ಚಿಂತನೆ–ಕಾಳಿ — ಎರಡು ಉಪಾಸನಾ ಕ್ರಮಗಳು–ಮುಕ್ಕಣ್ಣ ಕರಿಗಾರ

ಚಿಂತನೆ

ಕಾಳಿ — ಎರಡು ಉಪಾಸನಾ ಕ್ರಮಗಳು

ಮುಕ್ಕಣ್ಣ ಕರಿಗಾರ

ಕೊಲ್ಕತ್ತಾದಲ್ಲಿ ನಡೆದ ರಾಮಕೃಷ್ಣಾಶ್ರಮದ ಸ್ವಾಮಿ ಆತ್ಮಸ್ಥಾನಂದ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ವರ್ಚುವಲ್ ಆಗಿ ಉದ್ಘಾಟಿಸುತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಳಿ ಆರಾಧನೆಯಿಂದ ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರು ವಿಭೂತಿಪುರುಷರಾದುದನ್ನು ಸ್ಮರಿಸಿ ” ನಂಬಿಕೆ ಪವಿತ್ರವಾಗಿದ್ದರೆ ಅಗೋಚರ ಶಕ್ತಿ ನಮಗೆ ಅರಿವಿಲ್ಲದಂತೆಯೇ ಸರಿ ದಾರಿಯಲ್ಲಿ ಕೊಂಡೊಯ್ಯುತ್ತದೆ.ಕಾಳಿ ಮಾತೆಯ ಕೃಪೆ ಭಾರತದ ಮೇಲೆ ಇದೆ” ಎಂದಿದ್ದಾರೆ.ಪ್ರಧಾನ ಮಂತ್ರಿಯವರ ಈ ಹೇಳಿಕೆಯನ್ನು ತೃಣಮೂಲ ಕಾಂಗ್ರೆಸ್ ನ ಸಂಸದೆ ಮಹುವಾ ಮೊಯಿತ್ರಾ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.ಮಹುವಾ ಮೊಯಿತ್ರಾ ಅವರು ” ಕಾಳಿ ಮಾತೆಯು ಮಾಂಸ ತಿನ್ನುವ,ಮದ್ಯ ಸ್ವೀಕರಿಸುವ ದೇವತೆಯಾಗಿ ನನಗೆ ಕಾಣುತ್ತಾಳೆ” ಎನ್ನುವ ಹೇಳಿಕೆ ನೀಡಿದ್ದರು.ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರ ಹೇಳಿಕೆಯಲ್ಲಿ ಕಾಳಿ ಉಪಾಸನೆಯ ಎರಡು ಭಿನ್ನ ಉಪಾಸನಾಕ್ರಮಗಳು ವ್ಯಕ್ತಗೊಂಡಿವೆಯಷ್ಟೆ.ಅವೆರಡು ಹೇಳಿಕೆಗಳಲ್ಲಿ ‘ ಇದು ಸರಿ’ , ‘ ಇದು ತಪ್ಪು’ ಎನ್ನಲಾಗದು.ಅವರವರ ಭಾವದ ದೇವಿ ಕಾಳಿಯನ್ನು ಅವರವರು ವ್ಯಕ್ತಪಡಿಸಿದ್ದಾರೆ.

