ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೨::ದಾಸನಾಗದೆ ಈಶತ್ವವನ್ನು ಸಿದ್ಧಿಸಿಕೊಳ್ಳುವುದೇ ಸಾಕ್ಷಾತ್ಕಾರದ ರಹಸ್ಯ–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೨

ದಾಸನಾಗದೆ ಈಶತ್ವವನ್ನು ಸಿದ್ಧಿಸಿಕೊಳ್ಳುವುದೇ ಸಾಕ್ಷಾತ್ಕಾರದ ರಹಸ್ಯ

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರು ಆಧ್ಯಾತ್ಮಿಕ ವಿಚಾರಗಳಲ್ಲೂ ಪ್ರಗತಿಪರ ನಿಲುವನ್ನು ಹೊಂದಿದ್ದ ಅತ್ಯಪರೂಪದ ಯೋಗಿಗಳಲ್ಲೊಬ್ಬರು.ದೇವರ ಅನುಗ್ರಹ ಪಡೆಯಲು ದೇವನ ದಾಸನಾಗಬೇಕು ಎನ್ನುವುದು ಕೆಲವರ ಅಂಬೋಣ.ದಾಸನಾಗದೆ ಈಶ ಮೆಚ್ಚನು ಎನ್ನುತ್ತಾರೆ ಕೆಲವರು.ದಾಸ್ಯಭಾವದಲ್ಲಿ ನನಗೆ ಆಸಕ್ತಿ ಇಲ್ಲ.ಗುರುವಿನ ಗುಲಾಮನಾಗಬೇಕು ಎಂಬುದನ್ನಾಗಲಿ ಅಥವಾ ದೇವನದಾಸನಾಗಬೇಕೆಂಬುದನ್ನಾಗಲಿ ನಾನು ಒಪ್ಪುವುದಿಲ್ಲ.ಇತರರಿಗಿಂತ ಭಿನ್ನನಿರುವ ನಾನು ಒಂದು ಸಾರೆ ಗುರುದೇವ ಮಹಾಪತಸ್ವಿ ಶ್ರೀಕುಮಾರಸ್ವಾಮಿಗಳವರನ್ನು ಪ್ರಶ್ನಿಸಿದ್ದೆ ;” ಗುರುದೇವ,ಪರಮಾತ್ಮನ ಸಾಕ್ಷಾತ್ಕಾರಕ್ಕೆ ನಾವು ಅವನಲ್ಲಿ ದಾಸ್ಯಭಾವದಿಂದ ಮೊರೆಯಬೇಕೆ? ದೇವರ ದಾಸರಾಗದೆ ಮೋಕ್ಷ ಸಿದ್ಧಿಸದೆ ?”.ಅದಕ್ಕವರು ನಗುನಗುತ್ತ ಉತ್ತರಿಸಿದ್ದು ” ವತ್ಸ, ದಾಸನಲ್ಲ,ದೇಸಿವಡೆವ ಮಗನಾಗಬೇಕೆಂಬುದನ್ನು ಸಿದ್ಧಿಸುವುದೇ ಸಾಕ್ಷಾತ್ಕಾರದ ರಹಸ್ಯವು”.ಗುರುದೇವನ ಬಾಯಿಂದ ಬಂದ ಈ ಮಾತನ್ನು ಕೇಳಿ ನಾನು ಅತೀವ ಸಂತಸಪಟ್ಟಿದ್ದೆ.ಯಾಕೆಂದರೆ ಪರಮಾತ್ಮನು ಅತ್ಯಂತ ಪ್ರಜಾಪ್ರಭುತ್ವವಾದಿ ಎನ್ನುವುದು ನನ್ನ ನಿಲುವು.ಪರಮಾತ್ಮನು ನಿರಂಕುಶ ಸರ್ವಾಧಿಕಾರಿ ಎಂಬುದನ್ನಾಗಲಿ,ಕಲ್ಲು ಮನಸ್ಸಿನ ನಿರ್ದಯಿ ಪ್ರಭು ಎಂಬುದನ್ನಾಗಲಿ ನಾನು ಒಪ್ಪುವುದಿಲ್ಲ.ಜನರು ಅಜ್ಞಾನ- ಅಂಧಕಾರವಶರಾಗಿ ಪರಮಾತ್ಮನ ಬಗ್ಗೆ ಇಲ್ಲ ಸಲ್ಲದ ಭಯ-ಆತಂಕಗಳನ್ನಿಟ್ಟುಕೊಂಡು ಬಳಲುತ್ತಿದ್ದಾರೆ.

