ಪ್ರಜಾಸೌಧ ಕಟ್ಟಡಕ್ಕೆ ವಿರೋಧ | ಸಂಘಟನೆಗಳಿಂದ ಧರಣಿ ಸತ್ಯಾಗ್ರಹ | ಪ್ರಾಣ ಬಿಟ್ಟೆವೇ ಹೊರತು ಪ್ರಜಾಸೌಧ ಕಟ್ಟಲು ಬಿಡೆವು : ಮಹೇಶ ಸುಬೇದಾರ  

ಶಹಾಪುರ,

ನಗರದ ಕಾಲೇಜ ಶಿಕ್ಷಣ ಸ್ಥಳದಲ್ಲಿ ಪ್ರಜಾಸೌಧ ಕಟ್ಟಡಕ್ಕೆ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಮಂಗಳವಾರದಂದು ಎಬಿವಿಪಿ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಸೇರಿದಂತೆ ಇತರ ಸಂಘಟನೆಗಳಿಂದ ಸರಕಾರಿ ಪ್ರಥಮ ದರ್ಜೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಗಾರರು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಾಧ್ಯಕ್ಷ ಮಹೇಶ ಸುಬೇದಾರ ಮಾತನಾಡಿ, ಸ್ಥಳೀಯ ಸಚಿವರಾದ ಶರಣಬಸಪ್ಪಗೌಡ ದರ್ಶನಪುರವರು ಕಾಲೇಜು ಶಿಕ್ಷಣಕ್ಕೆ ಸಂಬಂಧಪಟ್ಟ ಸ್ಥಳದಲ್ಲಿ ಪ್ರಜಾಸೌದ ಕಟ್ಟಡಕ್ಕೆ ಸ್ಥಳ ನಿಗದಿ ಮಾಡಿದ್ದಾರೆ. ಶಿಕ್ಷಣಕ್ಕೆ ಮೀಸಲಿಟ್ಟ ಜಾಗವಿದು. ಸ್ಥಳೀಯ ಸಚಿವರ ತಂದೆಯವರಾದ ಬಾಪುಗೌಡ ದರ್ಶನಪುರವರ ದೂರದೃಷ್ಟಿಯಿಂದಾಗಿ ಈ ಸ್ಥಳವು ಶಿಕ್ಷಣಕ್ಕೆ ಮೀಸಲಿಟ್ಟಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕೊನೆಯ ಸ್ಥಾನದಲ್ಲಿದೆ. ಇಂದಿನ ವಿದ್ಯಾರ್ಥಿಗಳು ಇತರ ಜಿಲ್ಲೆಗಳಿಗೆ ಮತ್ತು ರಾಜ್ಯಗಳಿಗೆ ವಲಸೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದು ನಮ್ಮ ಭಾಗದ ದೊಡ್ಡ ದುರಂತ. ಮುಂದಿನ ದಿನಗಳಲ್ಲಿ ಕಾಲೇಜು ಶಿಕ್ಷಣದ ಈ ಸ್ಥಳದಲ್ಲಿ ಇಂಜಿನಿಯರ್, ಮೆಡಿಕಲ್, ವಿಶ್ವವಿದ್ಯಾಲಯಗಳು ಹಾಗೂ ಶೈಕ್ಷಣಿಕ ಸಂಬಂಧಪಟ್ಟ ಕಟ್ಟಡಗಳು ನಿರ್ಮಿಸುವುದು ಉತ್ತಮ. ರಾಜಕೀಯವನ್ನು ಬದಿಗೊತ್ತಿ ಕೂಡಲೇ ಪ್ರಜಾಸೌಧ ಕಟ್ಟಡವನ್ನು ನಿಲ್ಲಿಸಬೇಕು. ಹಳೆ ತಹಸೀಲ್ ಕಚೇರಿಯಲ್ಲಿ ಪ್ರಜಾಸೌಧ ಕಟ್ಟಬಹುದಿತ್ತು.ಆದ್ದರಿಂದ ಜಿಲ್ಲೆಯ ಪ್ರಗತಿಪರರು ಇತರ ಸಂಘಟನೆಗಳು ನಮ್ಮ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ.

