ಜನರ ಅನುಕೂಲಕ್ಕಾಗಿ ಪ್ರಜಾಸೌಧ ನಿರ್ಮಾಣ | ವಿರೋಧಿಸುವದು ಶೋಭೆ ತರಲ್ಲ

ಶಹಾಪುರ,,

ಅಭಿವೃದ್ಧಿಗೆ ಅಡ್ಡಿಪಡಿಸುವುದು ತರವಲ್ಲ.ಸಕಲ ಇಲಾಖೆಗಳು ಒಂದೇ ಸೂರಿನಡಿ ಕೆಲಸ ಮಾಡಲು ಅನುಕೂಲಕರವಾಗುವ ದೃಷ್ಟಿಯಿಂದ ಪ್ರಜಾಸೌಧ ನಿರ್ಮಾಣಕ್ಕೆ ಸಚಿವರಾದ ದರ್ಶನಾಪುರ ಅವರು ಸೂಕ್ತ ಸ್ಥಳ ಪರಿಶೀಲಿಸಿ ಅಂತಿಮವಾಗಿ ಶೈಕ್ಷಣಿಕ ಅಭಿವೃದ್ಧಿಗಾಗಿ ಇರುವ ಜಮೀನಲ್ಲಿ ಕಟ್ಟಿದರೆ ಸೂಕ್ತವಾಗಲಿದೆ ಎಂಬುದನ್ನು ಸಂಬಂಧಿಸಿದ ಎಲ್ಲಾ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬಂದು ಸಂಬಂಧಿಸಿದ ಅಧಿಕಾರಿಗಳಿಂದ ಅನುಮೋದನೆ ಪಡೆದುಕೊಂಡು ಪ್ರಜಾಸೌಧ ಕಟ್ಟಲು ಟೆಂಡರ್ ಪ್ರಕ್ರೀಯೆ ಸಹ ಮಾಡಲಾಗಿದೆ. ಆದರೆ ಕೆಲ ಸಂಘಟನೆಗಳು ಮತ್ತು ಅವರೊಂದಿಗೆ ಮಾಜಿ ಶಾಸಕರು ಹಾಗೂ ಬಿಜೆಪಿಯವರು ವಿರೋಧಿಸಿ ಇದೀಗ ಹೋರಾಟಕ್ಕೆ ಇಳಿದಿರುವದು ಹಾಸ್ಯಾಸ್ಪದವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಮಹಾಂತ ಚಂದಾಪುರ ಮತ್ತು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಪ್ಪ ಉಳ್ಳಂಡಗೇರಿ ತಿಳಿಸಿದರು.

