ವಿಶ್ವೇಶ್ವರ ಮಾರ್ಗ : ಭಕ್ತೋದ್ಧಾರಕ ವಿಶ್ವೇಶ್ವರನಿಗೆ ಶಾಸ್ತ್ರೋಪಚಾರದ ಪೂಜೆಗಳ ಅಗತ್ಯವಿಲ್ಲ–ಮುಕ್ಕಣ್ಣ ಕರಿಗಾರ

ವಿಶ್ವೇಶ್ವರ ಮಾರ್ಗ

ಭಕ್ತೋದ್ಧಾರಕ ವಿಶ್ವೇಶ್ವರನಿಗೆ ಶಾಸ್ತ್ರೋಪಚಾರದ ಪೂಜೆಗಳ ಅಗತ್ಯವಿಲ್ಲ

ಮುಕ್ಕಣ್ಣ ಕರಿಗಾರ

ನಿನ್ನೆ ಅಂದರೆ ಜುಲೈ ಮೂರರ ರವಿವಾರದಂದು ‘ ಶಿವೋಪಶಮನ ಕಾರ್ಯ‘ ಮುಗಿದ ಬಳಿಕ ರಾತ್ರಿ ಮಹಾಶೈವ ಬಳಗದ ಜೊತೆ ಶಿವಚಿಂತನೆಯಲ್ಲಿದ್ದೆ.ಉತ್ತಮ ಆಧ್ಯಾತ್ಮ ಸಾಧಕರೂ,ದೇವಿ ಉಪಾಸಕರೂ ಆಗಿರುವ ಮಹಾಶೈವ ಧರ್ಮಪೀಠದ ನಿಷ್ಠಾವಂತರಾದ ಗುರುಬಸವ ಹುರಕಡ್ಲಿ ಅವರು ಒಂದು ವಿಷಯವನ್ನು ಅಳುಕುತ್ತಲೇ ಮೆಲುದನಿಯಲ್ಲಿ ಪ್ರಸ್ತಾಪಿಸಿದರು–‘ ಕೆಲವು ಭಕ್ತರುಗಳು ವಿಶ್ವೇಶ್ವರನಿಗೆ ರುದ್ರಾಭಿಷೇಕ ಪೂಜೆ ಮಾಡಿಸಲು ಇಷ್ಟಪಟ್ಟಿದ್ದು ಅನುಮತಿ ಕೇಳುತ್ತಿದ್ದಾರೆ’ ಎಂದು.ನಗುತ್ತಲೇ ಹೇಳಿದೆ’ ಗುರುಬಸವ,ನಮ್ಮ ಶಿವ ವಿಶ್ವೇಶ್ವರ ಶಾಸ್ತ್ರಿಗಳ ಶಿವನಲ್ಲ,ಭಕ್ತರಶಿವ,ಮೋಕ್ಷಾಪೇಕ್ಷಿಗಳ ಶಿವ.ಈ ಶಿವನಿಗೆ ಭಕ್ತಿಯಿಂದ ಸಲ್ಲಿಸುವ ಪೂಜೆಯ ಹೊರತು ಯಾವ ಶಾಸ್ತ್ರೋಕ್ತ ಪೂಜೆಯೂ ಸಲ್ಲುವುದಿಲ್ಲ.’ ಗುರುಬಸವ ಹುರಕಡ್ಲಿ ಅವರು ನನ್ನ ಹಳೆಯ ವಿದ್ಯಾರ್ಥಿ ಮತ್ತು ನನ್ನ ಆಧ್ಯಾತ್ಮಿಕ ಸಾಧನೆ- ಸಿದ್ಧಿ,ಒಲವು- ನಿಲುವುಗಳನ್ನು ಚೆನ್ನಾಗಿ ಬಲ್ಲವರು.ನಮ್ಮ ಮಠದ ಹಿತೈಷಿಯಾಗಿ ಭಕ್ತರ ಭಾವನೆಗಳನ್ನು ಅವರು ಹಂಚಿಕೊಂಡಿದ್ದರು.ಎಪ್ರಿಲ್ ತಿಂಗಳ ಕೊನೆಯವಾರದಿಂದ ನಾನು ಭಕ್ತರಸಂಕಷ್ಟ ಪರಿಹಾರಕ್ಕಾಗಿ ‘ ಶಿವೋಪಶಮನ ಕಾರ್ಯ’ ಆರಂಭಿಸಿದ್ದು ಶ್ರೀಕ್ಷೇತ್ರ ಕೈಲಾಸದ ಶಿವ ವಿಶ್ವೇಶ್ವರನ ಸನ್ನಿಧಿಯನ್ನರಸಿ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಸಹಜವಾಗಿಯೇ ಕೆಲವರಲ್ಲಿ ರುದ್ರಾಭಿಷೇಕ ಮಾಡಿಸಬೇಕು ಎನ್ನುವ ಭಾವನೆ ಮೂಡಿರಬಹುದು.ಹಿಂದೆ ನಾನು ನಮ್ಮೂರಿನ ಒಂದು ಮಠದಲ್ಲಿ ಭಕ್ತರಿಂದ ನಿತ್ಯ ರುದ್ರಾಭಿಷೇಕದ ವ್ಯವಸ್ಥೆ ಮಾಡಿಸಿದ್ದರಿಂದ ಇಲ್ಲಿಯೂ ಅದನ್ನು ಮಾಡಿಸಬಹುದು ಎಂದು ಭಕ್ತರು ನಿರೀಕ್ಷಿಸಿರಬಹುದು.ಆದರೆ ನಾನು ಈಗ ಆಧ್ಯಾತ್ಮಿಕ ವಿಚಾರ,ಯೌಗಿಕ ವಿಚಾರಗಳನ್ನಲ್ಲದೆ ಯಾವುದೇ ಶಾಸ್ತ್ರ- ಸಂಹಿತೆಗಳನ್ನು ಒಪ್ಪುವುದಿಲ್ಲ.

