ಚಿಂತನೆ:ಇಲ್ಲದ ಗುಣಗಳನ್ನು ಆರೋಪಿಸಿ,ತಲ್ಲಣಿಸುವುದು ಸಲ್ಲದು–ಮುಕ್ಕಣ್ಣ ಕರಿಗಾರ

ಮನುಷ್ಯ ಪ್ರಪಂಚದಲ್ಲಿ ಯಾರೂ ಪೂರ್ಣರಿಲ್ಲ.ಪೂರ್ಣತೆಯ ಪಥದಲ್ಲಿ ನಡೆಹಿಡಿದು ತಮ್ಮ ಕೈಲಾದಷ್ಟು ದಕ್ಕಿಸಿಕೊಂಡವರಿದ್ದಾರೆಯೇ ಹೊರತು ‘ಪೂರ್ಣರಾಗಿದ್ದಾರೆ’ ಎನ್ನುವವರು ಯಾರೂ ಇಲ್ಲ.ಪರಮಾತ್ಮನೊಬ್ಬನೇ ಪೂರ್ಣನಿರುವುದರಿಂದ ಮನುಷ್ಯರಲ್ಲಿ ಪೂರ್ಣತ್ವವನ್ನು ಅರಸಲಾಗದು.ಬಹುಸಂಖ್ಯಾತರು ಅಪೂರ್ಣರು ಇದ್ದು ಪೂರ್ಣತೆಯ ಪಥದಲ್ಲಿ ನಡೆಯುವವರು,ದುಡಿಯುವವರನ್ನು ಪೂರ್ಣರೆಂದು ಭ್ರಮಿಸುತ್ತಾರೆ! ಪೂರ್ಣಪಥದ ಅರಿವೇ ಇಲ್ಲದವರು ಆ ಪಥದಿ ನಡೆಯುವವರನ್ನು ಪೂರ್ಣರೆಂದು ಭಾವಿಸುವುದು ಸಹಜ.ಬೆಂಗಳೂರನ್ನು ನೋಡದ ಹಳ್ಳಿಯ ಮುಗ್ಧ ಮನುಷ್ಯನ ಮುಂದೆ ಬೆಂಗಳೂರು ಹೀಗಿದೆ,ಹಾಗಿದೆ,ಭೂಮಿಯ ಮೇಲೆ ಸ್ವರ್ಗ ಎಂದು ಬಣ್ಣಿಸಿ ಹೇಳಿದರೆ ಅವನು ನಂಬುತ್ತಾನೆ.ತಾನು ನಂಬುವುದು ಮಾತ್ರವಲ್ಲ ತನ್ನಂತೆಯೇ ಬೆಂಗಳೂರನ್ನು ಕಾಣದವರ ಮುಂದೆ ಬೆಂಗಳೂರನ್ನು ಮತ್ತಷ್ಟು ಅತಿಶಯವಾಗಿ ಬಣ್ಣಿಸಿ ಹೇಳುತ್ತಾನೆ.ಕಾಣದವರ ಭೂಮಿಯ ಮೇಲಿನ ಸ್ವರ್ಗವಾಗುತ್ತದೆ ಬೆಂಗಳೂರು.ಆದರೆ ಬೆಂಗಳೂರನ್ನು ಕಂಡವರಿಗೆ ವಾಸ್ತವ ಗೊತ್ತಿರುತ್ತದೆ.ಹಾಗೆಯೇ ಒಬ್ಬ ವ್ಯಕ್ತಿಯ ಬಗ್ಗೆ ಆತನ ಶಿಷ್ಯರೋ,ಅಭಿಮಾನಿಗಳೋ,ಅನುಯಾಯಿಗಳೋ ಆತನಸುಂದರ ವ್ಯಕ್ತಿತ್ವದ ಚಿತ್ರಣ ಕಟ್ಟುತ್ತಾರೆ,ಅದನ್ನೇ ಜನರೆದುರು ಪ್ರಚುರಪಡಿಸುತ್ತಾರೆ.