ಕೈಲಾಸ ಕ್ಷೇತ್ರ ಮಹಾತ್ಮೆ –ವಿಶ್ವೇಶ್ವರನ ಲೀಲೆ; ಮುಂದೆ ಬಂದರು ದಾಸೋಹಿಗಳು–ಮುಕ್ಕಣ್ಣ ಕರಿಗಾರ

ಮಹಾಶೈವ ಧರ್ಮಪೀಠದಲ್ಲಿ ಶುಭಕೃತ್ ಸಂವತ್ಸರದ ಆರಂಭದ ದಿನವಾದ ಯುಗಾದಿಯಿಂದ ‘ ಶಿವೋಪಶಮನ’ ಕಾರ್ಯ ಪ್ರಾರಂಭಿಸಲಾಗಿದೆ.’ ಶಿವೋಪಶಮನ ಕಾರ್ಯ’ ಎಂದರೆ ಮಹಾಶೈವ ಧರ್ಮಪೀಠವನ್ನು ನಂಬಿ ಬರುವ ಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಲೋಕಕಲ್ಯಾಣ ಕಾರ್ಯ.ಸಣ್ಣಗೆ ಪ್ರಾರಂಭವಾದ ಈ ಕಾರ್ಯ ಇಂದು ದೊಡ್ಡದಾಗಿ ಬೆಳೆದಿದೆ,ಶ್ರೀಕ್ಷೇತ್ರ ಕೈಲಾಸ ಅಧಿದೈವರುಗಳಾದ ವಿಶ್ವೇಶ್ವರಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರನ್ನು ನಂಬಿ,ಪರಿಹಾರ ಕೋರಿ ಬರುತ್ತಿರುವ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿದೆ.ಪ್ರತಿರವಿವಾರ ಮತ್ತು ಅಮವಾಸೆಯ ದಿನಗಳಂದು ‘ ಶಿವೋಪಶಮನ ಕಾರ್ಯ’ ನೆರವೇರಿಸಲಾಗುತ್ತಿದೆ.

ಕಳೆದ ರವಿವಾರ ಅಂದರೆ ಜೂನ್ ೧೯ ರಂದು ಶ್ರೀಕ್ಷೇತ್ರ ಕೈಲಾಸಕ್ಕೆ ಬಹಳಷ್ಟು ಜನ ಭಕ್ತರು ಬಂದಿದ್ದರು.ಸಂಜೆ ಆರರ ತನಕವೂ ಶಿವೋಪಶಮನ ಕಾರ್ಯದಲ್ಲಿದ್ದೆ.ಪರಸ್ಥಳಗಳಿಂದ,ದೂರದ ಊರುಗಳಿಂದ ಮಕ್ಕಳು- ಮಹಿಳೆಯರನ್ನೊಳಗೊಂಡಂತೆ ಭಕ್ತರುಗಳು ಬಂದಿದ್ದನ್ನು ನೋಡಿ ‘ ದಾಸೋಹದ ವ್ಯವಸ್ಥೆ ಮಾಡಿದರೆ ಚೆನ್ನಾಗಿರುತ್ತದೆ’ ಅಂತ ಎನ್ನಿಸಿತು.ಶ್ರೀಕ್ಷೇತ್ರ ಕೈಲಾಸದ ಅತ್ಯಂತ ನಿಷ್ಠರಲ್ಲೊಬ್ಬರು ಮತ್ತು ಆಧ್ಯಾತ್ಮ ಸಾಧಕರೂ ಆಗಿರುವ ಗುರುಬಸವ ಹುರಕಡ್ಲಿ ಅವರೊಂದಿಗೆ ಈ ವಿಷಯ ಪ್ರಸ್ತಾಪಿಸಿದೆ.ಅವರೂ ಕೂಡ’ ಹೌದು ಸರ್,ದಾಸೋಹದ ವ್ಯವಸ್ಥೆ ಮಾಡಿದರೆ ದೂರದ ಊರುಗಳಿಂದ ಬರುವ ಭಕ್ತರುಗಳಿಗೆ ಅನುಕೂಲವಾಗುತ್ತದೆ’ ಎಂದರು.ಮಹಾಶೈವ ಧರ್ಮಪೀಠವು ಗಬ್ಬೂರಿನ ಹೊರವಲಯದಲ್ಲಿ ಇರುವುದರಿಂದ ಭಕ್ತಾದಿಗಳು ಚಹಾ,ತಿಂಡಿ- ಊಟಕ್ಕೆ ಊರೊಳಗೆ ಹೋಗಬೇಕಿತ್ತು.ಗಂಡಸರೇನೋ ಸರಿ,ಹೋಗುತ್ತಾರೆ.ಆದರೆ ಮಹಿಳೆಯರು ಮತ್ತು ಮಕ್ಕಳು? ರವಿವಾರದಂದು ಹಿರೇಬೂದೂರಿನಿಂದ ಬಂದಿದ್ದ ಇಬ್ಬರು ಮುಸ್ಲಿಂಮಹಿಳೆಯರ ಜೊತೆ ಆರು ತಿಂಗಳ ಮಗುವೂ ಇತ್ತು.ಇದು ದಾಸೋಹವನ್ನು ಕಲ್ಪಿಸುವ ಅನಿವಾರ್ಯತೆಯನ್ನು ನನ್ನಲ್ಲಿ ಉಂಟು ಮಾಡಿತ್ತು.

