ದಿನಾಚರಣೆ:ತನ್ನ ಸ್ವರೂಪಾನಂದವನ್ನು ಆನಂದಿಸುವುದೇ ಯೋಗ–ಮುಕ್ಕಣ್ಣ ಕರಿಗಾರ

ದಿನಾಚರಣೆ:ತನ್ನ ಸ್ವರೂಪಾನಂದವನ್ನು ಆನಂದಿಸುವುದೇ ಯೋಗ-

ಮುಕ್ಕಣ್ಣ ಕರಿಗಾರ

ವಿಶ್ವದಾದ್ಯಂತ ಇಂದು ಎಂಟನೆಯ ‘ ಯೋಗದಿನಾಚರಣೆ’ ಯನ್ನು ಆಚರಿಸಲಾಗುತ್ತಿದೆ.ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಸಕ್ತಿ,ಒತ್ತಾಸೆ ಮತ್ತು ಪರಿಶ್ರಮಗಳಿಂದಾಗಿ ಯೋಗವು ಇಂದು ವಿಶ್ವಮನ್ನಣೆ ಪಡೆದಿದೆ.ನರೇಂದ್ರ ಮೋದಿಯವರ ಹಲವು ಉತ್ತಮಕಾರ್ಯಗಳಲ್ಲಿ ಒಂದು, ಯೋಗವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿ ಜೂನ್ 21 ಅನ್ನು ‘ಅಂತಾರಾಷ್ಟ್ರೀಯ ಯೋಗ’ ಎಂದು ಘೋಷಣೆ ಮಾಡಿಸಿರುವುದು.

ಭಾರತವೇ ಆಧ್ಯಾತ್ಮಕ್ಷೇತ್ರದ ವಿಶ್ವಗುರು.ಆಧ್ಯಾತ್ಮಕ್ಷೇತ್ರದ ಸಾರ್ವಭೌಮತ್ವವನ್ನು ವಿಶ್ವದ ಯಾವ ದೇಶವೂ ಭಾರತದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ.ಹತ್ತಾರುಸಾವಿರ ವರ್ಷಗಳಿಂದ ಭಾರತದಲ್ಲಿ ಆಧ್ಯಾತ್ಮಿಕ ರಸಗಂಗೆ ಪ್ರವಹಿಸುತ್ತಲೇ ಇದೆ.ಭಾರತದ ಆಧ್ಯಾತ್ಮಿಕ ಕಾಣ್ಕೆ,ಕೊಡುಗೆಗಳಲ್ಲಿ ಯೋಗವೂ ಒಂದೂ.ಆದರೆ ಆಧ್ಯಾತ್ಮ ಎಂದರೆ ಯೋಗ ಒಂದೇ ಅಲ್ಲ.ವ್ಯಕ್ತಿಜೀವನ ಪರಿಪೂರ್ಣಗೊಳ್ಳಲು ನೆರವಾಗುವ ಹಲವು ಸಾಧನಾ ಕ್ರಮಗಳಲ್ಲಿ ಯೋಗವೂ ಒಂದಷ್ಟೆ.ಯೋಗದ ಬಗ್ಗೆ ಜನರಲ್ಲಿ ಬಹಳಷ್ಟು ತಪ್ಪುತಿಳಿವಳಿಕೆ ಇದೆ.ಯೋಗಾಸನಗಳನ್ನೇ ಯೋಗ ಎಂದು ಭ್ರಮಿಸುತ್ತಾರೆ.ಯೋಗವೇ ಬೇರೆ,ಯೋಗಾಸನಗಳೇ ಬೇರೆ.ಪತಂಜಲಿ ಋಷಿಯವರು ಪ್ರಚಾರಕ್ಕೆ ತಂದ ” ಅಷ್ಟಾಂಗಯೋಗ ಮಾರ್ಗ” ದಲ್ಲಿ ಆಸನವೂ ಒಂದು ಯೋಗಾಂಗ .ಪತಂಜಲಿಯವರು ಯಮ,ನಿಯಮ,ಆಸನ,ಪ್ರಾಣಾಯಾಮ,ಪ್ರತ್ಯಾಹಾರ,ಧ್ಯಾನ,ಧಾರಣ ಮತ್ತು ಸಮಾಧಿಗಳು ಯೋಗದ ಎಂಟು ಅಂಗಗಳು ಇಲ್ಲವೆ ಅಂಶಗಳು ಎನ್ನುತ್ತಾರೆ.ಈ ಎಂಟಂಶಗಳನ್ನು ಸಾಧಿಸಿದವನೇ ಯೋಗಿ.ಕೆಲವು ಆಸನಗಳು,ಕಪಾಲಭಾತಿಯನ್ನಾಚರಿಸುವುದು,ಪ್ರಾಣಾಯಾಮ ಎಂದು ಉಸಿರನ್ನು ಎಳೆದುಕೊಳ್ಳುವುದು ಮತ್ತು ಬಿಡುವುದನ್ನು ಮಾಡುವ ಕೃತಕ ಶ್ವಾಸೋಚ್ಛಾಸ ಕ್ರಿಯೆಯಷ್ಟೇ ಯೋಗವಲ್ಲ.ಯೋಗವು ಸಮಗ್ರವಾದುದು,ಸಂಪೂರ್ಣವಾದುದು‌.ಯೋಗಾಸನಗಳು ಯೋಗವಲ್ಲ,ಯೋಗಾಸನ ಪ್ರದರ್ಶಿಸುವವರು ಯೋಗಿಗಳಲ್ಲ,ಯೋಗಗುರುಗಳು.ಅಂತಹವರನ್ನು ಯೋಗಶಿಕ್ಷಕರು ಇಲ್ಲವೇ ಯೋಗ ಬೋಧಕರು ಎಂದು ಮಾತ್ರ ಕರೆಯಬೇಕು.

