ಸಾವನ್ನು ಮುಂದೂಡಬಹುದಲ್ಲದೆ ಗೆಲ್ಲಲಾಗದು -ಮುಕ್ಕಣ್ಣ ಕರಿಗಾರ

ಚಿಂತನೆ

ಸಾವನ್ನು ಮುಂದೂಡಬಹುದಲ್ಲದೆ ಗೆಲ್ಲಲಾಗದುಮುಕ್ಕಣ್ಣ ಕರಿಗಾರ

ಬದುಕು,ಆಧ್ಯಾತ್ಮ- ಪರಮಾತ್ಮ,ಜೀವನದ ಸಾರ್ಥಕತೆ ಇವೆ ಮೊದಲಾದ ವಿಷಯಗಳ ಬಗ್ಗೆ ಆಗಾಗ ಆತ್ಮೀಯತೆಯಿಂದ ಪ್ರಶ್ನಿಸುವ ಕೊಪ್ಪಳದ ಸರಕಾರಿ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರೂ ಹಿರಿಯ ಕವಿಗಳೂ ಆಗಿರುವ ಶಿವಬಂಧು ಡಾಕ್ಟರ್ ಮಹಾಂತೇಶ ಮಲ್ಲನಗೌಡರ ಅವರ ಇಂದಿನ ಪ್ರಶ್ನೆ –‘ ಪ್ರಿಯ ಪೀಠಾಧಿಪತಿಗಳೆ, ಸಾವನ್ನು ಗೆಲ್ಲುವ ಸಾಧಕರು ಹುಟ್ಟಿ ಬರಬಹುದೆ?’. ಬಹು ಮಹತ್ವದ ಪ್ರಶ್ನೆಯನ್ನು ಕೇಳಿದ್ದಾರೆ ಡಾ.ಮಹಾಂತೇಶ ಮಲ್ಲನಗೌಡರ ಅವರು.

ಜೀವನ ಅಖಂಡವಾದುದು,ಅನಂತವಾದುದು.ಸಾವು ಬದುಕಿನ ಅಂತ್ಯವಲ್ಲ ; ಮುಂದಿನ ಜನ್ಮಕ್ಕಾಗಿ ಈ ದೇಹವನ್ನು ಬಿಟ್ಟು ಹೊರಡುವ ಒಂದು ಪಯಣಮಾತ್ರ.ಸೃಷ್ಟಿ ಆರಂಭವಾಗಿ ಲಕ್ಷಾಂತರ ವರ್ಷಗಳಾಗಿವೆ.ಸೃಷ್ಟಿಯಲ್ಲಿ ಜೀವವಿಕಾಸ ಕ್ರಿಯೆ ಸುಸಂಬದ್ಧವಾಗಿದೆ,ಸೂತ್ರಬದ್ಧವಾಗಿ ನಡೆಯುತ್ತಿದೆ.ಭಾರತೀಯ ಧಾರ್ಮಿಕ ನಂಬಿಕೆಯಂತೆ ಎಂಬತ್ನಾಲ್ಕು ಲಕ್ಷ ಜೀವರಾಶಿಗಳಿವೆ.ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ ಮತ್ತು ಕೊನೆಯದು.ಶ್ರೇಷ್ಠವಾದ ಈ ಮನುಷ್ಯ ಜನ್ಮದಲ್ಲಿ ಆಧ್ಯಾತ್ಮಿಕ,ಯೋಗಸಾಧನೆ ಮಾಡಿದರೆ ಹುಟ್ಟುಸಾವುಗಳ ಪರಿಭ್ರಮಣ ಚಕ್ರದಿಂದ ಹೊರಬರಬಹುದು,ಮುಕ್ತರಾಗಬಹುದು.ಇಲ್ಲದಿದ್ದರೆ ‘ ಪುನರಪಿ ಜನನಂ,ಪುನರಪಿ ಮರಣಂ’. ಪುನಃ ಪುನಃ ಹುಟ್ಟುವುದು,ಸಾಯುವುದು ನಡೆದಿರುತ್ತದೆ ಮಹಾಪ್ರಳಯ ಸಂಭವಿಸುವವರೆಗೆ.