ಸರ್ಕಾರದ ಯೋಜನೆಗಳು ವಿಫಲ.ಅಭಿವೃದ್ಧಿ ಕಾಣದ ಮಖ್ತಾಪುರ ಗ್ರಾಮ

ಬಸವರಾಜ ಕರೇಗಾರ
basavarajkaregar@gmail.com

ಸರ್ಕಾರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಾಗಿದ್ದು, ಇದರಡಿಯಲ್ಲಿ ಹಲವಾರು ಯೋಜನೆಗಳನ್ನು ಗ್ರಾಮೀಣಾಭಿವೃದ್ಧಿಗಾಗಿ ಜಾರಿಗೆ ತರುತ್ತಿದೆ.ಗ್ರಾಮ ಪಂಚಾಯಿತಿಗಳಿಗೆ ಲಕ್ಷಾನುಗಟ್ಟಲೆ ಹಣವನ್ನು ಬಿಡುಗಡೆ ಮಾಡುತ್ತಿರುವುದು ಗ್ರಾಮಗಳ ಅಭಿವೃದ್ಧಿಗಾಗಿ.ಆದರೆ ಅವುಗಳನ್ನು ಅಧಿಕಾರಿಗಳು ಜಾರಿಗೆ ತರುವಲ್ಲಿ ವಿಫಲವಾಗುತ್ತಿರುವುದು ವಿಪರ್ಯಾಸವೇ ಸರಿ.ಇದಕ್ಕೆ ತಾಜಾ ಉದಾಹರಣೆ ಎಂದರೆ ಶಹಾಪುರ ತಾಲೂಕು ಮತ್ತು ಮಖ್ತಾಪುರ ಗ್ರಾಮ.ಹೋತಪೇಟ ಪಂಚಾಯ್ತಿಯ ವ್ಯಾಪ್ತಿಗೆ ಬರುವ ಮಖ್ತಾಪುರ ಗ್ರಾಮ ಚಿಕ್ಕ ಗ್ರಾಮವಾಗಿದ್ದು, ಈ ಗ್ರಾಮದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ.ಗ್ರಾಮದಲ್ಲಿ ಶುದ್ಧಕುಡಿಯುವ ನೀರಿನ ಟ್ಯಾಂಕರ್ ಇದೆ. ಜೆಜೆಎಂ ಕಾಮಗಾರಿ ಮುಗಿದಿದೆ. ಆದರೂ ಸಮಸ್ಯೆಯ ಸುಳಿಯಲ್ಲಿ ಗ್ರಾಮವಿದೆ.

ಜೆಜೆಎಮ್ ಕಾಮಗಾರಿ ಪೂರ್ತಿಯಾದರೂ ನೀರಿಲ್ಲದ ನಲ್ಲಿಗಳು

ಗ್ರಾಮದೊಳಗೆ ಸರಿಯಾದ ಸಿಸಿ ರಸ್ತೆಗಳಿಲ್ಲ.ರಸ್ತೆಗಳು ಇಕ್ಕಟ್ಟಿನ ಪ್ರದೇಶಗಳಾಗಿವೆ.ಊರ ಹೊರ ಪ್ರದೇಶದಲ್ಲಿ ಮುಸ್ಲಿಮರ ಚಿಕ್ಕ ಸ್ಮಶಾನವಿದೆ.ಸ್ಮಶಾನ ಕೊಳಚೆ ಪ್ರದೇಶ ದಂತಾಗಿದೆ.ಇರುವ ನಾಲ್ಕೈದು ಮುಸ್ಲಿಂ ಕುಟುಂಬದವರು. ಗ್ರಾಮ ಪಂಚಾಯಿತಿಯನ್ನು ಒಳಗೊಂಡು ಯಾರನ್ನು ಕೇಳುವ ಸ್ಥಿತಿಯಲ್ಲಿಲ್ಲ.ಇನ್ನು ಗ್ರಾಮದ ಮನೆಗಳ ಮುಂದೆ ಚರಂಡಿಯ ನೀರು ಮನೆ ಬಾಗಿಲು ಮುಂದೆಯೇ ಹರಿಯುತ್ತಿವೆ.ಇನ್ನು ಕೆಲವು ಮನೆಗಳ ಮುಂದೆ ನಿಂತ ಚರಂಡಿ ನೀರು ಗಬ್ಬುನಾರುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ಅಲ್ಲಿನ ಜನರು ಬದುಕು ಸಾಗಿಸುತ್ತಿದ್ದಾರೆ.ಗ್ರಾಮ ಪಂಚಾಯತಿಯ ಅಧಿಕಾರಿಗಳು ಇದರ ಬಗ್ಗೆ ಯಾವುದೇ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.

ಡಾಂಬರೀಕರಣವಿಲ್ಲದೆ ಮುಖ್ಯರಸ್ತೆಯನ್ನು ಮುಳ್ಳಿನ ಬೇಲಿಗಳು ಆವರಿಸಿಕೊಂಡಿದೆ.

