ಮಹಾಶೈವ ಧರ್ಮಪೀಠದ ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯಭೂಷಣ ಪ್ರಶಸ್ತಿ” ಗೆ ಆಯ್ಕೆಯಾದ ಕನ್ನಡದ ಹಿರಿಯ ಕವಿ,ನಾಟಕಕಾರ,ಅನುಭಾವಿ ಡಾ.ಎಚ್ .ಎಸ್.ಶಿವಪ್ರಕಾಶ ಅವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ,ಅಧಿಕೃತವಾಗಿ ಆಹ್ವಾನ ನೀಡಲಾಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಅಧ್ಯಕ್ಷತೆಯಲ್ಲಿ ಮಹಾಶೈವ ಧರ್ಮಪೀಠದ ಸಾಂಸ್ಕೃತಿಕ ಸಮಿತಿಯ ಸದಸ್ಯಕಾರ್ಯದರ್ಶಿಗಳಾದ ಡಾ.ಎನ್ ಹೆಚ್ ಪೂಜಾರ,ಸದಸ್ಯರುಗಳಾದ ಬಸವರಾಜ ಸಿನ್ನೂರು,ಬಸವಂತ ಯಾದವ ಮತ್ತು ಬಿಬ್ಬಣ್ಣ ಅವರುಗಳನ್ನೊಳಗೊಂಡ ಸಮಿತಿಯ ಪದಾಧಿಕಾರಿಗಳು ಎಚ್ ಎಸ್ ಶಿವಪ್ರಕಾಶ ಅವರ ನಿವಾಸದಲ್ಲಿ ಅವರನ್ನು ಕಂಡು ಮಹಾಶೈವಧರ್ಮಪೀಠದ ಪರವಾಗಿ ಸನ್ಮಾನಿಸಿ,ಅಧಿಕೃತ ಆಹ್ವಾನ ನೀಡಿದರು.
ಪ್ರತಿವರ್ಷ ನೂಲಹುಣ್ಣಿಮೆಯಂದು ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಪೀಠಾಧ್ಯಕ್ಷರಾದ ಮುಕ್ಕಣ್ಣ ಕರಿಗಾರ ಅವರ ಗುರುಗಳಾದ ಧಾರವಾಡದ ತಪೋವನದ ಪರಮಪೂಜ್ಯ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳ ಹುಟ್ಟುಹಬ್ಬವನ್ನು ” ಮಹಾಶೈವ ಗುರುಪೂರ್ಣಿಮೆ” ಯನ್ನಾಗಿ ಆಚರಿಸಲಾಗುತ್ತಿದೆ.
ಸಾಹಿತ್ಯ,ಕಲೆ,ಸಮಾಜಸೇವೆ ಮೊದಲಾದ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ ಹಿರಿಯರನ್ನು ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಭೂಷಣ” ಎನ್ನುವ ಪ್ರಶಸ್ತಿಗಳನ್ನು ನೀಡಿ,ಗೌರವಿಸಲಾಗುತ್ತಿದೆ.ಕನ್ನಡದ ಮಹತ್ವದ ಬರಹಗಾರರಲ್ಲೊಬ್ಬರಾದ ಡಾ. ಎಚ್ ಎಸ್ ಶಿವಪ್ರಕಾಶ ಅವರನ್ನು ೨೦೨೨ ನೇ ಸಾಲಿನ ” ಮಹಾತಪಸ್ವಿ ಶ್ರೀಕುಮಾರಸ್ವಾಮಿ ಸಾಹಿತ್ಯ ಭೂಷಣ” ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಪ್ರಶಸ್ತಿಯು ಐವತ್ತೊಂದು ಸಾವಿರ ರೂಪಾಯಿಗಳ ನಗದು,ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನೊಳಗೊಂಡಿರುತ್ತದೆ.ಅಗಸ್ಟ್ ೧೨ ರ ನೂಲಹುಣ್ಣಿಮೆಯಂದು ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ” ಮಹತಪಸ್ವಿ ಶ್ರೀಕುಮಾರಸ್ವಾಮಿ ಸಭಾಭವನ” ದಲ್ಲಿ ನಡೆಯುವ ” ಮಹಾಶೈವ ಗುರುಪೂರ್ಣಿಮೆ” ಯ ಆಚರಣಾ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುವುದು.