ದೇವಿ –ಅಂಬಾ–ಮುಕ್ಕಣ್ಣ ಕರಿಗಾರ

ಚಿಂತನೆ

ದೇವಿ –ಅಂಬಾ

ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದ ನಿಷ್ಠಾವಂತ ಅನುಯಾಯಿಗಳಲ್ಲೊಬ್ಬರಾದ, ಮುಗ್ಧಭಕ್ತಿಯಿಂದ ಚಿರಪರಿಚಿತರಾಗಿರುವ ಶಿವಕುಮಾರ ಕರಿಗಾರ ಮೊನ್ನೆ ಅವರನ್ನು ಕಾಡುತ್ತಿದ್ದ ಒಂದು ಸಂದೇಹದ ಬಗ್ಗೆ ಪ್ರಶ್ನಿಸಿದ್ದರು ‘ಕಾಳಿ ಮಾತೆಯನ್ನು ಕಾಳಿಕಾ ದೇವಿ ಎನ್ನುವುದು ಸರಿಯೆ,ಕಾಳಿಕಾಂಬಾ ಎನ್ನುವುದು ಸರಿಯೆ? ಅವರಲ್ಲಿ ಈ ಪ್ರಶ್ನೆ ಮೂಡಲು ಕಾರಣ ‘ ಕಾಳಿಕಾಂಬಾ ಎಂದು ದೇವಿಗುಡಿಯಲ್ಲಿ ಬರೆದುದನ್ನು ಒಬ್ಬರು ಆಕ್ಷೇಪಿಸಿ,ಕಾಳಿಕಾಂಬಾ ಎನ್ನುವುದು ಸರಿಯಲ್ಲ,ಕಾಳಿಕಾದೇವಿ ಎಂದು ಬರೆಯಿರಿ’ ಎಂದು ಹೇಳಿದ್ದರಂತೆ.ನಾನು ಹೇಳಿದೆ ‘ ಕಾಳಿಕಾಂಬಾ ಎಂದು ಬರೆದದ್ದೇ ಸರಿ.ದೇವಿಗಿಂತ ಅಂಬಾ ಹತ್ತಿರದವಳು’. ಸಂಪ್ರದಾಯನಿಷ್ಠ ಪಂಡಿತರು ತಮಗೆಪ್ರಿಯವಾದ ಹೆಸರಿನಲ್ಲೇ ಶಕ್ತಿಯನ್ನು “ದೇವಿ” ಎಂದು ಕರೆಯಬಯಸುತ್ತಾರೆ ,ಭಕ್ತರು ಮುಗ್ಧಭಕ್ತಿಯಿಂದ ದೇವಿಯನ್ನು ತಾಯಿ ಎಂದು ಸಂಬೋಧಿಸಿ ಮಾತೆಯ ಅನುಗ್ರಹ ಪಡೆಯುತ್ತಾರೆ.