ಜೀವನದ ಪರಮಪುರುಷಾರ್ಥ ಮತ್ತು ಯೋಗದ ಆತ್ಯಂತಿಕ ಸಿದ್ಧಿ ಪರಮಾತ್ಮನ ಸಾಕ್ಷಾತ್ಕಾರ.ತನ್ನ ಸ್ವರೂಪದ ಸಹಜಾನಂದವನ್ನು ತಾನು ಅನುಭವಿಸುವುದೇ ನಿಜವಾದ ಯೋಗ.ತನ್ನನ್ನು ತಾನು ಅರಿಯುವುದಕ್ಕೆ ಪಾತಂಜಲಯೋಗವೇ ಬೇಕಿಲ್ಲ,ಯಾವ ಮಾರ್ಗವಾದರೂ ಆದೀತು.ಆತ್ಮಾನಂದವನ್ನನುಭವಿಸಲು ಯೋಗಾಸನಗಳಷ್ಟೇ ಸಾಧನಗಳಲ್ಲ,ಹತ್ತುಹಲವು ಸಾಧನಾ ಕ್ರಮಗಳಿವೆ.ಭಾರತದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ,ಆತ್ಮಾನಂದವನ್ನನುಭವಿಸಲು ಸಹಸ್ರಾರು ಆಧ್ಯಾತ್ಮಿಕ ಪರಂಪರೆಗಳಿವೆ.ಈ ಪರಂಪರೆ ಶ್ರೇಷ್ಠ ಆ ಪರಂಪರೆ ಕನಿಷ್ಟ ಎನ್ನಲಾಗದು.ಸಾಧಕರ ಮನೋಭೂಮಿಕೆಗೆ ಅನುಗುಣವಾದ ಆಧ್ಯಾತ್ಮಿಕ ಪರಂಪರೆಗಳಿವೆ.ಆ ಎಲ್ಲ ಪರಂಪರೆಗಳೂ ಯೋಗವೆ! ಅಷ್ಟಾಂಗಯೋಗವು ಒಂದೇ ಯೋಗ,ಯೋಗವಾಶಿಷ್ಟದಲ್ಲಿ ಪ್ರತಿಪಾದಿತವಾದದ್ದೇ ಯೋಗ,ಭಗವದ್ಗೀತೆಯಲ್ಲಿ ಹೇಳಿದ್ದೇ ಯೋಗ ಎನ್ನುವುದು ತಪ್ಪುತಿಳಿವಳಿಕೆ,ಭ್ರಮೆ.

ಯೋಗ ಎಂದರೆ ‘ ಚಿತ್ತವೃತ್ತಿ ನಿರೋಧ’. ಚಿತ್ತವೃತ್ತಿಯನ್ನು ನಿಯಂತ್ರಿಸುವ ಎಲ್ಲ ಸಾಧನಾಕ್ರಮಗಳು ಯೋಗಗಳೆ ! ಆಸನದಿಂದಷ್ಟೇ ಚಿತ್ತವೃತ್ತಿನಿರೋಧ ಸಾಧ್ಯವಿಲ್ಲ.ತನ್ನ ಸ್ವರೂಪದಲ್ಲಿ ತಾನು ನೆಲೆನಿಲ್ಲುವುದೇ ಯೋಗ,ಬಹುದೊಡ್ಡ ಆಧ್ಯಾತ್ಮಿಕ ಸಾಧನೆ.ಯಾವ ಯೋಗಾಸನವೂ ಸ್ವಸ್ವರೂಪಾನಂದವನ್ನು ಕಲಿಸದು.ಯೋಗಶಿಕ್ಷಕರುಗಳಿಗೆ ಸಹಜಾನಂದ ಸಿದ್ಧಿಸದು.ದಿನದ ನಿಶ್ಚಿತ ಅವಧಿಯಲ್ಲಿ ಅಭ್ಯಸಿಸುವುದು ಯೋಗವಲ್ಲ,ಜೀವನವೇ ಯೋಗವಾಗಬೇಕು.ದಿನನಿತ್ಯದ ಕೆಲಸ ಕಾರ್ಯಗಳೆಲ್ಲ ಯೋಗವಾಗಿ ಮಾರ್ಪಡಬೇಕು.ಯೋಗಾನಂದವೆಂದರೆ ಎಂದೋ ಒಂದು ದಿನ ಮಾತ್ರ ಅನುಭವಿಸುವ ಕೆಲವು ಕ್ಷಣಗಳ ಆನಂದವಲ್ಲ,ಜೀವನವಿಡೀ ಯೋಗಾನಂದದ ದಿವ್ಯತೆಯನ್ನನುಭವಿಸಬೇಕು.ಜೀವನವು ಬೇರಲ್ಲ,ಯೋಗವು ಬೇರಲ್ಲ; ಜೀವನವೇ ಯೋಗವಾಗಬೇಕು,ಯೋಗವೇ ಜೀವನವಾಗಬೇಕು.ಇದುವೇ ದಿವ್ಯಜೀವನ! ಇದುವೇ ದಿವ್ಯಯೋಗ!

About The Author