ಅಂಗನವಾಡಿ ನಿವೇಶನ ಕೋರಿ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಪುರ: ತಾಲ್ಲೂಕಿನ ಸಗರ ಗ್ರಾಮದ ವ್ಯಾಪ್ತಿಯಲ್ಲಿ 12 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ 4 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.ಆದ್ದರಿಂದ ಸ್ವಂತ ನಿವೇಶನಕ್ಕಾಗಿ ಅಪರ ಜಿಲ್ಲಾಧಿಕಾರಿಗಳಾದ ಡಾ: ಶಂಕರಗೌಡ ಸೋಮನಾಳ ಅವರಿಗೆ ಮನವಿಪತ್ರ ಸಲ್ಲಿಸಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.ಕಳೆದ 4 ವರ್ಷಗಳಿಂದ ಅಂಗನವಾಡಿ ನಿವೇಶನಕ್ಕಾಗಿ ಕೋರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದು ಹತ್ತಾರು ಬಾರಿ ಅಲೆದಾಡಿ ಅರ್ಜಿ ಸಲ್ಲಿಸಿದರು ಪ್ರಯೋಜನೆಯಾಗಿಲ್ಲ.ಗ್ರಾಮದ ಅಧಿಕಾರಿಗಳು ಹಾಗೂ ಹಿರಿಯ ಮುಖಂಡರ ಇಚ್ಛಾಶಕ್ತಿಯ ಕೊರತೆಯಿಂದ ನಮಗೆ ತುಂಬಾ ಬೇಜಾರಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಸುತ್ತಿರುವ ನಾವು ಮಾಲೀಕರ ಮಾತಿಗೆ ತಕ್ಕಂತೆ ನಡೆಯಬೇಕಿದೆ ವರ್ಷದಲ್ಲಿ 2 ಬಾರಿ ನಾವು ಬಾಡಿಗೆ ಕಟ್ಟಡ ಬದಲಾಯಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ ಅವೆಲ್ಲದರ ಜೊತೆಗೆ ಮಕ್ಕಳ ಕಲಿಕಾ ಗ್ರಹಿಕೆಗಾಗಿ ಮತ್ತೆ ಮತ್ತೆ ಗೋಡೆ ಬರಹಗಳು ಕೂಡ ಬರೆಯಿಸ ಬೇಕಾಗುವ ಅನಿವಾರ್ಯತೆ ಎದುರಾಗುತ್ತದೆ.ಉಪ್ಪಾರ ಓಣಿ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಾರ್ಡ್, ಕೂಡ್ಲೂರು ಓಣಿ ಮತ್ತು ಪಿಂಜಾರ್ ದೊಡ್ಡಿಗಳಲ್ಲಿ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಸುತ್ತಿರುವುದರಿಂದ ನಮಗೆ ಮತ್ತು ಮಕ್ಕಳಿಗೆ ತುಂಬಾ ತೊಂದರೆಯಾಗುತ್ತಿದ್ದುಕೂಡಲೇ ಇದರಿಂದ ಮುಕ್ತಿಗೊಳಿಸಿ ಸ್ವಂತ ನಿವೇಶನ ನೀಡಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರಾದ ಗುರುಬಾಯಿ,ಭಾಗಮ್ಮ,ಸುಧಾ ಅಪರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

About The Author