ನಾಳೆ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ 28 ನೇ ವರ್ಷದ ಸಗರಾಡು ಉತ್ಸವ ಕಾರ್ಯಕ್ರಮ | ಸಗರನಾಡಿಗೆ ಮಾದರಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿ

       ಕಲ್ಯಾಣ ಕರ್ನಾಟಕದಲ್ಲಿ ಕಂಡುಬರುವ ಅನೇಕ ಸಂಘ ಸಂಸ್ಥೆಗಳಲ್ಲಿ ಶಹಾಪುರದ ಶ್ರೀ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯು ಕಳದ 27‌ ವರ್ಷಗಳಿಂದ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಗರನಾಡಿನಲ್ಲಿ ಉತ್ತಮ ಆಧ್ಯಾತ್ಮಿಕ, ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡುತ್ತಿರುವ ಮಾದರಿ ಸಂಸ್ಥೆಯಾಗಿದೆ.

ಸಮಾಜದಲ್ಲಿ ತಾರತಮ್ಯವಿಲ್ಲದೆ ಸರ್ವರಿಗೂ ಸರ್ವವೂ ಪ್ರಾಪ್ತವಾಗಬೇಕೆಂಬ ಮಹಾದಾಸೆಯಿಂದ ಸಮಾಜದಲ್ಲಿ ನವಚೇತನವನ್ನು ನೀಡಿದ ಶ್ರೇಯಸ್ಸು ಮಠ ಮಾನ್ಯಗಳಿಗೆ ಸಲ್ಲುತ್ತದೆ.ಆಧ್ಯಾತ್ಮಿಕ ಮಠ ಮಾನ್ಯಗಳು ಧಾರ್ಮಿಕ, ಸಾಂಸ್ಕೃತಿಕ ಮೌಲ್ಯಗಳ ಬೋಧನೆ ಮತ್ತು ಜ್ಞಾನ ಪ್ರಸಾರ ಮಾಡುವ ಕೇಂದ್ರವಾಗಿವೆ. ಇವು ಶರಣರ, ಸಂತರ, ಆಧ್ಯಾತ್ಮಿಕ ಸಾಧಕರ ಆಶ್ರಯ ತಾಣವಾಗಿರುವಂತೆ, ಹಸಿದು ಬಂದವರಿಗೆ ಅನ್ನಛತ್ರವೂ ಹೌದು. ಇಂತಹ ಹತ್ತು ಹಲವು ಸಾಂಸ್ಕೃತಿಕ ಪರಂಪರೆಯ ಉಳಿಸಿ ಬೆಳೆಸುವ ಮಹತ್ತರ ಉದ್ದೇಶಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯು ಭಕ್ತರ ಬದುಕಿನ ಸಾರ್ಥಕತೆಗಾಗಿ, ಉದ್ಧಾರಕ್ಕಾಗಿ ಯಾವುದೇ ಜಾತಿ, ಜನಾಂಗ, ಪಂಥ, ಪಂಗಡವೆನ್ನದೆ ಮನುಷ್ಯ ಜಾತಿ ಒಂದೇ ವಲಂ ಎಂಬಂತಹ ವಾತಾವರಣವನ್ನು ನಿರ್ಮಾಣ ಮಾಡಿ ಭಕ್ತರ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತ ನಾಡಿನಲ್ಲಿ ಆಧ್ಯಾತ್ಮಿಕ, ಶರಣರ ಕಾಯಕ, ದಾಸೋಹ ಪರಂಪರೆಯನ್ನ ತತ್ವಗಳನ್ನು, ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ.

ಶ್ರೀ ಶರಣು ಬಿ,ಗದ್ದುಗೆ
ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರು.