ಶಕ್ತಿ ಉಪಾಸನೆ ಭಾರತದಲ್ಲಿ ಅತ್ಯಂತ ಪುರಾತನ ಉಪಾಸನಾ ಪದ್ಧತಿ.ದುರ್ಗಾ ಮತ್ತು ಕಾಳಿಯರನ್ನು ಭಾರತೀಯರು ಬಹುಹಿಂದಿನ ಕಾಲದಿಂದಲೂ ಪೂಜಿಸುತ್ತ ಬಂದಿದ್ದಾರೆ.ಕಾಳಿ ಮತ್ತು ದುರ್ಗೆಯರು ದೇಶದ ಮೂಲನಿವಾಸಿಗಳ,ಜನಪದರ ದೇವಿಯರು.ಬುಡಕಟ್ಟು ಜನಾಂಗದರಿಂದ ಪೂಜೆಗೊಳ್ಳುತ್ತ ಇಂದಿನ ನಾಗರಿಕ ಪ್ರಪಂಚದ ಸುಸಂಸ್ಕೃತ,ಶಾಸ್ತ್ರೋಕ್ತ,ವೇದೋಕ್ತ ಪೂಜಾಪದ್ಧತಿಯವರೆಗೆ ತಮ್ಮ ಮಹಿಮೆಯನ್ನು ವಿಸ್ತರಿಸಿಕೊಂಡಿದ್ದಾರೆ ಕಾಳಿ ಮತ್ತು ದುರ್ಗೆಯರು.ಶಕ್ತಿ ಉಪಾಸನೆಯಲ್ಲಿ ಕುಲಾಚಾರ ಮತ್ತು ವಾಮಾಚಾರ ಎನ್ನುವ ಎರಡು ಪದ್ಧತಿಗಳಿವೆ.ಕುಲಾಚಾರವನ್ನು ಕೌಲಪದ್ಧತಿ ಎಂದೂ ವಾಮಾಚಾರವನ್ನು ತಾಂತ್ರಿಕ ಪದ್ಧತಿ ಎಂದೂ ಕರೆಯಲಾಗುತ್ತಿದೆ.ಈ ಎರಡು ವಿಭಿನ್ನ ಪೂಜಾಪದ್ಧತಿಗಳು ಸಾಧಕರ ಮನೋಸ್ಥಿತಿಯನ್ನು ಅವಲಂಬಿಸಿದ ಪೂಜೆಗಳೇ ಹೊರತು ಇವೆರಡರಲ್ಲಿ ಒಂದು ಶ್ರೇಷ್ಠ ಮತ್ತೊಂದು ಕನಿಷ್ಟ ಎಂದಿಲ್ಲ.ತಾಂತ್ರಿಕೋಪಾಸನೆಯು ನಿರ್ದಿಷ್ಟ ತಂತ್ರಮಾರ್ಗವನ್ನು ಅವಲಂಬಿಸಿದ್ದು ಬಹುಬೇಗನೆ ಫಲ ನೀಡುತ್ತದೆ.ಕೌಲಪದ್ಧತಿಯು ಸಾತ್ತ್ವಿಕ ಪೂಜೆಯಾಗಿದ್ದು ನಿಧಾನವಾಗಿ ಆದರೆ ನಿಶ್ಚಿತವಾಗಿ ಫಲ ನೀಡುತ್ತದೆ.ಅಘೋರಿಗಳು,ಕಾಳಾಮುಖರು ಮತ್ತು ನಾಥಪಂಥದ ಯೋಗಿಗಳು ಕಾಳಿಯನ್ನು ವಾಮಾಚಾರ ಇಲ್ಲವೆ ತಂತ್ರಮಾರ್ಗದಿಂದ ಪೂಜಿಸುತ್ತಾರೆ.ಕಾಳಿಯ ತಾಂತ್ರಿಕೋಪಾಸನೆಯಲ್ಲಿ ಮದ್ಯ,ಮಾಂಸ,ಮತ್ಸ್ಯ,ಮದಿರೆ ಮತ್ತು ಮೈಥುನಗಳೆಂಬ ‘ಪಂಚಮಕಾರಗಳ’ ಮೂಲಕ ಉಪಾಸನೆ ಮಾಡಲಾಗುತ್ತದೆ.ತಾಂತ್ರಿಕ ಕಾಳಿ ಉಪಾಸಕರು ಮದ್ಯ,ಮಾಂಸ,ಮೀನುಗಳನ್ನು ದೇವಿಗೆ ಬಲಿಕೊಡುತ್ತ ಸ್ತ್ರೀಯರೊಂದಿಗೆ ರತಿಸುಖವನ್ನನುಭವಿಸುತ್ತ ಕಾಳಿಯನ್ನು ಉಪಾಸಿಸುತ್ತಾರೆ.ಆದರೆ ಕುಲಾಚಾರ ಪದ್ಧತಿಯಲ್ಲಿ ಪಂಚಮಕಾರಗಳನ್ನು ನಿಷೇಧಿಸಲಾಗಿದ್ದು ಸಾತ್ತ್ವಿಕಪೂಜೆಗೆ ಅಲ್ಲಿ ಪ್ರಾಧಾನ್ಯತೆ ಇದೆ.ಕುಲಾಚಾರ ಪದ್ಧತಿಯಲ್ಲಿ ಕಾಳಿಯನ್ನು ಭಕ್ತಿ,ಜ್ಞಾನ ಮತ್ತು ಕರ್ಮ ಯೋಗಮಾರ್ಗಗಳಿಂದ ಪೂಜಿಸಲಾಗುತ್ತದೆ.ಕುಂಡಲಿನಿಯೋಗವು ಕಾಳಿಶಕ್ತಿಯನ್ನು ಜಾಗ್ರತಗೊಳಿಸಿಕೊಳ್ಳುವ ಶಾಕ್ತಯೋಗಪದ್ಧತಿ.ಕಾಳಿಯನ್ನು ‘ ಆಧ್ಯಾಶಕ್ತಿ’ ‘ ಪರಮೇಶ್ವರಿ’ ಮತ್ತು ಜಗನ್ನಿಯಾಮಕಿ’ ಎಂದು ಕುಲಾಚಾರ ಪದ್ಧತಿಯು ಗುರುತಿಸಿದೆ.

