ಶ್ರಾವಣ ಸಂಜೆ ಶ್ರೀ ಶಿವ ಮಹಾಪುರಾಣ ವ್ಯಾಖ್ಯಾನ –೦೮ ಮುಕ್ಕಣ್ಣ ಕರಿಗಾರಹಳ್ಳಿ

ಓಂಕಾರ ಮಂತ್ರ ಮಹಿಮೆ ಮತ್ತು ಶಿವನು ಬ್ರಹ್ಮ ವಿಷ್ಣುಗಳಿಗೆ ಮಂತ್ರೋಪದೇಶ ನೀಡಿದುದು

‌ ‌ ಬ್ರಹ್ಮ ವಿಷ್ಣುಗಳು ಕೈ ಮುಗಿದು ಶಿವನನ್ನು ಪ್ರಾರ್ಥಿಸಿದರು,ಪ್ರಭು,ಸ್ವರ್ಗ ಮೊದಲಾದ ಐದು ಕಾರ್ಯಗಳ ಲಕ್ಷಣಗಳೇನು? ಉಪದೇಶಿಸು”.

ಬ್ರಹ್ಮ ವಿಷ್ಣುಗಳಿಬ್ಬರ ಪ್ರಾರ್ಥನೆಯನ್ನು ಕೇಳಿ ಹರ್ಷಿತನಾದ ಶಿವನು ಹೇಳಿದನು-” ನನ್ನ ಪಂಚ ಕಾರ್ಯಗಳ ರಹಸ್ಯವನ್ನು ನಿಮ್ಮ ಮೇಲಿನ ಪ್ರೀತಿಯಿಂದ ನಿಮಗೆಅರಹುವೆನು.ಸೃಷ್ಟಿ,ಸ್ಥಿತಿ,ಸಂಹಾರ,ತಿರೋಭಾವ,ಅನುಗ್ರಹ ಇವೈದು ನನ್ನ ವಿಶ್ವವ್ಯಾಪಾರಗಳು.ಸೃಷ್ಟಿ ಎಂದರೆ ಪ್ರಪಂಚದ ಹುಟ್ಟು,ಸ್ಥಿತಿ ಎಂದರೆ ಇರುವು .ಸಂಹಾರವೆಂದರೆ ನಾಶ.ತಿರೋಭಾವವೆಂದರೆ ಜೀವರ ಉತ್ಕ್ರಮಣ.ಜೀವರುಗಳ ಮುಕ್ತಿಯೇ ಅನುಗ್ರಹ.ಈ ಐದು ಕಾರ್ಯಗಳು ನನ್ನ ಆಧೀನ.ಉಳಿದ ಯಾರಿಗೂ ಈ ಐದು ಕಾರ್ಯಗಳಿಲ್ಲ,ಅವರುಗಳೇನಿದ್ದರೂ ಗೋಪುರದ ಬೊಂಬೆಗಳಂತೆ.ಇವುಗಳಲ್ಲಿ ಸೃಷ್ಟಿ,ಸ್ಥಿತಿ,ಸಂಹಾರ ಮತ್ತು ತಿರೋಭಾವ ಕಾರ್ಯಗಳು ಸಂಸಾರ ಸಂಬಂಧಿ ಕಾರ್ಯಗಳಾದರೆ ಅನುಗ್ರಹವು ಮೋಕ್ಷಕ್ಕೆ ಸಂಬಂಧಿಸಿದ ಕಾರ್ಯವಾಗಿದೆ.”

