ಕಲ್ಯಾಣ ಕಾವ್ಯ ::  ಕನಕ ಮಾರ್ಗ 

ಕಲ್ಯಾಣ ಕಾವ್ಯ

 ಕನಕ ಮಾರ್ಗ 

ಮುಕ್ಕಣ್ಣ ಕರಿಗಾರ….

   ತುಳಿಯಬೇಕಿದೆ ನಾವು ಕನಕಮಾರ್ಗ

  ತಿಳಿದು ನಡೆಯಬೇಕಿದೆ ಕನಕ ತತ್ತ್ವ

   ಹರಿಯ ಪಥವಿಡಿದೂ

   ಹರನನ್ನು ಬಿಡದ ಕನಕ ತತ್ತ್ವ

   ಅರ್ಥ ಮಾಡಿಕೊಳ್ಳಬೇಕಿದೆ

   ಕಲಿಯಾಗಿ ಜೀವದ ಹಂಗು ತೊರೆದು

  ಹೋರಾಡಿದ ಕದನವೀರ ಕನಕರ

ಶೌರ್ಯ ಬಡಿದೆಬ್ಬಿಸಬೇಕಿದೆ

 ನಮ್ಮ ಸ್ವಾಭಿಮಾನವನ್ನು.

  ಕಂಡುದುದನ್ನು ಕಂಡಂತೆ ನುಡಿಯುತ್ತ

  ಉಂಡ ಪರಮಾತ್ಮಪಥದ ಅನುಭವವ ಲೋಕಕ್ಕೆ

ಹಂಚುತ್ತ ಸಾಗಿದ ಅನುಭಾವ ದಾಸೋಹಿ

ಕನಕರ ಜನಸಾಮಾನ್ಯರ ಉದ್ಧಾರಬದ್ಧತೆ

ಆಗಬೇಕಿದೆ ನಮ್ಮ ಆದರ್ಶ.

ಕುಲಮತಗಳ ಹಂಗಿಗೆ ಸಿಲುಕದೆ

ಹಲವು ಮತಮೌಢ್ಯಗಳ ತಿರಸ್ಕರಿಸಿ

ನೆಲವೊಂದೆ,ಮನುಜಕುಲವೊಂದೆ

ಗೆಲುವಾಗಲಿ ಲೋಕಬಂಧುತ್ವಕ್ಕೆಂದ

ವಿಶ್ವಬಂಧು ಕನಕರ ಸಂದೇಶ

ಅರ್ಥವಾಗಬೇಕಿದೆ ನಮಗಿಂದು.

ಜಾತಿಜಡರ ನಡುವೆ ಜ್ಯೋತಿಯ ಪಥವ

ತೆರೆದಿಟ್ಟ ಪರಮಾನುಭವಿ

ಮೇಲು ಕೀಲುಗಳ ಮನುಜ ನಿರ್ಮಿತ

ಕುತ್ಸಿತಕೆ ಮನುಷ್ಯತ್ವದ ಮುಲಾಮು ಹಚ್ಚಿದ

ಕನಕರ ಲೋಕಪ್ರೀತಿ

ನಮ್ಮ ಆದರ್ಶವಾಗಬೇಕಿದೆ.

ಮಡಿ ಮೈಲಿಗೆ ಎಂದು ಮಾರುದ್ದ ಹಾರಿದವರ

ಬಡಿವಾರಕ್ಕೆ ಕಲ್ಲಾಗಿದ್ದ ಕೃಷ್ಣನು

ಶಾಸ್ತ್ರ ಸಂಪ್ರದಾಯ ಕಪಟಗಳ ತಿರಸ್ಕರಿಸಿ

ಕೊರೆದು ಕಿಂಡಿ

ತಿರುಗಿ ಪಶ್ಚಿಮಕ್ಕೆ

ತನ್ನ ಪ್ರೀತಿಯ ಕಂದ ಕನಕರಿಗೆ

ನೀಡಿದ ದರ್ಶನ

ಮನುಷ್ಯತ್ವಕ್ಕೆ ಬರೆದ ಹರಿಭಾಷ್ಯ ಎಂದರಿತು

ನರರ ಹಿರಿಮೆಯನೊಪ್ಪದೆ

ಪರಮಾತ್ಮನ ಹಿರಿಮೆಯನೊಪ್ಪಿ ನಡೆಯಬೇಕಿದೆ.

ಹೌದು ,ನಡೆಯಬೇಕಿದೆ ನಾವು

ಕನಕ ಮಾರ್ಗದಿ.

ಕನಕಮಾರ್ಗವೆಂದರೆ ಸಮನ್ವಯಪಥ

ಸರ್ವೋದಯ ಪಥ.

ಸರ್ವರುನ್ನತಿಯ ಸರ್ವಸಮತೆಯ

ಸರ್ವರನೊಳಕೊಂಬ ಸರ್ವರ ಸಂಸ್ಕೃತಿ 

ಸರ್ವರ ಆತ್ಮಕಲ್ಯಾಣದ ಸಂಸ್ಕೃತಿ

ಕನಕಸಂಸ್ಕೃತಿ ಎಂದರಿತು

ನಡೆಯಬೇಕಿದೆ ನಾವು ಕನಕ ಮಾರ್ಗದಿ.

       ****************