ಶ್ರಾವಣ ಸಂಜೆ–ಶಿವ ಮಹಾಪುರಾಣ ವ್ಯಾಖ್ಯಾನ –೦೨–ಮುಕ್ಕಣ್ಣ ಕರಿಗಾರ

ಶ್ರಾವಣ ಸಂಜೆ

ಶಿವ ಮಹಾಪುರಾಣ ವ್ಯಾಖ್ಯಾನ –೦೨

‌ ‌‌ ‌ ಮುಕ್ಕಣ್ಣ ಕರಿಗಾರ

ಶ್ರವಣ,ಕೀರ್ತನ ,ಮನನಗಳಿಂದ ಮೋಕ್ಷ

ಹಿಂದೆ,ಮಹರ್ಷಿ ವೇದವ್ಯಾಸರು ಸರಸ್ವತೀ ನದಿಯ ತೀರದಲ್ಲಿ ಕುಳಿತು ಪರಶಿವನನ್ನು ಕುರಿತು ತಪಸ್ಸನ್ನಾಚರಿಸುತ್ತಿದ್ದರು.ಆ ದಾರಿಯಾಗಿ ವಿಮಾನದಲ್ಲಿ ಸಂಚರಿಸುತ್ತಿದ್ದ ಮಹರ್ಷಿ ಸನತ್ಕುಮಾರರು ತಪೋನಿರತರಾಗಿದ್ದ ವ್ಯಾಸರನ್ನು ಕಂಡರು.ಪೂಜ್ಯರಾದ ಸನತ್ಕುಮಾರರು ಬಂದುದನ್ನರಿತ ವ್ಯಾಸರು ಧ್ಯಾನದಿಂದ ಎಚ್ಚೆತ್ತು ಸನತ್ಕುಮಾರರನ್ನು ಆದರಿಸಿ,ಸತ್ಕರಿಸಿದರು.ಅರ್ಘ್ಯವನ್ನಿತ್ತು ದಿವ್ಯಾಸನದಲ್ಲಿ ಕುಳ್ಳಿರಿಸಿ,ಸೇವಿಸಿದರು.ವ್ಯಾಸರ ಸೇವೆಯಿಂದ ಸಂತುಷ್ಟರಾದ ಸನತ್ಕುಮಾರರು ಅಂದರು– ‘ ಮುನಿಯೆ,ನಿನ್ನ ಶಿವಧ್ಯಾನ ಸತತವಾಗಿ ನಡೆಯುತ್ತಿರಲಿ.ನೀನೀಗ
ಏಕಾಂಗಿಯಾಗಿ ಕುಳಿತು ತಪಸ್ಸು ಮಾಡುತ್ತಿರುವೆಯಲ್ಲ.ಏಕೆ?

ವ್ಯಾಸರು ಸದುವಿನಯದಿಂದ ಸನತ್ಕುಮಾರರಿಗೆ ಉತ್ತರಿಸುವರು ” ಮುನಿಶ್ರೇಷ್ಠರೆ! ತಮ್ಮ ಕೃಪೆಯಿಂದ ನಾನು‌ ಲೋಕದಲ್ಲಿ ಧರ್ಮಾರ್ಥಕಾಮ ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳನ್ನು ಬೋಧಿಸಿ, ಸ್ಥಿರಪಡಿಸಿದ್ದೇನೆ.ಜನರು ವೇದಮಾರ್ಗದಲ್ಲಿ ಆಸಕ್ತರಾಗುವಂತೆ ಮಾಡಿದ್ದೇನೆ.ಆದರೆ,ಆಶ್ವರ್ಯದಸಂಗತಿ ಎಂದರೆ ನನಗಿನ್ನೂ ಮೋಕ್ಷ ಸಾಧನವಾದ ತತ್ತ್ವಜ್ಞಾನ ಲಭಿಸಿಲ್ಲ.ಏನು ಕಾರಣವೋ ನಾನರಿಯೆ.ಮೋಕ್ಷಾಪೇಕ್ಷಿಯಾಗಿ ತಪಸ್ಸನ್ನಾಚರಿಸುತ್ತಿದ್ದೇನೆ”.