ನಾನೇ ಪ್ರಕೃತಿಪತಿ.ಪಂಚಭೂತಗಳ ಪ್ರಕೃತಿವ್ಯವಹಾರದಿಂದ ಜಗತ್ತಿನ ವ್ಯಾಪಾರವನ್ನು ನಿರ್ವಹಿಸುತ್ತಿರುವೆನು.ನನ್ನ ಪಂಚಕಾರ್ಯಗಳನ್ನು ಪಂಚಭೂತಗಳಲ್ಲಿ ಕಾಣಬಹುದು.ಪೃಥ್ವಿಯಲ್ಲಿ ಸೃಷ್ಟಿಕಾರ್ಯ,ಜಲದಲ್ಲಿ ಸ್ಥಿತಿಕಾರ್ಯ,ತೇಜಸ್ಸಿನಲ್ಲಿ ಸಂಹಾರಕಾರ್ಯ,ವಾಯುವಿನಲ್ಲಿ ತಿರೋಭಾವ ಕಾರ್ಯ ಮತ್ತು ಆಕಾಶದಲ್ಲಿ ನನ್ನ ಅನುಗ್ರಹಕಾರ್ಯವಿದೆ.ಭೂಮಿ ಎಲ್ಲವನ್ನು ಹುಟ್ಟಿಸುವ ಮೂಲಕ ಸೃಷ್ಟಿಕಾರ್ಯ ಮಾಡುತ್ತದೆ,ನೀರು ಜೀವಿಗಳ ಬೆಳವಣಿಗೆ ಮಾಡುವ ಮೂಲಕ ಸ್ಥಿತಿ ಕಾರ್ಯ ಮಾಡುತ್ತದೆ,ಬೆಂಕಿ ನಾಶಮಾಡುತ್ತ ಸಂಹಾರ ಕಾರ್ಯವನ್ನೆಸಗುತ್ತದೆ,ವಾಯು ದೂರ ಒಯ್ಯುತ್ತದೆ,ಆಕಾಶವು ಎಲ್ಲದಕ್ಕೂ ಅವಕಾಶ ನೀಡುತ್ತದೆ”.

” ಪಂಚಕಾರ್ಯಗಳನ್ನು ನಿರ್ವಹಿಸಲು ನನಗೆ ಐದು ಮುಖಗಳಿವೆ.ಪೂರ್ವ,ಪಶ್ಚಿಮ,ಉತ್ತರ,ದಕ್ಷಿಣಗಳೆಂಬ ನಾಲ್ಕುದಿಕ್ಕುಗಳಲ್ಲಿ ನಾಲ್ಕು ಮುಖಗಳು ಮತ್ತು ಆಕಾಶಮುಖಿಯಾದ ಮಧ್ಯದಲ್ಲಿ ಒಂದು ಮುಖ ಇವು ನನ್ನ ಪಂಚಮುಖಗಳು.ಪಂಚಮುಖಗಳಿರುವುದರಿಂದ ನನ್ನನ್ನು ಪಂಚಮುಖದಪರಮೇಶ್ವರ ಎಂದು ಕರೆಯುತ್ತಾರೆ”.

” ನಿಮ್ಮಿಬ್ಬರ ತಪಸ್ಸಿಗೆ ಮೆಚ್ಚಿದ ನಾನು ಬ್ರಹ್ಮನನ್ನು ಸೃಷ್ಟಿ ಸಾಮರ್ಥ್ಯದಿಂದ ವಿಷ್ಣುವನ್ನು ಸ್ಥಿತಿ ಸಾಮರ್ಥ್ಯದಿಂದ ಅನುಗ್ರಹಿಸಿದ್ದನ್ನು ನೀವಿಬ್ಬರು ಬಲ್ಲಿರಿ.ರುದ್ರ ಮಹೇಶರಿಬ್ಬರು ನನ್ನನ್ನು ತಪಸ್ಸಿನಿಂದ ಮೆಚ್ಚಿಸಿ ಸಂಹಾರಸಾಮರ್ಥ್ಯವನ್ನು ರುದ್ರನೂ ತಿರೋಭಾವ ಸಾಮರ್ಥ್ಯವನ್ನು ಮಹೇಶನೂ ಪಡೆದರು.ಕೊನೆಯದಾದ ಅನುಗ್ರಹ ಸಾಮರ್ಥ್ಯವು ಮಾತ್ರ ಯಾರಿಗೂ ಸಿಗದು,ನಾನೊಬ್ಬನೇ ಮೋಕ್ಷನೀಡುವವನಾದ್ದರಿಂದ.ಮೋಕ್ಷ ನೀಡಲು ನನ್ನ ಹೊರತು ಬೇರಾರೂ ಸಮರ್ಥರಿಲ್ಲವಾದ್ದರಿಂದ ಅನುಗ್ರಹ ಸಾಮರ್ಥ್ಯವು ಸದಾ ನನ್ನೊಂದಿಗೆ ಬೆರೆತುಕೊಂಡಿದೆ “.