ಮಹಾಪ್ರಳಯ ಎಂದರೆ ಪುರಾಣಗಳು ಬಣ್ಣಿಸುವಂತೆ ಪ್ರಪಂಚದ ವಿನಾಶವಲ್ಲ; ಎಲ್ಲ ಜೀವಿಗಳು ತಾವು ಬಂದ ಮೂಲವಾದ ಪರಮಾತ್ಮನಲ್ಲಿ ಒಂದಾಗುವುದೇ ಮಹಾಪ್ರಳಯ ! ಎಲ್ಲ ಜೀವರುಗಳಿಗೆ ಮೋಕ್ಷಸಿಗುವುದೇ ಮಹಾಪ್ರಳಯ! ಜೀವಿಗಳು ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಸ್ವಲ್ಪ ಸ್ವಲ್ಪ ಪರಿಶುದ್ಧರಾಗುತ್ತ,ಪರಿಪೂರ್ಣರಾಗುತ್ತ ಕೊನೆಗೆ ಪರಿಪೂರ್ಣತೆಯನ್ನೈದುವರು.ಇದು ಬಹುನಿಧಾನವಾಗಿ ನಡೆಯುವ ಆತ್ಮವಿಕಾಸ ಕ್ರಿಯೆ.ಒಂದು ದಿನ ಬಂದೇ ಬರುತ್ತದೆ, ಅಂದು ಜಗತ್ತಿನ ಎಲ್ಲ ಜೀವರುಗಳು — ಪಾಪಿ,ಪುಣ್ಯಾತ್ಮ,ಉಚ್ಚ- ನೀಚ,ಜ್ಞಾನಿ- ಅಜ್ಞಾನಿ– ಎನ್ನುವ ಯಾವ ಭೇದವಿಲ್ಲದೆ ಎಲ್ಲರೂ ಪರಮಾತ್ಮನಲ್ಲಿ ಒಂದಾಗುವ ಮಹಾದಿನ,ಆ ಸುದಿನವೇ ಮಹಾಪ್ರಳಯ; ಎಲ್ಲ ಜೀವರುಗಳು ಹುಟ್ಟು ಸಾವಿನ ಚಕ್ರದಿಂದ ಪಾರಾಗಿ ಸಚ್ಚಿದಾನಂದ ಘನನಾದ ಪರಮಾತ್ಮನಲ್ಲಿ ಒಂದಾಗುವ ಮಹಾಯೋಗದಿನವೇ ಮಹಾಪ್ರಳಯ.

ಕಾಲ ಮತ್ತು ಕರ್ಮಗಳು ಪ್ರಪಂಚದಲ್ಲಿ ಜೀವರುಗಳ ಗತಿ ನಿರ್ಧರಿಸುತ್ತವೆ.ಕಾಲ- ಕರ್ಮಗಳ ಹಿನ್ನೆಲೆಯಾಗಿ ” ಕಾರಣ” ರೂಪದಲ್ಲಿದ್ದಾನೆ ಪರಮಾತ್ಮನು.ಕಾಲವು ಪರಿಮಾಣಾತ್ಮಕವೆಂಬಂತೆ ತೋರಿದರೂ ಅಖಂಡವಾದುದು,ಅನಂತವಾದುದು.ಕರ್ಮವು ಜೀವಿಗಳು ಎಸಗುವ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಫಲವಾಗಿ ಮನುಷ್ಯರು ಮುಂದೆ ಹೊಂದಲಿರುವ ಜನ್ಮಸೂಚಕ ಸೂತ್ರವು.ಸತ್ಕಾರ್ಯಗಳನ್ನು,ಲೋಕೋಪಕಾರಿ ಕಾರ್ಯಗಳನ್ನೆಸಗಿದವರು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಅನುಕೂಲಕರವಾದ ಸ್ಥಳ,ಸನ್ನಿವೇಶ,ಕುಟುಂಬಗಳಲ್ಲಿ ಹುಟ್ಟುತ್ತಾರೆ.ಕೆಟ್ಟಕಾರ್ಯಗಳನ್ನೆಸಗಿದವರು ‘ಪುನರಪಿಜನನಂ’ ಗೆ ಕಾರಣವಾಗುವ ಪರಿಸರದಲ್ಲಿ ಹುಟ್ಟುತ್ತಾರೆ.ಆದರೆ ಕರ್ಮದಿಂದ ಪಾಪಯೋನಿಗಳಲ್ಲಿ ಹುಟ್ಟುತ್ತಾರೆ,ಶುದ್ರಯೋನಿಗಳಲ್ಲಿ ಹುಟ್ಟುತ್ತಾರೆ ಎನ್ನುವುದು ಒಪ್ಪಲಾಗದ ಮಾತು,ಅಪಕ್ವರ ನುಡಿ.ಮನುಷ್ಯರಲ್ಲಿ ಶ್ರೇಷ್ಠರು- ಕನಿಷ್ಟರು ಎಂದಿಲ್ಲ,ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ,ಯಾರೂ ಕನಿಷ್ಟರಲ್ಲ.