*******************************

    ನಾಡಿನ ಪ್ರಮುಖ ಆಧ್ಯಾತ್ಮಿಕ ತಾಣವಾದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಸ್ಥಾಪಿಸಿದ ಸಂಸ್ಥಾನ ಗದ್ದುಗೆಯ ಹಾಗೂ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ ಅವರು ಸಂಸ್ಥಾನ ಗದ್ದುಗೆಗೆ ಸಾಮಾಜಿಕ, ಸಾಂಸ್ಕೃತಿಕ ಆಯಾಮ ನೀಡಿದರು. ಸಂಸ್ಥಾನ ಗದ್ದುಗೆಯ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯದ ಜೊತೆಗೆ ಸಮಾಜ ಮುಖಿಯಾದ ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಂಡ ಸರಳ ಸಜ್ಜನಿಕೆಯ,ಸವಿನಯದ ಸೌಜನ್ಯ ಮೂರ್ತಿಗಳಾದ ಶ್ರೀ ಶರಣು ಬಿ. ಗದ್ದುಗೆ ಅವರು ಸಂಗೀತ ಸೇವಾ ಸಮಿತಿಯ ಮೂಲಕ ಪ್ರತಿವರ್ಷ ಸಂಗೀತ ಕಾರ್ಯಕ್ರಮ, ವಿಧವೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಮಹಳಾ ಸಾಂಸ್ಕೃತಿಕ ಉತ್ಸವ, ಜನಪದ ಉತ್ಸವ, ನೃತ್ಯ, ಕ್ರೀಡೆ, ಕಲೆ, ನಾಟಕ , ಹಾಸ್ಯ, ಆಧ್ಯಾತ್ಮಿಕ ಚಿಂತನೆ ಮುಂತಾದ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ವಿವಿಧ ಕ್ಷೇತ್ರಗಳ ಸಾಧಕರನ್ಮು ಗುರುತಿಸಿ “ಸಗರನಾಡ ಸಿರಿ” ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಜೊತೆಗೆ ನಾಡಿನ ವಿದ್ವಾಂಸರನ್ನು, ಉನ್ನತ ಅಧಿಕಾರಿಗಳನ್ನು, ರಾಜಕೀಯ ಮುತ್ಸದ್ದಿಗಳನ್ನು, ತಜ್ಞರನ್ನು, ಚಿಂತಕರನ್ನು ಆಹ್ವಾನಿಸಿ ಉದಾತ್ತ ವಿಚಾರಗಳನ್ನು ಉಣಬಡಿಸುತ್ತಿದ್ದಾರೆ.

ನಾಡು – ನುಡಿ, ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ಡಾ. ಶರಣು ಬಿ. ಗದ್ದುಗೆ ಅವರು ಕನ್ನಡ ಭಾಷೆಗೆ ದಕ್ಕೆಯಾದರೆ, ಕನ್ನಡದ ಜನರಿಗೆ ಅನ್ಯಾಯವಾದರೆ ಹಲವಾರು ಹೋರಾಟಗಳ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸುತ್ತಿರುವ ಅಪ್ರತಿಮ ಕನ್ನಡದ ಹೋರಾಟಗಾರ, ಸಂಘಟಕ, ಚಿಂತಕರಾಗಿದ್ದಾರೆ. ನಾಡಿನಾದ್ಯಂತ ಕನ್ನಡದ ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುತ್ತಿರುವ ಡಾ. ಶರಣು. ಬಿ. ಗದ್ದುಗೆ ಅವರು ಎಲ್ಲರಿಗೂ ಬೇಕಾಗುವ, ಎಲ್ಲರನ್ನೂ ಒಳಗೊಳ್ಳುವ, ಎಲ್ಲಾ ಸಮುದಾಯಗಳ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿರುವ ಸಾಂಸ್ಕೃತಿಕ ಚೇತನರಾಗಿದ್ದಾರೆ. ಇಂದು ದಿನಾಂಕ 29.12.2025 ರಂದು ಶಹಾಪುರದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆಯಲ್ಲಿ ಸಂಜೆ 6.30 ಕ್ಕೆ 28 ನೇ ವರ್ಷದ ಸಗರಾಡು ಉತ್ಸವ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಗೀತ, ಸಾಹಿತ್ಯ, ಶಿಕ್ಷಣ, ಕಲೆ, ಜನಪದ, ನಾಟಕ, ಮಾಧ್ಯಮ, ಸಂಘಟನೆ, ಸಾಮಾಜಿಕ, ಸಹಕಾರ, ಸಂಸ್ಕೃತಿ ಮುಂತಾದ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದವರಿಗೆ ಸಗನಾಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ನಾಡಿನ ಸಾಂಸ್ಕೃತಿಕ ಪರಿಸರದಲ್ಲಿ ತುಂಬಾ ವೈವಿಧ್ಯಮಯ, ಅರ್ಥಪೂರ್ಣ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಚರಬಸವೇಶ್ವರ ಸಂಗೀತ ಸೇವಾ ಸಮಿತಿಯು ನಾಡಿಗೆ ವಿಶಿಷ್ಟ ಕೊಡುಗೆ ನೀಡಲಿ ಎಂದು ಆಶಿಸೋಣ.