ದಾಸ್ಯಭಾವದಿಂದ ಪರಮಾತ್ಮನಲ್ಲಿ ಶರಣು ಹೋಗುವುದು ಅಳ್ಳೆದೆಯವರ ಲಕ್ಷಣ.ನಾನು ನಿನ್ನನ್ನು ಪಡೆದೇ ಪಡೆಯುತ್ತೇನೆ ಎಂಬ ವೀರೋತ್ಸಾಹದಿಂದ ಪರಮಾತ್ಮನ ಪಥದಲ್ಲಿ ನಡೆದು ಕಾಣಬೇಕು ಪರಮಾತ್ಮನನ್ನು.ಇಂತಹ ಧೀರೋದಾತ್ತ ನಡೆಯೇ ಯೋಗ.ಯೋಗಸಾಧನೆಯ ಬಲದಿಂದ ಯೋಗಿಯು ಪರಮಾತ್ಮನ ದರ್ಶನ ಪಡೆಯಬಲ್ಲನು.ಪರಮಾತ್ಮನನ್ನು ಕಾಣುವುದೇ ಸಾಕ್ಷಾತ್ಕಾರ.’ಸಾಕ್ಷಾತ್ಕಾರ’ ಎಂದರೆ ಸಾಕ್ಷಾತ್ಕಾಗಿ ಕಾಣುವುದು,ಅನುಭವಿಸುವುದು.ನಾವು ಯಾರನ್ನಾದರೂ ಭೇಟಿಯಾದಾಗ ಪರಸ್ಪರರನ್ನು ಕಾಣುತ್ತೇವೆ,ಮಾತನಾಡುತ್ತೇವೆ.ಇದನ್ನು ಭೇಟಿ ಎನ್ನುತ್ತೇವೆಯೇ ಹೊರತು ಸಾಕ್ಷಾತ್ಕಾರ ಎನ್ನುವುದಿಲ್ಲ.ತಂದೆ- ತಾಯಿಗಳನ್ನು ಕಂಡಾಗ ಸಂತೋಷವಾಗುತ್ತದೆ,ಆತ್ಮೀಯ ಸ್ನೇಹಿತರನ್ನು ಕಂಡಾಗ ಎಲ್ಲಿಲ್ಲದ ಸುಖ,ಉತ್ಸಾಹ ಉಂಟಾಗುತ್ತದೆ.ಹಿರಿಯರನ್ನು ಕಂಡಾಗ ಗೌರವಭಾವನೆ ಮೈದೋರುತ್ತದೆ.ಆದರೆ ಇವರಾರ ಭೇಟಿಯೂ ‘ ಸಾಕ್ಷಾತ್ಕಾರ’ ವಲ್ಲ !ಯಾಕೆ? ಯಾಕೆಂದರೆ ನಾವು ಕಾಣುವ ತಂದೆ – ತಾಯಿ,ಸ್ನೇಹಿತರು,ಹಿರಿಯರು,ಬಂಧುಮಿತ್ರರು ನಮ್ಮಿಂದ ಪ್ರತ್ಯೇಕವಾಗಿ ಇರುವವರು,ನಮ್ಮಂತೆಯೇ ಪ್ರತ್ಯೇಕ ಅಸ್ತಿತ್ವ ಉಳ್ಳವರು.ಭಿನ್ನ ಜನರನ್ನು ಕಾಣುವುದು ಸಾಕ್ಷಾತ್ಕಾರವಲ್ಲ.ತನ್ನನ್ನು ತಾನು ಕಾಣುವುದೇ ಸಾಕ್ಷಾತ್ಕಾರ! ತಾನು ಜೀವನಲ್ಲ ,ಆತ್ಮನು ಎಂದರಿತಾಗ ಸಾಕ್ಷಾತ್ಕಾರದ ಪಥದ ಪಯಣದ ಮೊದಲ ಹೆಜ್ಜೆ ಪ್ರಾರಂಭವಾಗುತ್ತದೆ.ಆತ್ಮ ಮತ್ತು ಪರಮಾತ್ಮರ ನಡುವೆ ವ್ಯತ್ಯಾಸವಿಲ್ಲ.ಜೀವರುಗಳ ದೇಹದಲ್ಲಿದ್ದು ಆತ್ಮನೆನಿಸಿಕೊಂಡರೆ ವಿಶ್ವದೇಹದಲ್ಲಿರುವ,ವಿಶ್ವವ್ಯಾಪಕ ನಿರಾಲಂಬನೇ ಪರಮಾತ್ಮ.ಆತ್ಮನು ಒಂದು ದೇಹದ ಆಸರೆಯಲ್ಲಿದ್ದರೆ ಪರಮಾತ್ಮನು ವಿಶ್ವಾತ್ಮನು.ವಿಶ್ವದ ಎಲ್ಲ ಆತ್ಮಗಳ ಚೈತನ್ಯಸ್ವರೂಪನಾಗಿರುವುದರಿಂದ ಪರಮಾತ್ಮನು ವಿರಾಟ್ ಸ್ವರೂಪನು,ವಿರಾಡ್ರೂಪನು,ವಿಶ್ವರೂಪಿಯು.