ಕುರಿಗಾಹಿಗಳ ಫಲಾನುಭವಿಗಳ ಆಯ್ಕೆ ಸಮಿತಿಗೆ ಶಾಸಕರ ಕೈಬಿಟ್ಟು ಸಿಇಓ ನೇಮಿಸುವಂತೆ ಪಂಡಿತರಾವ್‌ ಚಿದ್ರಿ ಒತ್ತಾಯ

ಬೀದರ,,

ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮೂಲಕ ಕುರಿಗಾಹಿಗಳ ಸಂಘ-ಸಂಸ್ಥೆಗಳಿಗೆ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತಿತ್ತು. ಆದರೆ, ಫೆ.23 ರಂದು ಸರ್ಕಾರವು ಕುರಿಗಾಹಿಗಳಿಗೆ ಒದಗಿಸುವ ವಿವಿಧ ಸೌಲಭ್ಯಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಇದರಿಂದ ಕುರಿಗಾಹಿಗಳ ಸಂಘಗಳಿಗೆ ಹಾಗೂ ಫಲಾನುಭವಿಗಳಿಗೆ ಅನ್ಯಾಯವಾಗುವ ಸಂಭವವೇ ಹೆಚ್ಚು. ಆದ್ದರಿಂದ ಅಧ್ಯಕ್ಷ ಸ್ಥಾನದಿಂದ ಶಾಸಕರನ್ನು ಕೈಬಿಡಬೇಕೆಂದು ಕುರಿ ಮತ್ತು ಮೇಕೆ ಮಹಾಮಂಡಳದ ರಾಜ್ಯ ನಿರ್ದೇಶಕ ಪಂಡಿತರಾವ್ ಚಿದ್ರಿ ಒತ್ತಾಯಿಸಿದರು. ಗುರುವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ದೇವರಾಜ್ ಅರಸ್ ಅಭಿವೃದ್ಧಿ ನಿಗಮದಲ್ಲಿ ಒಟ್ಟು 15 ನಿಗಮಗಳಿವೆ. ಜೊತೆಗೆ ಬಂಜಾರ, ಆದಿಜಾಂಬವ, ಭೋವಿ ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿ 15 ನಿಗಮಗಳಿಗೆ ಜಿಪಂ ಸಿಇಒ ಅವರೇ ಅಧ್ಯಕ್ಷರಾಗಿದ್ದಾರೆ. ಆದರೆ ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮಕ್ಕೆ ಮಾತ್ರ ಕಳೆದ ಕೆಲವು ದಿವಸಗಳ ಹಿಂದೆ ಸರ್ಕಾರ ಆಯಾ ಕ್ಷೇತ್ರದ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇದರಿಂದಾಗಿ ಕುರಿಗಾಹಿ ಸಂಘ ಸಂಸ್ಥೆಗಳ ಫಲಾನುಭವಿಗಳಿಗೆ ಸೌಲಭ್ಯ ಸಿಗುವುದು ವಿರಳ. ಆದ್ದರಿಂದ ಕೂಡಲೇ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಶಾಸಕರನ್ನು ಕೈಬಿಟ್ಟು ಈ ಹಿಂದಿನಂತೆ ಜಿಪಂ ಸಿಇಒ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಕುರಿಗಾಹಿಗಳಿಗೆ ಸೌಲಭ್ಯ ಒದಗಿಸಬೇಕೆಂದು ಚಿದ್ರಿ ಆಗ್ರಹಿಸಿದರು.ರಾಜ್ಯದಲ್ಲಿ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ಒಟ್ಟು 800 ಕುರಿ ಮತ್ತು ಮೇಕೆ ಸಹಕಾರ ಸಂಘಗಳಿವೆ. ಕುರಿ ಮತ್ತು ಮೇಕೆ ಮಹಾಮಂಡಳ ಆಡಿಯಲ್ಲಿ 400 ಸಹಕಾರ ಸಂಘಗಳು ಹಾಗೂ ಶೇರುದಾರರಿದ್ದಾರೆ. 1.50 ಕೋಟಿ ಕುರಿ ಹಾಗೂ ಮೇಕೆಗಳಿವೆ. ಎರಡೂ ಸಂಘ ಸೇರಿ 1.25 ಲಕ್ಷ ಸದಸ್ಯರಿದ್ದಾರೆ ಎಂದು ಚಿದ್ರಿ ತಿಳಿಸಿದರು.

ಕರ್ನಾಟಕ ಸಹಕಾರ ಉಣ್ಣೆ, ಕೈಮಗ್ಗ ಮತ್ತು ನೇಕಾರರ ಮಹಾಮಂಡಳ ಚಳ್ಳಕೆರೆಯ ನಿರ್ದೇಶಕ ಶಿವರಾಜ ಮಲ್ಲೇಶಿ ಮಾತನಾಡಿ, ಸುಮಾರು 777 ಜನರಿಗೆ ವರ್ಷಕ್ಕೆ 800 ಕೋಟಿಅನುದಾನ ಕೊಡಬೇಕೆಂಬ ನಿಯಮವಿದೆ. ಬೀದರ್ ಜಿಲ್ಲೆಯಲ್ಲಿಯೇ 40 ಕುರಿ ಸಂಘಗಳಿವೆ. ಅವುಗಳಲ್ಲಿ 38 ಸಂಘಗಳಿಗೆ ಕೊಡುತ್ತಾರೆ. ಉಳಿದ ಎರಡು ಸಂಘಗಳಿಗೆ ಮುಂದಿನ ವರ್ಷ ಆಯ್ಕೆ ಮಾಡುತ್ತಾರೆ. ಈ ಎಲ್ಲಾ ಮಾಹಿತಿ ಕೇವಲ ಅಧಿಕಾರಿಗಳ ಹತ್ತಿರವಿದೆ. ಶಾಸಕರಿಗೆ ಈ ಆಯ್ಕೆ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿ ಜವಾಬ್ದಾರಿ ನೀಡಿದಾಗ ಮಾಹಿತಿ ಕೊರತೆಯಿಂದ ನಿಜವಾದ ಕುರಿಗಾಹಿ ಫಲಾನುಭವಿಗಳಿಗೆ ಅನ್ಯಾಯವಾಗುವ ಸಂಭವವಿದೆ. ಆದ್ದರಿಂದ ಶಾಸಕರನ್ನೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸುವುದಾದರೆ ಸಮಗ್ರ ಮಾಹಿತಿ ಪಡೆದು ಕೇವಲ ನಿಜವಾದ ಫಲಾನುಭವಿಗಳಿಗೆ ಮಾತ್ರ ನೀಡಬೇಕೆಂದುಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚಂದ್ರಕಾಂತ ನೇಳಗೆ, ಲೋಕೇಶ ಜಬಾಡೆ, ಅಮೃತ ವಗ್ಗೆ, ಶಾಮರಾವ್ ರಕ್ಷಾಳ, ಆಶೋಕ ಹಳೆಂಬುರ, ಶ್ರೀನಿವಾಸ ಮೇತ್ರ ಬಾಲಾಜಿ ಜಬಾಡೆ, ನರಸಿಂಗ್ ಸೋನಾಳ, ಸಂಜುಕುಮಾರ ಅಲ್ಲೂರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.