ಕನಕಕಾವ್ಯ / ಕನಕ ತಿನ್ನಲಿಲ್ಲ ಬಾಳೆಹಣ್ಣು !

ಕನಕಕಾವ್ಯ /ಕನಕ ತಿನ್ನಲಿಲ್ಲ ಬಾಳೆಹಣ್ಣು !

 ಮುಕ್ಕಣ್ಣ ಕರಿಗಾರ

***************************************

  ಕುರುಬ ಕುರುಬನೆನುತ ಕರುಬುತ್ತಿದ್ದ

 ಹಾರುವಶಿಷ್ಯರಿಗೆ ಕನಕನ ಹಿರಿಮೆಯ

 ತೋರಿ ಅರುಹಲುದ್ದೇಶಿಸಿ

ಕರೆದರೆಲ್ಲ ಶಿಷ್ಯರನು ಬಳಿಗೆ ಯೋಗಿ ವ್ಯಾಸರಾಯರು

ಎಲ್ಲರಿಗೂ ಕೊಡುತ ಒಂದೊಂದು

ಬಾಳೆಹಣ್ಣು ‘ ತಿಂದು ಬನ್ನಿ ಇದನು

 ಯಾರೂ ಕಾಣದ ಸ್ಥಳದಿ

 ತಿನ್ನಬೇಕು ಬಾಳೆಯನು

 ನೋಡದಂತೆ ಯಾರೂ’ ಇತ್ತರು ಅಪ್ಪಣೆ.

‘ ಇದಾವ ಮಹಾಪರೀಕ್ಷೆ?’

 ‘ ಇದರಲ್ಲೇನು ಬೆಡಗಿದೆ?’

 ಎನುತ ಹಾರುವ ಶಿಷ್ಯರೆಲ್ಲ

ನಡೆದರು ತಾವು ಗುಟ್ಟೆಂದು ಭ್ರಮಿಸಿದ್ದ ಎಡೆಗಳಿಗೆ.

ಮನೆಯ ಕದವಮುಚ್ಚಿ ಒಬ್ಬ ತಿಂದ

 ರಗ್ಗುಹೊದೆದು ಯಾರೂ ನೋಡರೆಂದು ಮತ್ತೊಬ್ಬ ತಿಂದ

ಹೊಲದಲ್ಲಿ ಯಾರು ನೋಡರೆಂದು ಅಲ್ಲೊಬ್ಬ ತಿಂದ

ಕತ್ತಲೆಕೋಣೆಯಲ್ಲಿ ಮತ್ತೊಬ್ಬ

ಹೀಗೆ ಯಾರುಕಾಣದ ಸ್ಥಳವೆಂದು

ಗುರುವಿತ್ತ ಬಾಳೆ ಹಣ್ಣನು ತಿಂದರು

ಬ್ರಾಹ್ಮಣ ಶಿಷ್ಯರು.

 ತಿಂದೆವೆಂದು ಉಬ್ಬಿಕೊಬ್ಬಿ ಬಂದರೆಲ್ಲ

 ಹಾರುವ ಶಿಷ್ಯರು ವ್ಯಾಸರಾಯರ ಬಳಿ.

 ಕನಕನೊಬ್ಬ ತಿನ್ನದೆ ಬಾಳೆಹಣ್ಣು ಕೈಯಲ್ಲಿ ಹಿಡಿದು ಬಂದಿದ್ದ

ಗಹಗಹಿಸಿ ನಕ್ಕರು ಬ್ರಾಹ್ಮಣ ಶಿಷ್ಯರು

ಕನಕನ ಕೈಯ ಬಾಳೆಯ ಕಂಡು.

ವ್ಯಾಸರಾಯರು ಕೇಳಿದರು

‘ ಎಲ್ಲೆಲ್ಲಿ ತಿಂದಿರಿ ನೀವೆಲ್ಲ ಬಾಳೆ ಹಣ್ಣು?’

 ತಮ್ಮ ಸಾಹಸಗಾಥೆಯ ಸೊಗಸಾಗಿ ಬಣ್ಣಿಸಿದರು

ಬ್ರಾಹ್ಮಣ ಶಿಷ್ಯರು ‘ ಅಲ್ಲಿ ತಿಂದೆ’ , ‘ ಇಲ್ಲಿ ತಿಂದೆ’

 ‘ ಇರಲಿಲ್ಲ ಅಲ್ಲಿ ಯಾರೂ’ ಎನುತ.

