ಸಿದ್ರಾಮಯ್ಯನವರು ದ್ರಾವಿಡರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ದ್ರಾವಿಡರೆ !:ಮುಕ್ಕಣ್ಣ ಕರಿಗಾರ

ಎರಡುದಿನಗಳ ಕೆಳಗೆ ಮಾಜಿಮುಖ್ಯಮಂತ್ರಿ ಸಿದ್ರಾಮಯ್ಯನವರು ‘ ಆರ್ ಎಸ್ ಎಸ್ ನವರು ದ್ರಾವಿಡರೆ?’ ಎಂದು ಪ್ರಶ್ನಿಸಿದ್ದರು.ಅದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ‘ ಸಿದ್ರಾಮಯ್ಯ ದ್ರಾವಿಡರೆ,ಆರ್ಯರೆ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಸವಾಲು ಎಸೆದಿದ್ದಾರೆ.ಆದರೆ ವಾಸ್ತವವಾಗಿ ಸಿದ್ರಾಮಯ್ಯ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಬ್ಬರೂ ದ್ರಾವಿಡರೆ! ಭಾರತವು ಮೂಲತಃ ಶೂದ್ರರ ದೇಶ,ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು.’ ದ್ರಾವಿಡ’ ಎನ್ನುವ ಪದವನ್ನು ತಮಿಳುನಾಡಿನವರು ಹೆಚ್ಚಾಗಿ ಬಳಸುತ್ತಿರುವುದರಿಂದ ತಮಿಳರನ್ನು ಮಾತ್ರ ದ್ರಾವಿಡರು ಎಂದು ತಪ್ಪಾಗಿ ತಿಳಿಯಲಾಗಿದೆ.ಆದರೆ ಮೂಲಭಾರತಿಯರು ದ್ರಾವಿಡರು.ದ್ರಾವಿಡ ಶಬ್ದವು ಹೆಚ್ಚು ವ್ಯಾಪಕವಾಗಿ ಬಳಕೆಯಲ್ಲಿಲ್ಲ, ‘ ಶೂದ್ರ’ ಪದವು ಹೆಚ್ಚು ಬಳಕೆಯಲ್ಲಿದೆ.ವರ್ಣಾಶ್ರಮ ವ್ಯವಸ್ಥೆ ಜಾರಿಗೆ ಬಂದಾಗಿನಿಂದಲೂ ‘ ಶೂದ್ರ’ ಎನ್ನುವ ಪ್ರತ್ಯೇಕ ವರ್ಗದ ಅಸ್ತಿತ್ವವಿದೆ.ಬ್ರಾಹ್ಮಣ,ಕ್ಷತ್ರಿಯ,ವೈಶ್ಯ ಮತ್ತು ಶೂದ್ರ ಎನ್ನುವ ನಾಲ್ಕು ವರ್ಣಗಳು ಭಾರತದಲ್ಲಿ ವೇದೋತ್ತರ ಕಾಲದಲ್ಲಿ ಕಾಣಿಸಿಕೊಂಡ ಸಾಮಾಜಿಕ ವಿಭಜನೆ,ವರ್ಗೀಕರಣ.ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನಾಲ್ಕು ವರ್ಣಗಳು ನನ್ನಿಂದ ಹುಟ್ಟಿದವು ಎನ್ನುತ್ತಾನೆ — ‘ ಚಾತುರ್ವಣ್ಯಂ ಮಯಾ ಸೃಷ್ಟ್ಯ ಗುಣ ಕರ್ಮ ವಿಭಾಗಶಃ’ .ಅಂದರೆ ನಾಲ್ಕು ವರ್ಣಗಳು ನನ್ನಿಂದ ಹುಟ್ಟಿದವು,ಜೀವರುಗಳ ಗುಣ ಮತ್ತು ಕರ್ಮಗಳಿಗೆ ಅನುಗುಣವಾಗಿ ನಾನು ಅವುಗಳನ್ನು ಹುಟ್ಟಿಸಿದ್ದೇನೆ’ ಎನ್ನುತ್ತಾನೆ ಕೃಷ್ಣ.ಈ ಶ್ಲೋಕಾರ್ಥವು ಏನೇ ಇರಲಿ ಚಾತುವರ್ಣ್ಯವು ಬ್ರಾಹ್ಮಣರ ಸೃಷ್ಟಿ,ಮಹಾಭಾರತ ಕಾಲದ ಸೃಷ್ಟಿ ಎಂಬುದು ಗೀತೆಯ ಈ ಮಾತಿನಿಂದ ಸ್ಪಷ್ಟವಾಗುತ್ತದೆ.