ತನ್ನ ಆತ್ಮದ ವಿರಾಟ್ ರೂಪ ಇಲ್ಲವೆ ವಿಶ್ವರೂಪವನ್ನು ಕಾಣುವುದೇ ಸಾಕ್ಷಾತ್ಕರ.ಸಾಕ್ಷಾತ್ಕಾರದಲ್ಲಿ ಪರಶಿವನು ನಮ್ಮೆದುರು ಪ್ರಕಟಗೊಂಡರೂ ನಾವು ಪರಶಿವನಿಂದ ಭಿನ್ನರಲ್ಲ ಎನ್ನುವ ಪರಮಾರ್ಥವು ಅನುಭವಕ್ಕೆ ಬರುತ್ತದೆ.ಪುರಾಣಗಳು,ಕಥೆಗಳು ಹೇಳುವಂತೆ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿ ‘ ಏನು ವರಬೇಕು ಬೇಡು’ ಎನ್ನುವುದಾಗಲಿ,ತಪಸ್ಸಿಗೆ ಕುಳಿತ ವ್ಯಕ್ತಿ ಮೂರು ವರಗಳನ್ನು ಬೇಡುವುದಾಗಲಿ ದೇವರು ‘ ತಥಾಸ್ತು’ ಎಂದು ವರವನ್ನಿತ್ತು ಅದೃಶ್ಯನಾಗುವುದಾಗಲಿ ನಿಜವಾದ ಸಾಕ್ಷಾತ್ಕಾರವಲ್ಲ.ಅಂತಹ ಭಕ್ತ- ಭಗವಂತರ ಭೇಟಿಯಲ್ಲಿ ಭಕ್ತ ದೀನನು,ಪರಮಾತ್ಮನು ಪ್ರಭುವು ಎನ್ನುವ ಉಭಯ ಭಾವ ಇರುತ್ತದೆ.ಒಬ್ಬ ಬೇಡುವವನು ಮತ್ತೊಬ್ಬ ಕೊಡುವವನು.ಬೇಡುವವನು ಸಣ್ಣವನು ಆದರೆ ಕೊಡುವವನು ದೊಡ್ಡವನು.ಇದು ನಿಜವಾದ ಸಾಕ್ಷಾತ್ಕಾರವಲ್ಲ.ಆತ್ಮನು ಪರಮಾತ್ಮ ಸ್ವರೂಪಿ ಆಗಿದ್ದರಿಂದ ಆತ್ಮನಲ್ಲಿ ಪರಮಾತ್ಮನೇ ಇರುವುದರಿಂದ ,ಪರಮಾತ್ಮನು ಆತ್ಮನಲ್ಲಿಯೇ ಪ್ರಕಟಗೊಳ್ಳುವುದರಿಂದ ಅಲ್ಲಿ ದೊಡ್ಡದು- ಸಣ್ಣದು ಎನ್ನುವ ತರತಮಕ್ಕೆ ಅವಕಾಶವಿಲ್ಲ.ತನ್ನೆದುರು ನಿಂತಿರುವ ಪರಶಿವನು ಬೇರಲ್ಲ,ತಾನು ಬೇರಲ್ಲ ಎನ್ನುವ ಭಾವಬಲಿತರೆ ಅದುವೆ ನಿಜವಾದ ಸಾಕ್ಷಾತ್ಕಾರ,ಆತ್ಮ ಪರಮಾತ್ಮರ ಸಮಾಗಮ.ಆತ್ಮ ಪರಮಾತ್ಮರು ಮುಖಾಮುಖಿಯಾದಾಗ ಒಬ್ಬರು ಮತ್ತೊಬ್ಬರಾಗುತ್ತಾರೆ,ಇಬ್ಬರೂ ಒಬ್ಬರೇ ಆಗುತ್ತಾರೆಯೇ ಹೊರತು ಇಬ್ಬರು ಪ್ರತ್ಯೇಕ ವ್ಯಕ್ತಿತ್ವಗಳ ಅಸ್ತಿತ್ವ ಅಲ್ಲಿ ಇರುವುದಿಲ್ಲ.ಆಗ ಬೇಡುವವರು ಯಾರು ? ನೀಡುವವರು ಯಾರು? ಬೇಡುವುದು ಏನನ್ನು? ಪಡೆಯುವುದು ಏನನ್ನು ?ಆತ್ಮ ಪರಮಾತ್ಮರ ಅಭೇದಾನುಸಂಧಾನದ ದರ್ಶನವೇ ಸಾಕ್ಷಾತ್ಕಾರ.ಇದು ಗಟ್ಟಿಗನಾದ ಯೋಗಿಗೆ ಮಾತ್ರ ಅಳವಡುವ ದಿವ್ಯದರ್ಶನ; ಸಾಮಾನ್ಯರಿಗೆ ಎಟುಕದು.

