ಸಿದ್ಧರಾಮಾನಂದಪುರಿ ಸ್ವಾಮಿಗಳ ಧರ್ಮಜಾಗೃತಿ ಕಹಳೆಯ ನಿನಾದ ನಾಡೆಲ್ಲ ಮೊಳಗಲಿ

ಸಂಸ್ಕೃತಿ

  ಸಿದ್ಧರಾಮಾನಂದಪುರಿ ಸ್ವಾಮಿಗಳ ಧರ್ಮಜಾಗೃತಿ ಕಹಳೆಯ ನಿನಾದ ನಾಡೆಲ್ಲ ಮೊಳಗಲಿ

                             ಮುಕ್ಕಣ್ಣ ಕರಿಗಾರ

 

ಕಾಗಿನೆಲೆ ಕನಕಗುರುಪೀಠದ ತಿಂಥಣಿಬ್ರಿಡ್ಜ್ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧರಾಮಾನಂದ ಪುರಿ ಸ್ವಾಮಿಗಳು ಈಗ್ಗೆ ಹತ್ತೆಂಟು ವರ್ಷಗಳಿಂದಲೂ ಮಕರಸಂಕ್ರಾತಿ ಹಬ್ಬವನ್ನು’ ಹಾಲುಮತ ಉತ್ಸವ’ ವನ್ನಾಗಿ ಆಚರಿಸುತ್ತ ನಾಡಿನ ಹಾಲುಮತಸಮಾಜದ ಸಂಘಟನೆ ಮಾಡುತ್ತ,ಹಾಲುಮತ ಸಂಸ್ಕೃತಿಯ ಹಿರಿಮೆ ಗರಿಮೆಗಳನ್ನು ಪ್ರಚಾರ,ಪ್ರಸಾರ ಮಾಡುವ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ.ಈ ವರ್ಷದ ಮಕರಸಂಕ್ರಾಂತಿಯನ್ನು ‘ ಹಾಲುಮತ ಸಾಹಿತ್ಯ ಉತ್ಸವ’ ವನ್ನಾಗಿ ಆಚರಿಸುತ್ತಿರುವುದು ವಿಶೇಷ.ಅದರಲ್ಲೂ ಹಾಲುಮತ ಸಾಹಿತ್ಯ ಉತ್ಸವದ ಅಂಗವಾಗಿ ಹಾಲುಮತಸ್ಥ ಪೂಜಾರಿಗಳು,ಗುರುಗಳಿಗೆ ಪೂಜಾವಿಧಿವಿಧಾನಗಳ ಶಿಕ್ಷಣ ಕೊಡುವ ಕಾರ್ಯವನ್ನು ಮಾಡುತ್ತಿರುವುದಂತೂ ವಿಶೇಷವಾದುದು,ಉಲ್ಲೇಖನೀಯವಾದುದು.

 

ಹಾಲುಮತವು ದೇಶದ ಮೂಲಮತವು.ಶೈವ ಧರ್ಮವೆಂಬ ಮಹಾವೃಕ್ಷದ ಮೊದಲ ಟಿಸಿಲೇ ಹಾಲುಮತವು.ನೇಪಾಳದ ಪಾಶುಪತ ಶೈವವು ಹಾಲುಮತದ ಪ್ರಾಚೀನತೆಗೆ ಕುರುಹು.ವೇದಪೂರ್ವ ಕಾಲದಿಂದಲೂ ಭಾರತದ ಮೂಲಮತವಾಗಿ ಹಾಲುಮತವು ಅಸ್ತಿತ್ವದಲ್ಲಿತ್ತು.ಸಿಂಧೂ ನಾಗರಿಕತೆಯಲ್ಲಿ ಕಂಡ ಟಗರುದಲೆಯ ಪಶುಪತಿ ಶಿವ ಹಾಲುಮತದ ನೆಲದ ಮೂತಮತನಿದರ್ಶನಕ್ಕೆ,ಪ್ರಾಚೀನತೆಗೆ ಸಾಕ್ಷಿ.ಭಾರತದ ನೂರಕ್ಕೆ ಎಪ್ಪತ್ತೈದರಷ್ಟು ಜನ ಶರಣರು,ಸಂತರು,ಅನುಭಾವಿಗಳು ಹಾಲುಮತದವರೇ ಎನ್ನುವುದು ಸೂರ್ಯಸತ್ಯ.