ವ್ಯಕ್ತಿಗಳು ತಮ್ಮ ಸಾಧನೆ- ಸಿದ್ಧಿಗಳ ಬಲದಿಂದ ಶ್ರೇಷ್ಠರಾಗುತ್ತಾರೆಯೇ ಹೊರತು ಶ್ರೇಷ್ಠಕುಲ,ಅದರಲ್ಲಿ ಹುಟ್ಟಿದ ಮಾತ್ರಕ್ಕೆ ಶ್ರೇಷ್ಠರು ಎನ್ನುವುದು ಸುಳ್ಳು,ಭ್ರಮೆ.ಒಂದೊಂದು ಹುಟ್ಟಿನ ಅನುಭವವನ್ನು ಗಟ್ಟಿಗೊಳಿಸಿಕೊಂಡು ಮುಂದಿನ ಜೀವನಕ್ಕೆ ಅಡಿ ಇಡುತ್ತದೆ ಅವಿನಾಶಿಯಾದ ಆತ್ಮ.ಜೀವವು ಆತ್ಮವಾಗಿ ವಿಕಾಸಹೊಂದುವ ಕ್ರಿಯೆಯೇ ಆತ್ಮೋನ್ನತಿ.ಜೀವರುಗಳಲ್ಲಿ ಆತ್ಮದ ಪ್ರಜ್ಞೆ ಎಚ್ಚರಗೊಂಡು ಅವರುಗಳಿಗೆ ಆತ್ಮ ಸಾಕ್ಷಾತ್ಕಾರ ಆಗುವವರೆಗೆ ನಡೆದೇ ಇರುತ್ತದೆ ಹುಟ್ಟುಸಾವುಗಳ ಪರಿಭ್ರಮಣ ಚಕ್ರದ ತಿರುಗುವಿಕೆ.

ಸಾವು ಜೀವವಿಕಾಸಕ್ಕೆ ಅನಿವಾರ್ಯವಾದ ಒಂದು ಸೃಷ್ಟಿಕ್ರಿಯೆ.ಭಾವನೆಗಳು ಜೀವನವನ್ನು ರೂಪಿಸುತ್ತವೆ.ತೀವ್ರವಾದ,ಶಕ್ತಿಯುತವಾದ ಭಾವನೆಗಳನ್ನು ‘ ವಾಸನೆಗಳು’ ಎನ್ನಲಾಗುತ್ತಿದ್ದು ಈ ವಾಸನೆಗಳು ಜೀವಿಯ ಮುಂದಿನ ಹುಟ್ಟಿಗೆ ಕಾರಣವಾಗುತ್ತವೆ.ಆಸೆ ಮತ್ತು ವಾಸನೆಗಳು ಭವಕ್ಕೆ,ಭವದ ಗತಿಗೆ ಕಾರಣವಾಗುತ್ತವೆ.ಸಾವನ್ನು ಅನಿಷ್ಟ ಎಂದು ಭಾವಿಸಿರುವ ಮನುಷ್ಯ ಸಾವನ್ನು ಗೆಲ್ಲುವ ಬಗೆ ಹೇಗೆ ಎಂದು ಚಿಂತಿಸುತ್ತಲೇ ಬಂದಿದ್ದಾನೆ.ವಿಜ್ಞಾನಿಗಳು ಕೂಡ ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ,ಆದರೆ ಸಫಲರಾಗಿಲ್ಲ.ವಿಜ್ಞಾನವು ಕೇವಲ ಅಣು ಪರಮಾಣುಗಳಂತಹ ಭೌತಿಕ ನೆಲೆಯಲ್ಲಿಯೇ ಮುಂದುವರೆಯುತ್ತಿರುವುದರಿಂದ ಅದಕ್ಕೆ ಸಿಗದು ಸಾವನ್ನು ಗೆಲ್ಲುವ ಸೂತ್ರ.ಜೀವ ಎನ್ನುವುದು ಘನ,ದ್ರವ,ಅನಿಲಗಳಾಚೆಯ ಪ್ಲಾಸ್ಮಾಸ್ಥಿತಿಯ ಸೃಷ್ಟಿ ಸೂತ್ರ.ಪ್ಲಾಸ್ಮಾತೀತ ಸ್ಥಿತಿಯೇ ಆತ್ಮ.ನಮ್ಮ ಶರೀರವು ಪಂಚಭೂತಗಳಿಂದ ನಿರ್ಮಿಸಲ್ಪಟ್ಟಿದೆ.ಈ ಭೂತತತ್ತ್ವವನ್ನರಿಯುವ ಅಭೌತಿಕ ನೆಲೆಯಲ್ಲಿ ಸಾವಿನ ಗುಟ್ಟನ್ನು ಅರಿತುಕೊಳ್ಳಬಹುದು,ಅದನ್ನು ಮುಂದೂಡುವ ಸೂತ್ರ ಕಂಡುಕೊಳ್ಳಬಹುದು.