ಮಠ- ಪೀಠಾಧಿಪತಿಗಳು ಸಹ ಭಕ್ತರಿಗೆ ಮಾಹಿತಿ ನೀಡಬೇಕು ! : ಮುಕ್ಕಣ್ಣ ಕರಿಗಾರ

” ನಾನು ವೈಯಕ್ತಿಕ ಕೆಲಸದ ನಿಮಿತ್ತವಾಗಿ ಬೆಂಗಳೂರಿನಲ್ಲಿ ಇರುವುದರಿಂದ ನಾಳೆ ರವಿವಾರ ಮತ್ತು ಸೋಮವಾರದ ಅಮವಾಸೆಗಳಂದು ಮಹಾಶೈವ ಧರ್ಮಪೀಠದಲ್ಲಿ ಸಿಗುವುದಿಲ್ಲ.ಆದ್ದರಿಂದ ಮಠಕ್ಕೆ ಬರುವವರು ಮುಂದಿನವಾರ ಬರಬಹುದು”

ಇದು ಮೇ 28 ರ ಶನಿವಾರದಂದು ನಾನು ಮಹಾಶೈವ ಧರ್ಮಪೀಠದ ಭಕ್ತರುಗಳಿಗೆ ಮಹಾಶೈವ ಗುಂಪುಗಳಲ್ಲಿ ಮತ್ತು ಕೆಲವರಿಗೆ ವೈಯಕ್ತಿಕವಾಗಿ ಕಳಿಸಿದ ಮೆಸೇಜ್.ಇದರಲ್ಲೇನು ವಿಶೇಷ ಎನ್ನಬಹುದಲ್ಲವೆ? ಹೌದು,ಇದರಲ್ಲೊಂದು ವಿಶೇಷವಿದೆ.ಧಾರ್ಮಿಕ ಮುಖಂಡರುಗಳು,ಮಠ ಪೀಠಾಧೀಶರುಗಳು ಸಹ ಮುಂಚಿತವಾಗಿ ಅವರ ಚಲನವಲನಗಳ ಬಗ್ಗೆ ಭಕ್ತರಿಗೆ ಮಾಹಿತಿ ನೀಡಬೇಕು.ಇದರಿಂದ ಭಕ್ತರಿಗೆ ಅನುಕೂಲವಾಗುತ್ತದೆ.ಇಲ್ಲದಿದ್ದರೆ ಭಕ್ತರು ಮಠ ಮಂದಿರಗಳಿಗೆ ಬಂದು ಹಿಂದಿರುಗಿ ತೊಂದರೆ ಅನುಭವಿಸುವಂತೆ ಆಗುತ್ತದೆ.ಮಠ ಪೀಠಾಧೀಶರುಗಳಿಗೂ ಸಾಮಾಜಿಕ ಬದ್ಧತೆ ಇರಬೇಕು ಎಂದು ನಂಬಿದವನು ನಾನು.