 ‘ಅಹುದೆ’ ಎನುತ‌ ಪೂರ್ಣಯೋಗಿ ವ್ಯಾಸರಾಯರು

 ಬೀರಿ ಕರುಣಾಪೂರಿತ ನೋಟ ಕನಕರತ್ತ

‘ ಯಾಕೆ ಮಗು,ಹಾಗೆಯೇ ಇದೆಯಲ್ಲ ಬಾಳೆಹಣ್ಣು ನಿನ್ನ ಕೈಯಲ್ಲಿ?

ತಿನ್ನಲಿಲ್ಲವೆ ನೀನದನು?

ಈ ಎಲ್ಲರೂ ತಿಂದು ಬಂದಿಹರಲ್ಲ?’

ಕರಗಳನು ಮುಗಿದು

ಗುರುರಾಯನೆದುರು ವಿನಯದಿಂದ

ಕನಕರಾಯ ನುಡಿದ

‘ ಗುರುವೆ,ಹರಿಯು ಇಲ್ಲದ ಎಡೆಯು ಕಾಣಲಿಲ್ಲ ನನಗೆ’

‘ತಿನ್ನಲು ಹೇಳಿದ್ದೀರಿ ತಾವು

ಬಾಳೆ ಹಣ್ಣನು ಯಾರಿರದ ಸ್ಥಳದಿ

ಯಾರೂ ನೋಡದ ತೆರದಿ.

ಹರಿಯು ಸರ್ವಜಗದ್ಭರಿತನಿರಲು ತಿನ್ನಲೆಲ್ಲಿ ಬಾಳೆಹಣ್ಣನು ?’

‘ಜನರ ಕಣ್ಣು ತಪ್ಪಿಸಬಹುದಲ್ಲದೆ

ಜನಾರ್ಧನನ ಕಣ್ಣುಗಳ ತಪ್ಪಿಸಬಹುದೆ?

ಅಣುಮಹತ್ತಾದ ದೇವನಿಹನು ಎಲ್ಲೆಡೆ

ವಿಶ್ವತೋಚಕ್ಷುವವನು ,

ತಪ್ಪಿಸಲಾಗದು ಸಹಸ್ರಾಕ್ಷನಾಗಿಹ

ಹರಿಯ ವಿಶ್ವನೋಟವನು.

ಈ ಕಾರಣಕೆ ತಿನ್ನಲಿಲ್ಲ

ನಾನು ಬಾಳೆಹಣ್ಣು’

ವಿನೀತನಾಗಿ ನಿವೇದಿಸಿದನು ಕನಕರಾಯ.

‘ ಭಲೆ ಭಲೆ! ಲೇಸು ಲೇಸು!

 ಇದಲ್ಲವೆ ಜ್ಞಾನಿಯ ಲಕ್ಷಣ ?

 ಪೂರ್ಣಯೋಗಿ ಕನಕ,ನಿನ್ನ ನೆಲೆಯ

ಬಲ್ಲರೆಂತು ಜಡಮತಿಗಳು?

ಧರೆಗೆ ದೊಡ್ಡವನು ನೀನು

ಧನ್ಯನು ನಿನ್ನನ್ನು ಪಡೆದ ನಾನು’

ಉದ್ಗರಿಸಿದರು ಪೂರ್ಣಯೋಗಿ ವ್ಯಾಸರಾಯರು.

ತಿರುಗಿ ತಮ್ಮ ಬ್ರಾಹ್ಮಣ ಶಿಷ್ಯರತ್ತ

‘ ಕಂಡಿರಾ ಕನಕನ ಪೂರ್ಣದೃಷ್ಟಿಯನು?

ಹರಿಯ ಒಲುಮೆಯ ಉಣಬಂದವನ ಬೆಡಗು

ಅರ್ಥವಾಯಿತೆ?

ಕುರುಬನಲ್ಲ ಕನಕದಾಸನು

ಹರಿಯಪಥವ ತೋರಬಂದ ಮಹಾಗುರುವು

ಕನಕಗುರುವ ಅರಿತವರೆ ಮುಕ್ತರು

ಕನಕನೇ ವೈಕುಂಠಕ್ಕೆ ಪಥವು’

ಬಾಗಿ ಕೈಮುಗಿದು

ದಿಂಡುಗಡೆದು ನೆಲಕ್ಕುರುಳಿ

ಗುರುವ ವಂದಿಸಿದರು

ಶರಣರೆಂದು ವ್ಯಾಸರಾಯರನು

ಕನಕಗುರು.