ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು -೦೫ – ” ಸಾಧನೆಯಲ್ಲಿ ಮಾತು ಮೌನವಾಗಬೇಕು; ರುಚಿ ಶುಚಿತ್ವದಲ್ಲಡಗಬೇಕು “-ಮುಕ್ಕಣ್ಣ ಕರಿಗಾರ

ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಮಹೋಪದೇಶಗಳು -೦೫

ಸಾಧನೆಯಲ್ಲಿ ಮಾತು ಮೌನವಾಗಬೇಕು;ರುಚಿ ಶುಚಿತ್ವದಲ್ಲಡಗಬೇಕು “-ಮುಕ್ಕಣ್ಣ ಕರಿಗಾರ

ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳು ಯೋಗಸಾಧಕರು ಲೌಕಿಕ ಪ್ರಪಂಚದ ದ್ವಂದ್ವ- ದಂದುಗ ಮುಕ್ತರಾಗಿರಬೇಕು ಎಂದು ಹೇಳುತ್ತಿದ್ದರು.ಸಾಧಕನು ಎಲ್ಲ ಬಗೆಯ ಮೋಹಮಮಕಾರಗಳಿಂದ ಮುಕ್ತನಾಗಿರಬೇಕು.ತನ್ನ ಮನದಿಚ್ಛೆಯನ್ನು ನಿಗ್ರಹಿಸಿಕೊಂಡು,ಕರಣೇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಸಾಧನೆಯಲ್ಲಿ ಮುಂದುವರೆಯಬೇಕು.ಸಾಧಕನಿಗೆ ಬಹುದೊಡ್ಡ ಶತ್ರು ಅವನ ಬಾಯಿ ಮತ್ತು ನಾಲಗೆ.ಅವರೆಡನ್ನೂ ನಿಗ್ರಹಿಸಿಕೊಂಡರೆ ಸಾಧಕನು ಯೋಗಸಾಧನೆಯಲ್ಲಿ ಸಿದ್ಧಿಸಂಪನನ್ನನಾಗಬಲ್ಲ ಎನ್ನುವ ಗುರುದೇವ ಮಹಾತಪಸ್ವಿ ಶ್ರೀಕುಮಾರಸ್ವಾಮಿಯವರ ಉಪದೇಶ ;

” ಸಾಧನೆಯಲ್ಲಿ ಮಾತು ಮೌನವಾಗಬೇಕು; ರುಚಿಯು ಶುಚಿತ್ವದಲ್ಲಡಗಬೇಕು”

‌ಮಾತು ಸಾಧಕರಿಗೆ ಸಲ್ಲದು.ಮಾತು,ಮಾತು ಬರಿಯ ಮಾತಿನಿಂದ ಏನನ್ನೂ ಸಾಧಿಸಲಾಗದು.ಯೋಗಸಾಧಕ ಮೌನಿಯಾಗಿರಬೇಕು,ಪ್ರಪಂಚದ ವರ್ತನೆಗೆ ಪ್ರತಿಕ್ರಿಯಿಸದೆ ತನ್ನ ಮನೋಮಂದಿರದಲ್ಲಿ ತಾನು ವಿಹರಿಸಬೇಕು.ಮಾತನ್ನಾಡುತ್ತಾ ಕುಳಿತರೆ ಬ್ರಹ್ಮಾನಂದವನ್ನು ಅನುಭವಿಸಲಾಗದು.ಮಾತು,ವಾದ- ತರ್ಕಗಳಿಂದ ಪರಮಾತ್ಮನ ದರ್ಶನ ಸಾಧ್ಯವಿಲ್ಲ.ವಾಚಾಳಿಗಳು ಬ್ರಹ್ಮವಿದರಾಗರು.