‌ವೇದ ಕಾಲದಲ್ಲಿ ವರ್ಣ ವ್ಯವಸ್ಥೆ ಇರಲಿಲ್ಲ.ಉಪನಿಷತ್ತುಗಳ ಕಾಲದಲ್ಲೂ ವರ್ಣವ್ಯವಸ್ಥೆ ಇರಲಿಲ್ಲ.ವೇದ ಉಪನಿಷತ್ತುಗಳ ನಂತರದ ಕಾಲದಲ್ಲಿ ವರ್ಣಾಶ್ರಮ ವ್ಯವಸ್ಥೆ ಕಾಣಿಸಿಕೊಂಡಿತು ಮತ್ತು ಅದು ಗುಪ್ತರ ಕಾಲದಲ್ಲಿ ತನ್ನ ವೈಭವದ ಉತ್ತುಂಗಕ್ಕೇರಿತು.ವೇದಗಳ ಕಾಲದ ದಸ್ಯುಗಳು ಮೂಲ ಭಾರತೀಯರು,ಶೂದ್ರರು. ದಶಮಹಾಜನಪದಗಳು ದೇಶೀಯ ರಾಜ್ಯಗಳು,ಅವುಗಳನ್ನಾಳುತ್ತಿದ್ದವರು ಶೂದ್ರದೊರೆಗಳು.ವೇದದ ದಸ್ಯುಗಳೇ ದ್ರಾವಿಡರು.ಋಗ್ವೇದದಲ್ಲಿಯೇ ದಸ್ಯುಗಳನ್ನು ಕಪ್ಪುವರ್ಣೀಯರು,ಕುರೂಪಿಗಳು ಆದರೆ ಮಹಾಬಲಶಾಲಿಗಳು ಎಂದು ಬಣ್ಣಿಸಲಾಗಿದೆ.ಋಗ್ವೇದದ ‘ ಪುರಂದರ’ ನೆಂಬ ಖ್ಯಾತಿಯ ಇಂದ್ರ ದಸ್ಯುಗಳ ಬಲಿಷ್ಟಪುರಗಳನ್ನು ನಾಶಗೊಳಿಸುತ್ತಾನೆ.ಆರ್ಯರ ಪ್ರಾರ್ಥನೆ ಕೇಳಿ ಮೇಲಿಂದ ಮೇಲೆ ದಸ್ಯುಗಳ ಮೇಲೆ ಆಕ್ರಮಣ ಮಾಡಿ ಅವರನ್ನು ನಿರ್ನಾಮ ಮಾಡುತ್ತಾನೆ.ಋಗ್ವೇದದ ಕೆಲವೆಡೆ ಯುದ್ಧದಲ್ಲಿ ಪಾಲ್ಗೊಂಡ ನಿಶ್ಚಿತ ಸಂಖ್ಯೆಯ ಸೈನಿಕರು,ಯುದ್ಧ ನಡೆದ ದಿನಗಳ ವಿವರ ಬರುತ್ತದೆ.ಯಗ್ವೇದದ ಇಂತಹ ಋಕ್ಕುಗಳಿಗೆ ಆಧ್ಯಾತ್ಮಿಕ ಅರ್ಥಕಲ್ಪಿಸುವುದು ಮೊಂಡುತನವಷ್ಟೆ.ಆರ್ಯರು ಮತ್ತು ದ್ರಾವಿಡರ ಹೋರಾಟದ ಸ್ಪಷ್ಟ ಉಲ್ಲೇಖ ಋಗ್ವೇದದಲ್ಲಿದೆ.