ಜನರು ಅದನ್ನು ನಂಬಿ ಆ ವ್ಯಕ್ತಿಯ ಅದ್ಭುತವ್ಯಕ್ತಿತ್ವದ ಕಲ್ಪನೆ ಮಾಡಿಕೊಳ್ಳುತ್ತಾರೆ.ಆದರೆ ಆ ವ್ಯಕ್ತಿಯ ಬಳಿ ಇದ್ದವರು,ನಿತ್ಯವೂ ಆ ವ್ಯಕ್ತಿಯನ್ನು ಕಾಣುತ್ತಿರುವವರಿಗೆ ಆ ವ್ಯಕ್ತಿಯ ನಿಜ ವ್ಯಕ್ತಿತ್ವದ ದರ್ಶನವಾಗಿರುತ್ತದೆ.ದೂರದಿಂದ ಆತನ ಬಗ್ಗೆ ಕೇಳಿದವರ ಕಣ್ಣುಗಳಲ್ಲಿ ಆ ವ್ಯಕ್ತಿಯ ಹುಸಿವ್ಯಕ್ತಿತ್ವ ಕಂಗೊಳಿಸುತ್ತಿರುತ್ತದೆ.ಧಾರ್ಮಿಕ ಕ್ಷೇತ್ರದ ವ್ಯಕ್ತಿಗಳ ಬಗ್ಗೆ ಜನರಲ್ಲಿ ಇಂತಹದ್ದೇ ತಪ್ಪು ತಿಳಿವಳಿಕೆ,ಮಿಥ್ಯಾಕಲ್ಪನೆ ಮೂಡಿದೆ.ಧಾರ್ಮಿಕ ಕ್ಷೇತ್ರದಲ್ಲಿ ಪೂರ್ಣರಿಲ್ಲ,ಪೂರ್ಣತೆಯ ಪಥದಲ್ಲಿ ಅವರು ನಡೆಯುವುದೂ ಇಲ್ಲ.ಅವರು ಧಾರ್ಮಿಕ ವ್ಯಕ್ತಿಗಳೇ ಹೊರತು ಆಧ್ಯಾತ್ಮಿಕ ವ್ಯಕ್ತಿಗಳಲ್ಲ.ಧರ್ಮವೇ ಬೇರೆ ,ಆಧ್ಯಾತ್ಮವೇ ಬೇರೆ.ಧರ್ಮವು ಶಾಸ್ತ್ರ- ಸಂಹಿತೆಗಳ ಕಟ್ಟುಪಾಡುಗಳಿಗೆ ಒಳಗಾಗಿದೆ,ಆಧ್ಯಾತ್ಮವು ಎಲ್ಲ ಬಂಧನಗಳಿಂದ ಮುಕ್ತರನ್ನಾಗಿಸುತ್ತದೆ.

ಮನುಷ್ಯರಲ್ಲಿ ಸ್ವಲ್ಪ ಒಳ್ಳೆಯವರಿದ್ದರೆ ಸಾಕು ಅಂತಹವರನ್ನು ‘ ದೇವರಂಥ ಮನುಷ್ಯ’ ಎಂದು ಬಣ್ಣಿಸುತ್ತಾರೆ.ತಮ್ಮಲ್ಲಿ ಇಲ್ಲದ ಗುಣ,ವಿಶೇಷಗಳು ಇತರರಲ್ಲಿ ಕಂಡಾಗ ಜನರು ಹೊಗಳುವಲ್ಲಿ ಧಾರಾಳಿಗಳು ಆಗುತ್ತಾರೆ.ನಮ್ಮ ನಡುವೆ ಇರುವ ದೇವಮಾನವರುಗಳು,ಅವತಾರಿಗಳು,’ನಡೆದಾಡುವ ದೇವರುಗಳು’ ಹೀಗೆಯೇ ಜನರ ಹುಂಬುನಂಬಿಕೆಯಿಂದ ದೊಡ್ಡವರಾದವರು.ಅವರನ್ನು ಹತ್ತಿರದಿಂದ ನೋಡಿದರೆ ಅವರ ವ್ಯಕ್ತಿತ್ವದ ದೋಷ- ದೌರ್ಬಲ್ಯಗಳು,ಕುಂದು- ಕೊರತೆಗಳು ಢಾಳಾಗಿ ಕಾಣಿಸುತ್ತವೆ.