ಮಾತಿನಲ್ಲಿ ಎಲ್ಲವೂ ಇದೆ.’ ಮಾತಿನಿಂ ನಗೆನುಡಿಯು,ಮಾತಿನಿಂ ಹಗೆ ನುಡಿಯು’. ಮಾತಿನಿಂದ ಎಲ್ಲರನ್ನು ನಗಿಸಬಹುದು,ಮಾತಿನಿಂದ ಜಗಳ,ಕಲಹ- ಸಂಘರ್ಷಗಳನ್ನು ಆಹ್ವಾನಿಸಬಹುದು.ಮಾತಿನಿಂದ ಉನ್ನತಿಯೂ ಸಾಧ್ಯ,ಮಾತೇ ಅವನತಿಯ ಕಾರಣವೂ ಅಹುದು.ಮಾತಿನಿಂದ ಮನುಷ್ಯ ಸಂಬಂಧಗಳನ್ನು ಬೆಸೆಯಬಹುದು,ಮಾತಿನಿಂದ ಸಂಬಂಧಗಳನ್ನು ಮುರಿಯಬಹುದು.ಮಾತೇ ಮನುಷ್ಯರ ಆಯುಧ,ಅಸ್ತ್ರ.ಮಾತಿನಿಂದ ಅರ್ಥಕ್ಕಿಂತ ಅನರ್ಥವೇ ಹೆಚ್ಚು.ಮಾತು ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಅಗಲಿಸುವುದೇ ಹೆಚ್ಚು.ಮಾತು ಮನೆಗಳನ್ನು ಕಟ್ಟುವುದಕ್ಕಿಂತ ಮುರಿಯುವುದೇ ಹೆಚ್ಚು.ಪ್ರೀತಿಯ ಸಾಧನವಾಗಬೇಕಿದ್ದ ಮಾತು ದ್ವೇಷದ ಕಿಡಿಗಳನ್ನು ಹಬ್ಬಿಸುತ್ತದೆ.ಮಾತಿನಲ್ಲಿ ಶಕ್ತಿ ಇದೆ,ಬೆಳಕು ಇದೆ.ಮಾತಿನಲ್ಲಿ ಜ್ಯೋತಿಯೂ ಇದೆ,ಸೂತಕವೂ ಇದೆ.

ಸಾಧಕನಾದವನು ಮನುಷ್ಯರ ಎಲ್ಲ ವಿರೋಧಗಳಿಗೆ,ವಿಪರೀತಗಳಿಗೆ ಕಾರಣವಾಗುವ ಮಾತನ್ನು ನಿಗ್ರಹಿಸಬೇಕು.’ಮಾತಿನ ಹರಿಯ ಬಿಟ್ಟಿರಬೇಕು’ಮಾತು ವಾಚಾಳಿಗಳ ಆಯುಧವಾದರೆ ಮೌನವು ಸಾಧಕರ ಅಸ್ತ್ರ.ಸಾಧಕರು ಮೌನಿಗಳಾಗಿರಬೇಕು.ಎಷ್ಟುಬೇಕೋ ಅಷ್ಟು,ತೀರ ಅನಿವಾರ್ಯವಿದ್ದಷ್ಟು ಮಾತ್ರ ಮಾತನ್ನಾಡಬೇಕು.ಮಾತುಗಳ ಕೂರಲಗಿಗೆ ಸಿಕ್ಕು ಬಳಲಬಾರದು ಸಾಧಕರು.ಮೌನವಾಗಿ,ಏಕಾಂತದೊಳಿದ್ದು ಆಧ್ಯಾತ್ಮಿಕ ಸಾಧನೆ ಮಾಡಬೇಕು.ಸಾಧಕ ಎಷ್ಟು ಮೌನಿಯಾಗಿರುತ್ತಾನೋ ಅಷ್ಟು ಬೇಗನೆ ಸಿದ್ಧಿ ಸಂಪಾದಿಸುತ್ತಾನೆ.ಮೌನಿಯಾಗಿರುವುದು ಎಂದರೆ ಬಹಿರಂಗಪ್ರಪಂಚವನ್ನು ಒದ್ದು ಅಂತರ್ಮುಖಿಯಾಗುವುದು.ಲೋಕಾಂತವನ್ನು ತ್ಯಜಿಸಿ ಏಕಾಂತದಲ್ಲಿದ್ದು ಆನಂದವನ್ನು ಅನುಭವಿಸುವುದು.