ಶೂದ್ರರು ಭಾರತದ ಮೂಲ ನಿವಾಸಿಗಳಾದರೆ ಶೈವಧರ್ಮ ಭಾರತದ ಮೂಲಧರ್ಮ.ಶೈವ ಸಂಸ್ಕೃತಿಯು ಭಾರತದ ಮೂಲ ಸಂಸ್ಕೃತಿ.ಆರ್ಯರು ಹೊರಗಿನಿಂದ ಬಂದವರು ಅಲ್ಲ ಎನ್ನುವುದಾದರೆ ವೀರಭದ್ರ ದಕ್ಷನ ಯಜ್ಞವನ್ನು ಧ್ವಂಸಗೊಳಿಸಿದನೇಕೆ ?ಭೈರವನು ಅಹಮಿಕೆಗೆ ಒಳಗಾದ ಬ್ರಹ್ಮನ ಒಂದು ತಲೆಯನ್ನು ಕತ್ತರಿಸಿದನೇಕೆ ? ಶರಭನು ಉಗ್ರನರಸಿಂಹನನ್ನು ನಿಗ್ರಹಿಸಿದನೇಕೆ ? ಈ ಪ್ರಶ್ನೆಗಳು ವಿಚಾರಾರ್ಹವಾದವುಗಳು ಮಾತ್ರವೇ ಅಲ್ಲ ಭಾರತವು ಮೂಲತಃ ಶೈವರದೇಶವಾಗಿತ್ತು ಎನ್ನುವುದರ ಸಂಕೇತ.ಶಿವಭಕ್ತರಾಗಿದ್ದ ಶೂದ್ರರು ಭಕ್ತಿಯನ್ನಷ್ಟೇ ಬಲ್ಲವರು,ಯಜ್ಞಯಾಗಾದಿಗಳನ್ನು ಅರಿಯದವರು.ಶಿವನು ಪರಮೇಶ್ವರನು.ಶಿವನ ಪರಮೇಶ್ವರನ ಪಟ್ಟವನ್ನು ಕಸಿದುಕೊಂಡು ಅದನ್ನು ವಿಷ್ಣುವಿಗೆ ದಯಪಾಲಿಸಲು ದಕ್ಷನು ಪ್ರಯತ್ನಿಸಿದ್ದೇ ದಕ್ಷಯಜ್ಞಧ್ವಂಸದ ಮೂಲಕಾರಣ.’ಯಜ್ಞೇಶ್ವರ’ ಎಂದರೆ ಪರಮೇಶ್ವರ ಎಂದೇ ಅರ್ಥ.ದಕ್ಷನು ಶಿವನನ್ನು ಯಜ್ಞಕ್ಕೆ ಆಹ್ವಾನಿಸದೆ ವಿಷ್ಣುವನ್ನು ಯಜ್ಞೇಶ್ವರನನ್ನಾಗಿ ಮಾಡಿಕೊಂಡು ಯಜ್ಞವನ್ನಾರಂಭಿಸುತ್ತಾನೆ.ತನ್ನ ಗಂಡನಿಗೆ ಸಲ್ಲಬೇಕಿದ್ದ ಅಗ್ರಮನ್ನಣೆಯು ವಿಷ್ಣುವಿನ ಪಾಲಾದದ್ದನ್ನು ಕಂಡು ಮತ್ತು ತನ್ನ ತಂದೆ ದಕ್ಷನಿಂದ ಶಿವ ನಿಂದನೆಯನ್ನು ಕೇಳಿದ ಸತಿಯು ಯೋಗಾಗ್ನಿಯಿಂದ ಯಜ್ಞಭೂಮಿಯಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ.ಸತಿಯ ಆತ್ಮರ್ಪಣೆ ಸುದ್ದಿಯನ್ನರಿತ ಶಿವನು ಕನಲಿ,ಕೆಂಡವಾಗಿ ರುದ್ರತಾಂಡವ ನೃತ್ಯಗೈದು ತನ್ನ ಜಟೆಯನ್ನು ಕೈಲಾಸದ ಬಂಡೆಗಪ್ಪಳಿಸಿ ಆ ಜಟೆಯಿಂದ ವೀರಭದ್ರನನ್ನು ಹುಟ್ಟಿಸಿ,ವೀರಭದ್ರನಿಂದ ದಕ್ಷಯಜ್ಞವನ್ನು ಧ್ವಂಸಗೊಳಿಸುತ್ತಾನೆ.