ಶಹಾಪುರ,
ನಗರದ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಪ್ರಜಾಸೌಧ ಕಟ್ಟಡ ವಿರೋಧಿಸಿ ರೈತ ಸಂಘ ಸೇರಿದಂತೆ ಇತರ ಸಂಘಟನೆಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನ ರಾತ್ರಿ ಕೂಡ ಧರಣಿ ಮುಂದುವರಿಸಿದ್ದರು. ಪ್ರಜಾಸೌಧ ಕಟ್ಟಡ ವಿರೋಧಿಸಿ ಬಿಜೆಪಿ ಮುಖಂಡ ಶಿವರಾಜ್ ದೇಶಮುಖ್ ಮಾತನಾಡಿ, ಕಾಲೇಜು ಶಿಕ್ಷಣ ಸ್ಥಳದಲ್ಲಿ ಪ್ರಜಾಸೌಧ ಕಟ್ಟುವುದರಿಂದ ಶಿಕ್ಷಣಕ್ಕೆ ತೊಂದರೆಯಾಗುತ್ತದೆ. ಇವತ್ತಿನ ವಿದ್ಯಾರ್ಥಿಗಳು ನಾಳಿನ ಭವಿಷ್ಯದ ನಾಯಕರು. ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗಲಿ ಎಂದು ನಗರದ ಹೊರಬಲಯದಲ್ಲಿ ಸುಂದರ ಪರಿಸರದಲ್ಲಿ ಕಟ್ಟಡಗಳನ್ನು ಕಟ್ಟಲಾಗಿದೆ. ಆದರೆ ಪರಿಸರಕ್ಕೆ ಮಾರಕವಾಗುವ ರೀತಿಯಾಗಿ ಶಿಕ್ಷಣ ಸಂಸ್ಥೆ ಸ್ಥಳದಲ್ಲಿ ಸರ್ಕಾರ ಪ್ರಜಾಸೌಧ ಕಟ್ಟಲು ಹೊರಟಿದೆ. ಕೂಡಲೇ ನಿರ್ಧಾರ ಬದಲಿಸಬೇಕು. ಪ್ರಜಾಸೌಧ ಕಟ್ಟಡ ಹಳೆ ತಹಶೀಲ್ ಕಚೇರಿಯಲ್ಲಿ ಕಟ್ಟಿ. ಈ ಧರಣಿಗೆ ನಾನು ಬೆಂಬಲಿಸುತ್ತೇನೆ ಎಂದರು.
ರೈತ ಮುಖಂಡ ಮಹೇಶ್ ಸುಬೇದಾರ್ ಮಾತನಾಡಿ, ಈ ಹೋರಾಟ ನ್ಯಾಯಯುತವಾಗಿದ್ದು.ಅಧಿಕಾರಿಗಳು ಸೇರಿದಂತೆ ಶಿಕ್ಷಣ ಪ್ರೇಮಿಗಳು ನಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ .ಮುಂದಿನ ದಿನಗಳಲ್ಲಿ ಇತರ ಇಲಾಖೆ ಕಚೇರಿಗಳು ಕಟ್ಟಿದರೆ ಶಿಕ್ಷಣದ ಪರಿಸ್ಥಿತಿ ಹೇಗೆ, ಸಚಿವರು ಜಿದ್ದಿಗೆ ಬೀಳಬಾರದು.ಮುಂದಿನ ದಿನಗಳಲ್ಲಿ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ಮಾಡಲಾಗುತ್ತದೆ. ಶಿಕ್ಷಣಕ್ಕೆ ನೀಡಿದ ಸ್ಥಳವಿದು. ಶಿಕ್ಷಣಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಆಗ್ರಹಿಸಿದರು.
ಗೋಗಿ ಗ್ರಾಮದ ಇಸ್ಮೈಲ್ ಗೋಗಿ ಮಾತನಾಡಿ ಶಿಕ್ಷಣ ಸ್ಥಳದಲ್ಲಿ ಪ್ರಜಾಸೌಧ ಕಟ್ಟಡಕ್ಕೆ ನಮ್ಮ ವಿರೋಧಿವಿದೆ ಎಂದರು.ವೆಂಕಟೇಶ್ ಹಾಲ್ಗೇರಿ, ವಿರೇಶ, ಮಲ್ಲಿಕಾರ್ಜುನ ಮಲ್ಲಾಬಾದಿ, ಮಲ್ಲಿಕಾರ್ಜುನ ಗೌಡ ಮದ್ದರಕಿ ಸೇರಿದಂತೆ ಇತರರು ಇದ್ದರು.
Post Views: 50