ಚಿಂತನೆ:ಸಂಸಾರ ಯೋಗ !–ಮುಕ್ಕಣ್ಣ ಕರಿಗಾರ

ಸಂಸಾರವೂ ಒಂದು ಯೋಗವೇ– ‘ಸಂಸಾರಯೋಗ’ ಎಂದು ಕರೆಯಬಹುದಾದ ಮಹಾಯೋಗ ಅದು.ಎಲ್ಲ ಯೋಗಗಳಿಗೂ ಮೂಲಯೋಗವೇ ಸಂಸಾರಯೋಗ.ಮಹಾನ್ ಯೋಗಿಗಳು,ಋಷಿಗಳು,ಸಿದ್ಧರುಗಳು ಸಂಸಾರದಿಂದಲೇ ಬಂದಿದ್ದಾರೆ.ಆದ್ದರಿಂದ ಸಂಸಾರವನ್ನು ಆದಿಯೋಗ ಎನ್ನಬಹುದು.ಯೋಗಿಗಳನ್ನು,ಸಂತರನ್ನು ,ದಾರ್ಶನಿಕರನ್ನು,ದ್ರಷ್ಟಾರರನ್ನು ಲೋಕಕ್ಕೆ ಕೊಡುವ ಸಂಸಾರವು ತ್ಯಾಜ್ಯವಲ್ಲ,ಪೂಜ್ಯವಾದುದು; ತಿರಸ್ಕರಿಸಬೇಕಾದುದಲ್ಲ; ಪುರಸ್ಕರಿಸಬೇಕಾದುದು.

ಪರಮಾತ್ಮನ ಸಾಕ್ಷಾತ್ಕಾರದ ಸಾಧನವೇ ಯೋಗ ಎನ್ನುವುದಾದರೆ ಅದಕ್ಕೆ ಸಂಸಾರಕ್ಕಿಂತ ಉತ್ತಮಸಾಧನೆ ಇಲ್ಲ.’ಚಿತ್ತವೃತ್ತಿ ನಿರೋಧ’ವು ಯೋಗ ಎನ್ನಿಸಿಕೊಳ್ಳುವುದರಿಂದ ಸಂಸಾರಸುಖವನ್ನು ಅನುಭವಿಸಿ,ಗೆಲ್ಲುವುದರಿಂದ ಕಾಮಾಸಕ್ತಿಯನ್ನು ತಡೆಗಟ್ಟಬಹುದು.ಕಾಮಾಸಕ್ತಿಯು ಚಿತ್ತಚಾಂಚಲ್ಯದ ಪ್ರಬಲ ಕಾರಣ.ಬ್ರಹ್ಮಚಾರಿಯಾಗಲಿ,ಸಂನ್ಯಾಸಿಯಾಗಲಿ ಕಾಮವನ್ನು ಸುಲಭವಾಗಿ ನಿಗ್ರಹಿಸಲಾರ.ಅದುಮಿಟ್ಟಕಾಮವಾಸನೆಯು ವಿಕಾರವಾಗಿ ಕಾಡುತ್ತದೆ,ಉದ್ವೇಗ,ತಳಮಳ,ಚಂಚಲದ ಕಾರಣವಾಗುತ್ತದೆ.ಮನಸ್ಸು ಹರಿದಾಡತೊಡಗುತ್ತದೆ.ಇಂದ್ರಿಯವನ್ನು ನಿಗ್ರಹಿಸದೆ ಮನೋನಿಗ್ರಹ ಸಾಧ್ಯವಿಲ್ಲ; ಮನಸ್ಸನ್ನು ನಿಗ್ರಹಿಸದೆ ಮಹಾದೇವನ ಅನುಗ್ರಹವನ್ನು ಪಡೆಯಲಾಗದು.ಸಂಸಾರಿಯಾದ ಗಂಡಸು ತನ್ನ ಹೆಂಡತಿಯಲ್ಲಿ ಕಾಮಸುಖವನ್ನನುಭವಿಸಿ ಸಂತೃಪ್ತನಾಗಿರುವುದರಿಂದ ಕಾಮೇಚ್ಛೆಗಾಗಿ ಹೊಯ್ದಾಡದು ಅವನ ಮನಸ್ಸು.ಸಂಸಾರಿಯಾದ ಹೆಂಗಸು ತನ್ನಪುರುಷನಿಂದ ರತಿಸುಖವನ್ನನುನಭವಿಸಿ ತೃಪ್ತಳಾಗಿರುವುದರಿಂದ ಚಂಚಲಗೊಳ್ಳದು ಅವಳ ಮನಸ್ಸು.ಸಂಸಾರದಲ್ಲಿದ್ದು,ಸಂಸಾರಸುಖವನ್ನು ಅನುಭವಿಸುವ ಮೂಲಕ ಗಂಡ ಹೆಂಡತಿಯರಿಬ್ಬರು ಶುದ್ಧರಾಗುತ್ತಾರೆ ಪರಮಾತ್ಮನ ಅನುಗ್ರಹವನ್ನುಣ್ಣಲು ಸಿದ್ಧರಾಗುತ್ತಾರೆ.

