ಮೂರನೇ ಕಣ್ಣು
ಮಾನವೀಯ ನೆಲೆಯ ಆಡಳಿತದ’ ಮುಖ್ಯಮಂತ್ರಿಗಳ ಹೊಸವರ್ಷದ ಸೂಚನೆ ಅಧಿಕಾರಿಗಳೆಲ್ಲರ ಸೇವಾ ಬದ್ಧತೆಯಾಗಲಿ
ಮುಕ್ಕಣ್ಣ ಕರಿಗಾರ
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೆ ೨೦೨೬ ರ ಹೊಸವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತ ಜನೆವರಿ ಒಂದರಂದು ನೀಡಿದ ಸಂದೇಶವು ಅಧಿಕಾರಿಗಳಲ್ಲಿ ಸ್ಫೂರ್ತಿ, ಪ್ರೇರಣೆ ತುಂಬುವಂತೆ ಇದೆ.’ ಸರಕಾರದ ಸೇವೆಗಳನ್ನು ಜನರಿಗೆ ಯಾವುದೇ ವಿಳಂಬ ಮಾಡದೆ ತಲುಪಿಸುವ ಜೊತೆಗೆ, ಜಾತ್ಯಾತೀತವಾಗಿ ,ಮಾನವೀಯ ನೆಲೆಯಲ್ಲಿ ಸ್ಪಂದಿಸುವ ಕೆಲಸ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು( ಪ್ರಜಾವಾಣಿ ,ಶುಕ್ರವಾರ ಜನೆವರಿ 02,2026 ಪುಟ 03 ಬೆಂಗಳೂರು ನಗರ) ಸರಕಾರದ ಹಿರಿಯ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನೀಡಿದ ಈ ಸಲಹಾತ್ಮಕ ಮಾತುಗಳನ್ನು ರಾಜ್ಯದ ಎಲ್ಲ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು,೨೦೨೬ ನೆಯ ವರ್ಷದ ಆಡಳಿತ ತತ್ತ್ವವನ್ನಾಗಿ ಸ್ವೀಕರಿಸಬೇಕು.ಜನಸೇವೆಯ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು.
‘ಸಾರ್ವಜನಿಕ ಸೇವೆಯಲ್ಲಿ ವಿಳಂಬನೀತಿ ಅನುಸರಿಸುವುದು ಕೂಡ ಅಪರಾಧವೆ’ ಎಂದು ಎಚ್ಚರಿಸಿರುವ ಮುಖ್ಯಮಂತ್ರಿಗಳವರ ಮಾತಿನ ಹಿಂದಿನ ಜನಸೇವೆಯ ಕಾಳಜಿ- ಕಳಕಳಿಯನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು.ಮುಖ್ಯಮಂತ್ರಿ ಸಿದ್ಧರಾಮಯ್ಯನವರು ‘ಮಾನವೀಯ ನೆಲೆಯಲ್ಲಿ, ಜಾತ್ಯಾತೀತರಾಗಿ,ಸಮಸಮಾಜ ನಿರ್ಮಾಣದ ಬದ್ಧತೆಯಿಂದ ಕಾರ್ಯನಿರ್ವಹಿಸಲು’ ಅಧಿಕಾರಿಗಳಿಗೆ ಸೂಚಿಸಿರುವುದು ಮಹತ್ವದ ಸಂಗತಿ. ಬಹಳಷ್ಟು ಜನ ಅಧಿಕಾರಿಗಳಲ್ಲಿ ‘ ತಾವು ಜನರನ್ನು ಆಳಲೆಂದೇ ಹುಟ್ಟಿದ ವಿಶೇಷ ವರ್ಗ’ ಎನ್ನುವ ಬ್ರಿಟಿಷ್ ಆಳ್ವಿಕೆಯ ಭಾವ ಇದೆಯೇ ಹೊರತು ಇನ್ನೂ ಅವರು ಪ್ರಜಾಪ್ರಭುತ್ವ ಭಾರತದ ಜನಸೇವೆಯ ತತ್ತ್ವಗಳನ್ನು ಮೈಗೂಡಿಸಿಕೊಂಡಿಲ್ಲ.’