‘ದಿವ್’ ಎನ್ನುವ ಧಾತುನಿಷ್ಪನ್ನ ಪದಗಳಾದ ದೇವ- ದೇವಿ ಪದಗಳು ಆಕಾಶಸಂಬಂಧಿ ತತ್ತ್ವಸೂಚಕ ಶಬ್ದಗಳು. ‘ ದಿವ್’ ಧಾತು ‘ ಹೊಳೆಯುವುದು’ ‘ ಪ್ರಕಾಶಿಸುವುದು’ ಎನ್ನುವ ಅರ್ಥಧ್ವನಿಸುತ್ತದೆ.ದೇವ- ದೇವಿ ಎಂದರೆ ಆಕಾಶದ ಶಕ್ತಿಗಳು,ಮನುಷ್ಯಲೋಕದಾಚೆಯ ಶಕ್ತಿಗಳು ಎಂದರ್ಥ.ದೇವರು ಎಂದ ಕೂಡಲೆ ನಾವು ತಲೆಯೆತ್ತಿ ನೋಡುತ್ತೇವಲ್ಲ,ಅದು ದೇವರು ಮೇಲೆ ಇದ್ದಾನೆ,ಆಕಾಶದಲ್ಲಿ ಇದ್ದಾನೆ ಎನ್ನುವ ನಂಬಿಕೆಯ ಸಾಂಕೇತಿಕ ಕ್ರಿಯೆ.ದೇವರು ಅಂದರೆ ಎತ್ತರದಲ್ಲೇ ಇರಬೇಕು ಎನ್ನುವ ಭಾವನೆ.ದೇವರನ್ನು ಎತ್ತರದಲ್ಲಿ ನೋಡಬಯಸುವವರು ಅವನನ್ನು ಹತ್ತಿರದವನನ್ನಾಗಿ ನೋಡುವುದಿಲ್ಲ.ಎತ್ತರದಲ್ಲಿ ಇರುವ ಮೂಲಕ ದೇವರು ನಮಗೆ ದೂರದವನು ಆಗುತ್ತಾನೆ.ಆದರೆ ದೇವರನ್ನು ನಮ್ಮವನು ಎಂದು ಬಗೆಯುವ ಮೂಲಕ ನಾವು ದೇವರಿಗೆ ಸಮೀಪದವರು ಆಗಬಹುದು.’ದೇವಿ’ಯು ಎತ್ತರದಲ್ಲಿ ನಮಗಿಂತ ದೂರ ಇದ್ದರೆ ‘ಅಂಬಾ’ಳು ತಾಯಿಯಾಗಿಯೇ ನಮ್ಮ ಜೊತೆಗಿದ್ದು ಪೊರೆಯುತ್ತಾಳೆ.ಪಂಡಿತರು ದೇವರನ್ನು ಎತ್ತರದ ಸ್ಥಾನದಲ್ಲಿಟ್ಟು ಪೂಜಿಸಿ,ದೇವರಿಂದ ದೂರ ಇರುತ್ತಾರೆ,ಭಕ್ತರು ದೇವರಲ್ಲಿ ತಂದೆಯನ್ನು ಕಂಡು ದೇವರನ್ನು ಹತ್ತಿರ ಬರಮಾಡಿಕೊಳ್ಳುತ್ತಾರೆ.ದೇವರು ನಮ್ಮ ಹತ್ತರದಲ್ಲಿ ಇರಬೇಕೇ ಹೊರತು ನಮ್ಮಿಂದ ದೂರವಾದ,ನಮಗೆ ನಿಲುಕದ ಎತ್ತರದಲ್ಲಿ ಇರಬಾರದು.

ದೇವಿ ಎಂದರೆ ನಿಗ್ರಹಾನುಗ್ರಹ ಸಮರ್ಥಶಕ್ತಿ ಎಂದರ್ಥ.ಋಗ್ವೇದದ ದೇವತೆಗಳು ಮತ್ತು ದೇವಿಯರು ಆಕಾಶತತ್ತ್ವದ ಸಂಕೇತವಾಗಿದ್ದು ಉನ್ನತಸ್ತರಗಳಲ್ಲಿ ದರ್ಶಿಸಬಹುದಾದ ಪ್ರಾಕೃತಿಕಶಕ್ತಿಗಳು.ಋಷಿಗಳು ದೇವತೆಗಳು ಮತ್ತು ದೇವಿಯರನ್ನು ತಮ್ಮ ರಕ್ಷಕದೇವತೆಗಳು,ತಮ್ಮ ಅಭೀಷ್ಟಗಳನ್ನು ಈಡೇರಿಸಿ ಪೊರೆಯುವವರು ಎನ್ನುವ ಅರ್ಥದಲ್ಲಿ ಕಂಡಿದ್ದಾರೆ ವೇದದಲ್ಲಿ.ದೇವತೆಗಳ ಪ್ರೀತಿಸಂಪಾದಿಸಲು ‘ ಯಜ್ಞ’ ವು ಸಾಧನವಾಗಿತ್ತು ಋಷಿಗಳಿಗೆ.