ಮೌನವೂ ಒಂದು ವ್ರತವೆ.ಕೆಲವರು ಮೌನವ್ರತಿಗಳಿರುತ್ತಾರೆ,ಮತ್ತೆ ಕೆಲವರು ವರ್ಷದಲ್ಲಿ ಇಂತಿಷ್ಟುದಿನ ಅಂತ ನಿರ್ದಿಷ್ಟದಿನಗಳಲ್ಲಿ ಮೌನವ್ರತಾಚರಣೆ ಮಾಡುತ್ತಾರೆ.ಮೌನವಾಗಿರುವುದರಿಂದ ಶಕ್ತಿ ಸಂಪಾದಿಸಬಹುದು.ಮಾತಿನಹರಿಯನ್ನು ನಿಲ್ಲಿಸಿದಾಗಲೇ ಮಹತತ್ತ್ವವು ಮೈದಳೆಯುತ್ತದೆ,ಮುಂದೋರುತ್ತದೆ.ಮೌನ ಎಂದರೆ ಕೇವಲ ಬಾಯಿಮುಚ್ಚುವ ಕ್ರಿಯೆ ಮಾತ್ರವಲ್ಲ,ಮನಸ್ಸನ್ನೂ ಮುಚ್ಚಬೇಕು.ಮನಸ್ಸಿನ ನಿಗ್ರಹವೇ ನಿಜವಾದ ಮೌನ.ಚಿತ್ತವೃತ್ತಿಯ ನಿಗ್ರಹವೇ ಮೌನ.ಮನಸ್ಸಿನಲ್ಲಿ ನಾನಾ ಬಗೆಯ ವಿಚಾರಗಳು,ಬೇಕು ಬೇಡದ ವಿಚಾರಗಳ ಸಂಘರ್ಷ ನಡೆಯುತ್ತಿದ್ದರೆ ಅದು ಮೌನವಾಗುವುದಿಲ್ಲ.ಬಾಯನ್ನಷ್ಟೇ ಮುಚ್ಚುವುದಲ್ಲ,ಮನಸ್ಸನ್ನೂ ಮುಚ್ಚಬೇಕು,ಹರಿದಾಡುವ ಮನಸ್ಸಿನ ಪರಿಯನ್ನು ನಿಗ್ರಹಿಸಬೇಕು,ಪ್ರವಹಿಸುತ್ತಿರುವ ಭಾವನೆಗಳ ತರಂಗಗಳಿಗೆ ತಡೆಯನ್ನೊಡಬೇಕು.ಮನಸ್ಸು ಹೊಯ್ದಾಟದಿಂದ ಮುಕ್ತವಾಗಬೇಕು.ಆಗ ಮುಖದಲ್ಲಿ‌ ಮೂಡುತ್ತದೆ ಪ್ರಸನ್ನತೆ.ಮಾತಿನ ಹರಿಯನ್ನು ನಿಲ್ಲಿಸಿದಾಗ ಹರಿದುಬರುತ್ತದೆ ಪರಮಾತ್ಮನ ಕಾರುಣ್ಯಧಾರೆ.ಮಾತು ಮೌನವಾದಾಗ,ಭಾವನೆಗಳು ಸ್ತಬ್ಧವಾದಾಗ ಅಂತರಂಗದ ಬೆಳಕು ಮೂಡುತ್ತದೆ.ಅಂತರಂಗದ ಬೆಳಕಿನಲ್ಲಿ ಮುನ್ನಡೆಯುವುದೇ ಮೌನವ್ರತಿಗಳ ಲಕ್ಷಣ.ಮಾತು ತನ್ನ ಹರಿಯನ್ನು ನಿಲ್ಲಿಸಿದಾಗ ಜ್ಯೋತಿರ್ ತತ್ತ್ವವು ಪ್ರಕಾಶಿಸುತ್ತದೆ.ಮಾತಿನಿಂದ ಸಿಟ್ಟು ಕೋಪ- ತಾಪಗಳು ಪ್ರಕಟವಾಗುತ್ತವೆ.ಸಿಟ್ಟು ಸೆಡವು,ಕೋಪ- ತಾಪಗಳು ಯೋಗಸಾಧನೆಗೆ ಅಡ್ಡಿ.ಅವುಗಳಿಂದ ಮುಕ್ತವಾಗಬೇಕಾದರೆ ಮೌನಿಗಳಾಗಬೇಕು.