” ಆದರೆ ನೀವಿಬ್ಬರು ಹಿಂದೆ ತಪಸ್ಸು ಮಾಡಿ ನನ್ನಿಂದ ವರಗಳನ್ನು ಪಡೆದದ್ದನ್ನು ಮರೆತಿರಿ.ರುದ್ರ- ಮಹೇಶರು ನಿಮ್ಮಂತೆ ಅದನ್ನು ಮರೆಯಲಿಲ್ಲ.ಆದುದರಿಂದಲೇ ನಾನು ರುದ್ರ ಮತ್ತು ಮಹೇಶರಲ್ಲಿ ವಿಶೇಷಪ್ರಸನ್ನನಾಗಿ ಅವರಿಬ್ಬರಿಗೆ ನನ್ನಂತೆಯೇ ರೂಪ,ವೇಷ,ಕಾರ್ಯ,ವಾಹನ,ಆಸನ,ಆಯುಧ ಮೊದಲಾದವುಗಳನ್ನು ಅನುಗ್ರಹಿಸಿದ್ದೇನೆ.ನನ್ನನ್ನು ಮರೆತ ಕಾರಣದಿಂದ ನಿಮಗೀ ಅಜ್ಞಾನ,ಈ ಅಹಂಕಾರ.ಅಜ್ಞಾನ- ಅಹಂಕಾರ ಮುಕ್ತರಾಗಿ ಪರಬ್ರಹ್ಮನಾದ ನನ್ನನ್ನರಿತರೆ ನಿಮಗೆ ಮಹೇಶನಂತಹ ರೂಪವು ದೊರೆಯುವುದು “.

” ಜ್ಞಾನವನ್ನು ಸಂಪಾದಿಸಲು ನೀವು ಓಂಕಾರ ಮಂತ್ರವನ್ನು ಜಪಿಸಬೇಕು.ಓಂಕಾರವು ಪ್ರಣವವಾಗಿದ್ದು ನನ್ನ ಸ್ವರೂಪವಾಗಿದೆ.ಓಂಕಾರವು ನನ್ನನ್ನೇ ಬೋಧಿಸುತ್ತದೆ.ನನ್ನ ಮುಖದಿಂದಲೇ ಹುಟ್ಟಿದ ಓಂಕಾರವು ನನ್ನ ಸ್ವರೂಪವಿರುವಂತೆ ನನ್ನ ವಾಚಕವೂ ಹೌದು.ಓಂಕಾರದ ಸ್ಮರಣೆಯಿಂದ ನನ್ನ ಸ್ಮರಣೆ.ಓಂಕಾರವು ನನ್ನ ಪಂಚಮುಖಗಳಿಂದ ಆವಿರ್ಭವಿಸಿದೆ.ಓಂಕಾರವು ಅಕಾರ,ಉಕಾರ,ಮಕಾರ ಮತ್ತು ಬಿಂದು,ನಾದಗಳಿಂದ ಒಡಗೂಡಿದೆ.ನನ್ನ ಉತ್ತರಮುಖದಿಂದ ಅಕಾರ,ಪಶ್ಚಿಮ ಮುಖದಿಂದ ಉಕಾರ,ದಕ್ಷಿಣ ಮುಖದಿಂದ ಮಕಾರ,ಪೂರ್ವ ಮುಖದಿಂದ ಬಿಂದು,ಮಧ್ಯಮುಖದಿಂದ ನಾದವು ಹುಟ್ಟಿದೆ.ಐದು ಭಾಗಗಳಲ್ಲಿ ಆವಿರ್ಭವಿಸಿ ಕೊನೆಗೆ ಒಂದಾದ ಓಂಕಾರ ಪ್ರಣವ ಎನ್ನಿಸಿಕೊಂಡಿದೆ.ಓಂಕಾರವು ನಾಮರೂಪಾತ್ಮಕವಾದ ಇಡೀ ವಿಶ್ವವನ್ನು ವ್ಯಾಪಿಸಿದೆ.ಓಂಕಾರವು ಶಿವಶಕ್ತಿಗಳ ಬೋಧಕವೂ ಆಗಿದೆ.ಪಂಚಾಕ್ಷರ ಮಂತ್ರದ ಐದು ಅಕ್ಷರಗಳು ಓಂಕಾರದ ಅಕಾರ ಮೊದಲಾದ ಅಂಶಗಳಿಂದ ಆವಿರ್ಭವಿಸಿವೆ.ನಂತರ ಪಂಚಾಕ್ಷರ ಮಂತ್ರದಿಂದ ಎಲ್ಲ ಮಾತೃಕೆಗಳು ಉತ್ಪನ್ನಗೊಂಡವು.ಗಾಯತ್ರಿಯು ಪ್ರಕಟಗೊಂಡಿತು.ವೇದಗಳು ಹುಟ್ಟಿದವು.ಕೋಟ್ಯಾನುಕೋಟಿ ಮಂತ್ರಗಳೂ ಹುಟ್ಟಿದವು.ಬೇರೆ ಬೇರೆ ಮಂತ್ರಗಳಿಗೆ ಬೇರೆ ಬೇರೆಯದೆ ಆದ ಫಲಗಳಿದ್ದರೆ ಓಂಕಾರಕ್ಕೆ ಎಲ್ಲವೂ ಫಲಗಳೆ.ಅಂದರೆ ಓಂಕಾರ ಒಂದರಿಂದಲೇ ಎಲ್ಲ ಮಂತ್ರಗಳಿಂದ ದೊರೆಯುವ ಫಲ ದೊರೆಯುತ್ತದೆ.ಉಳಿದೆಲ್ಲ ಮಂತ್ರಗಳು ಭೋಗವನ್ನು ಮಾತ್ರ ನೀಡಬಲ್ಲವು.ಆದರೆ ಓಂಕಾರವು ಭೋಗ ಮೋಕ್ಷಗಳೆರಡನ್ನೂ ಕೊಡುತ್ತದೆ”.

