ಮಹೋಪದೇಶಗಳು –೨೦::ಜೀವನದಲ್ಲಿ ಎಲ್ಲವೂ ಅರ್ಥಪೂರ್ಣ; ಯಾವುದೂ ವ್ಯರ್ಥವಲ್ಲ–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೨೦

“ಜೀವನದಲ್ಲಿ ಎಲ್ಲವೂ ಅರ್ಥಪೂರ್ಣ; ಯಾವುದೂ ವ್ಯರ್ಥವಲ್ಲ “

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಪ್ರಪಂಚವನ್ನು ಪರಮಾತ್ಮನ ಲೀಲೆ ಎಂಬಂತೆ ಕಂಡವರು.ಜೀವನದಲ್ಲಿ ಎಲ್ಲದಕ್ಕೂ ಅರ್ಥವಿದೆ,ಮಹತ್ವವಿದೆ; ಪ್ರಪಂಚದಲ್ಲಿ ಯಾವುದೂ ವ್ಯರ್ಥವಲ್ಲ,ಎಲ್ಲದಕ್ಕೂ ಅದರದ್ದೇ ಆದ ಉದ್ದೇಶವಿದೆ ಎನ್ನುತ್ತಿದ್ದರು. ಪ್ರಪಂಚವನ್ನು ಕುರಿತ ಗುರುದೇವನ ನಿಲುವು -” ಜೀವನದಲ್ಲಿ ಯಾವುದೂ ವ್ಯರ್ಥವಲ್ಲ,ಯಾವುದೂ ಉದ್ದೇಶರಹಿತವಾಗಿಲ್ಲ.ಯಾಕೆಂದರೆ ಪ್ರತಿಯೊಂದು ಕ್ಷಣವೂ ಪರಮಾನಂದದ ಪರಮುಕ್ತಿಯ ಸ್ವರೂಪವನ್ನು ವ್ಯಕ್ತಗೊಳಿಸುವುದು”

ಪ್ರಪಂಚವನ್ನು ನಾವು ಈ ಔನ್ನತ್ಯಭಾವದಿಂದ ನೋಡಬೇಕು,ಜೀವನವನ್ನು ಪರಮಾತ್ಮನ ಪ್ರಸಾದವೆಂಬಂತೆ ಆನಂದಿಸಬೇಕು.ಈ ಜೀವನವೇ ದಿವ್ಯಜೀವನವಾಗಿ ಮಾರ್ಪಡಬೇಕು.ಪ್ರಪಂಚದಲ್ಲಿ ಯಾವುದೂ ವ್ಯರ್ಥವಲ್ಲ,ನಿಷ್ಪ್ರಯೋಜಕವಲ್ಲ.ಪ್ರತಿ ವಸ್ತುವಿಗೆ ಅದರದ್ದೇ ಆದ ಮೌಲ್ಯವಿದೆ,ಪ್ರತಿ ಘಟನೆಯ ಹಿಂದೆ ಪರಮಾತ್ಮನ ಸಂಕಲ್ಪವಿದೆ.ನಮ್ಮ ಜೀವನದಲ್ಲಿ ಬಂದೊದಗುವ ಸಂಕಷ್ಟ,ಸವಾಲುಗಳು ನಮ್ಮನ್ನು ಗಟ್ಟಿಗೊಳಿಸಲು ಬರುತ್ತವೆ.ನಮ್ಮ ಪರೋಪಕಾರಗುಣದ ಫಲವಾಗಿ ಒಳಿತು,ಉತ್ತಮಿಕೆಯು ನಮಗೊದಗುತ್ತದೆ.ಜೀವನದಲ್ಲಿ ನಡೆಯುವ ಘಟನೆಗಳು ಕೆಟ್ಟವಲ್ಲ,ಮುಂದೊದಗಲಿರುವ ಒಳ್ಳೆಯ ದಿನಗಳಿಗಾಗಿ ಕೆಟ್ಟದ್ದನ್ನು ಎದುರಿಸಬೇಕಾಗಬಹುದು.

