ಕಲ್ಯಾಣ ಕಾವ್ಯ

ವಂದಿಪೆನು ಕವಿರಾಯ ಕನಕರಿಗೆ
ಮುಕ್ಕಣ್ಣ ಕರಿಗಾರ
ವಂದಿಪೆನು ಸಂತರಿಗೆ ಅನಂತಕೀರ್ತಿ ಮಹಿಮಂಗೆ
ವಂದಿಪೆನು ಸಂತಕವಿಗೆ,ಕವಿರಾಯಂಗೆ
ವಂದಿಪೆನು ಲೋಕಬಂಧು ಕನಕದಾಸರಿಗೆ
ವಂದಿಪೆನು ಲೋಕಗುರು ಕನಕದಾಸರಿಗೆ.
ಮೂಢಮತಿಗಳಿಗೆ ಪರಮಾತ್ಮನ ಪಥವ ತೆರೆದಿಟ್ಟ
ರೂಢಿಯೊಳುತ್ತಮ ಗುರುವಿಗೆ, ಪರಮಾಚಾರ್ಯರಿಗೆ
ನಾಡಜನಪದರ ಹಿಡಿದೆತ್ತಿ ಉದ್ಧರಿಸಿದ
ಬಾಡದಾದಿಕೇಶವನ ಕೂಸಿಗೆ, ಹರಿದಾಸರಿಗೆ ವಂದಿಪೆನು
ಕಲಿತನಕ್ಕೆ ಹೆಸರಾದ ಪರಮವೀರಂಗೆ
ಮಲೆತುನಿಂದ ಮದಗಜದ ಸೊಕ್ಕಮುರಿದ ಪರಮಪುರುಷಗೆ
ಒಲವಿಂದ ರಾಜ್ಯ ಸಿರಿಸಂಪದವ ತೊರೆದು ಪರಮಾತ್ಮನ
ಚೆಲುವಪಥದಿ ನಡೆದ ಚಿನ್ಮಯಾತ್ಮರಿಗೆ ವಂದಿಪೆನು
ಬರಿಯ ಕವಿಯು ನಾನು ಕವಿರಾಯ ನೀವು
ಅರಿಯಬಹುದೆ ನಿಮ್ಮಳವ ತೊರೆದಲ್ಲದೆ ಹುಸಿ ಅಹಮಿಕೆ?
ಸರಿಯೆ ಲೋಕದ ನರಕವಿಗಳು ನಿಮಗೆ?
ವರಕವಿಗಳು ನೀವು ಧರೆಯ ಬೆಳಗುವ ಕಾವ್ಯ ನಿಮ್ಮದೆನುತ ವಂದಿಪೆನು
ಪರತತ್ತ್ವದ ಪರಿಯನರುಹಿದ ನಿಜ ಗುರುವು ನೀವು
ನರಕಾಯರೆತ್ತಣ ಗುರುಗಳು?
ತೆರತೆರನ ನಾಟ್ಯಕೌಶಲದಿ ಹೊಟ್ಟೆಹೊರೆವವರೆತ್ತಣ ಹಿರಿಯರು?
ಕರುಣಾಬ್ದಿಕನಕರ ದಿವ್ಯಾತ್ಮಚೈತನ್ಯವರಿಯದಲ್ಪರೆತ್ತಣ ಗುರುಗಳು?
ವಂದಿಸದೆ ಕನಕಂಗೆ ನಡೆಯೆ ಫಲಸಿದ್ಧಿಯುಂಟೆ ?
ನಿಂದಿಸೆ ಕನಕರನ್ನು ಉಂಟೆ ಸನ್ಮಾರ್ಗ?
ಸಂದೇಹವೇಕೆ ವಂದಿಸೆ ಕನಕದಾಸರ ಸರ್ವೇಷ್ಟಸಿದ್ಧಿಯು,ಲೋಕ
ಬಂಧು ಕನಕದಾಸರ ವಂದಿಪೆನು ಹರಸಿ
ಜನಪದರನ್ನು,ಅನುಗ್ರಹಿಸಿ ಲೋಕಸಮಸ್ತರನ್ನು ಎಂದು.