ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೮–ಜೀವ ಪ್ರಪಂಚವು ಶಿವ ಪ್ರಪಂಚವಾಗಬೇಕು–ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೮

” ಜೀವ ಪ್ರಪಂಚವು ಶಿವ ಪ್ರಪಂಚವಾಗಬೇಕು”

ಮುಕ್ಕಣ್ಣ ಕರಿಗಾರ

‘ ಲೋಕಕಲ್ಯಾಣವೇ ನನ್ನ ಜೀವಿತೋದ್ದೇಶ’ ಎನ್ನುತ್ತಿದ್ದ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರು ತಮ್ಮ ಜೀವನವನ್ನು ಲೋಕಕಲ್ಯಾಣಕ್ಕಾಗಿಯೇ ಮೀಸಲಿರಿಸಿದ ಅಪರೂಪದ ಯೋಗಿಗಳು,ಭಾರತಾಂಬೆಯ ಹೆಮ್ಮೆಯ ಸತ್ಪುತ್ರರು,ವಿಶ್ವ ಕಂಡ ಅತ್ಯಪರೂಪದ ಲೋಕಕಲ್ಯಾಣ ಚಿಂತಕರಲ್ಲೊಬ್ಬರು.ತಮ್ಮ ಯೌಗಿಕ ಜೀವನದ ಉದ್ದೇಶವನ್ನು ಅವರೊಮ್ಮೆ ಹೀಗೆ ಹೇಳಿದ್ದರು–“ಜೀವ ಪ್ರಪಂಚವು ಶಿವಪ್ರಪಂಚವಾಗಬೇಕೆಂಬುದೇ ಜೀವನದ ಆತ್ಯಂತಿಕ ಗುರಿಯಾಗಿದೆ”.

ಗುರುದೇವ ಶ್ರೀಕುಮಾರಸ್ವಾಮಿಗಳವರು ನನಗೆ ಹಲವು ಬಾರಿ ಹೇಳಿದ ಮಾತು ” ಯೋಗಿಯ ಜೀವನದ ಉದ್ದೇಶ ಅವನಿಗಾಗಿ ಮಾತ್ರ ಬಾಳದೆ ಲೋಕಕಲ್ಯಾಣಕ್ಕೆ ಬಾಳುವುದು.ಯೋಗಸಾಧನೆಯ ಬಲದಿಂದ ಪ್ರಪಂಚವನ್ನು ಪರಿವರ್ತಿಸಬೇಕು.ಪ್ರಪಂಚವನ್ನು ಇದ್ದಂತೆ ನೋಡಿ,ಇದ್ದಂತೆ ಅನುಭವಿಸುವುದು ಅಜ್ಞರ ಲಕ್ಷಣವಾದರೆ ಯೋಗಿಯು ಪ್ರಪಂಚವನ್ನು ಮಾರ್ಪಡಿಸಬೇಕು,ಅದರಲ್ಲಿನ ಕಂದು- ಕುಂದುಗಳನ್ನು ತೆಗೆದು ನೇರ್ಪುಗೊಳಿಸಬೇಕು.ತನ್ನ ಯೋಗಸಿದ್ಧಿಯನ್ನು ವಿನಿಯೋಗಿಸಿಯಾದರೂ ಯೋಗಿಯು ಲೋಕಕಲ್ಯಾಣವನ್ನು ಸಾಧಿಸಬೇಕು”.ಹೀಗೆ ಹೇಳುತ್ತಿದ್ದುದು ಮಾತ್ರವಲ್ಲದೆ ಅದರಂತೆ ಬಾಳಿ,ಬದುಕಿದ್ದ ಅಪರೂಪದ ಸಂತರವರು.ಪ್ರತಿದಿನದ ಹದಿನಾರು ತಾಸುಗಳ ಯೋಗ ಸಾಧನೆಯಲ್ಲಿ ಮೂರು ತಾಸಿನ ಆಧ್ಯಾತ್ಮಿಕ ಸಾಧನೆಯನ್ನು ಭಾರತಾಂಬೆಯ ಸೇವೆಗಾಗಿ ವಿನಿಯೋಗಿಸುತ್ತಿದ್ದರು.ಇದು ಯೋಗಿಗಳಿಗೆ ಆದರ್ಶಪಥ.