ನಾನು ರವಿವಾರ ಮತ್ತು ಅಮವಾಸೆಯ ದಿನಗಳಂದು ಮಹಾಶೈವ ಧರ್ಮಪೀಠದಲ್ಲಿದ್ದು ಶ್ರೀಕ್ಷೇತ್ರ ಕೈಲಾಸವನ್ನರಸಿ ಬರುವ ಭಕ್ತರ ಸಮಸ್ಯೆಗಳನ್ನು ಆಲಿಸುತ್ತೇನೆ ; ಕ್ಷೇತ್ರೇಶ್ವರ ಕ್ಷೇತ್ರೇಶ್ವರಿಯರಾದ ವಿಶ್ವೇಶ್ವರಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರು ಭಕ್ತರ ಸಮಸ್ಯೆಗಳನ್ನು ಪರಿಹರಿಸುತ್ತಾರೆ.ಭಕ್ತರು ಮತ್ತು ಭಗವಂತನ ನಡುವೆ ನಾನು ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇನೆ! ನಮ್ಮ ಮಠಕ್ಕೆ ಬರುವವರಿಗೆ ಹೇಳುತ್ತಿರುತ್ತೇನೆ — ‘ ಕೇಳುವವರು ನೀವು,ಕೊಡುವವರು ಅವರು ( ಶಿವ ದುರ್ಗಾದೇವಿಯರು).ನನ್ನದೇನೂ ಇಲ್ಲ,ಬೇಡುವವರು ಮತ್ತು ನೀಡುವವರ ನಡುವಿನ ಸಂಪರ್ಕ ಸೇತುವೆ ಅಷ್ಟೆ.ಕೆಲವು ಮಠ ಪೀಠಗಳಲ್ಲಿ ದೇವರ ದರ್ಶನಕ್ಕಾಗಿ ಭಕ್ತರು ಹೋಗುತ್ತಾರೆ.ಆದರೆ ದೈವಗಳು ಜಾಗ್ರತವಾಗಿದ್ದುಕೊಂಡು ಜನರ ಕಷ್ಟಗಳನ್ನು ಪರಿಹರಿಸುವ ಕ್ಷೇತ್ರಗಳಲ್ಲಿ ದೇವರುಗಳು ಮಠ ಪೀಠಗಳ ಮುಖ್ಯಸ್ಥರೋ ಅಥವಾ ಇನ್ನಾರ ಮೂಲಕವೋ ಲೋಕೋದ್ಧಾರದ ಕಾರ್ಯ ಮಾಡುತ್ತಾರೆ.ಮಹಾಶೈವ ಧರ್ಮದ ಪೀಠಾಧ್ಯಕ್ಷನಾಗಿರುವ ನಾನು ಶ್ರೀಕ್ಷೇತ್ರ ಕೈಲಾಸದ ಅಧಿದೈವರುಗಳಾದ ವಿಶ್ವೇಶ್ವರಶಿವ ಮತ್ತು ವಿಶ್ವೇಶ್ವರಿ ದುರ್ಗಾದೇವಿಯರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತೇನೆ.ಶಿವ ದುರ್ಗಾ ದೇವಿಯರ ‘ಅನುಗ್ರಹವಾಣಿ’ಯನ್ನು ಭಕ್ತರಿಗೆ ಕರುಣಿಸುವುದಷ್ಟೇ ನನ್ನ ಕೆಲಸ ಅಲ್ಲಿ.ಹಾಗಾಗಿ ಜನ ನನಗಾಗಿ ಕಾಯುತ್ತಿರುತ್ತಾರೆ.ನನ್ನ ಅನುಪಸ್ಥಿತಿಯಲ್ಲಿ ಶ್ರೀಕ್ಷೇತ್ರವನ್ನರಸಿ ಬರುವ ಭಕ್ತರಿಗೆ ತೊಂದರೆಯಾಗಬಾರದು ಎಂದು ನಾನು ಮೆಸೇಜ್ ಮಾಡಿ ಮಾಹಿತಿ ನೀಡಿದೆ.