ರಾಮಕೃಷ್ಣ ಪರಮಹಂಸರು ಕಾಳಿಯನ್ನು ಕುಲಾಚಾರ ಇಲ್ಲವೆ ಸಾತ್ತ್ವಿಕೋಪಾಸನೆಯಿಂದ ಒಲಿಸಿಕೊಂಡರು.ರಾಜಕುಮಾರಿಯ ಆತ್ಮಾಹುತಿಯ ಪ್ರಸಂಗದಲ್ಲಿ ಕಾಳಿಯು ಮಹಾಕಾಳಿಯಾಗಿ ಪ್ರಕಟಗೊಂಡು ಹಸಿದಡ್ಡಕುರುಬ ತರುಣನ ನಾಲಗೆಯ ಮೇಲೆ ತನ್ನ ಬೀಜಾಕ್ಷರ ” ಕ್ರೀಂ” ಕಾರವನ್ನು ಬರೆದು ಅವನನ್ನು ಮಹಾಕವಿಯನ್ನಾಗಿಸಿ,ವಿಶ್ವವಂದ್ಯನಾದ ಕವಿಕುಲಗುರು ಕಾಳಿದಾಸನನ್ನಾಗಿ ಮಾಡಿದಳು.ರಾಮಕೃಷ್ಣ ಪರಮಹಂಸರು ಕೂಡ ಪ್ರಾಥಮಿಕ ಶಾಲೆಯ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದವರಲ್ಲ ಆದರೆ ಕಾಳಿಯ ಅನುಗ್ರಹದಿಂದ ವೇದ,ಉಪನಿಷತ್ತು,ಶಾಸ್ತ್ರ- ಪುರಾಣಗಳಲ್ಲಿ ಅಸಾಧರಣ ವಿದ್ವತ್ತು ಸಂಪಾದಿಸಿದ್ದರು.ತಾನು ಕುಳಿತ ಮರದ ಕೊಂಬೆಯನ್ನೇ ಕಡಿಯುತ್ತಿದ್ದ ದಡ್ಡಕುರುಬ ತರುಣನೊಬ್ಬ ವಿಶ್ವದಲ್ಲಿ ಅದ್ವಿತೀಯ ಮಹಾಕವಿಯಾಗಿ ಮೆರೆದ.ಕಾಳಿದಾಸ ಮತ್ತು ರಾಮಕೃಷ್ಣ ಪರಮಹಂಸರಿಬ್ಬರು ಮಹಾಕಾಳಿಯ ಎರಡು ಲೀಲೆಗಳು.