ಮಾರ್ಕಂಡೇಯನು ಮೃತ್ಯುಂಜಯ ಶಿವನ ಕೃಪೆಯಿಂದ ಯಮನನ್ನು ಗೆದ್ದು,ಚಿರಂಜೀವಿಯಾದ ಕಥೆಯನ್ನು ಎಲ್ಲರೂ ಬಲ್ಲರು.ಮೃತ್ಯುವನ್ನು ಗೆಲ್ಲಬೇಕಾದರೆ,ಚಿರಂಜೀವಿಗಳಾಗಬೇಕಾದರೆ ಮೃತ್ಯುಂಜಯನೂ ಮಹಾದೇವನೂ ಆಗಿರುವ ಶಿವನ ಅನುಗ್ರಹ ಅನಿವಾರ್ಯ.ಮೃತ್ಯುವನ್ನು ಗೆದ್ದು ಚಿರಂಜೀವಿಗಳಾಗಿದ್ದಾರೆ ಎಂದು ಅಶ್ವತ್ಥಾಮ,ವ್ಯಾಸ,ಪರಶುರಾಮ,ವಿಭೀಷಣ,ಕೃಪ,ಆಂಜನೇಯ ಮತ್ತು ಬಲಿಯನ್ನು ಸಪ್ತಚಿರಂಜೀವಿಗಳ ಪಟ್ಟಿಯಲ್ಲಿ ಸೇರಿಸಿದ್ದಾರೆ.ಈ ಚಿರಂಜೀವಿ ಪಟ್ಟವು ಅವರಿಗೆ ದೈವಾನುಗ್ರಹದಿಂದ ದೊರೆತ ವಿಶೇಷ ಅವಸ್ಥೆ.

ಯೋಗಿಗಳು ತಮ್ಮ ಸಾಧನೆಯ ಬಲದಿಂದ ಇಷ್ಟಪಟ್ಟಷ್ಟು ವರ್ಷಗಳ ಕಾಲ ಬದುಕ ಬಲ್ಲರು.ಏಳುನೂರಾ ಎಪ್ಪತ್ತು ವರ್ಷಗಳ ಕಾಲ ಬದುಕಿದ ಯೋಗಿಗಳ ಬಗ್ಗೆ ಕೇಳಿದ್ದೇವೆ.ನನ್ನ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ತಮ್ಮ ಹಿಂದಿನ ಜನ್ಮದ ಗುರುಗಳ ಬಗ್ಗೆ ಹೇಳುತ್ತಿದ್ದರು ; ಅವರು ಇಂದಿಗೂ ಹಿಮಾಲಯದಲ್ಲಿ ಜ್ಞಾನಗಂಜಾಶ್ರಮದಲ್ಲಿ ತಪೋನಿರತರಾಗಿದ್ದಾರೆಂದೂ ಅವರಿಗೆ ಸಾವಿರದೈದುನೂರು ವರ್ಷಗಳಾಗಿವೆ ಎಂದೂ ಅವರು ವ್ಯೋಮಕಾಯರಾಗಿದ್ದು ಗಾಳಿಯಲ್ಲಿ ಗಾಳಿಯಾಗಬಲ್ಲರು,ನೀರಿನಲ್ಲಿ ನೀರಾಗಬಲ್ಲರು,ಮನಸ್ಸು ಬಂದ ರೂಪ ಧರಿಸಬಲ್ಲರು,ಅವರು ಬರುತ್ತಿದ್ದರೆ ಅಲೌಕಿಕ ಪರಿಮಳವು ಕಿಲೋಮೀಟರುಗಳಷ್ಟು ಪಸರಿಸುತ್ತದೆ ಎಂದು ಹೇಳುತ್ತಿದ್ದರು. ಮಹಾತಪಸ್ವಿಗಳು ಧಾರವಾಡದ ತಪೋವನಕ್ಕೆ ಎರಡು ಮೂರು ಬಾರಿ ತಮ್ಮ ಹಿಂದಿನ ಜನ್ಮದ ಗುರುಗಳನ್ನು ಆಹ್ವಾನಿಸಿದ್ದರು ಕೂಡ.ಇಂತಹ ಸಾಕಷ್ಟು ಸಂಖ್ಯೆಯ ಋಷಿಗಳು,ಸಿದ್ಧರುಗಳಿದ್ದಾರೆ ಹಿಮಾಲಯದ ಅವ್ಯಕ್ತ ನೆಲೆಗಳಲ್ಲಿ.