ಕೊಲ್ಲಬೇಕು ಮಾತನ್ನು,ಗೆಲ್ಲಬೇಕು ಬಾಯಿ ಚಪಲವನ್ನು.ಬಾಯಿಸತ್ತಾಗಲೇ ಬ್ರಹ್ಮ ಮಾತನಾಡುವುದು.ಪರಮಾತ್ಮನೊಂದಿಗೆ ಮಾತನಾಡುವುದು ಮೌನದಲ್ಲೇ.ನಮ್ಮ ಕರಣೇಂದ್ರಿಯಗಳು ನಿಶಃಬ್ದವಾದಾಗಲೇ ಪರಮನ ನಾದಕೇಳತೊಡಗುತ್ತದೆ.ಮಾತು ನಿಂತಷ್ಟೂ ಮಹಾದೇವನ ಶಕ್ತಿ ಇಳಿದು,ಬೆಳೆಯುತ್ತದೆ.ಮಾತಿನ ಚಪಲದಿಂದ ಮುಕ್ತರಾಗದೆ ಮೋಕ್ಷವನ್ನು ಸಂಪಾದಿಸಲು ಸಾಧ್ಯವಿಲ್ಲ.ಮಾತು ಮೋಕ್ಷಕ್ಕೆ ಪರಮಶತ್ರು.ಮಾತು ನಿಂತಾಗ ಮನೋವ್ಯಾಪಾರಗಳು ಸ್ತಬ್ಧಗೊಂಡು ಮಹಾದೇವನ ಮಹತ್ತು ಜಾಗ್ರತಗೊಳ್ಳುತ್ತದೆ.ಮಾತು ಸತ್ತಾಗ ಪರಮಾತ್ಮನ ಪ್ರಕಾಶ ದೃಗ್ಗೋಚರವಾಗುತ್ತದೆ.