ವೀರಭದ್ರನು ಯಜ್ಞಭೂಮಿಯಲ್ಲಿ ವಿಷ್ಣುವು ಸೇರಿದಂತೆ ದೇವತೆಗಳನ್ನು ಮನಸೋ ಇಚ್ಛೆ ದಂಡಿಸಿ,ಓಡಿಸಿ ದಕ್ಷನನ್ನು ಪಶುವನ್ನು ಹಿಡಿದೆಳೆದು ತರುವಂತೆ ಎಳೆತಂದು ಅವನ ಉನ್ಮತ್ತ ಶಿರವನ್ನು ಹರಿದು ಯಜ್ಞಕುಂಡದಲ್ಲಿ ಎಸೆಯುತ್ತಾನೆ.ದಕ್ಷಪತ್ನಿಯ ಪ್ರಾರ್ಥನೆಗೆ ಓಗೊಟ್ಟು ವೀರಭದ್ರನು ಕುರಿತಲೆಯೊಂದನ್ನು ತರಿದುತಂದು ಅದನ್ನು ದಕ್ಷನ ಮುಂಡಕ್ಕೆ ಜೋಡಿಸಿ ಶಿವ ಮಂತ್ರವನ್ನು ಉಚ್ಚರಿಸಿ ,ದಕ್ಷನಿಗೆ ಜೀವದಾನ ಮಾಡುತ್ತಾನೆ.ಅಹಂ ಅನ್ನು ಅಳಿದುಕೊಂಡ ದಕ್ಷನು ಶಿವಭಕ್ತನಾಗಿ ಮರುಹುಟ್ಟುಪಡೆಯುತ್ತಾನೆ ‘ಕುರಿತಲೆಯ’ ನಾಗಿ.ಶಿವಮಹಾಪುರಾಣ,ಸ್ಕಂದ ಮಹಾಪುರಾಣ,ಲಿಂಗಪುರಾಣ,ವಾಯುಪುರಾಣ ಸೇರಿದಂತೆ ಹಲವು ಪುರಾಣಗಳಲ್ಲಿ ದಕ್ಷಯಜ್ಞಧ್ವಂಸ ಪ್ರಸಂಗವು ವಿವರವಾಗಿ ನಿರೂಪಿಸಲ್ಪಟ್ಟಿದೆ.ಐತಿಹಾಸಿಕ ಘಟನೆ ಒಂದನ್ನು ಹೇಳುವಾಗ ಪುರಾಣಕಾರರು ಕಥನಕ್ರಮ ಅನುಸರಿಸಿದ್ದರಿಂದ ಸತಿಯು ಆತ್ಮರ್ಪಣೆ ಮಾಡಿಕೊಂಡಳು,ವೀರಭದ್ರ ಶಿವನ ಜಟೆಯಿಂದ ಹುಟ್ಟಿದ ಎನ್ನುವಂತಹ ಪ್ರಸಂಗಗಳನ್ನು ಕಲ್ಪಿಸಲಾಗಿದೆ.ಸತಿ ಮತ್ತು ವೀರಭದ್ರ ಇಬ್ಬರೂ ಶಿವಭಕ್ತರಾದ ಐತಿಹಾಸಿಕ ವ್ಯಕ್ತಿಗಳು.ಶಿವಸರ್ವೋತ್ತಮ ತತ್ತ್ವವನ್ನು ಒಪ್ಪಿದ ಶೈವರು ಶಿವನಿಂದನೆಯನ್ನು ಕೇಳಿದಾಗ ಶಿವನಿಂದಕರನ್ನು ಕೊಲ್ಲುತ್ತಿದ್ದರು ಇಲ್ಲವೆ ಅವರೇ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದರು.ಸತಿಯು ಹೆಣ್ಣಾಗಿದ್ದರಿಂದ ಹೋರಾಟಮಾಡದೆ ಆತ್ಮಾರ್ಪಣೆ ಮಾಡಿಕೊಂಡಳು.ಶ್ರೇಷ್ಠಶಿವಭಕ್ತರ ಮನೆತನದಲ್ಲಿ ಇಲ್ಲವೆ ಉಗ್ರಶಿವನಿಷ್ಠೆಯುಳ್ಳ ವಂಶದಲ್ಲಿ ವೀರಭದ್ರನು ಹುಟ್ಟಿದ್ದನ್ನು ಅವನು ಶಿವನ ಜಟೆಯಿಂದ ಹುಟ್ಟಿದ ಎಂಬಂತೆ ಕಲ್ಪಿಸಲಾಗಿದೆ.

