ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ | ಯಕ್ಷಿಂತಿ ಗ್ರಾಮದಲ್ಲಿ ನೂರು ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು | ಗ್ರಾಮಕ್ಕೆ ಬಾರದ ಅತಿಥಿ ಶಿಕ್ಷಕರು ?

ಶಹಾಪುರ:ವಡಗೇರ ತಾಲೂಕಿನ  ಯಕ್ಷಿಂತಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 100 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ.ಶಿಕ್ಷಣ ಮಂತ್ರಿಗಳೇ ಬಂದು ನೋಡಿ ನಮ್ಮೂರ ಶಾಲೆಯನ್ನು ಎಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ?. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ. ಒಂದು ನೂರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು. ಆದರೆ ಶಿಕ್ಷಕರು ಮಾತ್ರ ಒಬ್ಬರೇ. ಒಬ್ಬ ಶಿಕ್ಷಕ ಒಂದು ನೂರು ವಿದ್ಯಾರ್ಥಿಗಳಿಗೆ ಬೋಧಿಸಲು ಸಾಧ್ಯವೇ ?. ನದಿಯ ತಟದಲ್ಲಿರುವ ಗ್ರಾಮ ಯಕ್ಷಂತಿ.

ಶಾಲೆಯಲ್ಲಿ ಮೂರರಿಂದ ನಾಲ್ಕು ಕೋಣೆಗಳಿವೆ.ಪ್ರತಿ ತರಗತಿಗೆ ಒಂದೊಂದು ಕೋಣೆ ಅವಶ್ಯಕತೆ ಇದೆ.ಶಾಲಾ ಕೊಠಡಿಗಳ ಕೊರತೆಯೂ ಕೂಡ ಶಾಲೆಯಲ್ಲಿ ಎದ್ದು ಕಾಣುತ್ತಿದೆ.ಮುಖ್ಯ ಶಿಕ್ಷಕರು ಎಲ್ಲಾ ಮಕ್ಕಳನ್ನು ನಿಭಾಯಿಸಲು ಒಂದೇ ಕೊಠಡಿಯಲ್ಲಿ ಕೂಡಿಸಿ ಪಾಠ ಮಾಡುತ್ತಾರೆ ಎಂದರೆ ನಂಬಲು ಸಾಧ್ಯವೇ ?ಆ ಒಬ್ಬ ಶಿಕ್ಷಕರು ಮುಖ್ಯ ಶಿಕ್ಷಕನ ಕೆಲಸ ಆತನೇ ಮಾಡಬೇಕು.ಕಚೇರಿಯ ಕೆಲಸಕ್ಕಾಗಿ ತಾಲೂಕು ಮತ್ತು ಜಿಲ್ಲೆಯ ಕಚೇರಿಗೆ ಬಂದರೆ ಶಾಲಾ ಮಕ್ಕಳನ್ನು ನೋಡಿಕೊಂಡು ಹೋಗುವವರು ಯಾರು ?.ಇದರ ಬಗ್ಗೆ ತಾಲೂಕು ಮತ್ತು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ.ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸದ ಗತಿ ಏನು.?

ಸರಕಾರ ಶಿಕ್ಷಣ ಇಲಾಖೆ ಮತ್ತು  ಜನಪ್ರತಿನಿಧಿಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರಾ ?. 6 ರಿಂದ 7 ವರ್ಷದವರೆಗೂ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸರಕಾರ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಬಟ್ಟೆ ಕೊಟ್ಟರೆ ಸಾಲದು. ಇವೆಲ್ಲಕ್ಕಿಂತಲೂ ಶಿಕ್ಷಣ ಕೊಡುವುದು  ಮುಖ್ಯವಾದದ್ದು.ಹಾಗಾದರೆ ಹಳ್ಳಿಯ ಪ್ರತಿಭೆಗಳು ಒಳ್ಳೆಯ ಶಿಕ್ಷಣ ಪಡೆಯಲು ಇದರಿಂದ ಸಾಧ್ಯವಾದಿತೇ ಎನ್ನುವ ಪ್ರಶ್ನೆ ಮೂಡುತ್ತಿದೆ ?.