ಸುಮೇರುವಿನ ಜ್ಞಾನಗಂಜಾಶ್ರಮ ಮತ್ತು ಸಿದ್ಧಾಶ್ರಮಗಳು ಉನ್ನತ ಯೋಗಿಗಳ ಗುಪ್ತನೆಲೆಗಳಾಗಿದ್ದು ಅಲ್ಲಿ ಸಾವಿರಾರು ವರ್ಷಗಳಿಂದ ತಪನ್ನಾಚರಿಸುತ್ತಿರುವ ಯೋಗಿಗಳಿದ್ದಾರೆ ಸಂಕಲ್ಪಸಿದ್ಧಿಗಾಗಿ.ಪರಶುರಾಮನು ಮಹಾನ್ ಸಂಕಲ್ಪಸಿದ್ಧಿಗಾಗಿ ಇಂದಿಗೂ ಹಿಮಾಲಯದಲ್ಲಿ ತಪೋನಿರತನಾಗಿದ್ದಾನೆ ಎನ್ನುತ್ತಾರೆ.ಅಲ್ಲಮಪ್ರಭುದೇವರು ಕೂಡ ವ್ಯೋಮಕಾಯ ಸಿದ್ಧಿಪಡೆದಿದ್ದ ಅತ್ಯಪರೂಪದ ಯೋಗಿಗಳು.ಹಠಯೋಗದಿಂದ ಪ್ರಕೃತಿಯ ಮೇಲೆ ಪ್ರಭುತ್ವಪಡೆದು,ಸಿದ್ಧಿಸಿಕೊಳ್ಳಬಹುದು ವ್ಯೋಮಕಾಯವನ್ನು.

ಯೋಗಿಗಳು ತಮ್ಮ ಯೋಗಸಾಧನೆಯ ಬಲದಿಂದ ಸಾವನ್ನು ಗೆಲ್ಲಬಲ್ಲರು.ಮನುಷ್ಯ ಶರೀರದಲ್ಲಿ 72000 ನಾಡಿಗಳಿದ್ದು ಅವುಗಳಲ್ಲಿ 72 ಮುಖ್ಯ ನಾಡಿಗಳು,ಅವುಗಳಲ್ಲಿ ಹತ್ತು ಮುಖ್ಯನಾಡಿಗಳು ಅವುಗಳಲ್ಲಿ ಮೂರು ಅತಿಮುಖ್ಯನಾಡಿಗಳಿವೆ– ಇಡಾ,ಪಿಂಗಳ ಮತ್ತು ಸುಷುಮ್ನಾ ಎಂದು.ಈ ನಾಡಿಭೇದನಕ್ರಮವನ್ನರಿತರೆ ಸಾವಿರಾರು ವರ್ಷಗಳ ಕಾಲ ಬದುಕಬಹುದು.ಬೆನ್ನುಹುರಿಯು ಯೋಗಶಕ್ತಿಗಳ ಕೇಂದ್ರವಾಗಿದ್ದು ಮೂಲಾಧಾರ,ಸ್ವಾಧಿಷ್ಟಾನ,ಮಣಿಪೂರಕ,ಅನಾಹತ,ವಿಶುದ್ಧಿ ಮತ್ತು ಆಜ್ಞಾಚಕ್ರಗಳೆಂಬ ಷಟ್ಚಕ್ರಗಳಿವೆ ಸುಪ್ತವಾಗಿ.ಇವುಗಳಾಚೆಯ ಪರಮಚಕ್ರ,ಪರಶಿವನ ನಿವಾಸವು ಸಹಸ್ರಾರವಾಗಿದ್ದು ಅದು ತಲೆಯಲ್ಲಿದೆ.ಮೂಲಾಧಾರ ಚಕ್ರದಲ್ಲಿ ಕುಂಡಲಿನಿ ಶಕ್ತಿಯು ಊರ್ಧ್ವಮುಖಿಯಾಗಿ ಮಲಗಿದೆ.ಯೋಗಿಯು ತನ್ನ ಯೋಗಸಾಮರ್ಥ್ಯದ ಬಲದಿಂದ ಮೂಲಾಧಾರದಲ್ಲಿ ಮೇಲ್ಮುಖವಾಗಿ ಮಲಗಿರುವ ಕುಂಡಲಿನಿ ಸರ್ಪವನ್ನು ಜಾಗ್ರತಗೊಳಿಸಿಕೊಂಡು ಒಂದೊಂದೇ ಚಕ್ರಗಳನ್ನು ಏರುತ್ತ ಬರಬೇಕು.ಪ್ರಾಣಯಾಮ ಸಾಧನೆಯಿಂದ ಪ್ರಾಣವಾಯುವನ್ನು ಅಣುವಿನ ಸಹಸ್ರಭಾಗವಾಗಿರುವಷ್ಟು ಸೂಕ್ಷ್ಮಗಾತ್ರಕ್ಕೆ ಅದನ್ನು ಕುಗ್ಗಿಸಬೇಕು.ಪೂರಕ,ರೇಚಕ,ಕುಂಭಕಗಳೆಂದು ಬರಿ ಶ್ವಾಸೋಚ್ಛಾಸಕ್ರಿಯೆಗಳನ್ನು ಮಾಡುವ ಯೋಗಾಸನ ನಿಪುಣರು ನಿಜವಾದ ಪ್ರಾಣಾಯಾಮದ ರಹಸ್ಯವನ್ನರಿಯರು.