ನನ್ನ ಮನಸ್ಸಿನ ತಾಕಲಾಟ ಕ್ಷೇತ್ರೇಶ್ವರ ಪರಶಿವ ವಿಶ್ವೇಶ್ವರನಿಗೆ ಅರ್ಥವಾಗದೆ ಇರುತ್ತದೆಯೆ ? ಮಹಾಶೈವ ಧರ್ಮಪೀಠದಿಂದ ಪರಿಹಾರ ಬಯಸಿ ಬಂದಿದ್ದ ಭಕ್ತರಲ್ಲೊಬ್ಬರಾದ ಹಿರೇಬೂದೂರಿನ ಹನ್ಮಂತ ಅವರು ‘ ಬರುವ ರವಿವಾರದಿಂದ ದಾಸೋಹ ಮಾಡಿಸೋಣ,ಮೊದಲ ದಾಸೋಹ ಸೇವೆ ನನ್ನದಾಗಿರಲಿ’ ಎಂದು ಮೊನ್ನೆ ಫೋನ್ ಮಾಡಿದ್ದರು.ನನ್ನ ಆತ್ಮೀಯರಲ್ಲೊಬ್ಬರಾದ ಪತ್ರಕರ್ತಮಿತ್ರ ಮತ್ತು ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಸವರಾಜ ಭೋಗಾವತಿ ಅವರೊಂದಿಗೆ ವಿಷಯ ಪ್ರಸ್ತಾಪಿಸಿದೆ ಮೊಬೈಲ್ ಕರೆಯಲ್ಲಿ.ಅವರೂ ‘ ಹೌದು ಸರ್,ಇದು ಬಹಳ ಒಳ್ಳೆಯ ವಿಚಾರ,ಮಠದಲ್ಲಿ ದಾಸೋಹ ವ್ಯವಸ್ಥೆ ಏರ್ಪಡಿಸಿದರೆ ವಿಶೇಷ ಕಳೆಬರುತ್ತದೆ.ಮಾಡೋಣ.ಒಂದು ರವಿವಾರದ ದಾಸೋಹ ಸೇವೆ ನನ್ನದೂ ಇರಲಿ ‘ ಎಂದರು.ಇದಾದ ಬಳಿಕ ಮಹಾಶೈವ ಧರ್ಮಪೀಠದ ಅತ್ಯಂತ ನಿಷ್ಠಾವಂತರಾದ ರಘುನಂದನ್ ಪೂಜಾರಿ ಅವರು ತಾವು ಒಂದು ದಾಸೋಹ ಸೇವೆಗೆ ಒಪ್ಪಿಕೊಂಡಿದ್ದಲ್ಲದೆ ಗುತ್ತೆದಾರ ಬಸಣ್ಣ ರಾಮುಲು ಅವರನ್ನು ಅಮವಾಸೆ ದಾಸೋಹಸೇವೆಗೆ ಒಪ್ಪಿಸಿದ್ದರ ಜೊತೆಗೆ ಇತರ ಹತ್ತಾರು ಜನ ದಾಸೋಹಿಗಳನ್ನು ಕರೆತಂದರು.ನಾಲ್ಕೈದು ತಿಂಗಳುಗಳ ಕಾಲ ದಾಸೋಹ ನಡೆಯಿಸುವಷ್ಟು ಉದಾರಮನಸ್ಕರು ದಾಸೋಹಿಗಳಾಗಿ ಮುಂದೆ ಬಂದರು.

ಇದಲ್ಲವೆ ಶಿವ ವಿಶ್ವೇಶ್ವರನ ಲೀಲೆ! ನನ್ನ ಒಂದು ಸಂಕಲ್ಪವನ್ನು ಕೂಡಲೇ ಈಡೇರಿಸಿದ ವಿಶ್ವೇಶ್ವರ ಶಿವ.ಸತ್ಕಾರ್ಯಗಳನ್ನು ಬೆಂಬಲಿಸುವ ಜನರು ಇದ್ದಾರೆ,ದೇವತಾಕಾರ್ಯಗಳಿಗೆ ಅನಿರೀಕ್ಷಿತ ನೆರವು ಒದಗಿ ಬರುತ್ತದೆ ಎನ್ನುವ ನನ್ನ ನಂಬಿಕೆಯನ್ನು ಪುಷ್ಟಿಗೊಳಿಸಿದ ಪ್ರಸಂಗವಿದು.ನಿನ್ನೆ( ಬುಧವಾರ) ಸಂಜೆ ಮಹಾಶೈವ ಧರ್ಮಪೀಠದ ಕ್ಷೇತ್ರಾಧಿಕಾರಿ ಅಳಿಯ ತ್ರಯಂಬಕೇಶ,ಅನುಭಾವಿ ಗುರುಬಸವ ಹುರಕಡ್ಲಿ ಮತ್ತು ಶಿವಕುಮಾರ ಕರಿಗಾರ ಅವರುಗಳೊಂದಿಗೆ ಚರ್ಚಿಸಿ,ಬರುವ ೨೬ ನೆಯ ತಾರೀಖಿನ ರವಿವಾರದಿಂದ ಶುಭಾರಂಭವಾಗುವಂತೆ ದಾಸೋಹ ಏರ್ಪಾಟಿನ ಕುರಿತು ಚರ್ಚಿಸಿದೆ.ವಿಶ್ವೇಶ್ವರ ಶಿವ ತನ್ನ ಕ್ಷೇತ್ರದ ಕೆಲಸ ಕಾರ್ಯಗಳನ್ನು ಆಗುಮಾಡಿಕೊಳ್ಳುವ ಪರಿ ಇದು.

About The Author