ರಾತ್ರಿ ಸಮಯ ಮುಂದುವರೆದ ನಿರಂತರ ಧರಣಿ

*****************

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಮಲ್ಲಣ್ಣ ಪರಿವಾಣ ಅವರು, ನಾವು ಅಭಿವೃದ್ಧಿ ಕೆಲಸಕ್ಕೆ ಯಾವತ್ತೂ ಅಡ್ಡಿ ಬರುವದಿಲ್ಲ. ಆದರೆ ಅಭಿವೃದ್ಧಿ ಕೆಲಸಗಳು ಸರಿಯಾದ ಕ್ರಮದಲ್ಲಿ ನಡೆದರೆ ಮಾತ್ರ ನಾವು ಬೆಂಬಲಿಸುತ್ತೇವೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಣ ವಾತಾವರಣ ನಿರ್ಮಿಸಬೇಕೆ ಹೊರತು ಈ ಸ್ಥಳದಲ್ಲಿ ತಾಲೂಕ ಆಡಳಿತ ಕಚೇರಿ ಕಟ್ಟುವುದು ಅಭಿವೃದ್ಧಿ ಕೆಲಸ ಅನ್ನುವುದಿಲ್ಲ. ಈ ಕಚೇರಿ ಇಲ್ಲಿ ಕಟ್ಟುವುದರಿಂದ ದಿನಾಲು ಹೋರಾಟ, ಹಾರಾಟ, ಚೀರಾಟ, ಮೈಕ್, ಹಲಗೆ, ಡೊಳ್ಳು, ಬಾಜಾ ಭಜಂತ್ರಿ ಸಂಘಟನೆ ಹೋರಾಟ ನಡೆಯುತ್ತವೆ. ಇದು ಕಲಿಯುವ ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲವೇ. ಆಡಳಿತಸೌಧ ಹಳೇ ತಹಸಿಲ್ ಕಚೇರಿ ಜಾಗದಲ್ಲಾದರೂ ಕಟ್ಟಿ ಇಲ್ಲವೇ ಹೊಸ ತಹಸಿಲ್ ಕಚೇರಿ ಜಾಗದಲ್ಲಾದರೂ ಕಟ್ಟಿ ಇದಕ್ಕೆ ನಮ್ಮ ತಕರಾರು ಇಲ್ಲ. ನಮ್ಮ ವಿರೋಧ ಕಾಲೇಜು ಜಾಗದಲ್ಲಿ ಆಡಳಿತ ಸೌಧ ಕಟ್ಟುವುದಕ್ಕೆ ಮಾತ್ರ ಎಂದರು.

***********

ದಲಿತ ಮುಖಂಡ ಶರಣು ದೋರನಹಳ್ಳಿ ಮಾತನಾಡಿ, ಈ ಸ್ಥಳದಲ್ಲಿ ಪ್ರಜಾಸೌಧ ಕಟ್ಟಡ ಕಟ್ಟುವುದು ತರವಲ್ಲ. ಶೈಕ್ಷಣಿಕವಾಗಿ ಈ ಭಾಗದ ವಿದ್ಯಾರ್ಥಿಗಳು ಮುಂದೆ ಬರಬೇಕೆಂದರೆ ಈ ಸ್ಥಳ ಶೈಕ್ಷಣಿಕ ಕಟ್ಟಡಗಳಿಗೆ ಮೀಸಲಿಡುವುದು ಉತ್ತಮ.ಇಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ಕಟ್ಟಡಗಳಾಗಿರಬೇಕು.ಗ್ರಂಥಾಲಯಗಳ ಕಟ್ಟಡಗಳನ್ನು ನಿರ್ಮಿಸಿ. ಶಿಕ್ಷಣಕ್ಕೆ ಸಂಬಂಧಪಟ್ಟ ಕಾಲೇಜುಗಳನ್ನು ಸ್ಥಾಪಿಸಿ. ಸ್ಥಳೀಯ ಸಚಿವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇದೇ ರೀತಿಯಾಗಿ ಇತರ ಇಲಾಖೆಗಳ ಕಟ್ಟಡಗಳನ್ನು ಕಟ್ಟುತ್ತಾ ಹೋದರೆ ಶಿಕ್ಷಣಕ್ಕೆ ಮೀಸಲಿಟ್ಟ ಎಲ್ಲಾ ಸ್ಥಳಗಳು ಮಾಯವಾಗುತ್ತವೆ. ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣಕ್ಕೆ ಸಂಬಂಧಪಟ್ಟಂತಹ ಕಟ್ಟಡಗಳನ್ನು ನಿರ್ಮಿಸಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾಂತಗೌಡ ಮದ್ರಿಕಿ, ತಾಲೂಕ ಗೌರವ ಅಧ್ಯಕ್ಷ ಸಿದ್ದಣ್ಣ ಬಡಿಗೇರ, ತಾಲೂಕಾಧ್ಯಕ್ಷ ರಮೇಶ ಗಾಂಜಿ, ದಲಿತ ಮೈನಾರಿಟಿ ಸೇನೆಯ ತಾಲೂಕ ಸಂಚಾಲಕ ಮೊಹಮ್ಮದ್ ಇಸ್ಮಾಯಿಲ್ ತಿಮ್ಮಪುರಿ, ಸಂತೋಷ ಸಾಹು, ದಲಿತ ಮುಖಂಡ ಶಾಂತಪ್ಪ ಸಾಲಿಮನಿ, ಮರೆಪ್ಪ ಜಾಲಿಬೆಂಚಿ, ನಿಂಗಣ್ಣ ನಾಟೆಕಾರ, ಆಂಜನೇಯ ಗಾಂಜಿ, ಶರಬಣ್ಣ ರಸ್ತಾಪುರ, ಪ್ರಕಾಶ ರೆಡ್ಡಿ, ಮಲ್ಲಿಕಾರ್ಜುನ ಸಿದ್ರ, ಸೇರಿದಂತೆ ಸಂಘದ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.