ಯೋಗಿಗಳಾದವರು ಭೋಗಪ್ರಪಂಚನ್ನು ತ್ಯಾಗ ಪ್ರಪಂಚವನ್ನಾಗಿಸಿ,ಆನಂದವನವನ್ನಾಗಿಸಬೇಕು.ಪ್ರಪಂಚದಲ್ಲಿ ದುಃಖವಿದೆ,ದುರಂತವಿದೆ,ಅನಿಷ್ಟವಿದೆ,ಆಪತ್ತು ಇದೆ.ಜೀವರುಗಳು ದುಃಖ,ನಿರಾಶೆಯಿಂದ ಬಳಲುತ್ತಿದ್ದಾರೆ.ಯೋಗಿಯು ತನ್ನ ಯೋಗಬಲದಿಂದ ಆರ್ತರ ಸಂಕಟಪರಿಹರಿಸಬೇಕು,ದೀನ ದುರ್ಬಲರ ಬದುಕುಗಳಲ್ಲಿ ಚೈತನ್ಯ ತುಂಬಬೇಕು.ಯೋಗಶಕ್ತಿಯಿಂದ ಇದು ಸಾಧ್ಯವಾಗುವುದರಿಂದ ಯೋಗಿಯು ಲೋಕಕಲ್ಯಾಣದ ಇಂತಹ ಸತ್ಕಾರ್ಯದಲ್ಲಿ ತನ್ನ ಶಕ್ತಿ- ಸಾಮರ್ಥ್ಯಗಳನ್ನು ವ್ಯಯಿಸಬೇಕು.ಅದನ್ನು ಬಿಟ್ಟು ಪವಾಡಪ್ರದರ್ಶನಕ್ಕಾಗಿ ವ್ಯರ್ಥ ಶಕ್ತಿಯನ್ನು ಹಾಳು ಮಾಡಿಕೊಳ್ಳುವುದು ನಿಜವಾದ ಯೋಗಿಯ ಲಕ್ಷಣವಲ್ಲ.ನಿಜವಾದ ಯೋಗಿಯು ತನ್ನಾತ್ಮಬಲಸಿದ್ಧಿಯಿಂದ ಲೋಕದ ಜನರ ಶೋಕನಿವಾರಿಸಬೇಕು,ಸಂಕಷ್ಟಕ್ಕೆ ಈಡಾದವರ ಬಾಳುಗಳಿಗೆ ಭರವಸೆ ತುಂಬಬೇಕು.