ಆಳ್ವಿಕೆ’ ಯ ಗುಂಗಿನಲ್ಲಿ ಇರುವವರು ‘ ಸೇವೆ’ ಯ ತತ್ತ್ವವನ್ನು ಅರ್ಥಮಾಡಿಕೊಳ್ಳಲಾರರು.ಅಧಿಕಾರ ಎನ್ನುವುದು ಜನಸೇವೆಗೆ ಒದಗಿಬಂದ ಅವಕಾಶ ಎಂದು ತಿಳಿದುಕೊಂಡಿರುವ ಅಧಿಕಾರಿಗಳ ಸಂಖ್ಯೆ ಬಹಳ ಕಡಿಮೆ ಇದೆ.ಭಾರತೀಯ ಆಡಳಿತ ಸೇವೆ,ಭಾರತೀಯ ಪೋಲಿಸ್ ಸೇವೆ ಸೇರಿದಂತೆ ರಾಜ್ಯಸೇವೆಗೆ ಸೇರುವ ಅಧಿಕಾರಿಗಳಲ್ಲಿ ‘ನಾನು ಎಲ್ಲರಿಗಿಂತ ಬುದ್ಧಿವಂತ,ವಿಶೇಷ ವ್ಯಕ್ತಿ. ಆ ಕಾರಣದಿಂದ ನನಗೆ ಈ ಸೇವೆ, ಈ ಸ್ಥಾನಮಾನ ಸಿಕ್ಕಿದೆ’ ಎನ್ನುವ ‘ವಿಶೇಷಪ್ರಜ್ಞೆ’ ಯ ಪ್ರಜಾಪ್ರಭುತ್ವ ಭಾರತಕ್ಕೆ ಸಲ್ಲದ ಭಾವ ಮೈಗಂಟಿಕೊಂಡಿರುತ್ತದೆ.ಹಾಗಾಗಿ ಅವರು ಜನರೊಂದಿಗೆ ಮುಕ್ತವಾಗಿ ಬೆರೆಯುವುದಿಲ್ಲ,ತಮ್ಮ ಕಛೇರಿಗಳಿಗೆ ಬರುವ ಜನರೊಂದಿಗೆ ಮಾತನಾಡಬಯಸುವುದಿಲ್ಲ.ಅಧಿಕಾರಿಗಳು –ಅವರು ಯಾವುದೇ ಸೇವೆಗೆ ಸೇರಿದವರಾಗಿರಲಿ — ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ- ಸವಲತ್ತುಗಳನ್ನು ಪಡೆಯುತ್ತಾರೆ.ಸಾರ್ವಜನಿಕರ ತೆರಿಗೆಯ ಹಣದಿಂದ ಸಂಬಳ ಸವಲತ್ತುಗಳನ್ನು ಅನುಭವಿಸುವವರು ಸಾರ್ವಜನಿಕರ ಬಗ್ಗೆ, ಜನಸಾಮಾನ್ಯರ ಬಗ್ಗೆ ಸದಭಿಪ್ರಾಯ ತಾಳಬೇಕು.ಜನಸಾಮಾನ್ಯರ ಕಷ್ಟವನ್ನು ಕೇಳುವ ಹೃದಯವಂತಿಕೆ ಮೈಗೂಡಿಸಿಕೊಳ್ಳಬೇಕು.ತಮ್ಮ ಕಛೇರಿಗೆ ಬಂದಿರುವವರು ತಮ್ಮಂತೆಯೇ ಹೃದಯ ,ಭಾವನೆಗಳುಳ್ಳ ಮನುಷ್ಯರು ಎಂದು ಅರ್ಥ ಮಾಡಿಕೊಳ್ಳಬೇಕು.ಅಧಿಕಾರಿಯ ದರ್ಪದಲ್ಲಿ ಜನರನ್ನು ನೋಡದೆ ತಮ್ಮ ಬಳಿ ಬಂದವರ ಸ್ಥಾನದಲ್ಲಿ ತಮ್ಮನ್ನು ನಿಲ್ಲಿಸಿಕೊಂಡು ಒಂದು ಕ್ಷಣ ಆಲೋಚಿಸಬೇಕು.’ ನಾನು ಅವರ ಸ್ಥಾನದಲ್ಲಿದ್ದರೆ’ ಎನ್ನುವ ಪ್ರಶ್ನೆ ಹಾಕಿಕೊಂಡು ಜನತೆಗೆ ಸ್ಪಂದಿಸುವ ಸ್ಪಂದನಶೀಲಗುಣವನ್ನು ಬೆಳೆಸಿಕೊಳ್ಳಬೇಕು.ಸಾರ್ವಜನಿಕರನ್ನು ನಿಕೃಷ್ಟವಾಗಿ ಕಾಣುತ್ತ,ಕಛೇರಿಗಳಿಗೆ ಅಲೆದಾಡುವಂತೆ ಮಾಡುವ ಅಧಿಕಾರಿಗಳು ನಾಗರಿಕಸಮಾಜದ ಪೀಡೆಗಳು,ಅವರು ಉತ್ತಮ ಅಧಿಕಾರಿಗಳಲ್ಲ.