 

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಪ್ರತಿ ರವಿವಾರ ನಡೆಯುವ ‘ ಶಿವೋಪಶಮನ’ — ಭಕ್ತರ ಸಂಕಷ್ಟಪರಿಹಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಭಕ್ತರುಗಳಿಗಾಗಿ ಮಹಾಶೈವ ಧರ್ಮಪೀಠದ ಅನುಯಾಯಿಗಳು,ನಿಷ್ಠಾವಂತರುಗಳು ಪ್ರತಿವಾರಕ್ಕೊಬ್ಬರಂತೆ ಅನ್ನದಾಸೋಹದ ವ್ಯವಸ್ಥೆ ಮಾಡಿಸುತ್ತಿದ್ದಾರೆ.ಜುಲೈ 3 ರ ರವಿವಾರದಂದು ನಡೆದ ‘ಶಿವೋಪಶಮನ’ ದಿನದ ಅನ್ನ ದಾಸೋಹದ ವ್ಯವಸ್ಥೆಯನ್ನು ಮಹಾಶೈವ ಧರ್ಮಪೀಠದ ನಿಷ್ಠಾವಂತರಲ್ಲೊಬ್ಬರೂ ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರೂ ಮತ್ತು ಪತ್ರಕರ್ತರೂ ಆಗಿರುವ ಬಸವರಾಜ ಭೋಗಾವತಿ ಅವರು ವಹಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಮಹಾಶೈವ ಧರ್ಮದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಬಸವರಾಜ ಭೋಗಾವತಿಯವರನ್ನು ವಿಶ್ವೇಶ್ವರಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಶುಭಹಾರೈಸಿದರು.ಶ್ರೀಕ್ಷೇತ್ರ ಕೈಲಾಸದ ಭಕ್ತರುಗಳು ಈ ಸಂದರ್ಭದಲ್ಲಿ ವಿಶ್ವೇಶ್ವರನ ಸನ್ನಿಧಿಯಲ್ಲಿದ್ದರು.

 