ನಂದಿಕೇಶ್ವರನು ಸನತ್ಕುಮಾರನಿಗೆ ಮುಂದಿನ ತತ್ತ್ವಪ್ರಸಂಗವನ್ನು ವಿವರಿಸುವನು.

ನಂದಿಕೇಶ್ವರ :-” ಇಷ್ಟು ಹೇಳಿದ ಶಿವನು ಬ್ರಹ್ಮ ವಿಷ್ಣುಗಳನ್ನು ಉದ್ಧರಿಸಬೇಕೆಂದು ಸಂಕಲ್ಪಿಸಿ ಬ್ರಹ್ಮ ವಿಷ್ಣುಗಳಿಗೆ ಬಟ್ಟೆಯ ಮುಸುಕನ್ನು ಹಾಕಿ ಅವರಿಬ್ಬರನ್ನು ಉತ್ತರಮುಖವಾಗಿ ಕೂಡಿಸಿದ.ಅವರ ಶಿರಸ್ಸಿನ ಮೇಲೆ ತನ್ನ ವರದಹಸ್ತವನ್ನಿಟ್ಟು ನಿಧಾನವಾಗಿ ಪಂಚಾಕ್ಷರ ಮಂತ್ರವನ್ನು ಉಪದೇಶಿಸಿದ.ಮೂರು ಸಲ ಅವರಿಂದ ಹೇಳಿಸಿ,ಆ ಮಂತ್ರದ ಅರ್ಥ,ತತ್ತ್ವ,ಭೂತ,ಯಂತ್ರ- ತಂತ್ರಗಳನ್ನು ಉಪದೇಶಿಸಿದ.ಶಿವನಿಂದ ಮಂತ್ರೋಪದೇಶ ಪಡೆದ ಬ್ರಹ್ಮ- ವಿಷ್ಣುಗಳಿಬ್ಬರು ಕೃತಾರ್ಥರಾಗಿ,ಕೈಜೋಡಿಸಿ ಶಿವನನ್ನು ಈ ತೆರನಾಗಿ ಸ್ತುತಿಸಿದರು –“ನಿರಾಕಾರ ರೂಪ,ನಿರಾಕಾರ ಪ್ರಕಾಶ,ಸಾಕಾರ ಪರಮೇಶ್ವರ,ಪ್ರಣವವಾಚ್ಯ,ಪ್ರಣವಲಿಂಗಿ,ಸೃಷ್ಟ್ಯಾದಿ ಕರ್ತ,ಪಂಚಮುಖ,ಪಂಚಬ್ರಹ್ಮರೂಪ,ಪಂಚಕೃತ್ಯ,ಆತ್ಮಸ್ವರೂಪ,ಬ್ರಹ್ಮಸ್ವರೂಪ,ಅನಂತಗುಣ, ಅನಂತ ಕೀರ್ತಿ,ಅನಂತಶಕ್ತಿಯಾದ ಗುರುಶಂಭುವೆ ನಿನಗಿದೋ ಕೋಟಿ ಕೋಟಿ ಪ್ರಣಾಮಗಳು”.