 

ಭಾರತದಲ್ಲಿ ರಾಜ್ಯ ಸಾಮ್ರಾಜ್ಯಗಳನ್ನು ಕಟ್ಟಿ ಆಳಿದ ಹಿರಿಮೆಯು ಹಾಲುಮತಸ್ಥ ಕುರುಬರದೆ.ವಿಜಯನಗರಸಾಮ್ರಾಜ್ಯ ಸ್ಥಾಪಕರಾದ ಹಕ್ಕಬುಕ್ಕರು ಕುರುಬರೆಂಬುದು ಎಲ್ಲರೂ ಬಲ್ಲ ಸಂಗತಿ. ‘ಕವಿಕುಲಗುರು’ವೆಂದು ಪ್ರಖ್ಯಾತನಾದ ವಿಶ್ವವಂದಿತ ಕಾಳಿದಾಸನೂ ಕುರುಬರವನೆ.ಕನ್ನಡದ ನೆಲದಲ್ಲಿ ಹರಿಯನ್ನು ತಂದಿರಿಸಿದ ಹಿರಿಮೆಯ ಕನಕದಾಸರ ಮಹಿಮೆಯಂತೂ ಸಂತಪ್ರಪಂಚದಲ್ಲಿ ಚಿರನೂತನ ಶಾಶ್ವತ ಸತ್ತ್ವ.ಪ್ರಹ್ಲಾದನಿಗಾಗಿ ಅರಮನೆಯ ಕಂಬದಲ್ಲಿ ನರಸಿಂಹನಾಗಿ ಅವತರಿಸಿದ ವಿಷ್ಣುವು ತನ್ನ ಅಂತರಂಗದ ಭಕ್ತ ಕನಕದಾಸರಿಗಾಗಿ ಉಡುಪಿಯಲ್ಲಿ ಪಶ್ಚಿಮಾಭಿಮುಖವಾಗಿ ತಿರುಗಿ,ಕಿಂಡಿಯಲ್ಲಿ ದರ್ಶನ ನೀಡುವ ಮೂಲಕ ಕನಕದಾಸರ ಶುದ್ಧ ಸಿದ್ಧ ವ್ಯಕ್ತಿತ್ವವನ್ನು ಜಗತ್ತಿಗೆ ಪ್ರಕಟಪಡಿಸುವನು.ಆದಿಗುರುವೆಂದು ಪೂಜಿತರಾಗುವ ರೇವಣಸಿದ್ಧರು ಕುರುಬರ ಮೂಲಗುರುಗಳು,ದೇಶದ ಆಧ್ಯಾತ್ಮಿಕ ಪ್ರಪಂಚದ ಮೊದಲ ಮಹಾಗುರುಗಳು.ಇತಿಹಾಸಪೂರ್ವಕಾಲದಿಂದಲೂ ಪ್ರವಹಿಸುತ್ತ ಬಂದ ಹಾಲುಮತ ಅನುಭಾವ ಪರಂಪರೆಯು ಕಾಲಕಾಲಕ್ಕೆ ಶರಣರು,ಸಂತರುಗಳನ್ನು ಪ್ರಕಟಿಸುತ್ತ ಬತ್ತದ ತೊರೆಯಾಗಿ,ನಿತ್ಯನಿರ್ಮಲಗಂಗೆಯಾಗಿ ಪ್ರವಹಿಸುತ್ತಲೇ ಇದೆ.

 

ಇಷ್ಟು ಭವ್ಯ ಪರಂಪರೆ,ಇತಿಹಾಸವನ್ನು ಹೊಂದಿಯೂ ಅಕ್ಷರಜ್ಞಾನದ ಕೊರತೆ,ಸಂಘಟನೆಯ ಅಭಾವ ರಾಜಕೀಯ ಸ್ಥಾನಮಾನಗಳ ಅವಕಾಶಗಳ ಕೊರತೆಯಿಂದ ಹಿನ್ನಡೆಯನ್ನು ಅನುಭವಿಸುತ್ತಿದ್ದ ಹಾಲುಮತ ಕುರುಬ ಸಮಾಜಕ್ಕೆ ಕಿರೀಟಪ್ರಾಯಭೂಷಣರಾಗಿ ಎದ್ದು ನಿಂತಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಮೊನ್ನೆ ಜನೆವರಿ ಆರರಂದು ದೇವರಾಜು ಅರಸು ಅವರ ಸಾಧನೆಯನ್ನು ಮೀರಿನಿಂತ ಮಹಾಪುರುಷರಾಗಿ,ಮಹಾನ್ ರಾಜಕಾರಣಿಗಳಾಗಿ ತಮ್ಮ ವಿಜಯಸಾಧಿಸಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು. ಇದು ಕುರುಬರ ಸತ್ತ್ವಸಿದ್ಧಿಯ ವಿಜಯ.