 

 

ಸರಕಾರ ಯಕ್ಷಿಂತಿ ಗ್ರಾಮಕ್ಕೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಜಿಲ್ಲಾ ಶಿಕ್ಷಣ ಇಲಾಖೆಗೆ ಅಧಿಕಾರ ನೀಡಿದೆ.ಆದರೆ ನೇಮಕವಾದ ಶಿಕ್ಷಕರು ಒಂದೆರಡು ತಿಂಗಳಲ್ಲಿ ಬಿಟ್ಟು ಹೋಗುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.ಈಗಾಗಲೇ ಸರಕಾರದಿಂದ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಅಧಿಕಾರ ನೀಡಿದೆ.ಆದರೆ ಒಬ್ಬರೇ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ.

ಯಾದಗಿರಿ ಜಿಲ್ಲೆ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿಯಲು ಶಿಕ್ಷಕರ ಕೊರತೆಯೇ ಕಾರಣ ಎಂದು ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ.ಹಾಗಾದರೆ ಶಿಕ್ಷಕರ ಕೊರತೆ ಇರಲು ಕಾರಣವೇನು ಎನ್ನುವ ಪ್ರಶ್ನೆ ಕಾಡುತ್ತಿದೆ.

ಶಿಕ್ಷಣ ಇಲಾಖೆ ಅಧಿಕಾರಿಗಳು ಯಕ್ಷಿಂತಿ ಗ್ರಾಮಕ್ಕೆ ಭೇಟಿ ನೀಡಿ ಶಿಕ್ಷಕರ ಕೊರತೆಯನ್ನು ನೀಗಿಸಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸುವರೆ ಎನ್ನುವುದು ಕಾದು ನೋಡಬೇಕಿದೆ.

 

ಯಕ್ಷಿಂತಿ ಗ್ರಾಮದಲ್ಲಿ ಒಬ್ಬರೇ ಶಿಕ್ಷಕರಿದ್ದಿದ್ದು ಗಮನಕ್ಕೆ ಬಂದಿದ್ದು,ಈಗಾಗಲೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ.

ರುದ್ರಗೌಡ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಹಾಪುರ

 

ಆರು ವರ್ಷಗಳಿಂದ ಒಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು,ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಶಿಕ್ಷಕರನ್ನು ನೇಮಕದ ಬಗ್ಗೆ ಮನವಿ ಸಲ್ಲಿಸಲಾಗಿದೆ.100 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರು ಬೋಧಿಸಲು ಸಾಧ್ಯವಿಲ್ಲ.ಗ್ರಾಮೀಣ ಪ್ರದೇಶದ ಮಕ್ಕಳ ಭವಿಷ್ಯದ ಜೊತೆ ಸರಕಾರ ಮತ್ತು ಇಲಾಖೆ ಅಧಿಕಾರಿಗಳು ನಮಗೆ ಯಾವುದೇ ರೀತಿಯ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ.ಜನಪ್ರತಿನಿಧಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ.ಇಲಾಖಾ ಅಧಿಕಾರಿಗಳು ಶಿಕ್ಷಕರನ್ನು ನೇಮಿಸದಿದ್ದರೆ ತಾಲೂಕು ಶಿಕ್ಷಣ ಇಲಾಖೆ ಕಚೇರಿಯ ಮುಂದೆ ಗ್ರಾಮಸ್ಥರೆಲ್ಲರೂ ಪ್ರತಿಭಟನೆ ನಡೆಸುತ್ತೇವೆ.

ನಿಂಗಣ್ಣ ಕರಡಿ
ಅಧ್ಯಕ್ಷರು.ದಲಿತ ಸಂಘರ್ಷ ಸಮಿತಿ ಯಕ್ಷಂತಿ ಗ್ರಾಮ

 

 

 

 

About The Author