ದೇವರು’ ಆಗದ ಹೊರತು ದೇವರ ದರ್ಶನ ಸಾಧ್ಯವಿಲ್ಲ ಮುಕ್ಕಣ್ಣ ಕರಿಗಾರ
ಪರಮಾತ್ಮನ ದರ್ಶನ,ಸಾಕ್ಷಾತ್ಕಾರ ಖಂಡಿತ ಸಾಧ್ಯ ಎನ್ನುವ ಮಾತಿನಿಂದಲೇ ನಾನೀ ಚಿಂತನೆಯನ್ನು ಪ್ರಾರಂಭಿಸುವೆ.ದೇವರನ್ನು ನಂಬದ ನಾಸ್ತಿಕರು ಕೇಳುವಂತೆ ಆಸ್ತಿಕಭಕ್ತರು ಸಹ ದೇವರನ್ನು ಕಾಣಬಹುದೆ ಎನ್ನುವ ವಿಷಯದಲ್ಲಿ ಸಂದೇಹಪೀಡಿತರಾಗಿರುತ್ತಾರೆ.ದೇವರು ಎನ್ನುವ ಪರಮಸತ್ಯವನ್ನು ಕಾಣಬಹುದು, ದೇವರೊಡನೆ ಮಾತನಾಡಬಹುದು ಆದರೆ ಅದಕ್ಕೆ ವ್ಯಕ್ತಿಯು ಅರ್ಹನಾಗಿರಬೇಕಷ್ಟೆ.ಅಧ್ಯಾತ್ಮಿಕ ಸಾಧನೆಯೇ ಪರಮಾತ್ಮನನ್ನು ಕಾಣುವ ಪಥ,ಅರ್ಹತೆ.
ಪರಮಾತ್ಮನು ಜಗನ್ನಿಯಾಮಕನಿರುವನು.ಈ ಜಗತ್ತಿನಲ್ಲಿ ನಡೆಯುವುದೆಲ್ಲವೂ ಪರಮಾತ್ಮನ ಇಚ್ಛೆಯಂತೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದಿರಲಿ ಪರಮಾತ್ಮನ ಇಚ್ಛೆಗೆ ವಿರುದ್ಧವಾಗಿ ಜಗತ್ತಿನಲ್ಲಿ ಏನೂ ಘಟಿಸಲಾರದು.ನಮ್ಮ ವಿಜ್ಞಾನಿಗಳು ಏನನ್ನೂ ಹೊಸದಾಗಿ ಸೃಷ್ಟಿಸಲಿಲ್ಲ .ಅದಾಗಲೇ ಪ್ರಕೃತಿಯಲ್ಲಿ ಇದ್ದ ಅಣು ಕಣಗಳ ಅಧ್ಯಯನ, ಅನ್ವೇಷಣೆಯಿಂದ ವಿಜ್ಞಾನಿಗಳು ಅದ್ಭುತ ಸಂಶೋಧನೆಗಳನ್ನು ಮಾಡಿದ್ದಾರೆಯೇ ಹೊರತು ವಿಜ್ಞಾನಿಗಳು ಪ್ರಪಂಚವನ್ನು ಸೃಷ್ಟಿಸಲಿಲ್ಲ.ಪ್ರಕೃತಿಯ ಸಹಸ್ರದಲ್ಲೊಂದು ಭಾಗವನ್ನಷ್ಟೇ ಅರ್ಥ ಮಾಡಿಕೊಂಡಿದ್ದಾರೆ ನಮ್ಮ ವಿಜ್ಞಾನಿಗಳು ! ಇದನ್ನೇ ಅವರು ದೊಡ್ಡಸಾಧನೆ ಎಂದು ಬೀಗುತ್ತಾರೆ.ಬೀಗುವ ಒಣ ಅಹಂ ವಿಜ್ಞಾನಿಗಳನ್ನು ಪರಮಾತ್ಮನಿಂದ ದೂರ ಮಾಡತ್ತದೆ.ಬೀಗುವುದಲ್ಲ, ಬಾಗುವುದು ಪರಮಾತ್ಮನನ್ನು ಒಲಿಸುವ ಸಾಧನ.ವಿನಯ ಸಂಪನ್ನತೆಯು ಪರಮಾತ್ಮನ ಅನುಗ್ರಹದ ಸಿದ್ಧಸೂತ್ರ.