ಮಹಾಶೈವ ಧರ್ಮಪೀಠದ ಸ್ಥಾಪನೆ ಆಗಿರುವುದೇ ಭಕ್ತರ ಕಲ್ಯಾಣಕ್ಕಾಗಿ,ಆತ್ಮಜಾಗೃತಿಗಾಗಿ.ವೈದಿಕ ವಿಧಿ ವಿಧಾನಗಳ ಶಾಸ್ತ್ರೋಕ್ತಪೂಜೆಗೆ ಇಲ್ಲಿ ಅವಕಾಶ ಕಲ್ಪಿಸಿಲ್ಲ.ಮಹಾಶೈವ ಧರ್ಮಪೀಠವು ಹೊರನೋಟಕ್ಕೆ ಸ್ಥಾವರಲಿಂಗಾತ್ಮಕ ಮಠವಾಗಿದ್ದರೂ ವಿಶ್ವೇಶ್ವರನಲ್ಲಿ ಶಿವನ ಜಂಗಮತತ್ತ್ವದ ಆತ್ಮಶಕ್ತಿಯನ್ನು ಆಹ್ವಾನಿಸಿ,ಶಿವನ ವಿಶ್ವನಿಯಾಮಕ ಶಕ್ತಿಯನ್ನು ಜಾಗ್ರತಗೊಳಿಸಲಾಗಿದೆ.ಶ್ರೀಕ್ಷೇತ್ರ ಕೈಲಾಸದ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಲಿಂಗ ಮತ್ತು ಮೂರ್ತಿಗಳನ್ನು ಆಧ್ಯಾತ್ಮಿಕ ಶಕ್ತಿ ಪ್ರವಾಹದಿಂದ ಜಾಗ್ರತಗೊಳಿಸಲಾಗಿದೆಯೇ ಹೊರತು ಶುಷ್ಕ ಪ್ರಾಣಪ್ರತಿಷ್ಠೆ ಕ್ರಿಯಾವಿಧಿಯಿಂದ ಜಾಗ್ರತಗೊಳಿಸಲಾಗಿಲ್ಲ.ಸಿದ್ಧರು ಸ್ಥಾಪಿಸುವ ಲಿಂಗ- ಮೂರ್ತಿಗಳಲ್ಲಿ ಆಧ್ಯಾತ್ಮಿಕಶಕ್ತಿ ಪ್ರವಹಿಸುತ್ತಿರುತ್ತದೆಯೇ ಹೊರತು ಅರ್ಥಹೀನ ಪ್ರಾಣಪ್ರತಿಷ್ಠೆ ಕ್ರಿಯೆಗೆ,ಶಾಸ್ತ್ರೋಪಚಾರಕ್ಕೆ ಅಲ್ಲಿ ಅರ್ಥ ಇರುವುದಿಲ್ಲ.

ಹಿಂದೆ ನಂದನ ಸಂವತ್ಸರದಲ್ಲಿ ವಿಶ್ವೇಶ್ವರ ಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಶಕ್ತಿಯನ್ನು ಆಹ್ವಾನಿಸುವಾಗ ಲೋಕೋದ್ಧಾರವೇ ನನ್ನ ಸಂಕಲ್ಪವಾಗಿತ್ತು.