 

ಇಂತಹ ಉನ್ನತಿಕೆಯ ಕೀರ್ತಿಮಾಲೆ ಧರಿಸಿಯೂ ಹಾಲುಮತ ಸಮಾಜವು ಪೂಜಾಪರಂಪರೆಗಳ ಅರಿವು ಇಲ್ಲದೆ ‘ ಕುರುಬರ ಪೂಜೆ’ ಎನ್ನುವ ಅವಹೇಳನಕ್ಕೆ ಪಾತ್ರವಾಗಿತ್ತು.ನಾನು ಈ ಹಿಂದೆ ಹಲವು ಸಂದರ್ಭಗಳಲ್ಲಿ ನನ್ನ ಆತ್ಮೀಯರಾಗಿರುವ ಸಹೋದರ ಚಿದಾನಂದ ಗುರುವಿನ ಅವರಿಗೆ ಕುರುಬರ ಪೂಜಾರಿಗಳು,ಗುರುಗಳಿಗೆ ಪೂಜೆ ಅರ್ಚನೆಯ ವಿಧಿ ವಿಧಾನಗಳನ್ನು ಕಲಿಸುವ ಅಗತ್ಯವಿದೆ.ಇತರ ಮತಗಳ ಜನರು ಮಂತ್ರ ಪೂಜೆಗಳೆಂದು ಉಚ್ಚರಿಸುವ ಅಪಭ್ರಂಶ ‘ಉಗುಳಿ’ ಗಿಂತ ಸರಳವಾಗಿ,ಜನಸಾಮಾನ್ಯರಿಗೆ ಅರ್ಥವಾಗುವ ಪಂಚೋಪಚಾರ ಪೂಜೆಯಂತಹ ಸಂಕ್ಷಿಪ್ತ ಪೂಜಾ ವಿಧಾನವನ್ನು ಕಲಿಸುವ ಅಗತ್ಯವಿದೆ ಎಂದು ಹೇಳುತ್ತಿದ್ದೆ.ಹೇಳಿದ್ದು ಮಾತ್ರವಲ್ಲ,ನಾನು ಪೀಠಾಧ್ಯಕ್ಷನಾಗಿರುವ ನಮ್ಮ ಮಹಾಶೈವ ಧರ್ಮಪೀಠದ ಮೂಲಕ ಶಿವಪರಂಪರೆಯ ‘ ಪಂಚೋಪಚಾರ ಪೂಜಾ ವಿಧಾನ’ ಮತ್ತು ‘ ಅಷ್ಟೋತ್ತರ ಶತನಾಮಾವಳಿ’ ಮಾಲಿಕೆಗಳನ್ನು ಪ್ರಕಟಿಸುವ ಮೂಲಕ ಕುರುಬರು,ಶೂದ್ರರು,ತಳಸಮುದಾಯಗಳ ಜನತೆಯಲ್ಲಿ ಧಾರ್ಮಿಕ ಜಾಗೃತಿಯನ್ನು ಉಂಟು ಮಾಡುತ್ತಿದ್ದೇನೆ.ಸಹೋದರ ಚಿದಾನಂದ ಗುರುವಿನ ಅವರು ಕನಕ ಗುರು ಪೀಠದ ಸಿದ್ಧರಾಮಾನಂದ ಪುರಿ ಸ್ವಾಮೀಜಿಯವರಿಗೆ ಆತ್ಮೀಯರಾಗಿರುವ ಮೂಲಕ ಅವರೊಂದಿಗೆ ಚರ್ಚಿಸಿ, ಈ ಬಾರಿಯ ಹಾಲುಮತ ಉತ್ಸವವನ್ನು ‘ ಹಾಲುಮತ ಸಾಹಿತ್ಯ ಉತ್ಸವ’ ವನ್ನಾಗಿ ಪರಿವರ್ತಿಸಿ ಹಾಲುಮತದ ಪೂಜಾರಿಗಳು,ಗುರುಗಳಿಗೆ ಪೂಜೆಯ ಶಿಕ್ಷಣ ನೀಡುವ ಏರ್ಪಾಟು ಮಾಡಿರುವುದು ಸ್ತುತ್ಯ ಕಾರ್ಯವಾಗಿದೆ,ಅಭಿನಂದನೀಯ ಕಾರ್ಯವಾಗಿದೆ.ಸಿದ್ಧರಾಮಾನಂದ ಪುರಿ ಸ್ವಾಮಿಗಳವರ ಕಾರ್ಯವನ್ನು ನಾನು ಇಪ್ಪತ್ತು ವರ್ಷಗಳಿಂದಲೂ ನೋಡುತ್ತಿದ್ದೇನೆ.ಅವರು ಸಮಾಜದ ಸಂಘಟನೆ,ಉನ್ನತಿಗಾಗಿ ದಣಿವರಿಯದೆ ದುಡಿಯುತ್ತಿದ್ದಾರೆ.ಹಾಲುಮತ ಸಮಾಜದ ಸಂಘಟನೆ,ಶ್ರೇಯೋಭಿವೃದ್ಧಿಗೆ ಮಹಾನ್ ಕೊಡುಗೆ ನೀಡಿದ ಅನನ್ಯ ಸಾಧನೆ,ಸಿದ್ಧಿಯ ಶ್ರೇಯಸ್ಸು ಸಿದ್ಧರಾಮಾನಂದ ಪುರಿ ಸ್ವಾಮಿಗಳವರಿಗಿದೆ.