ಕೆಲವು ಮಾತ್ರೆಗಳ ಲೆಕ್ಕಾಚಾರದಲ್ಲಿ ಉಸಿರನ್ನು ಎಳೆಯುವುದು,ನಿಲ್ಲಿಸುವುದು ಮತ್ತು ಬಿಡುವುದನ್ನು ಮಾಡುವುದರಿಂದ ದೇಹದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದೇ ಹೊರತು ಆಧ್ಯಾತ್ಮಿಕ ಸಾಧನೆಯ ಆತ್ಯಂತಿಕಸಿದ್ಧಿಯಾದ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಿಲ್ಲ. ಭ್ರೂಮಧ್ಯವೆಂಬ ಹಣೆಯವರೆಗಿರುವ ಷಟ್ಚಕ್ರಗಳ ಯೋಗವು ಒಂದು ಹಂತವಾದರೆ ಆರುಚಕ್ರಗಳಾಚೆ ಮೀರಿದುನ್ಮನಿಯಸ್ಥಳವಾದ ಸಹಸ್ರಾರ ಚಕ್ರಕ್ಕೆ ಕುಂಡಲಿನಿ ಶಕ್ತಿಯನ್ನು ಒಯ್ಯುವುದೇ ಮಹಾಯೋಗಸಿದ್ಧಿ,ಅದುವೇ ಪರಶಿವ ಸಾಕ್ಷಾತ್ಕಾರದ ಗುಟ್ಟು.ತಲೆಯಲ್ಲಿರುವ ಸಹಸ್ರಾರ ಚಕ್ರವು ಸಹಸ್ರದಳ ಕಮಲಗಳ ಚಕ್ರವಾಗಿದ್ದು ಸಹಸ್ರಾರದ ಮಧ್ಯೆ ಪರಶಿವನು ಯೋಗಮಗ್ನನಾಗಿದ್ದಾನೆ.ಮೂಲಾಧಾರದಲ್ಲಿದ್ದ ಕುಂಡಲಿನಿ ಶಕ್ತಿಯನ್ನು ಸಹಸ್ರಾರ ಚಕ್ರದಲ್ಲಿರುವ ಸದಾಶಿವನೊಂದಿಗೆ ಒಂದು ಮಾಡುವುದೇ ಮಹಾನ್ ಯೋಗ ಸಾಧನೆ,ಮಹಾಸಿದ್ಧಿ.ಪ್ರಾಣವಾಯುವನ್ನು ಶುದ್ಧಿಕರಿಸಿಕೊಳ್ಳುತ್ತ ಅತ್ಯಂತಸೂಕ್ಷ್ಮಸ್ಥಿತಿಗೆ ತಂದಿರಬೇಕು.ಸಹಸ್ರಾರ ಚಕ್ರ ಪ್ರವೇಶಿಸಲು ಬ್ರಹ್ಮರಂಧ್ರ ಎನ್ನುವ ಸಾಸಿವೆಕಾಳಿನ ಸಹಸ್ರ ಭಾಗದಷ್ಟು ಚಿಕ್ಕದಾದ ರಂಧ್ರವಿದ್ದು ಕುಂಡಲಿನಿಶಕ್ತಿಯನ್ನು ಬ್ರಹ್ಮರಂಧ್ರದ ಒಳಸೇರಿಸಿ ಸದಾಶಿವನಲ್ಲಿ ಐಕ್ಯಗೊಳಿಸಬೇಕು.ಇದೇ ಶಿವಶಕ್ತಿಯರ ಸಂಗಮಸ್ಥಳ,ಶಿವಶಕ್ತಿಯರ ಐಕ್ಯಸ್ಥಳವಾದ ಕೈಲಾಸ.ಸಹಸ್ರಾರ ಚಕ್ರವನ್ನೇ ಯೋಗದ ಪರಿಭಾಷೆಯಲ್ಲಿ ಕದಳಿಬನ ಎನ್ನುತ್ತಾರೆ.ಕುಂಡಲಿನಿಶಕ್ತಿಯು ಸಹಸ್ರಾರದ ಒಳಹೊಕ್ಕು ಯೋಗಮಗ್ನನಾಗಿರುವ ಸದಾಶಿವನನ್ನು ಬಡಿದೆಬ್ಬಿಸಬೇಕು.ಆಗ ಕಣ್ತೆರೆದು ನೋಡುತ್ತಾನೆ ಪರಶಿವ.ಕುಂಡಲಿನಿಶಕ್ತಿಯನ್ನು ಸಹಸ್ರಾರಕ್ಕೆ ಕೊಂಡೊಯ್ದು ಸದಾಶಿವನನ್ನು ಜಾಗ್ರತಗೊಳಿಸಿ ಕಂಡವರೇ ಮುಕ್ತರು,ಸಿದ್ಧರು.