ಇಂದಿಗೂ ಧರ್ಮ ದೇವರುಗಳು ಕೆಲವರ ಸ್ವತ್ತು ಆಗಿದ್ದು ಜನಸಾಮಾನ್ಯರು ಪಟ್ಟಭದ್ರರ ಸೇವೆ- ಸುಶ್ರೂಷೆಗಳಲ್ಲಿಯೇ ಪರಮಾನಂದ ಕಾಣುತ್ತಿದ್ದಾರೆ! ಮುಗ್ಧ ಜನರಿಗೆ ದೇವರು,ಧರ್ಮದ ತತ್ತ್ವ ತಿಳಿದಿಲ್ಲ,ಅವರಲ್ಲಿ ಆತ್ಮಶಕ್ತಿ ಜಾಗೃತಗೊಳ್ಳಲು ಬಿಡುತ್ತಿಲ್ಲ ಪ್ರತಿಗಾಮಿಶಕ್ತಿಗಳು.ತಮ್ಮದೇ ನಡೆಯುತ್ತಿರಬೇಕು,ಎಲ್ಲರೂ ತಮಗೆ ನಮಸ್ಕರಿಸಬೇಕು ಎಂದು ನಿರೀಕ್ಷಿಸುವ ಜನರು ಜನಸಾಮಾನ್ಯರನ್ನು ಅಜ್ಞಾನದಲ್ಲಿ ಇಡಬಯಸುತ್ತಾರೆಯೇ ಹೊರತು ಅವರನ್ನು ಬೆಳಕಿನ ಪಥದಲ್ಲಿ ಮುನ್ನಡೆಸಲಾರರು.ಸ್ವಯಂ ಅವರಿಗೆ ಬೆಳಕು ಕಂಡಿಲ್ಲವಾಗಿ ಇತರರಿಗೆ ಹೇಗೆ ಬೆಳಕಿನ ದರ್ಶನ ಮಾಡಿಸುತ್ತಾರೆ?ಕುರುಡರು ಕುರುಡರ ಕೈ ಹಿಡಿದ್ದು ಹಳ್ಳಕ್ಕೆ ಬಿದ್ದಂತೆ ಪ್ರತಿಗಾಮಿ ಶಕ್ತಿಗಳು ಮತ್ತು ಅವರನ್ನು ನಂಬುವವರ ಪಾಡು.ಅಜ್ಞಾನ- ಅಂಧಕಾರದ ಕೂಪದಿಂದ ಜನರನ್ನು ಮೇಲಕ್ಕೆತ್ತಲೆಂದೇ ನಾನು ಮಹಾಶೈವಧರ್ಮಪೀಠವನ್ನು ಕಟ್ಟಿದ್ದು.ಮಹಾಶೈವ ಧರ್ಮಪೀಠದಲ್ಲಿ ವಿಶ್ವೇಶ್ವರನಾಗಿ ಮೈವೆತ್ತು ಲೋಕೋದ್ಧಾರ ಲೀಲೆಯನ್ನೆಸಗುತ್ತಿರುವ ಶಿವನು ಬಸವಣ್ಣನವರ ವಚನೋಕ್ತಿಯಂತೆ ‘ ನಾದ ಪ್ರಿಯನೂ ಅಲ್ಲದ ವೇದಪ್ರಿಯನೂ ಅಲ್ಲದ ,ಭಕ್ತಿಪ್ರಿಯ ಶಿವ’. ವಿಶ್ವೇಶ್ವರ ಶಿವನನ್ನು ಭಕ್ತಿಯಿಂದ ಪೂಜಿಸಿ,ನಿಷ್ಠೆಯಿಂದ ಆರಾಧಿಸಬೇಕು.ಇಷ್ಟರ ಹೊರತು ಮತ್ತಾವ ವಿಧಿನಿಯಮಗಳಿಲ್ಲ.