ಧೀರಯೋಗಿಯು ತಾನು ಪರಮಾತ್ಮನ ಮಗನೆಂದೇ ತಿಳಿದು ಪರಮಾತ್ಮನನ್ನು ಕಾಣಲು ಹಂಬಲಿಸುತ್ತಾನೆ.ಮಗನಿಗೆ ತಂದೆಯನ್ನು ಕಾಣುವುದು ಅವನ ಸಹಜ ಗುರಿ,ಜನ್ಮಸಿದ್ಧಹಕ್ಕು.ತಂದೆ ಮತ್ತು ಮಗನ ಸಂಬಂಧದ ನಡುವೆ ಪರಸ್ಪರರು ಒಂದಾಗುವ,ಸಂಧಿಸುವ ಅವಕಾಶ,ಹಕ್ಕು ಇದೆ.ಆದರೆ ದಾಸನಾದವನಿಗೆ ಈ ಹಕ್ಕು ಇರುವುದಿಲ್ಲ.ದಾಸ ಏನಿದ್ದರೂ ದೇಹಿ ಎಂದು ಬೇಡಬೇಕಾದವನು.ನೀಡುವುದು,ಬಿಡುವುದು ಪ್ರಭುವಿನ ಇಚ್ಛೆ,ಆಯ್ಕೆ.ದಾಸನಿಗೆ ಪ್ರಭುವಿನ ಮೇಲೆ ಹಕ್ಕು,ಅಧಿಕಾರವಿಲ್ಲ.ಪ್ರಭುವಿನ ಅನುಗ್ರಹವು ಅವನ ನಿರಂಕುಶ ಪ್ರಭುತ್ವಕ್ಕೆ ಸೇರುತ್ತದೆ ದಾಸ- ಈಶ ಭಾವ ಇದ್ದಾಗ.ಆದರೆ ನಾನು ದಾಸನಲ್ಲ,ನಿನ್ನ ಮಗನಿದ್ದೇನೆ,ನಿನ್ನನ್ನು ಕಾಣುವುದು ನನ್ನ ಹಕ್ಕು,ನನಗೆ ದರ್ಶನ ನೀಡುವುದು ನಿನ್ನ ಕರ್ತವ್ಯ ಎಂಬ ಪುತ್ರಭಾವದಿಂದ ಸಾಧಿಸಹೊರಟರೆ ಪರಶಿವನು ತಂದೆಯಾಗಿಯೇ ಪ್ರಕಟಗೊಳ್ಳುತ್ತಾನೆ! ಪರಮಾತ್ಮನ ಧೀರ ಮಕ್ಕಳು ಆಗುವುದೇ ಯೋಗಿಗಳ ಲಕ್ಷಣ.ಮಹಾಶೈವ ಯೋಗವು ಇಂತಹ ಅತ್ಯುನ್ನತ ನಿಲುವಿನ ಯೋಗವು.ಮಹಾಶೈವ ಯೋಗಿಗಳು ಶಿವನನ್ನು ತಂದೆ ಎಂದು ಬಗೆಯುತ್ತಾರೆ,ಶಕ್ತಿಯನ್ನು ತಾಯಿ ಎಂದು ಭಾವಿಸಿ ಮಕ್ಕಳಿಗೆ ತಂದೆ ತಾಯಿಗಳಲ್ಲಿ ಜನ್ಮದತ್ತಹಕ್ಕು ಇರುವಂತೆ ಮಹಾಶೈವ ಯೋಗಿಗಳು ಶಕ್ತ್ಯಾತ್ಮಕನಾದ ಶಿವನನ್ನು ಕಾಣುವುದನ್ನು ತಮ್ಮಹಕ್ಕು ಎಂದು ಭಾವಿಸಿದ್ದಾರೆ.

