ಕನ್ನಡನುಡಿಗೆ ದಿವ್ಯತೆಯನ್ನಿತ್ತ ಕನಕದಾಸರು

ಕಲ್ಯಾಣ ಕಾವ್ಯ

     ಕನ್ನಡನುಡಿಗೆ ದಿವ್ಯತೆಯನ್ನಿತ್ತ ದಾಸರು

     ಮುಕ್ಕಣ್ಣ ಕರಿಗಾರ

**********

 ಕುರಿತೋದದೆಯೆ ಕಾವ್ಯ ಛಂದಸ್ಸು ಶಾಸ್ತ್ರ ಅಲಂಕಾರಗಳ

 ಬೆರೆತು ಜನರೊಡನೆ

 ಅರಿತು ಜನತೆಯ ಬದುಕು ಬವಣೆಗಳ

 ಜನತೆಯ ಪಾಡು ಪರಿಬವಣೆಗಳ

ಹಾಡಾಗಿಸಿದ ಕವಿ.

 ಜನಸಾಮಾನ್ಯರ ನೋವಿಗೆ

ಕಾವ್ಯರೂಪ ತೊಡಿಸಿದ ಕವಿರಾಯ.

 ಪಂಡಿತರ ಬಳಿ ತೆರಳಿ

ಮಂಡಿಯೂರಿ ಕಲಿಯದೆ ಕಾವ್ಯ ಶಾಸ್ತ್ರಗಳ

 ಕನಕದಾಸರು ಕಲಿತರು

 ಬಾಳಿನರ್ಥವನು ಜನರ ನಡುವೆ.

ಕಂಡುಂಡ ಜನತೆಯ ನೋವನ್ನು

ಜನಾರ್ಧನನ ಎದೆಕರಗುವ ಕಾವ್ಯವಾಗಿಸಿ

ಹರಿಯನ್ನು ಕರೆದ ಕನಕದಾಸರು

ಕನ್ನಡ ನುಡಿಸತ್ತ್ವವನು ವೈಕುಂಠದ

ಗಡಿಮುಟ್ಟಿಸಿದ ಗಟ್ಟಿಗರು.

 ದೇವಭಾಷೆಯ ಸೊಬಗಿಗೆ ಒಲಿಯದ

 ಕೃಷ್ಣನು ಉಡುಪಿಯಲ್ಲಿ ಕನಕರಿಗಾಗಿ

ಪಶ್ಚಿಮಕ್ಕೆ ತಿರುಗಿ ದರ್ಶನ ನೀಡಿದ್ದು

ಕನಕರೆದೆಯ ಭಕ್ತಿರಸಕೆ

ಭಗವಂತನನುಗ್ರಹದ ಕರುಣಾರಸ ಪ್ರವಾಹ ದರ್ಶನ

ಕನ್ನಡನುಡಿ ಸತ್ತ್ವದ ದಿವ್ಯತೆ.

ಕನಕರಂತೆ ಹಾಡಿ ಒಲಿಸಿದವರುಂಟೆ

ಹರಿಯನ್ನು?

ಕಲ್ಲಲ್ಲಿ ಚಿನ್ಮಯನ ಆಹ್ವಾನಿಸಿದ

ಕನಕರ ಕಾವ್ಯಕ್ಕೆ ಮಿಗಿಲು ಕಾವ್ಯಗಳುಂಟೆ

ಧರೆಯಲ್ಲಿ ?

ಮೊದಲಿಗರು ಕನಕದಾಸರು

ನಾಡನುಡಿಯಲ್ಲಿ ಹಾಡಿ ಹರಿಯ ಗೆದ್ದವರಲ್ಲಿ.