ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೫–ಜೀವಭಾವವಳಿದರೆ ಜೀವನೇ ದೇವನು:ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು –೧೫

ಜೀವಭಾವವಳಿದರೆ ಜೀವನೇ ದೇವನು “

ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ನರಜನ್ಮವು ಹರನ ಕರುಣಾವಿಶೇಷವು,ನರರಲ್ಲಿ ಹರನ ಅಂಶವಿದೆ,ನರರು ಹರನಾಮಸ್ಮರಣೆಯಿಂದ,ಹರನ ಧ್ಯಾನ- ಸಾಧನೆಗಳಿಂದ ಹರಸ್ವರೂಪರಾಗಬಲ್ಲರು ಎನ್ನುತ್ತಿದ್ದರು.ನರನು ಹರನಾಗಲು ಇರುವ ತೊಡಕಾವುದೆಂಬುದನ್ನು ಆರೈದು,ಪರಿಹರಿಸಿಕೊಂಡು ನಡೆದರೆ ನರನೇ ಹರನಾಗುವನು,ಜೀವನೇ ದೇವನಾಗುವನು ಎನ್ನುತ್ತಿದ್ದರು.ನರಜನ್ಮವನ್ನು ಹರಜನ್ಮ ಮಾಡಿಕೊಳ್ಳಬೇಕು ಎನ್ನುತ್ತಿದ್ದ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶವಿದು –“ಜೀವನೂ ರಸಮಯನು,ದೇವನೂ ರಸಮಯನು.ಜೀವ ದೇವರಲ್ಲಿ ಭಾವವೊಂದು ಅಡ್ಡವಾಗಿದೆ.ಜೀವಭಾವವು ಅಳಿದರೆ ಜೀವನೇ ದೇವನಾಗುವನು.ಜೀವ ದೇವರ ಬೆಸುಗೆಯಲ್ಲಿ ಸಮರಸವುಂಟಾಗುವುದು”.

ಮನುಷ್ಯ ಜೀವನವು ರಸಮಯವಾದುದು.ವಿವಿಧ ರಸ- ರುಚಿಗಳ ಆಸ್ವಾದನೆಯ ಆನಂದವನ್ನನುಭವಿಸುತ್ತಾನೆ ಜೀವನು.ಮನುಷ್ಯರಂತೆಯೇ ದೇವನೂ ರಸಮಯನು ಎನ್ನುತ್ತಾರೆ ಗುರುದೇವ.ದೇವರು ರಸಮಯನು ಎಂದರೆ ಮನುಷ್ಯರಂತೆ ರಾಗ- ದ್ವೇಷಗಳಾದಿಗೆ ಕಾರಣವಾಗುವ ರಸಮಯನಲ್ಲ.ಶಿವನು ಕರುಣಾರಸಮಯನು,ಯೋಗರಸಮಯನು.ಮನುಷ್ಯರಲ್ಲಿ ದೇವರ ಅಂಶವಿದೆಯಾದರೂ ಮನುಷ್ಯರು ಅದನ್ನು ಅರ್ಥಮಾಡಿಕೊಳ್ಳುವುದಿಲ್ಲ.ಮನುಷ್ಯ ಮತ್ತು ಮಹಾದೇವನ ನಡುವೆ ಮಾಯೆಯೊಂದು ಅಡ್ಡವಾಗಿದೆ.ಈ ಮಾಯೆಯು ಜೀವರುಗಳನ್ನು ಶಿವನತ್ತ ಹೋಗದಂತೆ ತಡೆಯುತ್ತದೆ.ಮಾಯೆಯ ಪ್ರಭಾವದಿಂದ ಮನುಷ್ಯರಲ್ಲಿ ನಾನು ಜೀವನು ಮಾತ್ರ ಎನ್ನುವ ಭಾವನೆಯು ಆವರಿಸುವುದಲ್ಲದೆ ಮೋಹ, ಮದ- ಮಂದತ್ವಗಳು ಕವಿದು ಕಾಡುತ್ತವೆ.ತಾನು ಜೀವನು ಎನ್ನುವ ಭಾವನೆಯು ಬಲವಾಗುವುದರಿಂದ ಮನುಷ್ಯ ದೇವನ ಪಥದಿಂದ ದೂರವಾಗುತ್ತಾನೆ.ಭಾವವೇ ಬಂಧನದ ಕಾರಣವಾಗಿದೆ.ಬಂಧನಕ್ಕೆ ಕಾರಣವಾಗುವ ಜೀವಭಾವವನ್ನು ಹರಿದೊಗೆದು ಹರನ ಪಥದಿ ಮುನ್ನಡೆಯಬೇಕು.

