ಯಾದಗಿರಿ ಮತಕ್ಷೇತ್ರ:ಕಾಂಗ್ರೆಸ್ ಟಿಕೆಟಿಗಾಗಿ ತೀವ್ರ ಪೈಪೋಟಿ.ದಕ್ಕುವುದಾರಿಗೆ ?

ಬಸವರಾಜ ಕರೇಗಾರ

ಯಾದಗಿರಿ:ಮುಂದಿನ ವರ್ಷದ ವಿಧಾನಸಭೆ ಚುನಾವಣೆ ನಡೆಯುವುದರಿಂದ ಇಂದಿನಿಂದಲೇ ಎಲ್ಲಾ ಪಕ್ಷಗಳು ಟಿಕೆಟ್ ಗಾಗಿ ತೀವ್ರ ಪೈಪೋಟಿ ನಡೆಸಿವೆ. ಅದರಲ್ಲಿ ಕಾಂಗ್ರೆಸ್ ನಲ್ಲಿ ತೀವ್ರ ಕಸರತ್ತು ನಡೆದರೆ,ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಕಾಂಗ್ರೆಸ್ ಟಿಕೆಟ್ ಗಾಗಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಪೈಪೋಟಿ ಆರಂಭಿಸಿದ್ದಾರೆ.

ಯಾದಗಿರಿ ಮತ ಕ್ಷೇತ್ರದ ಮಾಜಿ ಶಾಸಕರಾದ ಡಾ.ಮಾಲಕರೆಡ್ಡಿ  ಬಿಜೆಪಿ ಸೇರಿರುವುದರಿಂದ ಕಾಂಗ್ರೆಸ್ ಯಾದಗಿರಿ ಕ್ಷೇತ್ರದಲ್ಲಿ ದಂಡನಾಯಕರಿಲ್ಲದೆ ಸೈನಿಕರಂತಾಗಿದೆ. ನಾಯಕರಿಲ್ಲದೆ ಇದುವರೆಗೂ ಕಾಂಗ್ರೆಸ್ ಗೊಂದಲದಲ್ಲಿದೆ. ಮಾಜಿ ವಿಧಾನಪರಿಷತ್ ಸದಸ್ಯರಾದ ಚೆನ್ನಾರೆಡ್ಡಿ ತುನ್ನೂರು ಸಂಸದರಾದ ಮಲ್ಲಿಕಾರ್ಜುನ ಖರ್ಗೆಯವರ ಕಟ್ಟಾ ಬೆಂಬಲಿಗರು.ಇದುವರೆಗೂ ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಪಕ್ಷಾಂತರಿಯಾಗಿಲ್ಲ. ಕಂಡಿತವಾಗಿಯೂ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎನ್ನುವ ಭರವಸೆಯಲ್ಲಿದ್ದಾರೆ.

ಕೆಲವೇ ದಿನಗಳ ಹಿಂದೆ ಡಾ.ಕಾಮರೆಡ್ಡಿ ಖ್ಯಾತ ವೈದ್ಯರು ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಡವರಿಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಉಚಿತವಾಗಿ ನೀಡಿದ್ದಾರೆ. ಕ್ಷೇತ್ರದಾದ್ಯಂತ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ಕಾಂಗ್ರೆಸ್ ಪಕ್ಷಕ್ಕೆ ಸಮೀಪದಲ್ಲಿದ್ದಾರೆ. ಕ್ಷೇತ್ರದಾದ್ಯಂತ ಕಾಮರೆಡ್ಡಿಯವರು ಚಿರಪರಿಚಿತರಾಗಿದ್ದು, ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಆಗಮಿಸಿದ ಭೀಮಣ್ಣ ಮೇಟಿ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿಯಾಗಿದ್ದು,ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನೆ ಆರಂಭಿಸಿದ್ದಾರೆ.  ಹಿಂದುಳಿದ ವರ್ಗದ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ್ ಅರಸು ಹೆಸರಿನಲ್ಲಿ ಶಹಾಪುರ, ರಾಯಚೂರು,ಯಾದಗಿರಿ,ವಡಗೇರ,ದೋರನಹಳ್ಳಿ,ಸೇಡಂ, ಕಲ್ಬುರ್ಗಿ, ಸೇರಿದಂತೆ ಹಲವಾರು ನಗರಗಳಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಸಾಮಾಜಿಕ ಸೇವೆಗಳು ಆರಂಭಿಸಿದ್ದು, ಕಳೆದ ಹತ್ತು ವರ್ಷಗಳಿಂದ ರಾಜಕೀಯದಲ್ಲಿದ್ದಾರೆ.ಬಡ ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ, ತರಬೇತಿ ಕೇಂದ್ರ, ಸಿಇಟಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ಭರಿಸುವ ಜವಾಬ್ದಾರಿ ಕೂಡ ವಹಿಸಿಕೊಂಡಿದ್ದು, ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಸಿದ್ದರಾಮಯ್ಯನವರ ಆಪ್ತರಾದ ಭೀಮಣ್ಣ ಮೇಟಿ  ಯಾದಗಿರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ಯಾಗಿದ್ದಾರೆ.