ದೇವರನ್ನು ಕಾಣಬೇಕಾದರೆ ನಾವು ದೇವರೇ ಆಗಬೇಕು.ದೇವರಾಗದವರಿಗೆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಿಲ್ಲ. ದೇವರು ಆಗುವುದು ಎಂದರೇನು ? ಜೀವ ಭಾವವನ್ನು ತೊರೆಯುವುದೇ ದೇವರಾಗುವ ಲಕ್ಷಣ.ನಮ್ಮಲ್ಲಿ ಜೀವ ಭಾವ ಇರುವವರೆಗೆ ನಾವು ಮನುಷ್ಯರೇ ಆಗಿರುತ್ತೇವೆ.ಜೀವಭಾವ ಇರುವವರೆಗೆ ಸಾಧ್ಯವಿಲ್ಲ ದೇವರ ದರ್ಶನ.
ಜೀವಭಾವ ಎಂದರೆ ನಾನು ಜೀವನು,ದೇಹಕ್ಕೆ ಅಂಟಿಕೊಂಡಿರುವ ಜೀವನು ಎನ್ನುವ ಅಜ್ಞಾನ. ಜೀವನಲ್ಲ ನಾನೇ ದೇವನು ಎಂದು ತಿಳಿಯುವುದೇ ಆತ್ಮಜ್ಞಾನ.ಅಳವಡಿಸಿಕೊಳ್ಳಬೇಕು ಆತ್ಮಜ್ಞಾನವನ್ನು ,ಅಂಗವಿಸಿಕೊಳ್ಳಬೇಕು ದೇವಭಾವವನ್ನು.ಇದುವೇ ಸಾಕ್ಷಾತ್ಕಾರದ ಪಥ.
ಮನುಷ್ಯರಲ್ಲಿ ಜೀವಭಾವ ಇರುವವರೆಗೆ ಸಂಕುಚಿತತೆ ಇರುತ್ತದೆ.ನಾನು,ನನ್ನದು,ನನ್ನವರು ಎನ್ನುವ ಸಂಕುಚಿತ ಭಾವನೆಗಳು ಪರಮಾತ್ಮನ ಪಥಕ್ಕೆ ಅಡ್ಡಿ.ರಾಗ- ದ್ವೇಷಗಳು,ಮೋಹ – ಮಮಕಾರಗಳು ಪರಮಾತ್ಮನ ದರ್ಶನಕ್ಕೆ ತೊಡರು.ರಕ್ತಸಂಬಂಧಗಳಿಗೆ ಸೀಮಿತರಾಗುವುದು,ಕುಲಸಂಬಂಧಗಳಿಗೆ ಕಟ್ಟಿಬೀಳುವುದು,ಮತ ಧರ್ಮಗಳ ಸಿಲ್ಕಿಗೆ ಸಿಲುಕುವುದು ಇವುಗಳೆಲ್ಲ ಪರಮಾತ್ಮನ ದರ್ಶನಕ್ಕೆ ಅಡ್ಡಿಯಾಗುವ ಸಂಗತಿಗಳು.ಎಲ್ಲದಕ್ಕೂ ಅತೀತನಾಗಿರುವ ಪರಮಾತ್ಮನನ್ನು ಕಾಣಬೇಕು ಎಂದರೆ ನಾವು ನಿರಂಜನವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಬೇಕು.ಅಂಜನಗುಣವು ಪ್ರಪಂಚಾಸಕ್ತಿಯಾದರೆ ನಿರಂಜನತ್ವವು ತನ್ನ ಸಹಜತನ,ಆತ್ಮತತ್ತ್ವ.
