ಕನಕದಾಸರ ‘ಎದೆಯಕರೆ’ಗೆ ಓಗೊಟ್ಟನು ಕೃಷ್ಣ

ಕಲ್ಯಾಣ ಕಾವ್ಯ

ಕನಕದಾಸರ ‘ಎದೆಯಕರೆ’ಗೆ ಓಗೊಟ್ಟನು ಕೃಷ್ಣ

ಮುಕ್ಕಣ್ಣ ಕರಿಗಾರ

 

ಶುಷ್ಕ ಶಾಸ್ತ್ರದುಪಚಾರದ ಪೂಜೆಗೆ
ಒಲಿಯಲಾರೆನು ಎಂಬುದನು
ನಿರೂಪಿಸಿದನು ಹರಿಯು
ಕನಕದಾಸರ ಎದೆತುಂಬಿದ ಭಕ್ತಿಯ ಕರೆಗೆ ಓಗೊಟ್ಟು.

ಪಠಿಸಿದರೆ ವೇದಮಂತ್ರ ಬರುವನೇನು ಹರಿಯು?
ಅಷ್ಟೋಪಚಾರ,ಷೋಡಶೋಪಚಾರ ಪೂಜೆಗಳು
ಕರೆತರಬಲ್ಲವೆ ಹರಿಯನ್ನು?
ಭ್ರಮೆ! ಬರಿಯ ಬಳಲಿಕೆ!
ಹೊಟ್ಟೆಹೊರೆಯಲು ಕಟ್ಟಿದ ಶಾಸ್ತ್ರ
ಗಟ್ಟಿಯಾಗಿ ಊರುಕೇಳುವಂತೆ ಕೂಗುವ ಮಂತ್ರಘೋಷ
ತಟ್ಟುವುದೆ ಹರಿಯ ಹೃದಯ!?
ಜಗವ ಮೆಚ್ಚಿಸಲೆಂದು ಗೈವಪೂಜೆ
ಜನಾರ್ಧನನ ಮೆಚ್ಚಿಸಬಹುದೆ?
ಬಡಿವಾರದ ಶಾಸ್ತ್ರಪೂಜೆಗಳಿಗೆ ಒಲಿಯದೆ ಉಡುಪಿಯಲ್ಲಿ
ಜಡನಾಗಿ ನಿಂತಿದ್ದ ಕೃಷ್ಣನು
ಒಡಲುತುಂಬಿ ಕರೆದ ತನ್ನ ಭಕ್ತ
ಕನಕದಾಸರ ಎದೆಯಕರೆಗೆ ಓಗೊಟ್ಟು
ಚಿನ್ಮಯಲೀಲೆತೋರಿ ವಿಗ್ರಹದಲ್ಲಿ,
ತಿರುಗಿದನು ಹಿಂದಕ್ಕೆ,ಪಡುವಣಕ್ಕೆ
‘ ಕಂದ ಕನಕ,ಇಗೋ ನಿನ್ನ ತಂದೆ‌ ಕೃಷ್ಣ
ನಿಂದಿಹೆನು ನೋಡು‌ ನಿನ್ನೆದರು’
ಅಂದ ಕೃಷ್ಣನ ನುಡಿಗೇಳ್ದು ಕಣ್ಣುಗಳ ತೆರೆದು
‘ ತಂದೆ,ಲೋಕಬಂಧುವೆ! ಧನ್ಯನಾದೆನು
ಇಂದೆನ್ನ ಜನ್ಮ ಸಾರ್ಥಕವಾಯಿತು’
ಎಂದೆನುತ ಹರಿಯಪಾದಪದ್ಮಗಳಿಗೆರಗಿ ವಂದಿಸಿದನು ಕನಕ.
‘ ಬೇಡು ಕಂದ ಕನಕ, ಅದೇನೇನನ್ನು ಬೇಡುವೆಯೊ
ನೀಡುವೆನು ನಾನದನು’ ಎನ್ನಲು ಹರಿಯು
‘ ಬೇಡಲೇನು ತಂದೆ ,ನಿನ್ನ ದರ್ಶನವೆ ಮಹಾಭಾಗ್ಯವೆನಗೆ
ನೀಡುವುದಾದರೆ ನೀನು ವರವ
ನೀನಿಲ್ಲಿ ಕರುನಾಡಿನ ಈ ನೆಲದಲ್ಲಿ
ಉಡುಪಿಯಲ್ಲಿ ನೆಲೆನಿಂದು
ಉಡುಪಿಯ ಕೃಷ್ಣನಾಗಿ
ಕನ್ನಡದ ಕೃಷ್ಣನಾಗಿ
ಜಗವನುದ್ಧರಿಸು ತಂದೆ.
ಕನ್ನಡಕೆ ಸಿಗಲಿ ಅಗ್ರಮನ್ನಣೆ ಇನ್ನುಮುಂದೆ
ಜನಪದರ ದೇವ ನೀನಾಗಿ ಜನಸಾಮಾನ್ಯರ ಪೊರೆ
ಘನತೆಯೊದಗಲಿ ಜನಸಾಮಾನ್ಯರ ಬಾಳ್ಗಳಿಗೆ!’
‘ ತಥಾಸ್ತು’ ಎಂದ ಹರಿಯು
‘ ಕಂದ ಕನಕ,ಹಿಂದೆ ಒಲಿಸಿದವರುಂಟೆ
ನಿನ್ನಂತೆ ನನ್ನನ್ನು?
ನಿನ್ನ ಭಕ್ತಿ ಧ್ಯಾನಗಳಿಗೊಲಿದು ನಿಲ್ಲುವೆನು
ನಾನು ಇಲ್ಲಿಯೆ,ಈ ಉಡುಪಿಯಲ್ಲಿ
ನಿನ್ನ ತಾಯ್ನುಡಿ ಕನ್ನಡದ ಸೊಬಗು ಸವಿಯುತ್ತ
ನಿಲ್ಲುವೆ ಕನ್ನಡದ ಕೃಷ್ಣನಾಗಿ’
ಎಂದಭಯವಿತ್ತನು.
ಇದು ಕನಕರ ಹಿರಿಮೆ!
ಕನ್ನಡದ ಹಿರಿಮೆ !
ಕೃಷ್ಣನನ್ನು ಕನ್ನಡಿಗನನ್ನಾಗಿಸಿದ
ಕನ್ನಡಸಂತ ಕನಕರ ಹಿರಿಮೆ!