ಸಹಸ್ರಾರ ಚಕ್ರಭೇದನ ಸಿದ್ಧಿಯಿಂದ ಅಮೃತೋತ್ಪತ್ತಿ ತತ್ತ್ವವು ಯೋಗಿಯ ಕೈವಶವಾಗುತ್ತದೆ.ಸಹಸ್ರಾರ ಚಕ್ರದಲ್ಲಿ ಮಧು ಇದೆ.ಅದು ದಿನಕ್ಕೆ ಒಂದು ತೊಟ್ಟು ಒಸರುತ್ತದೆ.ಆ ಮಧುಪಾನ ಮಾಡುವ ಮೂಲಕ ಯೋಗಿಯು ಜರಾಮರಣ ಮುಕ್ತನಾಗಿ ಸಾವಿರಾರು ವರ್ಷಗಳ ಕಾಲ ಬದುಕಬಲ್ಲ. ಋಷಿಗಳು ತಪಸ್ಸು ಮಾಡುತ್ತಿರುವಾಗ ಕಾಮಧೇನು ಬಂದು ಹಾಲುಣಿಸುತ್ತಿತ್ತು ಎನ್ನುವ ಕಲ್ಪನೆ ಇದೆಯಲ್ಲ,ಅದು ಸಹಸ್ರಾರ ಚಕ್ರದಿಂದ ಮಧು ಇಲ್ಲವೆ ಅಮೃತ ಒಸರುವ ಆಧ್ಯಾತ್ಮಿಕ ಸಿದ್ಧಿಸೂಚಕ ಕಥನ. ಕಾಮಧೇನು ದೇವಲೋಕದ ಹಸುವಾಗಿದ್ದು ದೇವತೆಗಳು ಅಮೃತಪಾನ ಮಾಡಿ ಮರಣ ಮುಕ್ತರಾದವರು. ಸಹಸ್ರಾರವು ದೇವರ ದೇವ ಮಹಾದೇವನ ನೆಲೆಯಾಗಿದ್ದು ಅಮೃತೇಶ್ವರನಾದ ಸದಾಶಿವನು ಅಲ್ಲಿದ್ದಾನೆ.ಇಡಾ ನಾಡಿಯು ಸೂರ್ಯನಾಡಿಯಾಗಿದ್ದು ದೇಹದ ಉಷ್ಣವನ್ನು ಕಾಯ್ದುಕೊಂಡರೆ ಪಿಂಗಳ ನಾಡಿಯು ಚಂದ್ರನಾಡಿಯಾಗಿದ್ದು ಅಮೃತಪ್ರವಹಿಸುತ್ತ ದೇಹವನ್ನು ತಂಪಾಗಿರಿಸುತ್ತದೆ.ಸುಷುಮ್ನಾ ನಾಡಿಯು ಬ್ರಹ್ಮನಾಡಿಯಾಗಿದ್ದು ಆ ನಾಡಿ ಜಾಗ್ರತಿಯ ಮೂಲಕ ಯೋಗಿಯು ಬ್ರಹ್ಮಭಾವವನ್ನು ಹೊಂದುವನು ‘ ಅಹಂಬ್ರಹ್ಮಾಸ್ಮಿ’ ,’ ಶಿವೋಹಂ’ ಸ್ಥಿತಿ ತಲುಪುವನು.ಬ್ರಹ್ಮಭಾವದಲ್ಲಿ ನೆಲೆಯಾದವನಿಗೆ ಸಾವು ಎಲ್ಲಿಯದು ? ಶಿವೋಹಂಭಾವದಲ್ಲಿ ಸ್ಥಿತನಾದವನಿಗೆ ಭವವೆಲ್ಲಿ,ಬಂಧನವೆಲ್ಲಿ ? ಹೀಗೆ ಬ್ರಹ್ಮಭಾವಿ ಇಲ್ಲವೆ ಶಿವಭಾವಿಗಳಾಗುವವರೇ ಹುಟ್ಟುಸಾವುಗಳ ಚಕ್ರದಿಂದ ಬಿಡುಗಡೆಹೊಂದುವ ಮುಕ್ತಾತ್ಮರು.