ದೇವಿ ಉಪಾಸಕರು ದೇವಿಯನ್ನು ತಾಯಿಯ ರೂಪದಲ್ಲಿ ಕಾಣಬೇಕು.ತಾಯಿ ಭಾವನೆಯಿಂದ ಪೂಜಿಸಿದ್ದಾದರೆ ಆಕೆಯು ಬಹುಬೇಗನೆ ಪ್ರಸನ್ನಳಾಗುತ್ತಾಳೆ,ಮಗುವೆಂದು ತಿಳಿದು ಉದ್ಧರಿಸುತ್ತಾಳೆ.ಮಗು ಹುಟ್ಟಿದೊಡನೆ ‘ ಅಮ್ಮಾ’ ಎಂದೇ ಅಳುತ್ತದೆ.ಕರುಗಳು ಹುಟ್ಟಿದೊಡನೆ ‘ ಅಂಬಾ’ ಎನ್ನುತ್ತವೆ.ಅದು ತಾಯ್ತನದ ಹಿರಿಮೆ.ತಾಯಿ ಎಲ್ಲರಿಗಿಂತಲೂ ದೊಡ್ಡವಳು,ಮೊದಲಿಗಳು,ಹತ್ತಿರದವಳು ಎನ್ನುವುದರ ಸೂಚನೆ.ಶಕ್ತಿಯನ್ನು ದೇವಿ ಎಂದು ಉಪಾಸಿಸಿದರೆ ಆ ಶಕ್ತಿಯು ನಮ್ಮಿಂದ ದೂರ ಇದ್ದು ನಮ್ಮನ್ನು ಉದ್ಧರಿಸಬಹುದೇ ಹೊರತು ಆಕೆ ನಮಗೆ ಹತ್ತಿರದವಳು ಆಗಲಾರಳು.ಶಕ್ತಿಯನ್ನು ತಾಯಿ ಎಂದು ಭಾವಿಸಿ,ಭಜಿಸಿ ಪೂಜಿಸಿದರೆ ಆಕೆ ತಾಯಿ ಆಗಿಯೇ ಬರುತ್ತಾಳೆ,ನಮ್ಮ ಗುಣ ದೋಷಗಳನ್ನು ಎಣಿಸದೆ ತನ್ನ ಮಾತೃವಾತ್ಸಲ್ಯದಿಂದ ಪೊರೆದು ,ಉದ್ಧರಿಸುತ್ತಾಳೆ.ಮಗು ತನ್ನ ತಾಯಿಯ ತೊಡೆಯ ಮೇಲೆ ಮಲ ಮೂತ್ರ ವಿಸರ್ಜಿಸಿದರೂ ತಾಯಿ ಸಿಟ್ಟಿಗೇಳದೆ ಪ್ರೀತಿಯಿಂದ ತೊಳೆದು ಸ್ವಚ್ಛಗೊಳಿಸಿ ‘ ನನ್ನ ಕಂದ’ ,’ ನನ್ನ ಬಂಗಾರ’ ಎಂದು ಮುದ್ದಾಡುತ್ತಾಳೆ.ಪರಾಶಕ್ತಿಯನ್ನು ನಾವು ‘ ತಾಯಿ’ ಭಾವದಿಂದ ನೋಡಿದ್ದಾದರೆ ಆಕೆ ಮನುಷ್ಯಸಹಜವಾದ ನಮ್ಮ ದೋಷ- ದೌರ್ಬಲ್ಯಗಳನ್ನು ಎಣಿಸದೆ ನಮ್ಮನ್ನು ಮಗುವೆಂದು ಎತ್ತಿ ಮುದ್ದಾಡುತ್ತಾಳೆ.’ಅ’ ಎನ್ನುವ ಅಕ್ಷರವನ್ನೇ ಅರಿಯದ,ತಾನು ಕುಳಿತಮರದ ಕೊಂಬೆಯನ್ನೇ ಕಡಿಯುತ್ತಿದ್ದ ದಡ್ಡಕುರುಬನನ್ನು ವಿಶ್ವವಂದ್ಯನಾದ ಮಹಾಕವಿ ಕಾಳಿದಾಸನನ್ನಾಗಿ ಮಾಡಲಿಲ್ಲವೆ ಕಾಳಿಮಾತೆ?.ಕಾಳಿದಾಸ ಜೀವನದುದ್ದಕ್ಕೂ ಮಹಾಕಾಳಿಯನ್ನು ತಾಯಿರೂಪದಲ್ಲಿ ಕಂಡು ಆರಾಧಿಸಿದ ಮಹಾಯೋಗಿ.ಪ್ರಾಥಮಿಕ ಶಾಲಾಶಿಕ್ಷಣವನ್ನು ಪೂರೈಸದೆ ಇದ್ದ ರಾಮಕೃಷ್ಣನೆಂಬ ಭಕ್ತ ಮಹಾಕಾಳಿಯಲ್ಲಿ ತಾಯಿಯನ್ನು ಕಂಡು ಆಕೆಯ ಮಾತೃವಾತ್ಸಲ್ಯಕ್ಕಾಗಿ ಅತ್ತುಕರೆದು ಆಧ್ಯಾಶಕ್ತಿ ಮಹಾಕಾಳಿಯ ಕೃಪೆಯನ್ನುಂಡು ರಾಮಕೃಷ್ಣಪರಮಹಂಸರು ಎಂದು ಲೋಕಪ್ರಸಿದ್ಧ ಯೋಗಿಯಾಗಲಿಲ್ಲವೆ? ಪ್ರಾಥಮಿಕಶಿಕ್ಷಣವನ್ನೇ ಮುಗಿಸಿರದ ರಾಮಕೃಷ್ಣ ಪರಮಹಂಸರು ವೇದ,ವೇದಾಂತ,ದರ್ಶನಗಳ ಸಾರವನ್ನು ಅರ್ಥವತ್ತಾಗಿ ಬಣ್ಣಿಸುತ್ತಿದ್ದರು,ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ಉಪದೇಶಿಸುತ್ತಿದ್ದರು.ಕಾಳಿದಾಸ ಮತ್ತು ರಾಮಕೃಷ್ಣ ಪರಮಹಂಸರು ಜಗಜ್ಜನನಿ ಕಾಳಿಕಾದೇವಿಯಲ್ಲಿ ತಾಯಿಯನ್ನು ಕಂಡಿದ್ದರಿಂದಲೇ ಜಗತ್ಪ್ರಸಿದ್ಧರಾದರು,ಲೋಕವಂದ್ಯರಾದರು.ಇದು ತಾಯ್ತನದ ಹಿರಿಮೆ.