ವ್ಯಾಸರ ಮಾತುಗಳನ್ನಾಲಿಸಿದ ಮಹರ್ಷಿ ಸನತ್ಕುಮಾರರು ಹರ್ಷಚಿತ್ತರಾಗಿ “ಮುನಿಯೆ,ಮುಕ್ತಿಗೆ ವೇದೋಕ್ತವಾದ ಮೂರು ಮಹತ್ತರ ಸಾಧನೆಗಳಿವೆ‌.ಅವೇ ಶ್ರವಣ,ಕೀರ್ತನ, ಮನನಗಳು.ನಾನು ಸಹ ಹಿಂದೆ ಮಂದರ ಪರ್ವತದಲ್ಲಿ ಬೇರೆ ಬೇರೆ ಸಾಧನಗಳನ್ನು ಅನುಷ್ಠಾನ ಮಾಡುತ್ತಿದ್ದೆ. ಮೋಕ್ಷಮಾರ್ಗ ಕಾಣದೆ ತಪಸ್ಸನ್ನಾಚರಿಸುತ್ತಿದ್ದೆ.ಪರಶಿವನು ನನ್ನ ಮೇಲೆ ಪ್ರಸನ್ನನಾಗಿ ಭಗವಾನ್ ನಂದಿಕೇಶ್ವರನನ್ನು ನನ್ನ ಬಳಿಗೆ ಕಳುಹಿಸಿದನು.ಶಿವನಾಜ್ಞೆಯಿಂದ ಮಂದರಪರ್ವತದ ನನ್ನ ತಪೋಭೂಮಿಗೆ ಬಂದ ಭಗವಾನ್ ನಂದಿಕೇಶ್ವರನು ಪ್ರೀತಿಯಿಂದ ಶ್ರವಣ,ಕೀರ್ತನ,ಮನನಗಳು ಮೋಕ್ಷಸಾಧನಗಳು ಎಂದು ಬೋಧಿಸಿ” ಶಿವನು ಉಪದೇಶಿಸಿದ ಈ ಸಾಧನತ್ರಯವನ್ನು ನೀನು ಅವಶ್ಯವಾಗಿ ಆಚರಿಸಬೇಕು” ಎಂದು ಮತ್ತೆ ಮತ್ತೆ ಉಪದೇಶಿಸಿದನು.ಭಗವಾನ್ ನಂದಿಕೇಶ್ವರನ ಉಪದೇಶವನ್ನು ಅರ್ಥಮಾಡಿಕೊಂಡು,ಅನುಷ್ಠಾನಗೊಳಿಸಿ ಮೋಕ್ಷಕ್ಕೆ ಪಾತ್ರನಾದೆ”

ವ್ಯಾಸರಿಗೆ ಮೋಕ್ಷದ ಸಾಧನತ್ರಯವಾದ ಶ್ರವಣ,ಕೀರ್ತನ,ಮನನಗಳನ್ನು ವಿವರಿಸಿ,ಸನತ್ಕುಮಾರರು ಹೊರಟು ಹೋದರು ಎಂದು ವ್ಯಾಸಶಿಷ್ಯನಾದ ಸೂತಮುನಿಯು ಶಿವತತ್ವಾಪೇಕ್ಷಿಗಳಾಗಿದ್ದ ಋಷಿಗಳಿಗೆ ಉಪದೇಶಿಸಿದನು.

ವ್ಯಾಖ್ಯಾನ

ಲೋಕಸಮಸ್ತರ ಕಲ್ಯಾಣಕ್ಕಾಗಿ ಮಹರ್ಷಿ ವೇದವ್ಯಾಸರಿಂದ ರಚಿಸಲ್ಪಟ್ಟ ‘ ಶಿವಮಹಾಪುರಾಣ’ ದ ಈ ಅಧ್ಯಾಯದಲ್ಲಿ ಶ್ರವಣ,ಕೀರ್ತನ,ಮನನಗಳು ಮೋಕ್ಷದ ಸುಲಭೋಪಾಯಗಳು ಎನ್ನುವುದನ್ನು ನಿರೂಪಿಸಲಾಗಿದೆ.ಕಲಿಯುಗದ ಜನರು ಹಿಂದಿನ ಯುಗದವರುಗಳಂತೆ ಅತಿದೀರ್ಘವಾದ ಆಯುಷ್ಯವನ್ನು ಹೊಂದಿದವರಲ್ಲ,ಆರೋಗ್ಯವಂತ ದೃಢಕಾಯವನ್ನೂ ಹೊಂದಿದವರಲ್ಲ.ವ್ಯಾಧಿ ಬಾಧೆಗಳಿಂದ ಪೀಡಿತರಾದ ಮನುಷ್ಯರು ದೀರ್ಘಕಾಲದ ತಪಸ್ಸನ್ನು ಆಚರಿಸಲಾರರು ಎನ್ನುವ ಕಾರಣದಿಂದ ಸರ್ವರ ಉದ್ಧಾರಕ್ಕಾಗಿಯೇ ಮಹರ್ಷಿ ವೇದವ್ಯಾಸರು ಶಿವಮಹಾಪುರಾಣವನ್ನು ರಚಿಸಿ,ಲೋಕೋಪಕಾರ ಮಾಡಿದ್ದಾರೆ.ಶಿವಮಹಾಪುರಾಣ ಒಂದನ್ನೇ ನಿಷ್ಠೆಯಿಂದ ಪಠಣೆ ಇಲ್ಲವೆ ಶ್ರವಣ ಮಾಡಿದರೆ ಮುಕ್ತಿಯು ಲಭಿಸುತ್ತದೆ.