ನಾನೊಂದು ಸಾರಿ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರನ್ನು ಕೇಳಿದ್ದೆ ‘ ಗುರುಗಳೆ, ಜಗತ್ತಿನಲ್ಲಿ ಅನಿಷ್ಟ ಏಕಿದೆ? ‘ಅದಕ್ಕೆ ಪೂಜ್ಯಗುರುದೇವರು ಬಹಳ ಅರ್ಥವತ್ತಾದ ಉತ್ತರ ನೀಡಿದ್ದರು ‘ ಮಗು,ಅನಿಷ್ಟದ ಒಡಲಲ್ಲೇ ಇಷ್ಟದ ಬೆಳಕು ಮೂಡುತ್ತದೆ.ಅನಿಷ್ಟವೂ ಸೃಷ್ಟಿಯ ಒಂದಂಗ.ಅನಿಷ್ಟದಿಂದ ಇಷ್ಟವು ಉಂಟಾಗುತ್ತದೆ.ಕೆಡುಕಿನ ಬುಡದಲ್ಲಿಯೇ ಒಳಿತಿನ ಹೂಬುಟ್ಟಿ ಇದೆ.ಕತ್ತಲೆಹರಿದು ಬೆಳಕು ಮೂಡುವಂತೆ ಜೀವನದಲ್ಲಿ ದುಃಖ ಕಳೆದು ಸುಖ ಉಂಟಾಗುತ್ತದೆ,ಅನಿಷ್ಟವು ಅಳಿದು ಇಷ್ಟವು ಕೈಗೂಡುತ್ತದೆ,ಆತಂಕವಳಿದು ಪರಮನಶಾಂತಿ ಕಂಗೊಳಿಸುತ್ತದೆ,ಭೀತಿಯಳಿದು ಪ್ರೀತಿ ಮೂಡುತ್ತದೆ.ಬಾಳಿನಲ್ಲಿ ಬಂದೆರಗುವ ದುಃಖಕ್ಕೆ ಕೊರಗಬಾರದು,ಮುಂದೆ ಸುಖದ ದಿನಗಳು ಕಾದಿವೆ ಎಂದು ಆಶಾವಾದಿಗಳಾಗಿರಬೇಕು.ಸೋತಾಗ ಭಯ- ಭೀತರಾಗಬಾರದು,ಮುಂದೆ ಗೆಲುವು ನನ್ನದೇ ಎನ್ನುವ ಆತ್ಮವಿಶ್ವಾಸ ಹೊಂದಿರಬೇಕು.ಆತ್ಮವಿಶ್ವಾಸದಿಂದ ಕಾಯುವವನು ಗೆಲ್ಲುತ್ತಾನೆ,ಬಾಳಿನ ಸಾರ್ಥಕ್ಯವನ್ನು ಅನುಭವಿಸುತ್ತಾನೆ’

ಗುರುದೇವನ ಈ ಉಪದೇಶಾಮೃತವು ನನ್ನ ಬದುಕಿನ ಗತಿಯನ್ನೇ ಬದಲಿಸಿತು.ಜಗತ್ತನ್ನು ಅದುವರೆಗೆ ನಾನು ನೋಡುತ್ತಿದ್ದ ನನ್ನ ದೃಷ್ಟಿ ಬದಲಾಯಿತು.ನನ್ನ ಬದುಕು ಸೇರಿದಂತೆ ವಿಶ್ವದ ಮಾನವರ ಜೀವನದ ಆಗು ಹೋಗುಗಳು ಮತ್ತು ವಿಶ್ವದಲ್ಲಿ ಸಂಭವಿಸುತ್ತಿರುವ ಘಟನೆಗಳ ಹಿಂದೊಂದು ಕಾರಣವಿದೆ,ಒಂದು ಉದ್ದೇಶವಿದೆ ಎಂದು ಮನವರಿಕೆಯಾಯಿತು.ಜಗತ್ತಿನಲ್ಲಿ ಯಾರೂ ನಿಷ್ಪ್ರಯೋಜಕರಲ್ಲ; ಎಲ್ಲರ ಬದುಕಿಗೂ ಒಂದು ಅರ್ಥವಿದೆ,ಮಹತ್ತು ಇದೆ.ಜಗತ್ತಿನಲ್ಲಿ ಯಾವುದೂ ನಿರುಪಯುಕ್ತವಲ್ಲ; ಕಲ್ಲು,ಮಣ್ಣುಗಳಿಗೂ ಸಹ ಅರ್ಥವಿದೆ ಸೃಷ್ಟಿಯಲ್ಲಿ.ಜಗತ್ತಿನಲ್ಲಿ ಒಬ್ಬರು ಮತ್ತೊಬ್ಬರಿಗೆ ಆಸರೆಯಾದರೆ ಒಂದು ಮತ್ತೊಂದಕ್ಕೆ ಪೂರಕವಾಗಿದೆ.ಸಹಯೋಗವು ವಿಶ್ವನಿಯಮವಾಗಿದ್ದು ಸಹಜೀವನ,ಶಾಂತಿಯುತ ಸಹಬಾಳ್ವೆ,ಸಂಘರ್ಷರಹಿತ ವಿಶ್ವಜೀವನ ನಡೆಸಬೇಕಾದ ಅನಿವಾರ್ಯತೆ ಇದೆ.

About The Author