 

ಮಾನ್ವಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ಎಂ ಬಿ ಸಿದ್ರಾಮಯ್ಯ ಸ್ವಾಮಿ ಅವರು ಜುಲೈ 3,2022 ರಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಶ್ರೀ ಕ್ಷೇತ್ರ ಕೈಲಾಸದಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಕೃತಜ್ಞತಾ ಪೂರ್ವಕವಾಗಿ ಸನ್ಮಾನಿಸಿದರು.ಈ ಸಂದರ್ಭರದಲ್ಲಿ ಮಾನ್ವಿಯ ಪತ್ರಕರ್ತರಾದ ಬಸವರಾಜ ಭೋಗಾವತಿಯವರು,ಮಾನ್ವಿಯ ಸಾಹಿತ್ಯಾಸಕ್ತರು ಮತ್ತು ಮಹಾಶೈವ ಧರ್ಮಪೀಠದ ಭಕ್ತರುಗಳು ವಿಶ್ವೇಶ್ವರಿ ದುರ್ಗಾದೇವಿಯ ಸನ್ನಿಧಿಯಲ್ಲಿದ್ದರು.

 

ನಾದ ಮತ್ತು ವೇದಗಳ ಉಪಾಸನಾ ಮಾರ್ಗವು ಪುರೋಹಿತಶಾಹಿಮಾರ್ಗ,ಆಧ್ಯಾತ್ಮ ಮಾರ್ಗವಲ್ಲ.’ ಜಗದ ಜೀವರುಗಳೆಲ್ಲ ಒಂದೇ; ಶಿವನೇ ಎಲ್ಲರ ತಂದೆ’ ಎನ್ನುವ ಮೂಲಘೋಷವಾಕ್ಯದಡಿ ಘೋಷಿಸಲ್ಪಟ್ಟ ‘ ಮಹಾಶೈವ ಧರ್ಮ’ ಮತ್ತು ಕಟ್ಟಲ್ಪಟ್ಟ ಮಹಾಶೈವ ಧರ್ಮಪೀಠಗಳ ಉದ್ದೇಶ ಲೋಕಸಮಸ್ತರಿಗೆ ಶಿವಾನುಗ್ರಹದ ಅಭಯನೀಡುವುದು.’ ಶಿವಾನುಗ್ರಹವು ಎಲ್ಲರ ಜನ್ಮಸಿದ್ಧ ಹಕ್ಕು’ ಎನ್ನುವ ಮಹಾಶೈವ ಧರ್ಮವು ಜೀವರುಗಳೆಲ್ಲರಲ್ಲಿ ಅಂತರ್ಗತವಾಗಿರುವ ಶಿವಶಕ್ತಿಯನ್ನು ಬಡಿದೆಬ್ಬಿಸುವ ಶಿವವಿಶ್ವವ್ಯಾಪಕ ತತ್ತ್ವದ ವಿಶ್ವಧರ್ಮವೇ ಹೊರತು ಯಾವುದೇ ವಿಶಿಷ್ಟ ಜಾತಿ,ಜನಾಂಗ,ವರ್ಗಗಳ ಏಳಿಗೆಯ ಸೀಮಿತೋದ್ದೇಶದ ಸಂಕುಚಿತ ಮತಧರ್ಮವಲ್ಲ.ವಿಶ್ವೇಶ್ವರನು ಲೋಕಸಮಸ್ತರ ಹೃದಯಗಳ ಆತ್ಮಜ್ಯೋತಿ ಸ್ವರೂಪನೇ ಹೊರತು ಲೋಕಜನರಾತ್ಮಶಕ್ತಿಗಿಂತ ಭಿನ್ನನಲ್ಲ.

ವಿಶ್ವಾತ್ಮರುಗಳ ಸಮಷ್ಟಿ ಆತ್ಮಶಕ್ತಿಯ ಪ್ರತೀಕ ಲಿಂಗವೇ ವಿಶ್ವಾತ್ಮನಾದ,ವಿಶ್ವವ್ಯಾಪಕನಾದ ವಿಶ್ವೇಶ್ವರ ಶಿವ.ಒಡಲಿಲ್ಲದ ಶಿವನು ಲೋಕಕರುಣೆಯಿಂದ ನಟಿಸುತ್ತಿರುವ ವಿಶ್ವೋದ್ಧರಣ ಲೀಲೆಯೇ ವಿಶ್ವೇಶ್ವರಲಿಂಗ ವಿಶೇಷವು.ವಿಶ್ವೇಶ್ವರನನ್ನು ಪೂಜಿಸಿ,ಭಜಿಸುವವರು ತಮ್ಮೊಳಗಿನ ವಿಶ್ವೇಶ್ವರ ಶಿವನನ್ನು ಎಚ್ಚರಿಸಿಕೊಂಡು ಆ ನಿಚ್ಚಬೆಳಗಿನಲ್ಲಿ ತಾವೂ ವಿಶ್ವೇಶ್ವರನಿಂದ ಭಿನ್ನರಲ್ಲ ಎನ್ನುವ ಅಭೇದಾನಂದವನ್ನನುಭವಿಸಬೇಕೇ ಹೊರತು ನಾನು ಭವಿ,ಆತ ಶಿವ ಎನ್ನುವ ,ಅಜ್ಞಾನವಶರಾಗಿ ಬಳಲಬಾರದು ಎನ್ನುವ ಸದಿಚ್ಛೆಯಿಂದ ಮಹಾಶೈವ ಧರ್ಮ ಪೀಠವನ್ನು ಕಟ್ಟಲಾಗಿದೆ.ಶಿವನತ್ತ ಅಡಿಇಟ್ಟು ನಡೆದು ಶಿವನನ್ನೇ ಪಡೆಯಬಹುದು ಎನ್ನುವ ಶಿವಾಭಯ ಸುನಿಶ್ಚಿತದ ಬೆಡಗಿನ ನಡೆಯೇ ವಿಶ್ವೇಶ್ವರನ ಮಾರ್ಗ.ಈ ಮಾರ್ಗದಡಿ ನಡೆದು ಬರುವವರು ಅಲ್ಪತೆ- ಅಳಿಯಾಸೆ,ಅಳಿಮನಗಳಿಂದ ಮುಕ್ತರಾದ ಅರಳ್ದಮನದವರು ಆಗಿರಬೇಕು.