 

‌ ಕಾಗಿನೆಲೆಯಲ್ಲಿ ಕನಕಗುರುಪೀಠವು ಸ್ಥಾಪನೆಯಾದಾಗಿನಿಂದಲೂ ಕುರುಬರಲ್ಲಿ ಜಾಗೃತಿ ಮೂಡಿದೆ.ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಕುರುಬರು ಮುಂದೆ ಬರುತ್ತಿದ್ದಾರೆ.ಆದರೆ ಧಾರ್ಮಿಕವಾಗಿ ಕುರುಬರಿಗೆ ಅವರ ಹಿರಿಮೆ ಗರಿಮೆಗಳನ್ನು ಪರಿಚಯಿಸುವ ಅಗತ್ಯವಿದೆ. ತನ್ನ ಶಕ್ತಿ ಸಾಮರ್ಥ್ಯವನ್ನು ಮರೆತ ಶಾಪಗ್ರಸ್ತಹನುಮ ಜಾಂಬುವಂತನ ಸ್ಫೂರ್ತಿ ಪ್ರೇರಣೆಯ ನುಡಿಗಳಿಂದ ಎಚ್ಚರಗೊಂಡು,ವಿರಾಟ್ ಪುರುಷನಾಗಿ ಬೆಳೆದು ಸೀಮಾತೀತ ಕಡಲನ್ನು ಲಂಘಿಸಿದಂತೆ ಆಧ್ಯಾತ್ಮಿಕ ಜಾಗೃತಿಯಿಂದ ಕುರುಬ ಸಮುದಾಯವು ಎಚ್ಚರಗೊಂಡು,ತನ್ನ ಸಹಜ ಆತ್ಮಸಿದ್ಧಿಯಿಂದ ನಾಡು,ದೇಶದ ಗುರುಗಳಾಗಿ ಮೆರೆಯಬೇಕಿದೆ.ಅಂತಹ ನಾಡಗುರುಪರಂಪರೆಯ ಅರಿವನ್ನು ಕುರುಬ ಸಮುದಾಯದಲ್ಲಿ ಉಂಟು ಮಾಡುವ ಧರ್ಮಜಾಗೃತಿಯ ಸಮಾವೇಶ ಇದಾಗಲಿ ಎಂದು ಹಾರೈಸಿ,ಸಮಾರಂಭದ ಯಶಸ್ಸಿಗೆ ಸರ್ವಶುಭಗಳನ್ನು ಹಾರೈಸುವೆ.