ಕಲ್ಯಾಣ ಕಾವ್ಯ ಶಾಸ್ತ್ರಭೂತ ! : ಮುಕ್ಕಣ್ಣ ಕರಿಗಾರ
ನಾನು ಹುಡುಗನಾಗಿದ್ದಾಗ ದೆವ್ವ ಭೂತಗಳ ಬಗ್ಗೆ ಭಯಪಡಿಸಲಾಗುತ್ತಿತ್ತು
ಕತ್ತಲಲ್ಲಿ ಮಕ್ಕಳು ಹೊರಹೋಗಬಾರದೆಂದು
‘ ಗುಮ್ಮ’ ನ ಭಯ ತೋರಿಸಲಾಗುತ್ತಿತ್ತು.
ಕತ್ತಲಲ್ಲಿ ಊರ ಹೊರಗೆ ಹೋಗದಿರಲೆಂದು ಕೊಳ್ಳಿದೆವ್ವಗಳನ್ನು ತೋರಿಸಿ ಹೆದರಿಸಲಾಗುತ್ತಿತ್ತು.
ಈಗ ಎಲ್ಲೆಡೆ ‘ ಬೆಳಕು’ ಬಂದಿದ್ದು ಕಾಣೆಯಾಗಿವೆ ದೆವ್ವ ಭೂತಗಳು. ಕಾಣೆಯಾದ ದೆವ್ವ- ಭೂತಗಳು ಈಗ ಶಾಸ್ತ್ರದವೇಷ ತೊಟ್ಟಿವೆ !
ಜ್ಯೋತಿಷ,ಪಂಚಾಂಗ,ವಾಸ್ತು ಪೂಜೆ ಅರ್ಚನೆಗಳೆಂಬ ವೇಷತೊಟ್ಟಿವೆ ಆಧುನಿಕ ಭೂತಗಳು.
ಹಿಂದೆ ರಾತ್ರಿಯಲ್ಲಿ ಕಾಣಿಸಿ
ಕಾಡುತ್ತಿದ್ದ ದೆವ್ವ ಭೂತಗಳು ಈಗ ಬೆಳಗಾದೊಡನೆ
ಟಿವಿ ವಾಹಿನಿಗಳಲ್ಲಿ ಮುಖತೋರಿಸಿ
ಮುಗ್ಧರ ಜೀವ ಹಿಂಡುತ್ತಿವೆ.ಪತ್ರಿಕೆಗಳಲ್ಲಿ ಗೋಚರಿಸಿ
ಚಿತ್ತಚಾಂಚಲ್ಯವನ್ನುಂಟು ಮಾಡುತ್ತಿವೆ.
ಹಿಂದೆ ದೆವ್ವಗಳನ್ನು ಓಡಿಸಲಾಗುತ್ತಿತ್ತು
ಇಂದು ದೆವ್ವಗಳನ್ನು ಆಹ್ವಾನಿಸಲಾಗುತ್ತಿದೆ!
ದೆವ್ವಭೂತಗಳನ್ನು ಅಜ್ಞಾನಿಗಳು ನಂಬುತ್ತಾರೆ
ಎನ್ನುತ್ತಿದ್ದರು ಹಿಂದೆ
ಶಾಸ್ತ್ರಭೂತದ ವೈಭವೀಕರಣ
ಪ್ರತಿಷ್ಠೆಯಾಗಿದೆ ಇಂದು
ಉಣ್ಣುವುದು ಹೇಗೆ
ನೀರು ಕುಡಿಯಬೇಕು ಹೇಗೆ ಎಲ್ಲಿ ,ಹೇಗೆ ಸ್ನಾನ ಮಾಡಬೇಕು.ಯಾವ ದಿಕ್ಕಿಗೆ ತಲೆಗೊಟ್ಟು ಮಲಗಬೇಕು.ಮನೆಯಲ್ಲಿ ಎಲ್ಲಿ ಏನು ಇಡಬೇಕು
ಮನೆಗೆ ಏನು ತರಬೇಕು
ಯಾವ ದೇವರ ಪೂಜೆ ಮಾಡಬೇಕು.
ಯಾವ ರೋಗಕ್ಕೆ ಏನು ಪರಿಹಾರ ಯಾವ ದೇವಸ್ಥಾನಕ್ಕೆ ಹೋಗಬೇಕು ಎಂದೆಲ್ಲ ಶಕುನ ನುಡಿಯುತ್ತಿವೆ
ಜಾತಕಹೇಳುತ್ತಿವೆ
ಭವಿಷ್ಯನುಡಿಯುತ್ತಿವೆ ಶಾಸ್ತ್ರಭೂತಗಳು.
ಶಾಸ್ತ್ರಭೂತಗಳು ವೈದಿಕರ ದೇವಸ್ಥಾನಗಳಲ್ಲಿ
ಪರಿಹಾರಸೂಚಿಸುತ್ತವೆಯೇ ಹೊರತು
ಗ್ರಾಮದೇವತೆಗಳು,ಜನಪದರ ಸಂಸ್ಕೃತಿಯ
ನಾಡದೈವಗಳ ಬಳಿ ಹೋಗಿ ಎನ್ನುವುದಿಲ್ಲ !
ಶಾಸ್ತ್ರಭೂತಗಳು ಆಮದುಮಾಡಿಕೊಂಡ
ಸರಕು ಸಿದ್ಧಾಂತಗಳನ್ನು ಉಗ್ಗಡಿಸುತ್ತವೆ
ನೆಲದ ಸಂಸ್ಕೃತಿ,ಪರಂಪರೆಗಳ ಅರಿವಿಲ್ಲದ
ಪರಕೀಯ ಶಾಸ್ತ್ರಭೂತಗಳು
ಜನರನ್ನು ಜಡರನ್ನಾಗಿಸುವಲ್ಲಿ ಯಶಸ್ವಿಯಾಗಿವೆ.
ಹಿಂದೆ ‘ ಅಜ್ಞಾನ’ ಕಾರಣವಾಗಿದ್ದ ದೆವ್ವಭೂತಗಳು
ಇಂದು ‘ ವಿಜ್ಞಾನ’ ದ ಉಡುಗೆ ತೊಡುಗೆ
ತೊಟ್ಟು ಮೆರೆಯುತ್ತಿವೆ.