ಶಾಸಕ ಚೆನ್ನಾರೆಡ್ಡಿ ತುನ್ನೂರ್ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಘೇರಾವ್

ವಡಗೇರಾ : ತಾಲೂಕಿನ ಹಯ್ಯಳ ಬಿ ಗ್ರಾಮಕ್ಕೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಆಗಮಿಸಿದ್ದು ನಮ್ಮ ಗ್ರಾಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಹಯ್ಯಳ ಬಿ ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ.ಕಾಂಗ್ರೇಸ್ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಬಿಟ್ಟು ಬೇರಾರು ಹೇಳುವ ಮಾತು ಕೇಳಿಕೊಂಡು ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಈ ಭಾಗದ ಹಯ್ಯಳ ಬಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಕಡೆಯೇ ಶಾಸಕರು ಗಮನ ಹರಿಸದೆ ಇರುವುದರಿಂದ ಗ್ರಾಮಸ್ಥರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಘೇರಾವ್ ಹಾಕಿದ ಘಟನೆ ನಡೆದಿದ್ದು, ಶಾಸಕರು ಮತ್ತು ಶಾಸಕರ ಹಿಂಬಾಲಕರು ಗ್ರಾಮಸ್ಥರಿಗೆ ಸಮಜಾಯಿಸಿ ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತಿ ದೀರ್ಘಾವಧಿ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಪ್ರಯುಕ್ತ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚನ್ನಾರೆಡ್ಡಿ ಪಾಟೀಲರು ಆಗಮಿಸುತ್ತಿದ್ದಾರೆ ಎಂದು ತಿಳಿದು ಗ್ರಾಮಸ್ಥರು ಶಾಸಕರಿಗೆ ಘೇರಾವ್ ಹಾಕಿದ್ದಾರೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಗ್ರಾಮಸ್ಥರು ಹಯ್ಯಳ ಬಿ ಗ್ರಾಮದಲ್ಲಿ ಮಹಿಳೆಯರಿಗೆ ಸಾಮೂಹಿಕ ಶೌಚಾಲಯವಿಲ್ಲ. ಸಿಸಿ ರಸ್ತೆಗಳಿಲ್ಲ, ಶುದ್ಧ ಕುಡಿಯುವ ನೀರಿಲ್ಲ ಎಂದು ಶಾಸಕರ ಮುಂದೆಯೇ ತಮ್ಮ ಅಳಲನ್ನು ತೋಡಿಕೊಂಡರು. ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಡುತ್ತೇನೆ. ಯಾದಗಿರಿ ಕ್ಷೇತ್ರದ ಯಾವ ಭಾಗವನ್ನು ನಾನು ನಿರ್ಲಕ್ಷಿಸಿಲ್ಲ. ತಮ್ಮ ಸಮಸ್ಯೆಗಳೆನಿದ್ದರೂ ತಿಳಿಸಿ. ಸರ್ಕಾರದಿಂದ ಸಿಗುವ ಸೌಲಭ್ಯ ಮತ್ತು ಅನುದಾನವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಶಾಸಕರ ಭರವಸೆಯ ನಂತರ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಸರ್ಕಾರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ಆಗಮಿಸಿ ಶಾಲಾ ಮಕ್ಕಳಿಗೆ ಪುಸ್ತಕ, ನೋಟ್ ಬುಕ್, ಪರೀಕ್ಷಾ ಪ್ಯಾಡ್ ಸೇರಿದಂತೆ ಇತರ ವಸ್ತುಗಳನ್ನು ಶಾಲಾ ಮಕ್ಕಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ್, ಮರೀಲಿಂಗಪ್ಪ ಕುಮನೂರು, ನಂದನಗೌಡ,ಸಾಬಣ್ಣ ವರಿಕೇರಿ,ಮುಖ್ಯ ಶಿಕ್ಷಕ ಶರಣಪ್ಪ ಸೇರಿದಂತೆ ಸಿದ್ದರಾಮಯ್ಯ ಅಭಿಮಾನಿ ಬಳಗದವರು, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮಸ್ಥರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.