ಅಧಿಕಾರಿಗಳ ‘ವಿಳಂಬ ನೀತಿಯ’ ಕಾರಣ ಈಗ ಸಾರ್ವಜನಿಕರಿಗೂ ಗೊತ್ತಾಗಿದೆ.ಅಧಿಕಾರಿಗಳ ಮನದಿಂಗಿತವನ್ನು ಅರಿತುಕೊಂಡ ಕೆಲವರು ತಮ್ಮ ಕೆಲಸ ಕಾರ್ಯಗಳು ಆದರೆ ಸಾಕು ಎಂದು ಹೊಂದಿಕೊಂಡು ಹೋದರೆ ಮತ್ತೆ ಕೆಲವರು ಲೋಕಾಯುಕ್ತ ಸಂಸ್ಥೆಯ ಮೊರೆ ಹೋಗುತ್ತಿದ್ದಾರೆ.ನಮ್ಮ ಅಧಿಕಾರಿಗಳು ಜನಸೇವಾ ಬದ್ಧತೆಯಿಂದ ಕರ್ತವ್ಯನಿರ್ವಹಿಸಿದ್ದರೆ ಲೋಕಾಯುಕ್ತದಂತಹ ಸಂಸ್ಥೆಯ ಅಗತ್ಯ ಇರುತ್ತಿರಲಿಲ್ಲ. ಪ್ರಾಮಾಣಿಕ ಅಧಿಕಾರಿಗಳು ಇಲ್ಲವೆಂದಲ್ಲ,ಇದ್ದಾರೆ; ಆದರೆ ಅವರ ಸಂಖ್ಯೆ ಕಡಿಮೆ.ಪ್ರಾಮಾಣಿಕ ಅಧಿಕಾರಿಗಳನ್ನು ಗುರುತಿಸಿ,ಗೌರವಿಸುವ ಕೆಲಸವೂ ಆಗಬೇಕಿದೆ.ಅಧಿಕಾರಿಗಳ ಪ್ರಾಮಾಣಿಕತೆಯು ಅವರಿಗೆ ‘ ಶಿಕ್ಷೆ’ ಆಗಬಾರದು.ಆ ಬಗ್ಗೆಯೂ ಕೂಡ ಆಲೋಚಿಸುವ ಅಗತ್ಯ ಇದೆ.
‘ಜಾತ್ಯಾತೀತರಾಗಿ,ಸಮಸಮಾಜ ನಿರ್ಮಾಣಕ್ಕೆ ಪರಿಶ್ರಮಿಸಿ’ ಎಂದು ನೀಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆ ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಅವರ ಬದ್ಧತೆಯ ಮಾತುಗಳು. ಭಾರತೀಯ ಸೇವೆಯ ಅಧಿಕಾರಿಗಳು ಜಾತ್ಯಾತೀತ ( Secular) ನೆಲೆಯಲ್ಲಿ ಕೆಲಸ ನಿರ್ವಹಿಸುತ್ತಾರೆ( ಅವರಲ್ಲೂ ಕೆಲವರು ಜಾತಿನಿಷ್ಠರಿದ್ದಾರೆ) ಆದರೆ ರಾಜ್ಯಸೇವೆಗೆ ಸೇರಿದ,ರಾಜ್ಯಸೇವೆಯಿಂದ ಭಾರತೀಯ ಆಡಳಿತ ಸೇವೆಗೆ ಪದೋನ್ನತಿ ಪಡೆದ ಅಧಿಕಾರಿಗಳು ಜಾತಿನಿಷ್ಠೆಯಿಂದ ಕೆಲಸ ಮಾಡುತ್ತಿರುವುದು ರಹಸ್ಯವೇನಲ್ಲ.ಅಧಿಕಾರಿಗಳು ಹುಟ್ಟುನಿಂದ ಅವರ ಯಾವ ಜಾತಿ,ಧರ್ಮಗಳಿಗೆ ಸೇರಿದವರೇ ಆಗಿರಲಿ ಅಧಿಕಾರಸ್ಥಾನಕ್ಕೆ ಬಂದೊಡನೆ ತಾವು ‘ ಸಾರ್ವಜನಿಕ ಸೇವಕರು’ ಎನ್ನುವ ಭಾವನೆಯಿಂದ ಕೆಲಸ ಮಾಡಬೇಕು. ಜಾತಿನಿಷ್ಠೆ ಮತ್ತು ಸ್ವಜನಪಕ್ಷಪಾತ ಬುದ್ಧಿ ಉತ್ತಮ ಅಧಿಕಾರಿಗಳ ಲಕ್ಷಣವಲ್ಲ.