ಉಪಚಾರದ ಪೂಜೆಯಿಂದಲ್ಲ ವಿಶ್ವೇಶ್ವರ ಶಿವನನ್ನು ಒಲಿಸುವುದು, ನಿರಾಡಂಬರ ನಿರ್ಮಲ ಮನಸ್ಸಿನ ಶುದ್ಧಭಕ್ತಿಯಿಂದ ಪೂಜಿಸಿ,ಆರಾಧಿಸಬೇಕು.ಶಾಸ್ತ್ರ ಸಂಹಿತೆಗಳ ಹಂಗಿಗೆ ಒಳಗಾಗದ ವಿಶ್ವೇಶ್ವರನು ತನ್ನನ್ನರಸಿ ಬರುವವರ ಆತ್ಮಶುದ್ಧಿಯನ್ನು ನೋಡುತ್ತಾನೆಯೇ ಹೊರತು ಶಾಸ್ತ್ರಶುದ್ಧಿಯನ್ನಲ್ಲ.ರುದ್ರಾಭಿಷೇಕ,ಪಂಚಾಮೃತಾಭಿಷೇಕ ಪೂಜೆ,ಬಿಲ್ವಾರ್ಚನೆ,ಅಷ್ಟೋತ್ತರಶತನಾಮಗಳ ಅರ್ಚನೆ,ಸಹಸ್ರನಾಮಾರ್ಚನೆ ಮೊದಲಾದ ಪೂಜೆಗಳು ಜನರನ್ನು ಮೆಚ್ಚಿಸುವ ಉಪಚಾರದ ಪೂಜೆಗಳು ಮಾತ್ರ.ಉಪಚಾರದ ಭಕ್ತಿಗೆ ಉಪಚಾರದ ಫಲ!ವಿಶ್ವೇಶ್ವರ ಶಿವನ ಪೂಜಾಕ್ರಮದಲ್ಲಿ ಆಧ್ಯಾತ್ಮ ಇದೆ,ಶಿವಮಹಾಯೋಗ ದರ್ಶನ ಇದೆ,ಶಿವನ ಲೋಕಕಾರುಣ್ಯಗುಣವನ್ನು ಪ್ರಕಟಿಸುವ ಶಿವೋದ್ಧರಣ ತತ್ತ್ವ ವಿಶೇಷವಿದೆ.

ನಾವು ವಿಶ್ವೇಶ್ವರ ಶಿವನಲ್ಲಿ ಸದಾ ಪ್ರಾರ್ಥಿಸುವುದು ‘ ತಂದೆ ಶಿವನೆ , ನಿನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಅವರ ಮನೋಭಿಷ್ಟಗಳನ್ನು ಈಡೇರಿಸು’ ಎಂದು.ಇಲ್ಲಿ ಬೇಡುವವರು ಭಕ್ತರು,ನೀಡುವವನು ಭಗವಂತ.ನಡುವೆ ದಲ್ಲಾಳಿಗಳ ಅಗತ್ಯವೆಲ್ಲಿದೆ? ವಿವಿಧ ಪೂಜೋಪಚಾರಗಳೆಂಬ ಬಿಲ್ಲು ಮಾಡಿಸಿ,ಶಿವನ ದರ್ಶನವನ್ನು ಖರೀದಿಸಲಾಗದು ಇಲ್ಲಿ,ಏಕೋಭಾವದಿಂದ ಶುದ್ಧಾತ್ಮರಾಗಿ ‘ ಓಂ ನಮೋ ಭಗವತೇ ವಿಶ್ವೇಶ್ವರಾಯ’– ತಂದೆ ಶಿವ ವಿಶ್ವೇಶ್ವರನೆ ಮಣಿದಿಹೆವು ನಿನ್ನೆದುರು,ಉದ್ಧರಿಸು ನಮ್ಮನ್ನು’ ಎಂದು ಏಕ ಮನಸ್ಕರಾಗಿ ಪ್ರಾರ್ಥಿಸುವುದೇ ವಿಶ್ವೇಶ್ವರಾನುಗ್ರಹಕ್ಕೆ ಪಾತ್ರರಾಗುವ ಸೂತ್ರ.ಶಾಸ್ತ್ರದ ಹಂಗಿಗೊಳಗಾದ ವಿಶ್ವೇಶ್ವರನು ಭಕ್ತಿಸೂತ್ರಕ್ಕೆ ಒಲಿದು,ಓಗೊಡುತ್ತಾನೆ.

About The Author