ಕಾಳಿಕಾದೇವಿಯ ಮೂಲರೂಪವೂ ‘ ಕಾಳಮ್ಮ’ ಎಂಬುದು.ಕಾಳಿಯು ಮೂಲತಃ ಜನಪದರದೇವಿ,ಮೂಲನಿವಾಸಿಗಳ ಮೂಲಮಹಾಶಕ್ತಿ.ಕಾಳಿಕಾದೇವಿಯು ಕಪ್ಪುಬಣ್ಣದವಳಾಗಿರುವುದು ಅವಳು ಭಾರತದ ಮೂಲನಿವಾಸಿಗಳಾಗಿದ್ದ ಶೂದ್ರರು,ದ್ರಾವಿಡರ ದೇವಿ ಎನ್ನುವುದರ ಸಂಕೇತ.ಕಾಳಿಯ ಉಗ್ರರೂಪವು ಬುಡಕಟ್ಟುಮೂಲದ ಜನರ ಮೂಲಮಹಾದೇವಿ ಅವಳು ಎನ್ನುವುದರ ಸಂಕೇತ.ಅಮ್ಮ ಎನ್ನುವುದೇ ದೇವಿಯ ಮೂಲರೂಪ,ಸ್ವರೂಪ.ಅಮ್ಮ ಎನ್ನುವ ದೇಶಭಾಷೆಯ ಶಬ್ದವೇ ಸಂಸ್ಕೃತೀಕರಣಗೊಂಡು ‘ ಅಂಬಾ’ ಎಂದಾಗಿದೆ.ಕಾಳಮ್ಮ- ಕಾಳಿಕಾಂಬಾ ಆದರೆ,ದುರುಗಮ್ಮ– ದುರ್ಗಾಂಬಾ ಆದಳು.ಯಲ್ಲಮ್ಮ- ಯಲ್ಲಾಂಬಾ ಆದರೆ ಶಾರದೆಯು- ಶಾರದಾಂಬಾ ಆದಳು.ಹೀಗೆ ಜನಪದರ ದೇವ ದೇವಿಯರು ಸಂಸ್ಕೃತೀಕರಣಗೊಂಡು ಶಿಷ್ಟಜನವರ್ಗದ ದೇವತೆಗಳು ಆಗಿದ್ದಾರೆ.ಶಿಷ್ಟಜನವರ್ಗದ ಪೂಜೆ- ಪುನಸ್ಕಾರಗಳೇ ಶ್ರೇಷ್ಠ ಎನ್ನುವ ಭ್ರಮೆಯಿಂದಾಗಿ ಜನರು ತಮಗೆ ಅರ್ಥವಾಗದೆ ಇದ್ದರೂ ವೇದೋಕ್ತಪೂಜಾಪದ್ಧತಿ,ಶಾಸ್ತ್ರೋಕ್ತ ಪೂಜೆ ಎಂದು ಸಂಸ್ಕೃತಭಾಷೆಯ ಮಂತ್ರಗಳನ್ನು ಉಗ್ಗಡಿಸಬಯಸುತ್ತಾರೆ ! ಜನಪದ ದೇವ ದೇವಿಯರಿಗೆ ಅರ್ಥವಾಗದ ಸಂಸ್ಕೃತ ಭಾಷೆಯಲ್ಲಿ ಅವರನ್ನು ಕರೆದು ಪೂಜಿಸಿ ದೇವರಿಂದ ದೂರ ಆಗುತ್ತಿದ್ದಾರೆ.ದೇವರ ಒಲುಮೆಗೆ ಭಾವವು ಸಾಧನವೇ ಹೊರತು ಭಾಷೆಯು ಸಾಧನವಲ್ಲ.ಭಾಷೆಯಿಂದ ದೇವರನ್ನು ಒಲಿಸಲು ಸಾಧ್ಯವಿಲ್ಲ,ಭಾವನೆಯಿಂದ ದೇವರ ಒಲುಮೆ ಸಾಧ್ಯ.ಭಾವಶುದ್ಧವಾಗಿದ್ದರೆ ದೇವಿ ಹತ್ತಿರಬಂದು ಹರಸುತ್ತಾಳೆ.ಭಾವಶುದ್ಧವಾಗಬೇಕಾದರೆ ಮಗುವಿನ ಮುಗ್ಧತೆಯನ್ನು ಮೈಗೂಡಿಸಿಕೊಳ್ಳಬೇಕು.ಮಗುವಾಗಿ ತಾಯಿಯನ್ನು ಕೂಗಿ ಕರೆಯಬೇಕು.ಅಳಬೇಕು,ಕಾಡಬೇಕು,ಪೀಡಿಸಬೇಕು ದೇವಿಯನ್ನು ದರ್ಶನಕೊಡು,ದರ್ಶನಕೊಡು ಎಂದು.ಮಗುವಾಗಿ ಅತ್ತುಕರೆಯೆ ಅಮ್ಮನಾಗಿ ಬಂದು ಉದ್ಧರಿಸುತ್ತಾಳೆ ಪರಾಶಕ್ತಿಯು.