ಮಾತಿನಚಪಲದಂತೆ ರುಚಿಯ ಆಸೆಯನ್ನೂ ನಿಗ್ರಹಿಸಬೇಕು.ಮಾತು ಮತ್ತು ರುಚಿಯ ಆಸ್ವಾದನೆಗಳೆರಡೂ ಜಿಹ್ವಾಚಾಪಲ್ಯವೆ.ನಾಲಗೆಯ ಚಪಲಕ್ಕೆ ಸಿಕ್ಕು ನಾಯಿಗಳಂತಾಗಬಾರದು.ನಾಲಗೆ ಬಯಸಿದ್ದನ್ನೆಲ್ಲ ತಿನ್ನಬಾರದು.ಆಹಾರದಲ್ಲಿ ಸಾತ್ತ್ವಿಕ ಆಹಾರ,ರಾಜಸ ಆಹಾರ ಮತ್ತು ತಾಮಸ ಆಹಾರ ಎಂದು ಮೂರು ಬಗೆಯುಂಟು.ಈ ಮೂರು ಬಗೆಯ ಆಹಾರ ಸೇವನೆಗಳಿಂದ,ಅವುಗಳ ರಸ- ಗುಣಗಳಿಂದ ನಮ್ಮಲ್ಲಿ ಸತ್ತ್ವ,ರಜಸ್ಸು ಮತ್ತು ತಮೋಗುಣಗಳೆಂಬ ಮೂರು ಗುಣಗಳುತ್ಪನ್ನವಾಗುತ್ತವೆ.ಸಾತ್ತ್ವಿಕ ಆಹಾರದಿಂದ ಸಾತ್ತ್ವಿಕಗುಣ ಉಂಟಾದರೆ,ರಾಜಸ ಆಹಾರಸೇವನೆಯಿಂದ ರಜೋಗುಣವೂ ತಾಮಸ ಆಹಾರವನ್ನು ತಿನ್ನುವುದರಿಂದ ತಾಮಸ ಪ್ರವೃತ್ತಿಯೂ ಬೆಳೆಯುತ್ತವೆ.ಯೋಗಿಯಾದವನು,ಆಧ್ಯಾತ್ಮಿಕ ಸಾಧಕನಾದವನು ಸಾತ್ತ್ವಿಕ ಆಹಾರವನ್ನಷ್ಟೇ ಸೇವಿಸಬೇಕು,ತಾಮಸ ಆಹಾರವನ್ನು ಮುಟ್ಟಲೇಬಾರದು.ಅನ್ನ,ಹಾಲು,ಹಣ್ಣು,ತರಕಾರಿಗಳು ಸಾತ್ತ್ವಿಕ ಆಹಾರವಾದರೆ ಮದ್ಯ- ಮಾಂಸ,ಈರುಳ್ಳಿ,ಬೆಳ್ಳುಳ್ಳಿಗಳಂತಹವುಗಳು ತಾಮಸ ಆಹಾರ.ತಂಗಳನ್ನವು ತಾಮಸ ಆಹಾರವೆ.ಬಿಸಿಯಾದ ಅನ್ನ ಸಾತ್ತ್ವಿಕ ಆಹಾರವಾದರೆ ಆರಿದ ಅನ್ನ ರಾಜಸ ಆಹಾರ,ತಂಗಳನ್ನವು ತಾಮಸ ಆಹಾರ.ಹಾಲು ಸಾತ್ತ್ವಿಕ ಆಹಾರವಾದರೆ ಮೊಸರು ರಾಜಸ ಆಹಾರ,ಮಜ್ಜಿಗೆಯು ತಾಮಸ ಆಹಾರ.ತಮೋಪ್ರವೃತ್ತಿಗೆ ಕಾರಣವಾಗುವ ಆಹಾರವೆಲ್ಲವೂ ತಾಮಸ ಆಹಾರ.ಸಾತ್ತ್ವಿಕ ಆಹಾರಸೇವನೆಯು ಯೋಗಸಾಧನೆಗೆ ಪೂರಕವಾದರೆ ತಾಮಸ ಆಹಾರವು ಯೋಗವಿಮುಖರನ್ನಾಗಿಸುತ್ತದೆ.ಯೋಗಸಾಧನೆ ಮಾಡುವವರು ಮದ್ಯ- ಮಾಂಸಗಳನ್ನು ವರ್ಜಿಸಬೇಕು.ಕೆಲವರು ಮದ್ಯ ಮಾಂಸಗಳೇ ಆಧ್ಯಾತ್ಮಿಕ ಸಾಧನೆಯ ರಹಸ್ಯ ಎಂದು ಬೊಗಳೆ ಹೊಡೆಯುತ್ತಾರೆ.ಇದು ಮೂರ್ಖತನದ ಮಾತು.ಮದ್ಯ ಮಾಂಸಗಳಿಂದ ಆಧ್ಯಾತ್ಮಿಕ ಸಿದ್ಧಿ ಸಾಧ್ಯವೇ ಇಲ್ಲ.ಮೈ ಕೊಬ್ಬಿದಾಗ ಮಬ್ಬು ಕವಿದಾಗ ಸಾಧಿಸುವುದು ಏನನ್ನು ?

ನಾಲಗೆಯ ರುಚಿಯ ಬಯಕೆಯನ್ನು ನಿಗ್ರಹಿಸಿ ಶುದ್ಧ,ಸಾತ್ತ್ವಿಕ ಆಹಾರಸೇವನೆ ಮಾಡಬೇಕು.ಮಾತು ಮತ್ತು ರುಚಿಗಳೆರಡೂ ಜಿಹ್ವಾಚಾಪಲ್ಯವಾಗಿದ್ದು ಆ ಚಪಲತೆಯನ್ನು ನಿಗ್ರಹಿಸಿದ್ದಾದರೆ,ನಾಲಗೆಯನ್ನು ಹಿಡಿತದಲ್ಲಿಟ್ಟುಕೊಂಡರೆ ಪಡೆಯಬಹುದು ದಿವ್ಯತ್ವವನ್ನು.

About The Author