ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೯::ದೇವರಾಜ್ಯವು ಇಲ್ಲಿಂದಾಚೆಗಿಲ್ಲ,ಅದು ಇಲ್ಲಿಯೇ ಇದೆ–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೯

ದೇವರಾಜ್ಯವು ಇಲ್ಲಿಂದಾಚೆಗಿಲ್ಲ,ಅದು ಇಲ್ಲಿಯೇ ಇದೆ”

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ಮರ್ತ್ಯದಲ್ಲಿಯೇ ಕೈಲಾಸವನ್ನು ಕಂಡವರು,ಈ ಲೋಕವೇ ನಾಕಲೋಕವೆಂದು ಬಗೆದವರು ಮಾತ್ರವಲ್ಲ ,ಈ ಭುವಿಯೇ ಭಗವಂತನ ದಿವ್ಯಲೋಕ ಎಂದು ಸಾರಿದವರು.ಈ ಲೋಕದಾಚೆ ಹುಡುಕಿದರೆ ಸಿಗನು; ಇಲ್ಲಿಯೇ ಪಡೆಯಬೇಕು ದೇವರನ್ನು,ಪರಮಾತ್ಮನನ್ನು ಎನ್ನುತ್ತಿದ್ದರು.” ದೇವರಾಜ್ಯವು ಇಲ್ಲಿಂದಾಚೆಗಿಲ್ಲ,ಅದು ಇಲ್ಲಿಯೇ ಇದೆ” ಎನ್ನುವುದು ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳ ಪ್ರಸಿದ್ಧ ಉಪನ್ಯಾಸಗಳಲ್ಲೊಂದು,ಉಪದೇಶಗಳಲ್ಲೊಂದು.ಕ್ರಿಶ್ಚಿಯನ್ ಧರ್ಮಗುರು ಜಾನ್ ಪೋಪ್ ಪಾಲರ ಆಹ್ವಾನದ ಮೇರೆಗೆ ವ್ಯಾಟಿಕನ್ ಸಿಟಿಗೆ ಭಾರತದ ಆಧ್ಯಾತ್ಮಿಕ ಅತಿಥಿಯಾಗಿ ತೆರಳಿ” ದೇವರಾಜ್ಯವು ಇಲ್ಲಿಯೇ ಇದೆ,ಇಲ್ಲಿಂದಾಚೆಗಿಲ್ಲ” ಎನ್ನುವ ವಿಷಯದ ಕುರಿತು ಇಂಗ್ಲಿಷಿನಲ್ಲಿ ಅಮೋಘ ಪ್ರವಚನ ನೀಡಿ,ಕ್ರೈಸ್ತಧರ್ಮಿಯರ ಮನಗಳನ್ನು ಸೂರೆಗೊಂಡಿದ್ದರು.

ಹಿಂದೂಗಳು,ಮುಸ್ಲಿಮರು ಮತ್ತು ಕ್ರೈಸ್ತರು ಸೇರಿದಂತೆ ಎಲ್ಲ ಮತಧರ್ಮಗಳವರು ಸ್ವರ್ಗ ಇಲ್ಲವೆ ದೇವನ ಲೋಕವು ಈ ಲೋಕದ ಆಚೆಗೆ ಬಹುದೂರ ಎಲ್ಲಿಯೋ ಇದೆ; ಜೀವಿಗಳು ಸತ್ತಬಳಿಕ ಪುಣ್ಯದಿಂದ ದೇವನ ಆ ಲೋಕವನ್ನು ಸೇರಬಹುದು ಎಂದು ನಂಬಿದ್ದಾರೆ.ಆದರೆ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಗಳವರು ದೇವರು ನಮ್ಮನ್ನು ಬಿಟ್ಟು ಬಹುದೂರದ ಯಾವುದೋ ಲೋಕದಲ್ಲಿ ಇಲ್ಲ,ಇಲ್ಲಿಯೇ ನಮ್ಮ ಈ ಮರ್ತ್ಯಲೋಕದಲ್ಲಿಯೇ ಇದ್ದಾನೆ ಎಂದು ಸಾರಿ ಸಾರಿ ಹೇಳಿದರು.ಬಸವಣ್ಣನವರು

“ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು ಅಲ್ಲಿ ಸಲ್ಲುವರಯ್ಯ
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ಕೂಡಲಸಂಗಮದೇವಾ”

ಎಂದು ಹಾಡಿ ಮರ್ತ್ಯಲೋಕಕ್ಕೆ ದಿವ್ಯಲೋಕದ ಮಹತಿಯನ್ನು ತಂದಿತ್ತರು.ಅದರ ಒಂದು ಹೆಜ್ಜೆ ಮುಂದೆ ಹೋಗಿ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ‘ ಈ ಲೋಕವೇ ದಿವ್ಯಲೋಕ’ ಎಂದು ಸಾರಿದರು.