‌ ಪ್ರಪಂಚನಿಯಾಮಕನಾದ ಪರಮಾತ್ಮನು ಸೃಷ್ಟಿ ಮುಂದುವರೆಯಬೇಕು ಎಂದು ಬಯಸುತ್ತಾನೆ.ಸೃಷ್ಟಿ ಮುಂದುವರೆಯಬೇಕಾದರೆ ಮನುಷ್ಯರು ಮಾತ್ರವಲ್ಲ, ಪಶು -ಪಕ್ಷಿ ಪ್ರಾಣಿಗಳಲ್ಲಿ ಗಂಡು ಹೆಣ್ಣಿನ ಸಮಾಗಮ ಆಗಬೇಕು.ಮೈಥುನಕ್ರಿಯೆಯೇ ಸೃಷ್ಟಿಸೂತ್ರ.ಸೃಷ್ಟಿಗೆ ಕಾರಣವಾಗುವ ಮೈಥುನವು ಯೋಗವೆ,ಸೃಷ್ಟಿಯೋಗವದು.ಗಂಡು ಹೆಣ್ಣುಗಳ ಮಿಲನವು ‘ಸಮಾಗಮಯೋಗ’! ಯೋಗಿಗಳು ಮಾಡುವುದು ಕೂಡ ಶಿವಶಕ್ತಿಯರನ್ನು ಸಂಗಮಿಸುವ ಯೋಗಸಾಹಸವೆ.ಮೂಲಾಧಾರದಲ್ಲಿರುವ ಕುಂಡಲಿನೀ ಶಕ್ತಿಯನ್ನು ಸಹಸ್ರಾರದಲ್ಲಿರುವ ಸದಾಶಿವನಲ್ಲಿ ಐಕ್ಯಗೊಳಿಸುವುದೇ ಯೋಗಸಿದ್ಧಿ.ಯೋಗಸಿದ್ಧಿಯ ಅನುಭವ ಆಗುವುದು ಹೃದಯಸ್ಥಾನವಾದ ಅನಾಹತ ಚಕ್ರದಲ್ಲಿ.ಯೋಗಿಯು ಊರ್ಧ್ವಮುಖಿಯಾಗಿ ಮಲಗಿರುವ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು ಒಂದೊಂದು ಚಕ್ರಗಳನ್ನು ದಾಟುತ್ತ ಮೇಲೇರಿದಂತೆ ಯೋಗಿಯನ್ನು ಅನುಗ್ರಹಿಸಲು ಸಹಸ್ರಾರದಿಂದ ಇಳಿದು ಬರುತ್ತದೆ ಪ್ರಭುಶಕ್ತಿ.ಯೋಗಶಕ್ತಿ ಮತ್ತು ಪ್ರಭುಶಕ್ತಿಗಳೆರಡು ಸಂಗಮಿಸುವುದು ಹೃದಯಸ್ಥಾನವಾದ ಅನಾಹತ ಚಕ್ರದಲ್ಲಿ.ಹಾಗೆಯೇ ಗಂಡು ಹೆಣ್ಣುಗಳ ಮೈಥುನಧರ್ಮವನ್ನು ಅನುಸರಿಸಿ ಹುಟ್ಟುವ ಮಕ್ಕಳ ಮೇಲಿನ ಪ್ರೀತಿ,ಮಮತೆಯ ಅಮೃತದ ಸೆಲೆ ಇರುವುದು ಹೃದಯದಲ್ಲೇ.ಮನುಷ್ಯಸಂಬಂಧಗಳ ಮೂಲಸೆಲೆ ಇರುವುದು ಹೃದಯದಲ್ಲಿ.ಪ್ರಿತಿ,ರಾಗ- ಅನುರಾಗಗಳ ಉಗಮಸ್ಥಳ ಹೃದಯವೆ.ಗಂಡ ಹೆಂಡತಿಯರಿಬ್ಬರು ತಮ್ಮ ಮಕ್ಕಳನ್ನು ಪ್ರೀತಿಸುವಂತೆ ಇಡೀ ವಿಶ್ವದ ಪ್ರೀತಿಯ ಮೂಲಸೆಲೆ ಹೃದಯದಲ್ಲಿದೆ.ಸ್ವಾರ್ಥ ಇಲ್ಲವೆ ಸಂಕುಚಿತ ಭಾವವು ಅಳಿದು ವಿಶಾಲಭಾವನೆ ಮೂಡುವುದು ಹೃದಯದಲ್ಲಿ.ಹೃದಯವೈಶಾಲ್ಯ ಎಂದರೆ ಇದೇ.ಕಾಮವನ್ನು ಅನುಭವಿಸಿ ಸಂತೃಪ್ತರಾಗಿ ವಿಶಾಲಮನಸ್ಕರಾಗುವ ದಂಪತಿಗಳೇ ವಿಶ್ವಯೋಗಿಗಳು!ಕೊಲ್ಲಲಾಗದ ಕಾಮವನ್ನು ಅನುಭವಿಸಿ ಗೆಲ್ಲುವುದೇ ಯಶಸ್ಸು.ಕಾಮವನ್ನು ಅನುಭವಿಸಿ ಕಾಮವಾಸನೆ ಮುಕ್ತರಾಗಬೇಕು.’ ಬಳಸಿ ಬ್ರಹ್ಮಚಾರಿಗಳಾಗಬೇಕು’; ಬಳಸದೆ ಹಳಸುಮನಸ್ಕರಾಗಿ ಬಳಲಬಾರದು.ಕಾಮನಿಗ್ರಹದಿಂದ ಮಾತ್ರ ಆಧ್ಯಾತ್ಮಿಕ ಸಾಧನೆ ಎನ್ನುವುದು ಭ್ರಾಂತಿ,ದುರ್ಬಲ ಚಿತ್ತರ ಬಡಬಡಿಕೆ.ದೇಹದಿಂದಲ್ಲ ದೇವರನ್ನು ಕಾಣುವುದು,ಮನಸ್ಸಿನಿಂದ ,ಭಾವದಿಂದ.ಭಾವವೇ ದೇವನೊಲುಮೆಯಸಾಧನವಾದ್ದರಿಂದ ಭಾವಶುದ್ಧರಾಗಿ ಧ್ಯಾನಿಸಬೇಕು ಭಗವಂತನನ್ನು.ಕಾಮವನ್ನು ಬಳಸಿದ ಬಳಿಕ ಭಾವ ಶುದ್ಧವಾಗುತ್ತದೆ,ಇಂದ್ರಿಯಗಳ ಚಪಲ ಅಡಗುತ್ತದೆ.ಕಾಮವನ್ನು ಬಳಸಿದ ಬಳಿಕ ಉಳಿವುದೇ ಸೋಮಶೇಖರ ಶಿವನಪಥ.