ಜೀವಭಾವ ಅಳಿಯಬೇಕು,ದೇವಭಾವ ಮೊಳೆಯಬೇಕು ಎಂದರದು ಸುಲಭವಲ್ಲ.ಜೀವರುಗಳಲ್ಲಿ ದೇವಭಾವ ಮೊಳೆಯಲು ಶ್ರೀಗುರುವಿನ ಅನುಗ್ರಹ ಮುಖ್ಯವಾದುದು.ಶ್ರೀಗುರುವಿನ ಅನುಗ್ರಹದಿಂದ ಶಿಷ್ಯನು ತಾನು ದೇಹಿಯಲ್ಲ,ದೇವನು; ಜೀವನಲ್ಲ,ದೇವನು ಎಂಬುದನ್ನು ಅರಿತು ಅಂಗವಿಸಿಕೊಳ್ಳಬಲ್ಲನು.ಗುರುವಾನುಗ್ರಹದಿಂದ ಅಂಗವಿಸಿದ ದೇಹಭಾವದಲ್ಲಿ ಮುನ್ನಡೆದು ಸಾಧಿಸಿ ಲಿಂಗದೇಹಿಯಾಗುವನು,ಸರ್ವಾಂಗಲಿಂಗಿಯಾಗುವನು ಅಷ್ಟೇ ಅಲ್ಲ ತಾನೇ ಜಂಗಮನಾಗುವನು.” ಜಂಗಮ” ವು ಜಾತಿಸೂಚಕಪದವಲ್ಲ,ಸ್ಥಿತಿಸೂಚಕ ಪದ,ಸಿದ್ಧಿಸೂಚಕ ಪದ.ವೀರಶೈವರಲ್ಲಿ ಅಯ್ಯಗಳ ಜಾತಿಗೆ ಸೇರಿದವರು ತಮ್ಮನ್ನು ತಾವು ಜಂಗಮರು ಎಂದುಕೊಳ್ಳುತ್ತಾರೆ.ಬ್ರಾಹ್ಮಣ್ಯವು ಹೇಗೆ ಜಾತಿಯಲ್ಲವೋ ಹಾಗೆ ಜಂಗಮವೂ ಜಾತಿಯಲ್ಲ.ಹುಟ್ಟಿನಿಂದ ಯಾರೂ ಜಂಗಮರಲ್ಲ,ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲ.ಜಂಗಮ,ಬ್ರಾಹ್ಮಣತ್ವಗಳು ಆಧ್ಯಾತ್ಮಸಾಧನೆಯಿಂದ ಸಿದ್ಧಿಸಿ ಪಡೆದುಕೊಳ್ಳಬಹುದಾದ ತತ್ತ್ವಗಳು.ಮಾಯಾವಶರಾದ ಜೀವರುಗಳು ತಮ್ಮ ಹುಟ್ಟಿಗೆ ಕಟ್ಟುಬಿದ್ದು ನಾನು ಇಂಥ ಕುಲದವನು,ಇಂಥ ಗೋತ್ರವನು ಎಂದು ಭ್ರಮಿಸುತ್ತಾರೆ.ಈ ಭ್ರಮೆಯೇ ಜೀವಭಾವ.ಹುಟ್ಟು ಸಾವುಗಳ ಬಂಧನಕ್ಕೆ ಸಿಲುಕದ ಆತ್ಮನಿಗೆ ಕುಲಗೋತ್ರಗಳಿಲ್ಲ,ಸೂತಕ- ಪಾತಕಗಳಿಲ್ಲ.ಜೀವಭಾವ ಇರುವವರೆಗೆ ಪ್ರಪಂಚ ಭಾವ ಇರುತ್ತದೆ,ದ್ವಂದ್ವ- ದಂದುಗ ಇರುತ್ತದೆ.ಜೀವಭಾವವಳಿದು ಆತ್ಮಭಾವವು ಅಳವಟ್ಟಾಗ ದೇವಭಾವು ಮೊಳೆದು,ಬೆಳೆಯುತ್ತದೆ.

ಯೋಗಸಾಧನೆಯಿಂದ ಜೀವ ದೇವನ ಸಮಾಗಮವಾಗುತ್ತದೆ.ಸಾಧಕನು ಯೋಗಸಾಧನೆಯ ಬಲದಿಂದ ಮೇಲೆ ಏರಿದಂತೆ ಪರಶಿವನ ಶಕ್ತಿಯು ಕೆಳಗೆ ಇಳಿದು ಬರುತ್ತದೆ.ಮೂಲಾಧಾರ ಚಕ್ರದಲ್ಲಿ ಊರ್ಧ್ವಮುಖಿಯಾಗಿ ಮಲಗಿರುವ ಕುಂಡಲಿನಿ ಶಕ್ತಿಯನ್ನು ಜಾಗ್ರತಗೊಳಿಸಿಕೊಂಡು ಒಂದೊಂದಾಗಿ ಷಟ್ಚಕ್ರಗಳನ್ನು ದಾಟಿ ಏಳನೆಯಚಕ್ರ ಮತ್ತು ಮಹಾತತ್ತ್ವ,ಮಹಾದೇವನ ನೆಲೆಯಾದ ಸಹಸ್ರಾರಚಕ್ರದವರೆಗೆ ಕುಂಡಲಿನಿ ಶಕ್ತಿಯನ್ನು ಕರೆದೊಯ್ದು ಅಲ್ಲಿ ಶಿವ ಶಕ್ತಿಯರ ಸಮೈಕ್ಯವನ್ನು ಸಾಧಿಸುತ್ತಾನೆ ಯೋಗಿ.ಇದುವೇ ಶಿವಶಕ್ತಿಯ ಬೆಸುಗೆ,ಜೀವ ಶಿವರ ಸಮರಸ.ಮೂಲಾಧಾರದಿಂದೆದ್ದ ಕುಂಡಲಿನಿಶಕ್ತಿಯು ಸಹಸ್ರಾರದ ಸದಾಶಿವನೊಂದಿಗೆ ಒಂದಾಗುವುದೇ ಯೋಗಸಿದ್ಧಿ,ಸಾಕ್ಷಾತ್ಕಾರ,ತಾನೇ ಶಿವನೆಂಬ ಶಿವಾದ್ವೈತ ಸಿದ್ಧಿ.

About The Author