‌ದೇವರನ್ನು ಅಥವಾ ಪರಮಾತ್ಮನನ್ನು ಸತ್ತಮೇಲೆ ಪಡೆಯುವುದಲ್ಲ,ಬದುಕಿದ್ದಾಗಲೇ ಕಾಣಬೇಕು ಅವನನ್ನು.ಸತ್ತಮೇಲೆ ಸಿಗುವ ಸ್ವರ್ಗ ಇಲ್ಲವೆ ಪರಮಾತ್ಮನ ಲೋಕದ ಹೆಸರಿನಲ್ಲಿ ಇಲ್ಲಿ ವ್ಯರ್ಥ ಉಪವಾಸದಿಂದ ಬಳಲಿ,ದೇಹ ದಂಡಿಸುವುದು ಬೇಡ.ನಮ್ಮಿಂದ ದೇವರು ಬಹುದೂರ ಎಲ್ಲಿಯೋ ಇದ್ದಾನೆ ಎಂದು ಭ್ರಮಿಸಿ ಅವನ ಪ್ರೀತ್ಯರ್ಥ ಬಗೆಬಗೆಯ ಪೂಜೆ- ಸೇವೆಗಳನ್ನು ಕೈಗೊಳ್ಳಬೇಕಿಲ್ಲ.ಸತ್ತಮೇಲೆ ಸ್ವರ್ಗಪ್ರಾಪ್ತಿ ಎಂದು ಆ ಈ ಅನುಷ್ಠಾನ,ವ್ರತಾದಿಗಳನ್ನು ಕೈಗೊಳ್ಳಬೇಕಿಲ್ಲ.ದೇವರು ಇಲ್ಲಿಯೇ ಇದ್ದಾನೆ,ನಮ್ಮೊಂದಿಗೇ ಇದ್ದಾನೆ.ದೇವನ ರಾಜ್ಯವು ಇಲ್ಲಿಯೇ ಇದೆ,ಈ ಲೋಕದ ಆಚೆ ಬೇರೆ ಎಲ್ಲಿಯೂ ಇಲ್ಲ.ಇಲ್ಲಿಯೇ ಇರುವ ದೇವರನ್ನು ಕಾಣಲರಿಯದ ನಾವು ದೇವನು ನಮ್ಮಿಂದ ಬಹುದೂರದ ಯಾವುದೋ ಲೋಕದಲ್ಲಿ ಇಹನೆಂದು ಭ್ರಮಿಸಿ,ಅವನಿಗೋಸ್ಕರ ನಾನಾ ಕಸರತ್ತುಗಳನ್ನು ಮಾಡುತ್ತೇವೆ.ಸತ್ತಮೇಲೆ ಪಡೆಯುವ ದೇವರಿಗಿಂತ ಇದ್ದಲ್ಲಿಯೇ ದೇವರನ್ನು ಕಾಣಲಾಗದೆ ?