ಸಹಸ್ರಾರ ಭೇದನ ಸಿದ್ಧಿಯಿಂದಲೇ ಸಾವಿರಾರು ವರ್ಷಗಳ ಕಾಲ ಬದುಕಬಹುದು.ಪ್ರತಿ ಮನುಷ್ಯನಿಗೆ ನೂರು ವರ್ಷಗಳ ಆಯಸ್ಸು ಇರುವಂತೆ ಯೋಗಿಗೂ ಒಂದು ನೂರು ವರ್ಷಗಳ ಆಯಸ್ಸು ಇರುತ್ತದೆ.ಯೋಗಿಯು ತನ್ನ ಸಾವಿನ ಕ್ಷಣದ ಸುಳಿವನ್ನರಿಯುತ್ತಾನೆ.ಕೂಡಲೆ ಅವನು ಪ್ರಾಣಾಯಮದಿಂದ ತನ್ನ ಪ್ರಾಣವಾಯುವನ್ನು ಸಹಸ್ರಾರಕ್ಕೆ ಏರಿಸಿ ನಿರ್ವಿಕಲ್ಪ ಸಮಾಧಿಯನ್ನೈದುವನು.ಜೀವವು ಮುಕ್ಕಾಲು ಮೂರುಗಳಿಗೆಯಲ್ಲಿ ದೇಹದಿಂದ ಹೊರಹೋಗಬೇಕು. ಆ ಅವಧಿ ಮುಗಿದೊಡನೆ ಸಾಯಲಾರರು ಜೀವಿಗಳು.ಮುಕ್ಕಾಲು ಮೂರು ಘಳಿಗೆಗಳ ಕಾಲ ಸಹಸ್ರಾರದಲ್ಲಿ ಯೋಗಮಗ್ನನಾಗುವ ಯೋಗಿಯು ಬಂದ ಸಾವನ್ನು ತಪ್ಪಿಸಿಕೊಂಡು ಮತ್ತೆ ನೂರುವರ್ಷಗಳ ಆಯುಷ್ಯ ಪಡೆಯುತ್ತಾನೆ.ಹೀಗೆ ಪ್ರತಿನೂರುವರ್ಷಗಳಿಗೊಮ್ಮೆ ಸಾವನ್ನು ತಪ್ಪಿಸಿಕೊಳ್ಳುತ್ತ ಏಳುನೂರುವರ್ಷ,ಸಾವಿರ ವರ್ಷಗಳ ಕಾಲ ಬದುಕಬಹುದು.ಆದರೆ ಎಷ್ಟೇ ನೂರು,ಸಾವಿರ ವರ್ಷಗಳು ಬದುಕಿದರೂ ಕೊನೆಗೊಂದುದಿನ ಸಾಯಲೇಬೇಕು!ಮರ್ತ್ಯದ ಮಣ್ಣಲ್ಲಿ ಮಣ್ಣಾಗಲೇಬೇಕು.ಸಶರೀರಿಗಳಾಗಿ ಯಾರೂ ಕೈಲಾಸಕ್ಕೆ ಹೋಗಲು ಸಾಧ್ಯವಿಲ್ಲವಾದ್ದರಿಂದ ಈ ಕಾಯವನ್ನು ತ್ಯಜಿಸಿ ದಿವ್ಯಕಾಯರಾಗಿ ಮಾತ್ರ ಸೇರಬಹುದು ಕೈಲಾಸವನ್ನು.ಸ್ಥೂಲ,ಸೂಕ್ಷ್ಮ,ಕಾರಣ ಶರೀರಗಳಾಚೆಯ ‘ಮಹಾಕಾರಣ’ ಶರೀರವೇ ದಿವ್ಯಶರೀರವಾಗಿದ್ದು ಯೋಗಸಾಮರ್ಥ್ಯದಿಂದ ಮಹಾಕಾರಣ ಶರೀರವನ್ನು ಹೊಂದಿ ಅದರ ಮೂಲಕ ಇಷ್ಟಪಟ್ಟ ಲೋಕಗಳಲ್ಲಿ ಸಂಚರಿಸಬಹುದು.ಸಿದ್ಧಪುರುಷರುಗಳು,ದೇವತೆಗಳು ಈ ಮಹಾಕಾರಣ ಶರೀರದ ಮೂಲಕವೇ ಸಂಚರಿಸುತ್ತಿದ್ದು ಅವರು ತಮ್ಮ ಪ್ರೀತಿಪಾತ್ರರ ಬಳಿ ಬಂದು ಅನುಗ್ರಹಿಸಬಲ್ಲರು.ಇದು ಸಾಕ್ಷಾತ್ಕಾರದ ರಹಸ್ಯ.

About The Author