ಕಾಲೇಜು ಕಟ್ಟಡಕ್ಕೆ ವಿರೋಧ ನಾಲ್ಕನೇ ದಿನ ಮುಂದುವರಿದ ಧರಣಿ 

ಶಹಾಪುರ,

ಸಚಿವರು ಕೈಗೊಂಡ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ಸಹಮತವಿದೆ. ಆದರೆ ಕಾಲೇಜು ಸ್ಥಳದ ಜಾಗದಲ್ಲಿ ಪ್ರಜಾಸೌಧ ಕಟ್ಟುವುದು ತರವಲ್ಲ. ಪ್ರಜಾಸೌಧ ಕಟ್ಟುವುದರಿಂದ ಇಲ್ಲಿನ ಪರಿಸರಕ್ಕೆ ಹಾನಿಯಾಗುತ್ತದೆ. ನೂರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಸಂಯೋಜಕ ಬಣದ ಜಿಲ್ಲಾಧ್ಯಕ್ಷ ಶರಣರೆಡ್ಡಿ ಹತ್ತಿಗೂಡುರು ಹೇಳಿದರು. ಕಾಲೇಜು ಸ್ಥಳದಲ್ಲಿ ಪ್ರಜಾಸೌಧ ಕಟ್ಟಡ ವಿರೋಧಿಸಿ ರೈತ ಸಂಘ ಸೇರಿದಂತೆ ಇತರ ಸಂಘಟನೆಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು.ನಂತರ ತಹಸಿಲ್ ಕಚೇರಿಗೆ ತೆರಳಿತಹಶೀಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಜಿಲ್ಲೆ ಮತ್ತು ತಾಲೂಕಿನ ಪ್ರಗತಿಪರರ ಚಿಂತನೆ ಒಂದೇ, ಕಾಲೇಜು ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದು ಬೇಡ. ಕಾಲೇಜು ಕಟ್ಟಡದಲ್ಲಿ ಪ್ರಜಾಸೌಧ ನಿರ್ಮಾಣ ಮಾಡುವುದಕ್ಕಿಂತ ಮುಂಚೆ ಜಿಲ್ಲೆಯ ಪ್ರಗತಿಪರರು, ರೈತಪರ, ಕಾರ್ಮಿಕ ಪರ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರನ್ನು ಕರೆದು ಚರ್ಚಿಸಬೇಕಿತ್ತು‌. ಇದಾವುದನ್ನು ಲೆಕ್ಕಿಸದೆ ಸಚಿವರು ಕಾಲೇಜು ಕಟ್ಟಡದಲ್ಲಿ ಪ್ರಜಾಸೌಧ ನಿರ್ಮಾಣ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡಿರುವುದು ಒಳಿತಲ್ಲ ಎಂದರು. ಇಲ್ಲಿ ಪ್ರಜಾಸೌಧ ಕಟ್ಟುವುದರಿಂದ ನಗರದಿಂದ ಮೂರರಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವುದರಿಂದ ಬಡವರಿಗೆ ಸಾರ್ವಜನಿಕರಿಗೆ, ರೈತರಿಗೆ ಅನುಕೂಲಕರವಲ್ಲ ಎಂದರು.

ಹಳಿಸಗರದ ಹಳೆ ತಹಶೀಲ್ ಜಾಗದಲ್ಲಿ ಪ್ರಜಾಸೌಧ ಕಟ್ಟುವುದಕ್ಕೆ 4 ಎಕರೆ ಜಮೀನಿದ್ದು ಇದು ನಗರದ ಹೃದಯ ಭಾಗದಲ್ಲಿದೆ.ಇಲ್ಲಿ ಪ್ರಜಾಸೌಧ ಕಟ್ಟುವುದರಿಂದ ಸಾರ್ವಜನಿಕರಿಗೆ, ರೈತರಿಗೆ ಅನುಕೂಲಕರವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಶರಣಪ್ಪ ಚೆಲುವಾದಿ, ಮಲ್ಲಿಕಾರ್ಜುನ ಹಯ್ಯಾಳ ಕೆ, ಮರೆಪ್ಪ ಹೊಸ್ಮನಿ, ಸಿದ್ದಪ್ಪ ಹೊಸಮನಿ, ಭೀಮಾಶಂಕರ ಸುರಪುರಕರ್ ಕೊಂಗಂಡಿ ಸೇರಿದಂತೆ ಇತರರುಇದ್ದರು.