ಕಂಡವರು ಮುಚ್ಚಿಡುತ್ತಾರೆ,ಕಾಣದವರು ಹಾಡಿಹೊಗಳುತ್ತಾರೆ.ಇದು ದೇವಮಾನವರು,ಅವತಾರಿಗಳು,ನಡೆದಾಡುವ ದೇವರುಗಳ ನಿಜವೃತ್ತಾಂತ.ಹಿರಿಯರನ್ನು ಗೌರವಿಸಬೇಕು ಆದರೆ ಅಸತ್ಯವನ್ನು ಪ್ರಚುರಪಡಿಸಬಾರದು.ಮನುಷ್ಯರು ದೇವರಲ್ಲ,ದೇವರು ಮನುಷ್ಯನಾಗಲಾರ.ಇದು ಸಾರ್ವಕಾಲಿಕ,ಸಾರ್ವತ್ರಿಕ ಸತ್ಯ.ಪೂರ್ಣನಾದ ಪರಮಾತ್ಮನು ಅಪೂರ್ಣನಾಗಿ ಅವತರಿಸಲಾರ; ಬದಲಿಗೆ ಸರ್ವಜೀವರುಗಳಲ್ಲಿ ತನ್ನ ಪೂರ್ಣತೆಯ ಸಾಕ್ಷಾತ್ಕಾರದ ಸಾಧನವಾದ ಆತ್ಮಚೈತನ್ಯವನ್ನಿಟ್ಟಿದ್ದಾನೆ.ಮನುಷ್ಯರು ತಮ್ಮೊಳಗಣ ಪೂರ್ಣತ್ವವನ್ನು ಅರಿಯದೆ ಅವರು ಇವರನ್ನು ಪೂರ್ಣರು ಎಂದು ಭಾವಿಸಿ,ಬಳಲುತ್ತಾರೆ.

ವ್ಯಕ್ತಿಗಳ ಮುಚ್ಚಿಟ್ಟವ್ಯಕ್ತಿತ್ವ ಎಂದಿದ್ದರೊಂದು ದಿನ ಬಯಲಿಗೆ ಬರುತ್ತದೆ,ಸತ್ಯ ಪ್ರಕಟಗೊಳ್ಳುತ್ತದೆ.ಅದುವರೆಗಿನ ಅವರ ಹುದುಗಿಸಿಟ್ಟ ವ್ಯಕ್ತಿತ್ವದ ನಿಜಹೂರಣ ಬಯಲಿಗೆ ಬರುತ್ತದೆ.ತಾನು ಒಬ್ಬ ಸ್ಥಿತಪ್ರಜ್ಞನಂತೆ ಬಿಂಬಿಸಿಕೊಂಡ ವ್ಯಕ್ತಿ ಅಳಿಯಾಸೆಗೆ ಒಳಗಾಗಿ ಹೊಗಳಿಕೆ ಅರ್ಹರಲ್ಲದವರನ್ನು ಇಂದ್ರ ಚಂದ್ರರಂತೆ ಹೊಗಳಬಹುದು.ಪೂರ್ಣತ್ವವನ್ನು ಮೈಗೂಡಿಸಿಕೊಂಡಂತೆ ತೋರ್ಪಡಿಸಿಕೊಂಡ ವ್ಯಕ್ತಿ ಕೀಳುವಾಂಛೆಗೊಳಗಾಗಿ ಅಪೂರ್ಣರನ್ನು ಅಪೂರ್ವರ ಮಟ್ಟಕ್ಕೇರಿಸಿ ಹೊಗಳಿ ತನ್ನನ್ನು ದೇವರು ಎಂದು ಪೂಜಿಸಿ,ಆರಾಧಿಸುತ್ತಿರುವವರ ಎದುರೇ ಹಗುರ ಆಗಬಹುದು.ಇಂತಹ ಸಂದರ್ಭಗಳಲ್ಲಿ ಜನರು ಭಾವಾವೇಶಕ್ಕೆ ಒಳಗಾಗುವುದು ಸಹಜ.’