ಬ್ರಹ್ಮ ವಿಷ್ಣುಗಳಿಬ್ಬರಿಗೆ ತನ್ನ ತತ್ತ್ವೋಪದೇಶ ನೀಡಿ,ಅವರ ಸ್ತುತಿವಾಕ್ಕುಗಳಿಂದ ಪ್ರಸನ್ನನಾದ ಶಿವನು ನುಡಿಯುವನು :–” ಮಕ್ಕಳೇ,ಇದೀಗ ನಿಮಗೆ ಎಲ್ಲ ತತ್ತ್ವಜ್ಞಾನವನ್ನು ನೀಡಿದಂತಾಯಿತು.ಇನ್ನು ಮುಂದೆ ನೀವು ಓಂಕಾರವನ್ನು ಜಪಿಸಬೇಕು.ಅದರಿಂದ ಬೋಧೆಯು ದೃಢಗೊಳ್ಳುವುದು,ಸಕಲಸೌಭಾಗ್ಯಗಳು ಶಾಶ್ವತವಾಗಿ ಒಲಿದು ಬರುವವು.ಚತುರ್ದಶಿಯಂದು ಆರ್ದಾ ನಕ್ಷತ್ರಯೋಗವಿದ್ದಾಗ ಈ ಮಂತ್ರವನ್ನು ಜಪಿಸಿರಿ.ಅದರಿಂದ ಅಕ್ಷಯ ಫಲ ದೊರೆಯುವುದು.ಸೂರ್ಯನು ಆರ್ದಾ ನಕ್ಷತ್ರದಲ್ಲಿದ್ದಾಗ ಈ ಮಂತ್ರವನ್ನು ಜಪಿಸಿದರೆ ಈ ಮಂತ್ರಜಪ ಕೋಟಿಯಷ್ಟು ಫಲ ನೀಡುವುದು.ಮೃಗಶಿರಾ ನಕ್ಷತ್ರದ ಕೊನೆಯ ಭಾಗ ಮತ್ತು ಪುನರ್ವಸುವಿನ ಆದಿಭಾಗ ಇವು ಸಹ ಆರ್ದಾ ನಕ್ಷತ್ರದಂತೆಯೇ ಪೂಜೆ,ಹೋಮ,ತರ್ಪಣಾದಿಗಳಿಗೆ ಪ್ರಶಸ್ತವಾಗಿಹವು.”

” ನನ್ನ ಲಿಂಗ- ವಿಗ್ರಹಗಳನ್ನು ಉದಯಕಾಲ,ಪ್ರಾತಃಕಾಲ,ಸಂಗಮಕಾಲಗಳಲ್ಲಿ ದರ್ಶನ ಮಾಡುತ್ತಿರಿ.ಅರ್ಧರಾತ್ರಿಯವರೆಗೆ ಇರುವ ಚತುರ್ದಶಿ ಅಥವಾ ಪ್ರದೋಷವ್ಯಾಪಿಯಾಗಿದ್ದು ಮುಂದಿನ ತಿಥಿಯ ಸಂಪರ್ಕವುಳ್ಳ ಚತುದರ್ಶಿಗಳು ಸಹ ನನ್ನ ಲಿಂಗ- ವಿಗ್ರಹಗಳ ದರ್ಶನಕ್ಕೆ ಪ್ರಶಸ್ತಕಾಲವು”.

