ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ಚನ್ನಾರಡ್ಡಿ ತುನ್ನೂರು

ವಡಗೇರಾ,,
ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಮಕ್ಕಳಿಗಾಗಿ ಬಾಲಮೇಳ ಕಾರ್ಯಕ್ರಮ ಮಾಡುತ್ತಿರುವುದು ಪ್ರಶಂಸನೀಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.ತಾಲೂಕಿನ ಕುರಕುಂದಾ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಶಹಾಪೂರ ಹಾಗೂ ಅಜೀಮ್ ಪ್ರೇಮ್ ಜೀ ಫೌಂಡೇಶನ್ ಜಿಲ್ಲಾ ಸಂಸ್ಥೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಬಾಲಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಕಾರ್ಯಕ್ರಮ ಮಾಡುವ ಉದ್ದೇಶ ಪಾಲಕರು ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ನೊಂದಾಯಿಸಿಕೊಳ್ಳಬೇಕು,ಮಕ್ಕಳು ಬಾಲ್ಯಾವಸ್ಥೆಯಿಂದಲೇ ಅವರ ಬೌದ್ಧಿಕ, ಮಾನಸಿಕ, ದೈಹಿಕ, ಬೆಳವಣಿಗೆ, ಆರೋಗ್ಯ ಸ್ಥಿತಿಗತಿ ತಿಳಿಯುವಂತಾಗಬೇಕು. ಅಂಗನವಾಡಿಗಳಲ್ಲಿ ಮಗುವಿಗೆ ಗರ್ಭಿಣಿ ತಾಯಂದಿರಿಗೆ ದೊರೆಯುವ ಸೌಲಭ್ಯಗಳ ಅರಿವು ಮೂಡಿಸಲು, ಮತ್ತು ಮಕ್ಕಳಲ್ಲಿ ಅಡಗಿದ ಸೂಪ್ತ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ ಉಪಯುಕ್ತವಾಗಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.ಪಾಲಕರು ಮಕ್ಕಳಿಗಾಗಿ ಆಸ್ತಿಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು, ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಪ್ರೀತಿ ವಾತ್ಸಲ್ಯ, ಸಂಸ್ಕೃತಿ ಸಂಸ್ಕಾರ ನೀಡಿ ಭವಿಷ್ಯದಲ್ಲಿ ನಿಮ್ಮ ಮಗುವನ್ನು ಈ ದೇಶದ ಈ ನಾಡಿನ ಆಸ್ತಿಯನ್ನಾಗಿ ಮಾಡಬೇಕು ಎಂದು ಪಾಲಕರಲ್ಲಿ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಿಗೆ ಟಿವಿ ವಿತರಣೆ ಮಾಡಿದರು.
 ಕುರಕುಂದಾ ಗ್ರಾಮದ ಹೊರವಲಯದಲ್ಲಿ ನಡೆದ ನರೇಗಾ ಯೋಜನೆಯಡಿ ನಡೆದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕೂಲಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿ ಬೇಸಿಗೆ ದಿನಗಳಲ್ಲಿ ಜನರು ಯಾವುದೇ ಕಾರಣಕ್ಕೂ ನಗರ ಪ್ರದೇಶಗಳಿಗೆ ವಲಸೆ ಹೋಗದೆ ನಿಮ್ಮ ಊರಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿ ಆರ್ಥಿಕವಾಗಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.ಬಿಸಲಿನ ತಾಪ ಹೆಚ್ಚು ಇರುವುದರಿಂದ ಆರೋಗ್ಯಕ್ಕೆ ಒತ್ತು ನೀಡಿ ಕೆಲಸ ನಿರ್ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ‌ ಇಓ ಮಲ್ಲಿಕಾರ್ಜುನ ಸಂಗ್ವಾರ,‌ ಸಿಡಿಪಿಒ ಮಲ್ಲಣ್ಣ ದೇಸಾಯಿ,ಪಿಡಿಓ ಶೇಷಾಗಿರಿರಾವ್ ಕುಲಕರ್ಣಿ,ಅಂಗನವಾಡಿ ಮೇಲ್ವಿಚಾರಕಿ ತ್ರೀವೇಣಿ, ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸಿಬ್ಬಂದಿ ಚೈತ್ರಾ, ಮಲ್ಲಿಕಾರ್ಜುನ ಈಟೆ, ಶರಣಬಸಪ್ಪ, ಶರಣಪ್ಪ ಜಂಬೆ,ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು,ಹಾಗೂ ಗ್ರಾಮಸ್ಥರು ಇದ್ದರು.