ಗ್ರಾಮಕ್ಕೆ ಮುಖ್ಯರಸ್ತೆಯಲ್ಲಿ ಡಾಂಬರೀಕರಣವಿಲ್ಲದೆ ಎಷ್ಟೊ ವರ್ಷಗಳು ಕಳೆದಿವೆಯೊ?.ತಗ್ಗು ದಿಣ್ಣೆಗಳಿಂದ ಕೂಡಿದ ಮುಖ್ಯ ರಸ್ತೆಯ ಎರಡು ಕಡೆ ಬಾಗಿದ ಮುಳ್ಳಿನ ಗಿಡಗಳಿದ್ದು,ಗ್ರಾಮಗಳಿಗೆ ಹೋಗುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ.ಗ್ರಾಮಕ್ಕೆ ಹೋಗುವ ರಸ್ತೆ ಯಾವುದು ಎಂದು ಗೊತ್ತಾಗದ ಸ್ಥಿತಿ ನಿರ್ಮಾಣವಾಗಿದೆ.

ಜೆಜೆಎಂ ಕಾಮಗಾರಿಯು ಗ್ರಾಮದಲ್ಲಿ ಸಂಪೂರ್ಣವಾಗಿ ಮುಗಿದಿದೆ.ಪ್ರತಿಯೊಂದು ಮನೆಗಳಿಗೆ ಶುದ್ಧಕುಡಿಯುವ ನೀರಿನ ನಲ್ಲಿಗಳನ್ನು ಮತ್ತು ನೀರಿನ ಮಿಷನ್ ಗಳನ್ನು ಕೂಡಿಸಲಾಗಿದೆ.ಇದರ ಉದ್ದೇಶವೇ ದಿನದ 24 ಗಂಟೆಗಳ ಕಾಲ ನೀರು ಕೊಡಬೇಕು ಎನ್ನುವುದಾಗಿದೆ.ಆದರೆ ಗ್ರಾಮದಲ್ಲಿ ಸರಿಯಾಗಿ ನೀರು ಬರುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.ಎರಡು ದಿನಕ್ಕೊಮ್ಮೆ ಕುಡಿಯುವ ನೀರು ಬರುತ್ತಿರುವುದು ವಿಪರ್ಯಾಸ.ಗ್ರಾಮದ ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಬಿಟ್ಟರೆ ಕೆಳಗಿನ ಪ್ರದೇಶದ ಮನೆಗಳಿಗೆ ನೀರು ಬರುವುದಿಲ್ಲ.ಹೀಗಾದರೆ ಹೇಗೆ. 24 ಗಂಟೆಗಳ ಕಾಲ ನೀರು ಒದಗಿಸಲು ಸಾಧ್ಯವಾಗುತ್ತದೆಯೆ ?ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ಮನೆಯ ಮುಂದೆ ನಿಂತಿರುವ ಚರಂಡಿ ನೀರು

ಮುಂದಿನ ದಿನಗಳಲ್ಲಿ ಹೋತಪೇಟ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮಖ್ತಾಪುರ ಗ್ರಾಮಕ್ಕೆ ಗ್ರಾಪಂ. ಅನುದಾನದ ಅಡಿಯಲ್ಲಿ ಸಿಸಿ ರಸ್ತೆಗಳ ನಿರ್ಮಾಣ, ಮನೆಗಳ ನಿರ್ಮಾಣ, ಸ್ಮಶಾನದ ಅಭಿವೃದ್ಧಿ, ಉದ್ಯೋಗ ಖಾತ್ರಿಯಂತಹ ಮಹತ್ವದ ಯೋಜನೆಯನ್ನು ಬಳಕೆ ಮಾಡಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಾಧ್ಯ ಎನ್ನುತ್ತಾರೆ ಗ್ರಾಮಸ್ಥರು.

ಜಲ ಜೀವನ್ ಮಿಷನ್ ಕಾಮಗಾರಿಯಿಂದ ಕಾಮಗಾರಿಯಿಂದ ದಿನದ 24 ಗಂಟೆಗಳವರೆಗೆ ನೀರು ಕೊಡುತ್ತೇನೆ ಎಂದು ಗ್ರಾಮಗಳ ತುಂಬೆಲ್ಲ,ನೆಲದ ಅಡಿಯಲ್ಲಿ ಪೈಪುಗಳನ್ನು ಹಾಕಿ ಪೈಪುಗಳ ಮೂಲಕ ನೀರು ಬಿಡಲಾಗಿದೆ.ಆದರೆ ಕೇವಲ 15 ದಿನಗಳಲ್ಲಿಯೇ ಪೈಪ್ಗಳಿಂದ ನೀರು ಸೋರಿಕೆಯಾಗುತ್ತಿವೆ.

ಗಂಗಪ್ಪ ಗ್ರಾಮಸ್ಥ

About The Author