ಇಂಥವರಿಂದ ಈ ವ್ಯಕ್ತಿಯ ಬಗ್ಗೆ ಇಂಥಹ ಹುಸಿ ಹೊಗಳಿಕೆಯ ಮಾತುಗಳೆ?.ಆದರೆ ಅದು ಕಟುವಾಸ್ತವ! ಆ ವ್ಯಕ್ತಿ ಪೂರ್ಣರಾಗಿರಲಿಲ್ಲ,ದೇವರೂ ಆಗಿರಲಿಲ್ಲ.ಜನರು ಹಾಗೆ ಭ್ರಮಿಸಿದ್ದರಿಂದ ಇಂದು ಆ ವ್ಯಕ್ತಿಯ ಮಾತುಗಳನ್ನು ಕೇಳಿ,ದುಃಖಿತರಾದರು.ಆ ವ್ಯಕ್ತಿಯೂ ನಮ್ಮಂತೆಯೇ ಮನುಷ್ಯ,ಅವರೂ ಕೂಡ ಎಲ್ಲರಂತೆಯೇ ರಕ್ತ ಮಾಂಸಗಳನ್ನುಳ್ಳ ಮನುಷ್ಯ ಎಂದು ತಿಳಿದುಕೊಂಡಿದ್ದರೆ ದುಃಖಪಡಲು ಕಾರಣವಿರಲಿಲ್ಲ.ತಾವು ದೊಡ್ಡವರು ಎಂದು ಭಾವಿಸಿದ ವ್ಯಕ್ತಿಗಳ ದೇಹದಲ್ಲಿ ಹರಿಯುತ್ತಿರುವುದು ರಕ್ತವೇ ಹೊರತು ಹಾಲಲ್ಲ,ಅಮೃತವಲ್ಲ ಎನ್ನುವ ಸತ್ಯದ ಅರಿವು ಇದ್ದರೆ ವ್ಯಕ್ತಿಗಳಲ್ಲಿ ದೈವತ್ವವನ್ನು ಅರಸಿ ಬಳಲುವ ಬಳಲಿಕೆ ಕಾಡುತ್ತಿರಲಿಲ್ಲ.ಜನರೇನೋ ಮುಗ್ಧರು, ಎಲ್ಲವನ್ನೂ ಸುಲಭವಾಗಿ ನಂಬುತ್ತಾರೆ.ಆದರೆ ಜನರ ದೃಷ್ಟಿಯಲ್ಲಿ ಪೂರ್ಣರು,ದೊಡ್ಡವರು ಎಂದು ಭಾವಿಸಲ್ಪಟ್ಟವರು ನಿಜವಾಗಿಯೂ ದೊಡ್ಡವರು ಆಗಿರಲೇಬೇಕು.ದೊಡ್ಡದೊಡ್ಡ ಮಾತುಗಳನ್ನು ಆಡಿ ದೊಡ್ಡವರಾದರೆ ಸಾಲದು; ಆಡುವ ಮಾತಿಗೂ ನಡೆದುಕೊಳ್ಳುವ ರೀತಿಗೂ ವ್ಯತ್ಯಾಸ ಇರಬಾರದು.ಮುಗ್ಧಜನರೆದುರು ಹಿಮಾಲಯದೆತ್ತರದ ವ್ಯಕ್ತಿತ್ವ ತೋರ್ಪಡಿಸಿಕೊಂಡು ಅಧಿಕಾರಸ್ಥರನ್ನು ಓಲೈಸಲು ಹುಸಿಹೊಗಳಿಕೆಯನ್ನಾಡುವುದು ಕಪಟವಲ್ಲದೆ,ಆತ್ಮಜ್ಞಾನಿಗಳ ಲಕ್ಷಣವಲ್ಲ! ಪರಮಾತ್ಮನ ಪೂರ್ಣಪಥಕ್ಕೆ ಸಲ್ಲದ ನಡೆ ಅದು!

About The Author