ದೇವರು ಪಂಡಿತರಿಗೆ ಒಲಿಯಲಾರ.ಶುಷ್ಕಪಾಂಡಿತ್ಯದಿಂದ ದೇವರ ಒಲುಮೆಯನ್ನು ಪಡೆಯಲಾಗದು.ತಮಿಳುನಾಡಿನ ಅರವತ್ತುಮೂರು ಜನ ಪುರಾತನರಲ್ಲಿ ಬಹುತೇಕ ಜನರು ಅನಕ್ಷರಸ್ಥರು.ಆದರೆ ಅವರೆಲ್ಲ ಶಿವನನ್ನು ಪ್ರತ್ಯಕ್ಷ ಕಂಡುಂಡ ಪರಮಾನುಭವಿಗಳು.ಬೇಡರ ಕಣ್ಣಪ್ಪನ ಮುಗ್ಧಭಕ್ತಿಯನ್ನು ಒಲಿದು ಉದ್ಧರಿಸಿದ ಶಿವ.ಮಾದಾರಚೆನ್ನಯ್ಯ ನ ಅನನ್ಯ ನಿಷ್ಠೆಯನ್ನು ಮೆಚ್ಚಿ ಚೆನ್ನಯ್ಯನ ಭಕ್ತಿಯ ಮಹಿಮೆಯನ್ನು ಲೋಕಪ್ರಸಿದ್ಧಗೊಳಿಸಿದ ಶಿವ.ಅಷ್ಟೇ ಏಕೆ,ಬಸವಣ್ಣನವರ ನೇತೃತ್ವದ ಶರಣಚಳುವಳಿಯಲ್ಲಿಯೂ ಅನಕ್ಷರಸ್ಥರಾದ ಶರಣ ಶರಣೆಯರ ಸಂಖ್ಯೆಯೇ ದೊಡ್ಡದಿತ್ತು.ಆತ್ಮವಿದ್ಯೆಗೆ ಅಕ್ಷರಜ್ಞಾನದ ಅಗತ್ಯವಿಲ್ಲ.ಪರಮಾತ್ಮನ ಸಾಕ್ಷಾತ್ಕಾರಕ್ಕೆ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ಪದವಿಗಳು,ಡಾಕ್ಟರೇಟ್ ಗಳು ಬೇಕಾಗಿಲ್ಲ.ಮುಗ್ಧಭಾವದಿಂದ ಕರೆಯೇ ಓಗೊಡುತ್ತಾನೆ ಶಿವ.ಅಮ್ಮಾ ಎಂದು ಕರೆಯೆ ‘ ಬಂದೆ ಮಗು’ ಎನ್ನುತ್ತಾಳೆ ತಾಯಿ.ದೇವಿ ಎಂದು ಕರೆದು ದೇವಿಯನ್ನು ಎತ್ತರದಲ್ಲಿಟ್ಟು ಪೂಜಿಸಿ ದೇವಿಯಿಂದ ದೂರವಾಗುವ ಬದಲು ವಿಶ್ವಮಾತೆಯನ್ನು ಅಮ್ಮಾ ಎಂದು ಕರೆದು ಆಕೆಯ ಮಾತೃವಾತ್ಸಲ್ಯವನ್ನುಂಡು ಧನ್ಯರಾಗುವುದೇ ಜೀವನದ ಸಾರ್ಥಕತೆ.

About The Author