‌ದಕ್ಷಯಜ್ಞಧ್ವಂಸ ಪ್ರಸಂಗವು ಐತಿಹಾಸಿಕ ಘಟನೆ,ಸತ್ಯಸ್ಯಸತ್ಯ ಪ್ರಸಂಗ.ವೀರಭದ್ರನಿಂದ ಸತ್ತ ದಕ್ಷನು ವೀರಭದ್ರನ ದಯೆಯಿಂದಲೇ ‘ ಟಗರುದಲೆ’ಯವನಾಗಿ ಹುಟ್ಟುತ್ತಾನೆ ಎನ್ನುವುದು ಮಹತ್ವದ ಸಂದೇಶ ಒಂದನ್ನು ಸಾರುತ್ತದೆ.ದಕ್ಷನು ಕುರಿತಲೆ ಇಲ್ಲವೆ ಟಗರು ತಲೆಯವನಾಗಿ ಹುಟ್ಟುವುದು ಕುರುಬರ ಕುಲಮೂಲ ಪ್ರಸಂಗ; ಶೈವಸಂಸ್ಕೃತಿಯ ಉಪಸಂಸ್ಕೃತಿಯಾಗಿ ಕುರುಬರಮತವು ಹುಟ್ಟಿತು( ಹಾಲುಮತವು ಪಾರ್ವತಿಯ ಎದೆ ಹಾಲಿನಿಂದ ಹುಟ್ಟಿದ ಮತ ಎನ್ನುವುದನ್ನು ಸಹ ಈ ಪ್ರಸಂಗವು ಪುಷ್ಟೀಕರಿಸುತ್ತದೆ) ಶೈವಧರ್ಮದಿಂದ ಸ್ವತಂತ್ರವಾಗಿ ಬೇರ್ಪಟ್ಟು ಹುಟ್ಟಿದ ಮೊದಲ ಮತವೇ ಹಾಲುಮತ ಇಲ್ಲವೇ ಕುರುಬರ ಕುಲ ಎನ್ನುವ ಐತಿಹಾಸಿಕ ಸತ್ಯವು ದಕ್ಷನು ಕುರಿತಲೆಯವನಾಗಿ ಮರುಹುಟ್ಟುಪಡೆಯುವುದರಲ್ಲಿ ಸೂಚಿತವಾಗಿದೆ.ವೀರಭದ್ರನೇ ಬೀರೇಶ್ವರನು.ವೀರಭದ್ರ ಮತ್ತು ಬೀರಪ್ಪ ಇಬ್ಬರೂ ಒಂದೇ,ಬೇರೆ ಅಲ್ಲ.ವೀರಶೈವರು ವೀರಭದ್ರ ಎಂದರೆ ಕುರುಬರು ಬೀರಪ್ಪ ಎನ್ನುತ್ತಾರೆ.ವೀರಭದ್ರನ ಪೂಜೆ ಮತ್ತು ಬೀರಪ್ಪನ ಪೂಜೆಗಳಲ್ಲಿ ಹಲವು ಸಾಮ್ಯಗಳಿರುವುದು ಇದನ್ನು ಪುಷ್ಟೀಕರಿಸುತ್ತದೆ.ವೀರಭದ್ರ ಮತ್ತು ಬೀರಪ್ಪ ಇಬ್ಬರಿಗೂ ಸಸ್ಯಾಹಾರದ ನೈವೇದ್ಯವನ್ನು ಸಮರ್ಪಿಸಲಾಗುತ್ತದೆ.ಕುರುಬರು ಮೂಲತಃ ಸಸ್ಯಹಾರಿಗಳು,ಮಾಂಸಹಾರಿಗಳಲ್ಲ.