ಋಷಿ ಮಾರ್ಕಂಡೇಯರು ದುರ್ಗಾಸಪ್ತಶತಿಯಲ್ಲಿ ಪರಾಶಕ್ತಿ ದುರ್ಗೆಯನ್ನು ” ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ” ಎನ್ನುವ ತ್ರಿಗುಣಾತ್ಮಿಕೆಯನ್ನಾಗಿ ಕಂಡಿದ್ದಾರೆ.ಮಾರ್ಕಂಡೇಯ ಋಷಿಯವರ ದುರ್ಗಾಸಪ್ತಶತಿಯು ಕೌಲ ಪದ್ಧತಿಯ ಶಕ್ತಿ ಉಪಾಸನೆ.ಆದರೆ ಪಶ್ಚಿಮ ಬಂಗಾಳ ಮತ್ತು ಇತರೆಡೆಗಳಲ್ಲಿ ಪಂಚಮಕಾರಗಳ ಮೂಲಕವೂ ದುರ್ಗಾಸಪ್ತಶತಿಯ ಪಠಣೆ ಮಾಡುವವರಿದ್ದಾರೆ.ದುರ್ಗಾಸಪ್ತಶತಿಯು ಪಂಚಮಕಾರಗಳ ಪೂಜೆಯು ಸಾತ್ತ್ವಿಕ ಉಪಾಸಕರಿಗೆ ಸಲ್ಲದು ಎನ್ನುವ ನಿಷೇಧ ವಿಧಿಸಿದೆ ಎನ್ನುವುದು ಗಮನಾರ್ಹ.ಪಂಚಮಕಾರಗಳ ತಾಂತ್ರಿಕ ಸಿದ್ಧಿಯ ಮೂಲಕ ಕಾಳಿಯನ್ನು ಆರಾಧಿಸಿದವರು ಕಾಳಿಯ ಅನುಗ್ರಹದಿಂದ ಪ್ರಾಪ್ತವಾದ ವರಗಳಿಂದ ಉನ್ಮತ್ತರಾಗಿ,ಕೊಬ್ಬಿ ಉಬ್ಬಿ ಅವುಗಳನ್ನು ದುರ್ಬಳಕೆ ಮಾಡಿಕೊಂಡು ಅಧಃಪತನ ಹೊಂದುತ್ತಾರೆ.ಸಾತ್ತ್ವಿಕೋಪಾಸಕರು ಕಾಳಿಯನ್ನು ಲೋಕಮಾತೆಯನ್ನಾಗಿ ಕಂಡು ,ಒದಗಿಬಂದ ಕಾಳಿಶಕ್ತಿಯನ್ನು ಲೋಕೋಪಕಾರಕ್ಕಾಗಿ ಬಳಸಿ ಮೋಕ್ಷವನ್ನು ಹೊಂದುತ್ತಾರೆ.ಮಹಾಕಾಳಿಯನ್ನು ಸ್ಮಶಾನಕಾಳಿ ಮತ್ತು ದಕ್ಷಿಣಕಾಳಿ ಎನ್ನುವ ಎರಡು ರೂಪಗಳಲ್ಲಿ ಪೂಜಿಸುವುದು ಕೂಡ ವಾಮಾಚಾರ ಮತ್ತು ಕುಲಾಚಾರ ಪದ್ಧತಿಗಳ ಎರಡು ನಿದರ್ಶನಗಳು.ಕಾಲವನ್ನು ನಿಗ್ರಹಿಸುವ ,ಕಾಲನಿಗೆ ಕಾಲವಾದವಳು ಮಹಾಕಾಲಿಯಾದರೆ,ಅಘೋರಿಗಳು,ತಾಂತ್ರಿಕರನ್ನು ಒಲಿದು ಉದ್ಧರಿಸುವವಳು ಸ್ಮಶಾನಕಾಳಿ.ದಕ್ಷಿಣ ಕಾಳಿಯು ವಿದ್ಯೆ,ಬುದ್ಧಿ,ಐಶ್ವರ್ಯಗಳನ್ನಿತ್ತು ಪೊರೆಯುವ ಲೋಕಮಾತೆ.ಪಂಚಮಕಾರಗಳ ತಾಂತ್ರಿಕ ಪೂಜೆಯು ಕೆಳಮಟ್ಟದ ಉಪಾಸನೆಯಾಗಿದ್ದು ಸಾತ್ತ್ವಿಕ ಪೂಜೆಯಾದ ಕುಲಾಚಾರ ಕಾಳಿ ಪೂಜೆಯು ಉತ್ತಮವಾದುದು.ತಾಂತ್ರಿಕೋಪಾಸನೆಯಿಂದ ಕ್ಷುದ್ರಸಿದ್ಧಿಗಳನ್ನು ಸಂಪಾದಿಸಿ ಸುಖಿಸಿದರೆ ಕುಲಾಚಾರ ಪದ್ಧತಿಯ ಕಾಳಿ ಪೂಜೆಯಿಂದ ಮೋಕ್ಷದ ಆನಂದವನ್ನು ಅನುಭವಿಸಬಹುದು.

About The Author