ದೇವರನ್ನು ದೂರದ ಲೋಕದಲ್ಲಿ ಅರಸಿ,ಬಳಲುವುದಕ್ಕಿಂತ ಇಲ್ಲಿಯೇ ನಮ್ಮೊಂದಿಗೆ ಬದುಕುತ್ತಿರುವ ಜೀವರುಗಳ ಎದೆಗಳಲ್ಲಿ ದೇವರಿದ್ದಾನೆ ಎಂದು ತಿಳಿಯುವುದೇ ಪರಮಾರ್ಥವು.ಎಲ್ಲ ಜೀವರುಗಳಲ್ಲಿ ಶಿವನಿದ್ದಾನೆ ಎನ್ನುವ ವಿವೇಕೋದಯವು ಆದೊಡನೆ ಸತ್ತಮೇಲೆ ಸಿಗುವ ಕೈಲಾಸದ ಆಸೆ ಇಂಗುತ್ತದೆ.ಮನುಷ್ಯರಲ್ಲಿಯೇ ಮಹಾದೇವನಿದ್ದಾನೆ ಎಂದು ತಿಳಿದು ಪರಸ್ಪರರನ್ನು ಪ್ರೀತಿಸಬೇಕು,ಸಹಾಯ- ಸಹಕಾರ ನೀಡಬೇಕು.ಕಷ್ಟದಲ್ಲಿ ಇದ್ದವರ ನೆರವಿಗೆ ಆಗಬೇಕು.ಒಬ್ಬ ಮನುಷ್ಯ ಕಷ್ಟದಲ್ಲಿ ಇದ್ದಾಗ ಅವನನ್ನು ನೋಡಿಯೂ ನೋಡದಂತೆ ನಡೆದು ದೇವರಿಗೆ ಷೋಡೋಶೋಪಚಾರ ಪೂಜೆ,ಪಂಚಕಜ್ಜಾಯಗಳನ್ನಿತ್ತರೇನು ಫಲ? ನೊಂದವರ ಕಣ್ಣೀರು ಒರೆಸದೆ ದೇವರಿಗೆ ಪಂಚಾಮೃತ ಅಭಿಷೇಕ ಮಾಡಿ ಏನು ಫಲ? ದುಃಖಿತರ ಬವಣೆಯನ್ನು ಪರಿಹರಿಸದೆ ತೀರ್ಥಕ್ಷೇತ್ರಗಳನ್ನು ಸುತ್ತಿದರೆ ಪ್ರಯೋಜನವೇನು ? ಬಡವರನ್ನು ಸುಲಿಯುತ್ತ,ಬಡವರ ಬದುಕನ್ನು ನರಕಸದೃಶ ಮಾಡಿ,ನೂರಾರು ಕೋಟಿಗಳ ದೇವಸ್ಥಾನ ಕಟ್ಟಿಸಿದರೆ,ದೇವರಿಗೆ ಬಂಗಾರ- ವಜ್ರಗಳ ಕಿರೀಟಗಳನ್ನು ತೊಡಿಸಿದರೆ ಮುಡಿದು ಸಂತೃಪ್ತನಾಗುವನೇನು ದೇವರು? ಇಂತಹ ವ್ಯರ್ಥ ಆಡಂಬರಗಳ ಬದಲು ಉಳ್ಳವರು ಇಲ್ಲದವರ ಬಾಳಿಗೆ ಆಸರೆ ಆಗಬೇಕು.ದೀನ ದುರ್ಬಲರು ಬಾಳು ಕಟ್ಟಿಕೊಳ್ಳಲು ನೆರವಾಗುವುದೇ ಮಹಾಪೂಜೆ.ಗುಡಿ ಗುಂಡಾರಗಳಲ್ಲಿ ದೇವರನ್ನು ಹುಡುಕುವ ಬದಲು ಬಡವರ ಗುಡಿಸಲುಗಳಲ್ಲಿ ದೇವರನ್ನು ಕಾಣಬೇಕು.ತೀರ್ಥ ಕ್ಷೇತ್ರಗಳಲ್ಲಿ ದೇವರಿಹನೆಂದು ಭ್ರಮಿಸಿ ಬಳಲದೆ ದಲಿತರು,ಶೋಷಿತರ ಎಡೆಗಳಲ್ಲಿಯೇ ದೇವರು ಇದ್ದಾನೆ ಎಂದು ತಿಳಿದು ತೀರ್ಥ ಕ್ಷೇತ್ರಗಳನ್ನು ಸುತ್ತುವ ಬದಲು ದಲಿತರ ಓಣಿ,ಬಡಾವಣೆಗಳಲ್ಲಿ ಸುತ್ತಿ ಅವರ ಬದುಕನ್ನು ಉತ್ತಮಪಡಿಸಲು ಪ್ರಯತ್ನಿಸಬೇಕು.ಅನಾಥರು,ವೃದ್ಧರ ಸೇವೆಯಲ್ಲಿ ಸನಾತನ ಧರ್ಮದ ರಹಸ್ಯವಿದೆ,ಆರ್ತರ ಮೊರೆಗೆ ಕರಗಿ ನೆರವಾಗುವುದರಲ್ಲಿಯೇ ಸತ್ಯಶಿವನ ಸಾಕ್ಷಾತ್ಕಾರದ ರಹಸ್ಯವಿದೆ ಎಂದರಿಯಬೇಕು.ನಮ್ಮ ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಹೊಂದುವುದೇ ಯೋಗ.ಊರು- ಕೇರಿಗಳ ಜನರೊಳು ಒಂದಾಗಿ ಬೆರೆಯುವುದೇ ಯಜ್ಞ.ಮನುಷ್ಯರನ್ನು ಕಡೆಗಣಿಸಿ ಮಹಾದೇವನನ್ನು ಪಡೆಯುತ್ತೇನೆ ಎನ್ನುವುದು ಭ್ರಮೆ.ನರರಲ್ಲಿಯೇ ಕಾಣಬೇಕು ಹರನನ್ನು.ಪ್ರತಿಜೀವಿಯಲ್ಲಿ ಪರಮಾತ್ಮನಿದ್ದಾನೆ ಎಂದು ಅರಿತು,ಆಚರಿಸಿದರೆ ಈ ಲೋಕವೇ ದಿವ್ಯಲೋಕವಾಗದೇನು ? ಮನುಷ್ಯರನ್ನು ಪ್ರೀತಿಸುತ್ತ,ಪ್ರಾಣಿ ಪಕ್ಷಿಗಳ ಬದುಕುವ ಹಕ್ಕನ್ನು ಗೌರವಿಸುತ್ತ,ಪ್ರಕೃತಿಯಲ್ಲಿ ಪರಮಾತ್ಮನ ರಹಸ್ಯವನ್ನು ಕಂಡರೆ ಈ ಲೋಕವೇ ದಿವ್ಯಲೋಕವಾಗುತ್ತದೆ,ನಂದನವನವಾಗುತ್ತದೆ.ಆನಂದದ ಆಗರವಾಗುತ್ತದೆ.

‌09.06.2022

About The Author