೆಲವು ಕವನಗಳನ್ನು ಓದಿದಾಗ.ಆದರೆ ಇದು ಬಸವರಾಜ ಸಿನ್ನೂರ ಅವರ ಎರಡನೇ ಕೃತಿ ಆದ್ದರಿಂದ ಮುಂದೆಅವರಿಂದ ಉತ್ತಮಕವನ ಸಂಕಲನ,ಕೃತಿಗಳನ್ನು ನಿರೀಕ್ಷಿಸಬಹುದು.ಭಾಷೆ,ಶೈಲಿಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಿಕೊಂಡರೆ ಬಸವರಾಜ ಸಿನ್ನೂರ ಅವರು ಉತ್ತಮ ಹಾಗೂ ಸಮರ್ಥ ಕವಿಯಾಗಿ ಹೆಸರು ಮಾಡಬಲ್ಲರು ಎನ್ನುವುದಕ್ಕೆ ಸಾಕ್ಷಿಯಾಗಿದೆ ಅವರ ‘ ಪ್ರೀತಿ ಇಲ್ಲದ ಮೇಲೆ’ ಕವನ ಸಂಕಲನ.ಈ ಯುವಕವಿ ಯಶಸ್ವಿಯಾಗಲಿ,ಹೆಸರಾಂತ ಕವಿಯಾಗಿ ಬೆಳೆಯಲಿ ಎನ್ನುವ ಆಶಯ,ಹಾರೈಕೆಗಳೊಂದಿಗೆ ಮುಗಿಸಿವೆ ಈ ವಿಮರ್ಶಾ ಲೇಖನವನ್ನು.

“ಶಹಾಪುರದ ಸಾಹಿತಿ ಮಿತ್ರ,ಸಾಹಿತ್ಯ ಸಂಘಟಕ ಮತ್ತು ಕಲಾನಿಕೇತನ ಟ್ರಸ್ಟ್ ಅಧ್ಯಕ್ಷರಾದ ಬಸವರಾಜ ಶಿಣ್ಣೂರು ಅವರು ಪಿಡಿಒ ಭೀಮರಾಯ ಬಿರಾದರ ಅವರೊಂದಿಗೆ ಇಂದು ಬೆಳಿಗ್ಗೆ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ, ಮೊನ್ನೆ ಬಿಡುಗಡೆಗೊಂಡ ಅವರ ” ಪ್ರೀತಿ ಇಲ್ಲದ ಮೇಲೆ ” ಕವನ ಸಂಕಲನವನ್ನು ವಿಶ್ವೇಶ್ವರ ಶಿವನ ಸನ್ನಿಧಿಗೆ ಸಮರ್ಪಿಸಿದರು.‌ಸಗರನಾಡಿನ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಕ್ರೀಯಾಶೀಲರಾಗಿರುವ ಬಸವರಾಜ ಶಿಣ್ಣೂರ ಅವರು ತಾವು ಬರೆದು ಪ್ರಕಟಿಸಿದ್ದಕ್ಕಿಂತ ಹೆಚ್ಚಾಗಿ ಬರೆಯುವವರನ್ನು ಪ್ರೋತ್ಸಾಹಿಸಿ,ಬೆಳೆಸಿದವರು.ಯಾದಗಿರಿ ಜಿಲ್ಲೆಯಾದ್ಯಂತ ನೂರಾರು ಜನ ಯುವಕವಿಗಳ ಪಡೆಯನ್ನು ಕಟ್ಟಿಬೆಳೆಸಿದ ಅನನ್ಯ ಶ್ರೇಯಸ್ಸಿನ ಬಸವರಾಜ ಶಿಣ್ಣೂರ ಅವರ ಎರಡನೇ ಕವನ ಸಂಕಲನ ‘ ಪ್ರೀತಿ ಇಲ್ಲದ ಮೇಲೆ’.ಹತ್ತಾರು ಮೌಲಿಕ ಕೃತಿಗಳು ಅವರಿಂದ ಹೊರಬರಲಿ,ವಿಶ್ವೇಶ್ವರಿ ದುರ್ಗಾಸಹಿತ ವಿಶ್ವೇಶ್ವರ ಶಿವ ಪರಮೇಶ್ವರನು ಬಸವರಾಜ ಶಿಣ್ಣೂರ ಅವರಿಗೆ ಶ್ರೇಯಸ್ಸು- ಪ್ರೇಯಸ್ಸುಗಳನ್ನಿತ್ತು ಹರಸಲಿ”

 

ಮುಕ್ಕಣ್ಣ ಕರಿಗಾರ

 

 

About The Author