ಸಂಸಾರವು ಕೆಟ್ಟದ್ದು,ಮಾಯೆ ಎಂದು ಅದನ್ನು ಹೀಗಳೆಯುವ ಸಂನ್ಯಾಸಿಗಳು,ಯೋಗಿಗಳು ಮಹಡಿ ಹತ್ತಿದ ಬಳಿಕ ಏಣಿಯನ್ನು ಒದೆಯುವ ಬುದ್ಧಿವಂತರು.ಸಂಸಾರವು ಕನಿಷ್ಟ,ಸಂನ್ಯಾಸವು ಶ್ರೇಷ್ಠ ಎನ್ನುವುದು ಮನುಷ್ಯರ ಭ್ರಮೆಯಲ್ಲದೆ ಪರಮಾತ್ಮನ ಎಣಿಕೆಯಲ್ಲ.ಹಾಗೆ ನೋಡಿದರೆ ಆಧ್ಯಾತ್ಮಭೂಮಿ ಭಾರತದ ತ್ರಿಮೂರ್ತಿಗಳಾದ ಬ್ರಹ್ಮ,ವಿಷ್ಣು,ರುದ್ರರುಗಳು ಪತ್ನಿಯರನ್ನು ಹೊಂದಿದ್ದಾರೆ, ಪತ್ನೀಸಮೇತರಾಗಿ ಪೂಜೆಗೊಳ್ಳುತ್ತಿದ್ದಾರೆ.ಬ್ರಹ್ಮನು ಸರಸ್ವತಿಯ ಪತಿಯಾದರೆ,ವಿಷ್ಣುವು ಲಕ್ಷ್ಮೀಪತಿ.ರುದ್ರನು ಸತಿ ಇಲ್ಲವೆ ಪಾರ್ವತಿವಲ್ಲಭ.ಶಿವನು ತನ್ನ ದೇಹದ ಅರ್ಧಭಾಗವನ್ನು ತನ್ನ ಸತಿ ಪಾರ್ವತಿಗೆ ನೀಡಿ ‘ ಅರ್ಧನಾರೀಶ್ವರ ಲೀಲೆ’ ಯನ್ನಾಡಿದ್ದಾನೆ.ಅರ್ಧನಾರೀಶ್ವರಶಿವತತ್ತ್ವವೇ ಶಿವಪೂರ್ಣತತ್ತ್ವ.ತಾವು ಪೂಜಿಸುತ್ತಿರುವ ದೇವರುಗಳೇ ಪತ್ನಿಯರುಗಳನ್ನು ಹೊಂದಿರಲು ಸಂನ್ಯಾಸವು ಶ್ರೇಷ್ಠ ಎನ್ನುವುದು ಭಾವಭ್ರಮೆಯಲ್ಲವೆ? ಅರ್ಥಹೀನ ಬಡಬಡಿಕೆಯಲ್ಲವೆ ?

About The Author