ನಗರದ ಸಚಿವ ದರ್ಶನಾಪುರ ಅವರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕು ಆಡಳಿತ ಕಚೇರಿ ಪ್ರಜಾಸೌಧ ನಿರ್ಮಾಣಕ್ಕೆ ಸುಮಾರು ಆರೇಳು ತಿಂಗಳ ಹಿಂದೆಯೇ ಸೂಕ್ತ ಜಾಗದ ಪರಿಶೀಲನೆ ನಡೆಸಲಾಯಿತು. ಆಗ ಮಾಧ್ಯಮದಲ್ಲಿಯೂ ಪ್ರಕಟಗೊಂಡಿದೆ. ನಂತರ ಅಂತಿಮವಾಗಿ ಕಾಲೇಜು ಜಾಗದಲ್ಲಿ ಸಮರ್ಪಕ ಜಾಗದ ವ್ಯವಸ್ಥೆ ಇರುವದರಿಂದ ಪ್ರಜಾಸೌಧ ನಿರ್ಮಾಣಕ್ಕೆ ಬರಲಾಯಿತು. ಆಗ ವಿರೋಧಿಸಿದ ಮಾಜಿ ಶಾಸಕರು ಹಾಗೂ ಬಿಜೆಪಿಯ ಅಮೀನರಡ್ಡಿ ಯಾಳಗಿ ಅವರು ಇದೀಗ ಅನುಮೋದನೆಗೊಂಡು ಜಾಗ ಸ್ವಚ್ಛಗೊಳಿಸಿ ಟೆಂಡರ್ ಪ್ರಕ್ರೀಯೆ ಸಹ ಮುಗಿದಿದೆ. ಇದೀಗ ದಿಡೀರ ಪ್ರತಿಭಟನೆಗೆ ಇಳಿದಿರುವದು ಯಾವ ಪುರಾಷಾರ್ಥಕ್ಕೆ..? ಕ್ಷೇತ್ರದ ಜನ ಹಿತ ಬಯಸಿ ದರ್ಶನಾಪುರ ಅವರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅದರಂತೆ ಬೇರಡೆ ಸಮರ್ಪಕ ಸ್ಥಳವಕಾಶ ಇರದ ಕಾರಣ ಪ್ರಸ್ತುತ ಜಾಗ ಸೂಕ್ತವೆನಿಸಿ ಪ್ರಜಾಸೌಧ ಕಟ್ಟಲು ಮುಂದಾಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡುವದು ಬಿಟ್ಟು ರಾಜಕೀಯ ದುರುದ್ದೇಶಕ್ಕಾಗಿ ವಿರೋಧಿಸುವದು ತರವಲ್ಲ ಅವರಿಗೆ ಶೋಭೆ ತರುವಂತದ್ದಲ್ಲ ಎಂದರು.

ಅಲ್ಲದೆ ಹಳೇ ತಹಸೀಲ್ ಇರುವ ಜಾಗದಲ್ಲಿ ನಿರ್ಮಿಸಬೇಕೆಂದು ಒತ್ತಾಯಿಸುವವರು ಸಮರ್ಪಕ ಜಾಗದ ಅರಿವಿರಬೇಕು. ಹಳೇ ತಹಸೀಲ್ ಜಾಗ ಮಿನಿಸೌಧದಂತೆ ಪ್ರಜಾಸೌಧ ಕಟ್ಟಲು ವಿಶಾಲತೆ ಅಲ್ಲಿಲ್ಲ, ಅಲ್ಲದೆ ಶೈಕ್ಷಣಿಕ ಜಾಗದಲ್ಲಿ ಈ ಮೊದಲು ತಾವೂ ಶಾಸಕರಿದ್ದಾಗ ಟೌನ್ ಹಾಲ್ ನಿರ್ಮಿಸಿದಾಗ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿಲ್ಲವೇ..? ಎಂದು ಪ್ರಶ್ನಿಸಿದ ಅವರು, ರಾಜಕೀಯ ದುರುದ್ದೇಶಕ್ಕಾಗಿ ವಿರೋಧಿಸುವದು ಸರಿಯಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಒಳ್ಳೆಯ ಕಾರ್ಯಗಳಿಗೆ ಸಾರ್ವಜನಿಕರು ಯಾರ ಮಾತಿಗೂ ಕಿವಿಗೊಡದೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಪ್ರಜಾಸೌಧ ಬಸ್ ನಿಲ್ದಾಣದಿಂದ ದೂರವಾಗಲಿದೆ ಎಂದಾದರೆ, ಸಿಟಿ ಬಸ್ ವ್ಯವಸ್ಥೆ ಮಾಡುವ ಮೂಲಕ ನಾಗರಿಕರಿಗೆ ಅನುಕೂಲ ಕಲ್ಪಿಸಲಿದ್ದಾರೆಂದು ದಲಿತ ಮುಖಂಡ ನೀಲಕಂಠ ಬಡಿಗೇರ ತಿಳಿಸಿದರು.ಈ ಸಂದರ್ಭದಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಮಹಾದೇವಪ್ಪ ಸಾಲಿಮನಿ, ಶಿವಕುಮಾರ ತಳವಾರ, ಮಹೇಶ ಮಡಿವಾಳಕರ್, ಅಲ್ಲಾ ಪಟೇಲ್ ಉಪಸ್ಥಿತರಿದ್ದರು.