ಭಾರತವು ಶಿವಭಕ್ತಿಯ ನೆಲವೇ ಹೊರತು ಯಜ್ಞಸಂಸ್ಕೃತಿಯ ನೆಲೆಯಲ್ಲ ಎನ್ನುವುದನ್ನು ವೀರಭದ್ರನು ದಕ್ಷಯಜ್ಞಧ್ವಂಸಗೊಳಿಸಿದ ಐತಿಹಾಸಿಕ ಪ್ರಸಂಗವು ನಿರೂಪಿಸಿದೆ.ಭಾರತದ ಮೂಲನಿವಾಸಿಗಳಾದ ಶೂದ್ರರು ಭಕ್ತಿಯೋಗಿಗಳು,ಯಜ್ಞ ಯಾಗಾದಿಗಳನ್ನು ಅರಿಯದವರು.ಆದರೆ ಹೊರಗಿನಿಂದ ಬಂದ ಆರ್ಯರು ಯಜ್ಞಸಂಸ್ಕೃತಿಯವರು.ನೆಲಮೂಲ ಭಕ್ತಿಸಂಸ್ಕೃತಿ ಮತ್ತು ಹೊರಗಿನಿಂದ ಬಂದ ಯಜ್ಞಸಂಸ್ಕೃತಿಗಳ ನಡುವೆ ವೀರಭದ್ರನ ನೇತೃತ್ವದಲ್ಲಿ ಕಲಹವೇರ್ಪಟ್ಟು,ಯುದ್ಧವು ಘಟಿಸಿ ಕೊನೆಗೆ ವೀರಭದ್ರನು ವಿಜಯಿಯಾಗುತ್ತಾನೆ,ಜನಪದಸಂಸ್ಕೃತಿಯಾದ ಶೈವಸಂಸ್ಕೃತಿಯು ಗೆಲ್ಲುತ್ತದೆ ಎನ್ನುವುದು ದಕ್ಷಯಜ್ಞಧ್ವಂಸ ಪ್ರಸಂಗದ ಅರ್ಥ,ಮಹತ್ವ ಮತ್ತು ಸಂದೇಶ.

ವೇದದ ಋಷಿಗಳು ರುದ್ರಶಿವನನ್ನು ಭಯಭೀತಿಯಿಂದ ಹಾಡಿಹೊಗಳಿದ್ದಾರೆ ಎನ್ನುವುದು ಕೂಡ ಭಾರತವು ಶೂದ್ರರ ಇಲ್ಲವೆ ದ್ರಾವಿಡರ ನೆಲೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.ವೇದದಲ್ಲಿ ಋಷಿಗಳು ರುದ್ರನನ್ನು ‘ ಶಾಂತನಾಗು ಶಾಂತನಾಗು’ ಎಂದು ಮೊರೆಯಿಡುತ್ತ ‘ ನಿನಗೆ ನಮಸ್ಕಾರ,ನಿನ್ನ ಕೋಪಕ್ಕೆ ನಮಸ್ಕಾರ,ನಿನ್ನ ಬಿಲ್ಲಿಗೆ ನಮಸ್ಕಾರ,ನಿನ್ನ ಬಾಣಕ್ಕೆ ನಮಸ್ಕಾರ’ ಎಂದು ಪರಿಪರಿಯಾಗಿ ಪ್ರಾರ್ಥಿಸುತ್ತಾರೆ.ಇದು ಏನನ್ನು ಸೂಚಿಸುತ್ತದೆ? ರುದ್ರ ಮೂಲತಃ ಆರ್ಯರ ದೇವರು ಆಗಿದ್ದರೆ ಋಷಿಗಳು ಈ ಪರಿಯಾಗಿ ರುದ್ರನನ್ನು ಮೊರೆಯುವ ಅಗತ್ಯವಿತ್ತೆ? ವೇದದಲ್ಲಿಯೇ ಇದೆ ” ನಮಃಶಿವಾಯ” ಎನ್ನುವ ಶಿವ ಪಂಚಾಕ್ಷರಿ ಮಂತ್ರ.” ನಮಃಶಿವಾಯ” ಎನ್ನುವ ಶಿವಪಂಚಾಕ್ಷರಿ ಮತ್ತು ” ಓಂ ನಮೋ ಭಗವತೇ ರುದ್ರಾಯ” ಎನ್ನುವ ರುದ್ರಮಂತ್ರಗಳು ವೇದದಲ್ಲಿಯೇ ಇವೆ ಎನ್ನುವುದು ಶೈವಸಂಸ್ಕೃತಿಯು ವೇದಪೂರ್ವದ ಸಂಸ್ಕೃತಿ ಎನ್ನುವುದರ ಸ್ಪಷ್ಟ ಕುರುಹು.