ಶಹಾಪುರ ಮತ ಕ್ಷೇತ್ರದ ಶಾಸಕರಾದ ಶರಣಬಸಪ್ಪಗೌಡ  ದರ್ಶನಾಪುರ ಸಹೋದರರಾದ ಅಮರೇಶಗೌಡ ದರ್ಶನಾಪುರ ಯಾದಗಿರಿ ಕ್ಷೇತ್ರಕ್ಕೆ ಆಗಮಿಸಬಹುದು ಎನ್ನುವ ಕೂಗೂ ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ. ಅಮರೇಶ ಗೌಡ ದರ್ಶನಾಪುರ ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಯಾದಗಿರಿ ಮತಕ್ಷೇತ್ರದಲ್ಲಿ ಒಡೆದುಹೋದ ಕಾಂಗ್ರೆಸ್ ಕಾರ್ಯಕರ್ತರನ್ನು ಒಗ್ಗೂಡಿಸುವ ಸಂಘಟನಾ ಚತುರತೆ ಅವರಲ್ಲಿದ್ದು, ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಸುಲಭವಾಗಬಹುದು ಎನ್ನುವ ನಿರೀಕ್ಷೆ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.

ಕಾಂಗ್ರೆಸ್ ಪಕ್ಷಕ್ಕೆ ಹಿಂದಿರುಗುವರೆ ಡಾ.ಮಾಲಕರೆಡ್ಡಿ ?

ಕ್ಷೇತ್ರದಲ್ಲಿ ಡಾ. ಮಾಲಕರೆಡ್ಡಿ ತಮ್ಮದೇ ಆದ ಕಾರ್ಯಕರ್ತರನ್ನು ಹೊಂದಿದ್ದಾರೆ. ಪಕ್ಷಕ್ಕೆ ಮತ್ತೆ ಹಿಂದಿರುಗಬಹುದು ಎನ್ನುವ ನಿರೀಕ್ಷೆಯಲ್ಲಿ ಹಲವಾರು ಕಾರ್ಯಕರ್ತರು ಇದುವರೆಗೂ ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳದಂತೆ ತಟಸ್ಥರಾಗಿದ್ದಾರೆ. ಕಾಂಗ್ರೆಸ್ಸಿಗೆ ಮಾಲಕರೆಡ್ಢಿಯವರು  ಹಿಂದಿರುಗಿದರೆ ಮತ್ತೆ ಕಾಂಗ್ರೆಸ್ ಪಕ್ಷ ಜಯ ಗಳಿಸುವುದು ನಿಶ್ಚಿತ.ಇಷ್ಟೆಲ್ಲಾ ರಾಜಕೀಯ ಗೊಂದಲದ ನಡುವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಯಾರಿಗೆ ದಕ್ಕುತ್ತದೆ ಎನ್ನುವ ಪ್ರಶ್ನೆ ಕಗ್ಗಂಟಾಗಿ ಉಳಿದಿದೆ.

About The Author