ಮನುಷ್ಯರು ತಮ್ಮನ್ನು ತಾವು ‘ದೇಹಿಗಳು’ ಎಂದು ತಿಳಿದುಕೊಳ್ಳುವ ಭ್ರಮೆಯೇ ಅವರನ್ನು ಪರಮಾತ್ಮನ ಪಥದಿಂದ ವಿಮುಖರನ್ನಾಗಿಸುತ್ತದೆ.ದೇಹದೊಳಗಿನ ಚೈತನ್ಯವನ್ನು ಅರಸಬೇಕು,ಚೈತನ್ಯವನ್ನು ಒಂದುಗೂಡಬೇಕು; ಚೈತನ್ಯವೇ ತಾವಾಗಬೇಕು.ದೇಹದೊಳಗೆ ಜೀವನು ಇರುವಂತೆ ಆತ್ಮನೂ ಇದ್ದಾನೆ.ಜೀವನು ಲೌಕಿಕ ವ್ಯವಹಾರದಲ್ಲಿ ಆಸಕ್ತನಾದರೆ ಆತ್ಮನು ಪರಮಾತ್ಮನ ಪಥವನ್ನು ತೆರೆದು ತೋರುವನು.ಪ್ರಪಂಚ ಸುಳ್ಳಲ್ಲ ಸತ್ಯ ,ಆದರೆ ಪ್ರಪಂಚವೇ ಅಂತಿಮ ಸತ್ಯವಲ್ಲ.ಪರಮಾತ್ಮನ ಅನುಗ್ರಹ,ಸಾಕ್ಷಾತ್ಕಾರವೇ ಮನುಷ್ಯ ಜೀವನದ ಆತ್ಯಂತಿಕ ಗುರಿ.ಮೋಕ್ಷವೇ ಮನುಷ್ಯರ ಪರಮೋಚ್ಛಸಿದ್ಧಿ.
ದೇಹಭಾವ ಇರುವವರೆಗೆ ದೋಷ ದೌರ್ಬಲ್ಯಗಳು ಬಿಡದೆ ಕಾಡುತ್ತವೆ.ದೇಹಭಾವವನ್ನು ಒಮ್ಮೆಲೆ ಕೊಡಹಿಕೊಳ್ಳಲು ಸಾಧ್ಯವಿಲ್ಲ,ಅದು ನಿರಂತರ ಸಾಧನೆಯ ಫಲ. ನಾನು ದೇಹಿಯಲ್ಲ,ನಾನೇ ದೇವನು ಎನ್ನುವ ಭಾವನೆಯನ್ನು ಅಂಗವಿಸಿಕೊಳ್ಳಬೇಕು.ಪ್ರಪಂಚವು ಪರಮಾತ್ಮನ ಲೀಲಾಭೂಮಿ,ಪರಮಾತ್ಮನ ಸಂಕಲ್ಪದಂತೆ ಹುಟ್ಟಿರುವ ನಾನು ಪರಮಾತ್ಮನನ್ನು ಹೊಂದಲೇಬೇಕು ಎನ್ನುವ ಗುರಿಯೊಂದಿಗೆ ನಡೆಯಬೇಕು.ಅಲ್ಪತನವನ್ನು ತೊರೆದಾಗ ಮಹತ್ ತತ್ತ್ವದರ್ಶನವಾಗುತ್ತದೆ.ಸಂಸಾರ,ಕುಟುಂಬವೇ ಸರ್ವಸ್ವವಲ್ಲ.ಮಡದಿ ಮಕ್ಕಳಿಗೆ ದುಡಿದು ಸಂಪಾದಿಸುವುದೇ ಜೀವನದ ಸಾರ್ಥಕತೆಯಲ್ಲ.