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಬ್ರಾಹ್ಮಣರ ವಿಪರೀತ ವರ್ತನೆಯ ವಿರುದ್ಧ ಸಿಡಿದೆದ್ದು ಹೊಸದೊಂದು ಸಮಾಜನಿರ್ಮಾಣಕ್ಕೆ,ಶಿವಸಮಾಜ ನಿರ್ಮಾಣಕ್ಕೆ ಕಾರಣರಾಗುತ್ತಾರೆ.ಯಜ್ಞಯಾಗಾದಿ ಕ್ರಿಯೆಯನ್ನು ಅಲ್ಲಗಳೆದು ಭಕ್ತಿಯ ಬೀಜಗಳನ್ನು ಬಿತ್ತಿಬೆಳೆಯುತ್ತಾರೆ.ಪುರೋಹಿತಶಾಹಿಯ ಆಡೊಂಬಲವಾಗಿದ್ದ,ಶೂದ್ರರು,ಮಹಿಳೆಯರು ಮತ್ತು ಪದದುಳಿತರಿಗೆ ಪ್ರವೇಶ ನಿರಾಕರಿಸಿದ್ದ ದೇವಸ್ಥಾನವ್ಯವಸ್ಥೆಯನ್ನು ” ಸ್ಥಾವರ” ವೆಂದು ಖಂಡಿಸಿ, ಪರಶಿವನ ಪ್ರತೀಕವಾದ ಇಷ್ಟಲಿಂಗವನ್ನು ಎಲ್ಲರ ಕೈಗಳಲ್ಲಿ ಇತ್ತು ಶಿವನ ಜಂಗಮತತ್ತ್ವವನ್ನು ಎತ್ತಿಹಿಡಿಯುತ್ತಾರೆ.ಬಸವಣ್ಣನವರು ದಲಿತರು,ಪದದುಳಿತರು ಮತ್ತು ಶೂದ್ರಜಾತಿಯ ಜನರುಗಳಿಗೆ ಲಿಂಗಕಟ್ಟುವ ಮೂಲಕ ಅವರನ್ನು ಲಿಂಗಾಯತರುಗಳನ್ನಾಗಿ ಮಾಡುತ್ತಾರೆ.ಕರ್ನಾಟಕದ ಇಂದಿನ ಬಹುತೇಕ ಲಿಂಗಾಯತರುಗಳು ಮೂಲದಲ್ಲಿ ಶೂದ್ರರು,ದಲಿತರು ಆಗಿದ್ದವರೆ.ಕುರುಬರಲ್ಲಿ ಇಂದಿಗೂ ಕೆಲವರು ಲಿಂಗಧರಿಸುತ್ತಾರೆ; ಮದ್ಯ ಮಾಂಸ ವ್ಯಸನಿಗಳಾದ ಕೆಲವರು ಲಿಂಗವನ್ನು ಮನೆಯಲ್ಲಿ ಗೂಟಕ್ಕೆ ನೇತುಹಾಕಿದ್ದಾರೆ.ಕುರುಬರಲ್ಲಿ ಗುರುಗಳು,ಒಡೆಯರು ಎನ್ನುವವರು ಸಸ್ಯಾಹಾರಿಗಳಾಗಿದ್ದು ಇಂದಿಗೂ ಲಿಂಗಧರಿಸುತ್ತಾರೆ.

ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ವೀರಭದ್ರನ ಕಾಲದಿಂದ ಹುಟ್ಟಿದ ಶಿವಭಕ್ತಿಮೂಲದ ದ್ರಾವಿಡಮನೆತನಕ್ಕೆ ಸೇರಿದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರದು ಬಸವಣ್ಣನವರಿಂದ ಸ್ಫೂರ್ತಿಗೊಂಡ ಮರುಳಸಿದ್ಧರಿಂದ ಉದ್ಧಾರಗೊಂಡ ಶೂದ್ರ,ದ್ರಾವಿಡರ ಸಾಧುಲಿಂಗಾಯತರ ಮನೆತನ.ಸಿದ್ರಾಮಯ್ಯನವರು ಮತ್ತು ಬಸವರಾಜಯ್ಯ ಬೊಮ್ಮಾಯಿವರು ಭಿನ್ನ ರಾಜಕೀಯ ಪಕ್ಷಗಳಲ್ಲಿ ಇರಬಹುದು,ಅವರ ಒಲವು- ನಿಲುವುಗಳಲ್ಲಿ ವ್ಯತ್ಯಾಸ ಇರಬಹುದು; ಆದರೆ ಅವರಿಬ್ಬರೂ ದೇಶದ ಮೂಲನಿವಾಸಿಗಳಾದ ಶೂದ್ರರು,ದ್ರಾವಿಡರು ಎಂಬುದು ಮಾತ್ರ ಐತಿಹಾಸಿಕ ಸತ್ಯ.

29.05.2022

About The Author