ಭ್ರಷ್ಟಾಚಾರಕ್ಕಿಂತ ಅಪಾಯಕಾರಿ ಸಂಗತಿ ಅಧಿಕಾರಿಗಳ ಜಾತಿನಿಷ್ಠೆ,ಧರ್ಮನಿಷ್ಠೆ.ಜಾತಿನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ತಮ್ಮ ಜಾತಿಯೇ ದೊಡ್ಡದು ಆಗುತ್ತದೆಯೇ ಹೊರತು ಸಾರ್ವಜನಿಕ ಸೇವೆಯ ತತ್ತ್ವ ದೊಡ್ಡದು ಆಗಿ ಕಾಣುವುದಿಲ್ಲ. ರಾಜಕಾರಣಿಗಳು ಜನತೆಯ ಓಟು ಪಡೆದು ಗೆದ್ದು ಬರಬೇಕಿದ್ದರಿಂದ ಅವರಿಗೆ ಜಾತಿಯ ಹಂಗು- ಅಭಿಮಾನ ಇದ್ದರೆ ಅದು ಸಹಜ ಮತ್ತು ಸಹ್ಯ ಕೂಡ.ಆದರೆ ಪ್ರತಿಭೆಯಿಂದ ಆಯ್ಕೆಯಾಗಿದ್ದೇನೆ ಎಂದು ಕೊಚ್ಚಿಕೊಳ್ಳುವ ಅಧಿಕಾರಿಗಳಿಗೆ ಏಕೆ ಜಾತಿಯ ಹಂಗು- ಅಭಿಮಾನಗಳು? ಸರಕಾರಿ ಕಛೇರಿಗಳನ್ನು ತಮ್ಮ ಜಾತಿಯ ಕೇಂದ್ರಗಳನ್ನಾಗಿ ಪರಿವರ್ತಿಸಿದ ಎಷ್ಟೋ ಜನ ಮಹಾನುಭಾವ ಅಧಿಕಾರಿಗಳಿದ್ದಾರೆ.ತಮ್ಮ ಜಾತಿ,ಮತ- ಧರ್ಮಗಳಿಗೆ ಸೇರಿದವರ ಕೆಲಸ ಕಾರ್ಯಗಳನ್ನು ತಕ್ಷಣ ಮಾಡಿಕೊಡುವ,ತಮ್ಮ ಮತ – ಧರ್ಮಗಳ ಜನರಿಗೆ ತಮ್ಮ ಕಛೇರಿಗಳಲ್ಲಿ ವಿಶೇಷ ಆದರಾತಿಥ್ಯ,ಸೌಲಭ್ಯ ಕಲ್ಪಿಸಿದ,ಕಲ್ಪಿಸುವ ಅಲ್ಪಬುದ್ಧಿಯ ಅಧಿಕಾರಿಗಳೂ ನಮ್ಮಲ್ಲಿದ್ದಾರೆ.ಅಂತಹ ಮಹಾನುಭಾವರು ನಮ್ಮ ಪ್ರಬುದ್ಧ ಸಂವಿಧಾನದ ಜಾತ್ಯಾತೀತ ತತ್ತ್ವದ ಆಶಯ ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು. ಜಾತಿ ಆಧಾರಿತ ಸರಕಾರಿ ಸಂಸ್ಥೆಗಳು, ಪ್ರಾಧಿಕಾರ, ನಿಗಮ ಮಂಡಳಿಗಳಲ್ಲಿ ಕೆಲಸ ನಿರ್ವಹಿಸುವವರು ತಾವು ನೇಮಕಗೊಂಡ ಸಂಸ್ಥೆಯ ಇತಿಮಿತಿಗಳಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇರುವುದರಿಂದ ಅವರನ್ನು ಅರ್ಥಮಾಡಿಕೊಳ್ಳಬಹುದು,ಅವರ ಜಾತಿಯುದ್ಧಾರದ ಕಾರ್ಯಕ್ರಮಗಳನ್ನು ಒಪ್ಪಬಹುದು.