ಪ್ರಪಂಚವು ಪರಮಾತ್ಮನಿಂದ ದೂರವಾದ ಕಾರಣ ದುಃಖವನ್ನು ಅನುಭವಿಸುತ್ತಿದೆ.ದುಃಖಕ್ಕೆ ಈಡಾದ ಪ್ರಪಂಚವನ್ನು ಶಿವಯೋಗದ ಬಲದಿಂದ ಆನಂದವನವನ್ನಾಗಿ ಪರಿವರ್ತಿಸಬೇಕು.ಅಜ್ಞಾನ ಮತ್ತು ಅಪನಂಬಿಕೆಗಳಿಂದ ಜೀವರುಗಳು ದುಃಖಪಡುತ್ತಿದ್ದಾರೆ.ನಾನು ಜೀವನು ಎನ್ನುವುದು ಅಜ್ಞಾನವಾದರೆ ತನ್ನಲ್ಲಿ ಮತ್ತು ಪರಮಾತ್ಮನಲ್ಲಿ ನಂಬಿಕೆ ಇಲ್ಲದೆ ಇರುವುದು ಭಯ- ಆತಂಕಗಳ ಕಾರಣವಾಗಿದೆ.ಶಿವನಿಂದ ಹೊರಹೊಮ್ಮಿದ ನಾನು ಜೀವನು ಮಾತ್ರವಲ್ಲ,ನಾನು ಶಿವನೇ ಎಂದು ತಿಳಿಯಬೇಕು.ಜಗತ್ತಿನ ಜನರೆಲ್ಲರಲ್ಲಿಯೂ ” ನಾವು ಶಿವನ ಅಂಶಿಕರು,ಶಿವನ ವಂಶಿಕರು” ಎನ್ನುವ ಭಾವ ಬಲಿತದ್ದಾದರೆ ಜಗತ್ತಿನಲ್ಲಿ ದುಃಖವೇ ಇರುವುದಿಲ್ಲ.ತಾನು ಶಿವನಿಂದ ಭಿನ್ನನ್ನು ಎನ್ನುವ ಭ್ರಮೆಗೀಡಾಗಿ ಜೀವನು ಬಳಲುತ್ತಿದ್ದಾನೆ.ತನ್ನಲ್ಲಿ ನಂಬಿಕೆ ಇಲ್ಲದ್ದರಿಂದ ಅಲ್ಲಿ ,ಇಲ್ಲಿ, ಆ ದೇವರು- ಈ ಕ್ಷೇತ್ರ ಎಂದು ಸುತ್ತಿ ಬಳಲುತ್ತಿದ್ದಾನೆ.ದೇಹವೇ ದಿವ್ಯದೇವಾಲಯವಾದ ಬಳಿಕ ಮತ್ತೊಬ್ಬ ದೇವರ ಬಳಿ ಹೋಗಬೇಕೆ ? ಕಾಯವೇ ಕೈಲಾಸವಾದ ಬಳಿಕ ತೀರ್ಥ- ಕ್ಷೇತ್ರಗಳೆಂದು ಸುತ್ತಬೇಕೆ? ಯೋಗಿಯು ತನಗೆ ಅಳವಟ್ಟ ಈ ಶಿವಯೋಗವನ್ನು ಜನರಿಗೆ ಉಪದೇಶಿಸಿ,ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕು.ದೇವರು,ಧರ್ಮಗಳ ಹೆಸರಿನಲ್ಲಿ ಜನರಲ್ಲಿ ಬೇರೂರಿರುವ ಮೌಢ್ಯ,ಕಂದಾಚಾರಗಳಿಂದ ಅವರನ್ನು ಮುಕ್ತರನ್ನಾಗಿಸಬೇಕು.ಅಂಧಶ್ರದ್ಧೆಯುಳ್ಳವರಲ್ಲಿ ಶಿವಜ್ಯೋತಿಯನ್ನು ಬೆಳಗಿಸಬೇಕು.ದುಃಖಿತರಿಗೆ ಶಿವಕಾರುಣ್ಯದ ಅಭಯ ನೀಡಬೇಕು.ಜೀವರುಗಳೆಲ್ಲರಲ್ಲಿಯೂ ಶಿವನ ಚೈತನ್ಯ ಇರುವುದನ್ನು ಸಾರಿ,ಸಾಧಿಸಿ ತೋರಬೇಕು.ಭವಿಗಳನ್ನು ಶಿವಕಾಯರುಗಳನ್ನಾಗಿ ಪರಿವರ್ತಿಸಬೇಕು.ಬಂಧನಕ್ಕೆ ಸಿಲುಕಿದವರನ್ನು ಭವಮುಕ್ತರನ್ನಾಗಿಸಬೇಕು.ಈ ಭವ ಪ್ರಪಂಚವನ್ನೇ ಶಿವಪ್ರಪಂಚವನ್ನಾಗಿಸಬೇಕು.ಇಂತಹ ಮಹೋನ್ನತ ಧ್ಯೇಯಾದರ್ಶದೊಂದಿಗೆ ದುಡಿಯುತ್ತಿರುವ ಯೋಗಿಗಳೇ ಜಗದಾರಾಧ್ಯರು,ವಿಶ್ವಗುರುಗಳು,ವಿಶ್ವೇಶ್ವರ ಶಿವನ ಅಣುಗರು.

About The Author