ತನ್ನವರಿಗಾಗಿ ತಾನು ದುಡಿಯುವುದೇ ಜೀವನದ ಹಿರಿಮೆಯಲ್ಲ.ಸಮಾಜ,ರಾಜ್ಯ,ರಾಷ್ಟ್ರ ಮತ್ತು ವಿಶ್ವವೆಂಬ ವಿಶಾಲನೆಲೆಯಲ್ಲಿ ಜಗತ್ತನ್ನು ನೋಡಬೇಕು.ಇಲ್ಲಿ ಇರುವ ಎಲ್ಲರೂ ನನ್ನವರೇ ,ಇಲ್ಲಿ ಅನ್ಯರು ಯಾರೂ ಇಲ್ಲ ಎನ್ನುವ ಭಾವ ಅಳವಟ್ಟರದುವೇ ದೈವತ್ವ.ಪ್ರಕೃತಿಯಲ್ಲಿ ಪೂರ್ಣತ್ವವನ್ನು ಕಾಣಬೇಕು.ಸೃಷ್ಟಿಯಲ್ಲಿ ಪೂರ್ಣತ್ವದ ಸೌಂದರ್ಯವನ್ನು ಕಾಣಬೇಕು.ಜೀವರುಗಳ ಎದೆಯಲ್ಲಿ ಪರಮಾತ್ಮನನ್ನು ಕಾಣಬೇಕು.ಜಡದಲ್ಲಿ ಚೈತನ್ಯವನ್ನು ಅರಸಬೇಕು.ಭೇದದೃಷ್ಟಿಯನ್ನು ಕಳೆದುಕೊಂಡು ಅಭೇದ ದೃಷ್ಟಿಯನ್ನು ಅಳವಡಿಸಿಕೊಳ್ಳಬೇಕು.ರಕ್ತ ಸಂಬಂಧಗಳಲ್ಲಿ ಬಂಧಿಯಾಗದೆ ರಕ್ತಸಂಬಂಧಗಳಾಚೆಯ ವಿಶ್ವಬಂಧುತ್ವ ಭಾವನೆಯನ್ನು ಮೈಗೂಡಿಸಿಕೊಳ್ಳಬೇಕು.ನುಡಿ,ಗಡಿ,ಭಾಷೆ,ಬಣ್ಣಗಳ ಕುಬ್ಜತೆಗೆ ಸಿಲುಕದೆ ಎಲ್ಲೆಡೆ ಕಾಣಬೇಕು ಅಬ್ಜಾತ್ವತತ್ತ್ವವನ್ನು.ಪೂರ್ಣದಿಂದ ಅಪೂರ್ಣ ಸೃಷ್ಟಿಯು ಸಾಧ್ಯವಿಲ್ಲ. ಪರಮಾತ್ಮನು ಪೂರ್ಣನಿರುವನು.ಪರಮಾತ್ಮನಿಂದ ಹೊರಹೊಮ್ಮಿದ ಸೃಷ್ಟಿಯೂ ಪೂರ್ಣವಿಹುದು.ಪೂರ್ಣದಿಂದ ಹೊರಹೊಮ್ಮಿದ ತಾನೂ ಪೂರ್ಣನೆ ಎನ್ನುವ ಪೂರ್ಣತೆಯ ಭಾವವು ಅಳವಟ್ಟರೆ ಪರಮಾತ್ಮನ ದರ್ಶನ – ಸಾಕ್ಷಾತ್ಕಾರ ಸಾಧ್ಯ.ಅಪೂರ್ಣತೆಯ ಆಭಾಸದಿಂದ ಬಿಡುಗಡೆಗೊಂಡು ಪೂರ್ಣತೆಯ ಭಾವದಲ್ಲಿ ನೆಲೆ ನಿಂದುದಾದರೆ ಸಾಧ್ಯ ಪರಮಾತ್ಮನ ದರ್ಶನ,ಸಾಕ್ಷಾತ್ಕಾರ.