ಜನಸಾಮಾನ್ಯರು ಶಿವೋಪಾಸನೆ,ಆರಾಧನೆ,ಅರ್ಚನೆಗಳನ್ನು ಅರಿಯರು.ಅಂಥವರ ಉದ್ಧಾರಕ್ಕಾಗಿಯೇ ಶಿವನು ಸನತ್ಕುಮಾರರ ಮೂಲಕ ವ್ಯಾಸರನ್ನು ಅನುಗ್ರಹಿಸಿದ್ದಾನೆ.ಶ್ರವಣ,ಕೀರ್ತನ,ಮನನಗಳು ಸರ್ವರಿಗೂ ಸುಲಭವಾದ ಸಾಧನೋಪಾಯಗಳು.ಶ್ರವಣ ಎಂದರೆ ಸದಾಕಾಲವು ಶಿವನ ನಾಮಗಳನ್ನು,ಶಿವನ ಮಹಿಮೆಗಳನ್ನು ,ಶಿವನ ಲೀಲೆಗಳನ್ನು ಕೇಳುವುದು.ಕೀರ್ತನ ಎಂದರೆ ಶಿವನ ಕಥೆಗಳನ್ನು,ಮಹಿಮೆಗಳನ್ನು ಸದಾಕಾಲವು ಕೊಂಡಾಡುವುದು ಮತ್ತು ಜನರೆದುರು ಅವುಗಳನ್ನು ವಿಸ್ತಾರವಾಗಿ ಬಣ್ಣಿಸುವುದು.ಮನನವೆಂದರೆ ಪಠಿಸಿದ ಇಲ್ಲವೆ ಶ್ರವಣ ಮಾಡಿದ ಶಿವತತ್ತ್ವವನ್ನು ಅನುಗಾಲ ಮನಸ್ಸಿನಲ್ಲಿ ಚಿಂತಿಸುತ್ತ ಶಿವಸ್ವರೂಪವನ್ನು ಧ್ಯಾನಿಸುವುದು.

ಶ್ರವಣ,ಕೀರ್ತನ ,ಮನನಗಳಿಂದ ಶಿವನಲ್ಲಿ ನಿಷ್ಠೆಬಲಿಯುತ್ತದೆ.ಮನಸ್ಸಿನ ಚಾಂಚಲ್ಯವು ನಿವೃತ್ತಿಯಾಗಿ ಮನಸ್ಸು ಸದಾಶಿವಪದದಲ್ಲಿ ತಲ್ಲೀನವಾಗುತ್ತದೆ.ಲೋಕವ್ಯವಹಾರದಲ್ಲಿ ಅನಾಸಕ್ತನಾಗಿ ಶಿವಭಕ್ತಿಯಲ್ಲೇ ಆಸಕ್ತನಾಗುತ್ತಾನೆ ಭಕ್ತ.ಶಿವನಾಮವನ್ನು,ಶಿವಮಹಿಮೆಯನ್ನು ಕಿವಿಯಾರೆ ಕೇಳುವುದು,ಶಿವನಾಮದ ಮಹಿಮೆಯನ್ನು,ಶಿವಲೀಲಾವಿಲಾಸವನ್ನು ಜನರೆದುರು ಹಾಡುವುದು ಮತ್ತು ಶಿವನನ್ನು ಕುರಿತು ಸದಾಕಾಲ ಧ್ಯಾನಿಸುವುದರಿಂದ ಶಿವನು ಪ್ರಸನ್ನನಾಗಿ ಮೋಕ್ಷವನ್ನು ಅನುಗ್ರಹಿಸುವನು.

೦೧.೦೮.೨೦೨೨

About The Author