ಆದರೆ ಗ್ರಾಮಪಂಚಾಯತಿಯಂತಹ ಆಡಳಿತದ ತಳಹಂತದ ಗ್ರಾಮಾಭಿವೃದ್ಧಿ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಜಾತಿನಿಷ್ಠರಾಗಿದ್ದರೆ ಅದು ಸಾರ್ವಜನಿಕ ಸೇವೆಗೆ ಎಸಗುವ ಅಪಚಾರವೆ. ಸರಕಾರಿ ಆಸ್ಪತ್ರೆಯ ವೈದ್ಯನೊಬ್ಬ ತನ್ನ ಜಾತಿ,ಧರ್ಮಗಳ ರೋಗಿಗಳಿಗೆ ಆದ್ಯತೆ ನೀಡುತ್ತಾನೆ ಎಂದರೆ ಅದು ವೈದ್ಯಕೀಯ ವೃತ್ತಿಗೆ ಎಸಗುವ ಅಪಚಾರವೆ.ತನ್ನ ಸ್ವಂತ ಮಕ್ಕಳಂತೆ ಶಾಲೆಯ ಮಕ್ಕಳನ್ನು ಕಾಣಬೇಕಿದ್ದ ಶಿಕ್ಷಕನೊಬ್ಬ ಮಕ್ಕಳಲ್ಲಿ ತರತಮವೆಣಿಸುತ್ತಾನೆ,ಜಾತಿಭೇದ ಮಾಡುತ್ತಾನೆ ಎಂದರೆ ಅವನು ಉತ್ತಮ ಶಿಕ್ಷಕನಾಗಿರಲು ಸಾಧ್ಯವಿಲ್ಲ. ರಾಜ್ಯದ ಪರವಾಗಿ ಆಡಳಿತ ನಡೆಸುವ ತಹಶಿಲ್ದಾರರುಗಳು,ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು ಜಾತ್ಯಾತೀತ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು.ತಮ್ಮ ಜಾತಿಯ ಅಧಿಕಾರಿಗಳಿಗೆ ವಿಶೇಷ ಆದ್ಯತೆ ನೀಡುವ ,ತಮ್ಮ ಜಾತಿಯ ಅಧಿಕಾರಿಗಳನ್ನಷ್ಟೇ ತಮ್ಮ ಸರಕಾರಿ ವಸತಿಗೃಹಗಳಿಗೆ ಬಿಟ್ಟುಕೊಳ್ಳುವ ಸಣ್ಣಮನಸ್ಸಿನ ,ಪ್ರಜಾಪ್ರಭುತ್ವ ವಿರೋಧಿ ನಿಲುವಿನ,ಸಂವಿಧಾನ ವಿರೋಧಿ ಅಧಿಕಾರಿಗಳೂ ನಮ್ಮಲ್ಲಿ ಇದ್ದಾರೆ ಎನ್ನುವುದು ಬೇಸರದ ಸಂಗತಿ.
ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನಸೇವಾಬದ್ಧತೆಯ ತತ್ತ್ವವನ್ನು ನಮ್ಮ ಅಧಿಕಾರಿಗಳು ೨೦೨೬ ನೇ ವರ್ಷದ ತಮ್ಮ ಆಡಳಿತ ಸೂತ್ರವನ್ನಾಗಿ ಸ್ವೀಕರಿಸಿ ಆಡಳಿತ ನಿರ್ವಹಿಸಿದರೆ ಅದು ಪ್ರಜಾಪ್ರಭುತ್ವದ ಗೆಲುವು ಎನ್ನಿಸಿಕೊಳ್ಳುತ್ತದೆ,ಸಂವಿಧಾನದ ಗೆಲವು ಎನ್ನಿಸಿಕೊಳ್ಳುತ್ತದೆ.