” ಲಿಂಗ- ವಿಗ್ರಹಗಳೆರಡೂ ನನಗೆ ಸಮಾನವು.ಆದರೂ ಪೂಜಿಸುವವರಿಗೆ ಲಿಂಗವು ಉತ್ತಮವಾದುದು.ಮೋಕ್ಷಾಪೇಕ್ಷಿಯು ಮೂರ್ತಿಗಿಂತ ಲಿಂಗವನ್ನೇ ಪೂಜಿಸುವುದು ಉತ್ತಮವು.ಲಿಂಗ- ಮೂರ್ತಿಗಳನ್ನು ಸ್ವಯಂ ತಾನೇ ಪ್ರತಿಷ್ಠಾಪಿಸಬಹುದು ಅಥವಾ ಇತರರ ಮೂಲಕವೂ ಸ್ಥಾಪಿಸಬಹುದು.ಹೀಗೆ ನನ್ನ ಲಿಂಗ- ಮೂರ್ತಿಗಳನ್ನು ಸ್ಥಾಪಿಸಿ,ಪೂಜಿಸಿದರೆ ನನ್ನ ಲೋಕವಾದ ಕೈಲಾಸವು ಸುಲಭವಾಗಿ ಸಿಗುವುದು” ಎಂದು ಹೇಳಿ ಶಿವನು ಅಲ್ಲಿಯೇ ಅಂತರ್ಧಾನನಾದನು.

ವ್ಯಾಖ್ಯಾನ

ಶಿವ ಮಹಾಪುರಾಣದ ಈ ಅಧ್ಯಾಯದಲ್ಲಿ ಶಿವನು ಬ್ರಹ್ಮ ವಿಷ್ಣುಗಳಿಬ್ಬರಿಗೆ ಸೃಷ್ಟಿ ಮೊದಲುಗೊಂಡ ತನ್ನ ಪಂಚಕಾರ್ಯಗಳನ್ನು ವಿವರಿಸಿ,ಆ ಪಂಚಕಾರ್ಯಗಳ ಸ್ವರೂಪ ವರ್ಣನೆ ಗೈದಿರುವನು.ಬಳಿಕ ಪಂಚಕಾರ್ಯಗಳಲ್ಲಿ ನಾಲ್ಕನ್ನು ತಪಸ್ಸಿನಿಂದ ತನ್ನನ್ನು ಒಲಿಸಿದ ಬ್ರಹ್ಮ,ವಿಷ್ಣು,ರುದ್ರ ಮತ್ತು ಮಹೇಶರಿಗೆ ಪ್ರದಾನಿಸಿ ಮೋಕ್ಷಕಾರಕವಾದ ಅನುಗ್ರಹವನ್ನು ತನ್ನ ಬಳಿಯೇ ಉಳಿಸಿಕೊಂಡಿರುವುದಾಗಿ ಹೇಳಿದನು.ಓಂಕಾರ ಸ್ವರೂಪನಾದ ತನ್ನ ಮಹಿಮೆಯನ್ನು,ಓಂಕಾರದ ಅರ್ಥ ಮಹತ್ವವನ್ನು ಬ್ರಹ್ಮ ವಿಷ್ಣುಗಳಿಗೆ ಅರುಹಿದ ಶಿವನು ಬ್ರಹ್ಮ ವಿಷ್ಣುಗಳಿಬ್ಬರಿಗೆ ಪಂಚಾಕ್ಷರ ಮಂತ್ರ ಉಪದೇಶ ಮಾಡಿ,ಓಂಕಾರಸಹಿತ ಪಂಚಾಕ್ಷರ ಜಪಮಾಡಲು,ಲಿಂಗ ಮೂರ್ತಿಗಳ ದರ್ಶನ ಮಾಡಲು ಆಜ್ಞಾಪಿಸುವನು.ಶಿವಪರತತ್ತ್ವವನ್ನು ಬ್ರಹ್ಮ ವಿಷ್ಣುಗಳಿಬ್ಬರು ಪರಶಿವನಿಂದಲೇ ಬೋಧೆ ಪಡೆದವರಾದ್ದರಿಂದ ಶಿವನು ಆದಿಗುರುವು ಬ್ರಹ್ಮ ವಿಷ್ಣುಗಳು ಆದಿ ಶಿಷ್ಯರುಗಳು.

೦೭.೦೮.೨೦೨೨

About The Author