ಗಣಪತಿ ಮತ್ತು ಷಣ್ಮುಖರು ಹೀಗೆ ತಂದೆ ತಾಯಿ ಭಾವದಿಂದ ಶಿವಪಾರ್ವತಿಯರನ್ನು ಧ್ಯಾನಿಸಿದ ಅತ್ಯುನ್ನತ ನಿಲುವಿನ ಯೋಗಿಗಳಾಗಿದ್ದರು ಎನ್ನುವುದರ ಸಂಕೇತ ಗಣಪತಿ ಮತ್ತು ಷಣ್ಮುಖ ಶಿವ ಪಾರ್ವತಿಯರ ತೊಡೆಯ ಮೇಲೆ ಕುಳಿತಿರುವುದು.ಇದು ಸಾಮಾನ್ಯರಿಂದ ಸಾಧ್ಯವಾಗುವ ಯೋಗವಲ್ಲ,ಮಹೋದಾತ್ತರಾದ ಮಹಾಶೈವ ಯೋಗಿಗಳಿಗೆ ಮಾತ್ರಸಾಧ್ಯವಾಗಬಹುದಾದ ಅತ್ಯಪರೂಪದ ಯೋಗಸಿದ್ಧಿ.ಕೈಲಾಸದಲ್ಲಿ ಶಿವನು ಸಹಸ್ರ ಸಿದ್ಧರ ಸಭೆಯಲ್ಲಿ ಕುಳಿತಿದ್ದರೂ ಅಲ್ಲಿರುವ ಸಿದ್ಧರುಗಳು ಶಿವಸಭಾಸದರು ಮಾತ್ರ.ಶಿವನನ್ನು ವಂದಿಸಿ,ಪೂಜಿಸಿ ಕೃತಾರ್ಥರಾದವರು.ಅವರು ಶಿವನನ್ನು ಮೊರೆಯಬೇಕಾದವರೇ ಹೊರತು ಗಣಪತಿ- ಷಣ್ಮುಖರಂತೆ ಶಿವಪಾರ್ವತಿಯರ ತೊಡೆಯ ಮೇಲೆ ಕುಳಿತುಕೊಳ್ಳುವ ಹಕ್ಕು ಸಾಧಿಸಲಾರರು! ಇಂತಹ ಲೋಕೋತ್ತರ ಯೋಗಸಾಧಕರು ಗಣಪತಿ ಮತ್ತು ಷಣ್ಮುಖರು.ಇದನ್ನು ಅರ್ಥಮಾಡಿಕೊಳ್ಳದೆ ಪುರಾಣಿಕರು ಗಣಪತಿ ಷಣ್ಮುಖರನ್ನು ಶಿವ ಪಾರ್ವತಿಯರಿಗೆ ಹುಟ್ಟಿದ ಮಕ್ಕಳು ಎಂಬಂತೆ ಕಥೆ ಕಟ್ಟಿದ್ದಾರೆ.ಬಯಲು ಬಯಲನ್ನು ಕೂಡಿದಾಗ ಬಯಲೇ ಆಗುತ್ತದೆಯೇ ಹೊರತು ಅಲ್ಲಿ ಏನೂ ಹುಟ್ಟುವುದಿಲ್ಲ.ಪರಶಿವ ಮತ್ತು ಪರಬ್ರಹ್ಮೆಯರು ಸಮಾಗಮಗೊಂಡಾಗ ಮಹಾಬಯಲು ಉಂಟಾಗಿ ಓಂಕಾರಸ್ಫೋಟದಿಂದ ಜಗತ್ತು ಹುಟ್ಟಿದೆಯೇ ಹೊರತು ಗಣಪತಿ- ಷಣ್ಮುಖರು ಹುಟ್ಟಲಿಲ್ಲ ! ಗಣಪತಿ- ಷಣ್ಮುಖರು ಅತ್ಯುಗ್ರ ಯೋಗಸಾಧಕರಾಗಿ ತಮ್ಮ ಯೋಗಸಾಧನೆಯ ಬಲದಿಂದ ಶಿವಪಾರ್ವತಿಯರುಗಳನ್ನು ತಂದೆ- ತಾಯಿಗಳನ್ನಾಗಿ ಪಡೆದಿದ್ದಾರೆ ಎನ್ನುವುದೇ ದೇಸಿವಡೆದ ಮಕ್ಕಳಾಗಬೇಕು ಸಾಕ್ಷಾತ್ಕಾರ ಪಥದಿ ಎನ್ನುವ ಮಹೋಪದೇಶಕ್ಕರ್ಥ.

About The Author