ಮಹಾಶೈವಧರ್ಮಪೀಠವು ಲೋಕಕಲ್ಯಾಣವನ್ನೇ ಗುರಿಯನ್ನಾಗಿ ಉಳ್ಳ ಧರ್ಮಕ್ಷೇತ್ರವಾಗಿದ್ದರಿಂದ ಅಲ್ಲಿಗೆ ಬರುವವರಲ್ಲಿ ಬಹಳಷ್ಟು ಜನರು ಬಡವರು,ಜನಸಾಮಾನ್ಯರು.ಶ್ರೀಮಂತರಿಗೆ ಹೈ ಫೈ ಸ್ವಾಮಿಗಳಿರುತ್ತಾರೆ,ವೈಭವದಲ್ಲಿ ಮೆರೆಯುವ ದೇವರುಗಳಿರುತ್ತಾರೆ.ಆದರೆ ಬಡವರು,ಜನಸಾಮಾನ್ಯರು ಎಲ್ಲಿಗೆ ಹೋಗಬೇಕು? ಅದಕ್ಕೆಂದೇ ವಿಶ್ವೇಶ್ವರ ಶಿವನು ಮಹಾಶೈವ ಧರ್ಮಪೀಠದಲ್ಲಿ ತನ್ನ ಶಕ್ತಿ ದೇವಿದುರ್ಗೆಯೊಂದಿಗೆ ಲೋಕೋದ್ಧಾರದ ಲೀಲೆಯನ್ನಾಡುತ್ತಿದ್ದಾನೆ‌.ನಮ್ಮ ಕ್ಷೇತ್ರಕ್ಕೆ ಬರುವವರು ಜನಸಾಮಾನ್ಯರು,ದುಡ್ಡಿಲ್ಲದ ಬಡವರು.ದುಬಾರಿ ವೈದ್ಯಕೀಯ ಬಿಲ್ಲು ಪಾವತಿಸಲಾಗದೆ,ವೈದ್ಯರ ಬಳಿ ಸುತ್ತಾಡಿಯೂ ಸಮಸ್ಯೆ ಪರಿಹಾರವಾದ ಜನರು ಶ್ರೀಕ್ಷೇತ್ರ ಕೈಲಾಸಕ್ಕೆ ಬರುತ್ತಾರೆ.ದೂರದ ಊರುಗಳಿಂದಲೂ ಭಕ್ತರು ಬರುತ್ತಾರೆ.ನಾನು ಇಲ್ಲ ಎಂದರೆ ಪಾಪ ಅವರು ಬಸ್ ಚಾರ್ಜ್ ಕಟ್ಟಿಕೊಂಡು ಬಂದು ಬಳಲುತ್ತಾರಲ್ಲವೆ? ಅದಕ್ಕೋಸ್ಕರವೆ ಮುಂಚಿತವಾಗಿ ಶ್ರೀಕ್ಷೇತ್ರದಲ್ಲಿ ನನ್ನ ಉಪಸ್ಥಿತಿ ಅನುಪಸ್ಥಿತಿಯ ಬಗ್ಗೆ ಮೊದಲೇ ಮಾಹಿತಿ ನೀಡುವ ಪದ್ಧತಿಯನ್ನು ಹಾಕಿದ್ದೇನೆ.ಕಾರು,ಬೈಕ್ ಗಳಲ್ಲಿ ಬರುವ ಶ್ರೀಮಂತ ಭಕ್ತರುಗಳಿಗೇನೂ ಸಮಸ್ಯೆ ಆಗುವುದಿಲ್ಲ,ಆದರೆ ಬಡಭಕ್ತರ ಬಗ್ಗೆಯೂ ಆಲೋಚಿಸಬೇಕಲ್ಲ !

ಕೆಲವು ಜನ ಮಠ ಪೀಠಾಧೀಶರುಗಳು ಬಡ ಭಕ್ತರ ಬಗ್ಗೆ ಅಸಡ್ಡೆ ಮನೋಭಾವ ತೋರಿಸುತ್ತಾರೆ.’ ಬಂದ್ರೆ ಬಂದಿದ್ದಾರು,ಕೂಡಲಿ ಇಲ್ಲವೆ ಹೋಗ್ಲಿ’ ಆದರೆ ಅದೇ ಶ್ರೀಮಂತ ಭಕ್ತರನ್ನು ತಾವಿದ್ದ ಸ್ಥಳಕ್ಕೆ ಕರೆಯಿಸಿಕೊಂಡು ಆಶೀರ್ವಾದ ಮಾಡುತ್ತಾರೆ! ಮಹಾಶೈವ ಧರ್ಮಪೀಠದಲ್ಲಿ ಹಾಗಲ್ಲ,ಎಲ್ಲ ಭಕ್ತರೂ ಒಂದೇ.ಶಿವ ವಿಶ್ವೇಶ್ವರನ ಸಮ್ಮುಖದಲ್ಲಿ ನಾನು ಕುಳಿತಿರುತ್ತೇನೆ,ನನ್ನ ಬಳಿ ಭಕ್ತರು ಕುಳಿತಿರುತ್ತಾರೆ.ಅವರ ಬೇಡಿಕೆಯನ್ನು ನಾನು ಶಿವನೆದುರು ನಿವೇದಿಸುತ್ತೇನೆ.ವಿಶ್ವೇಶ್ವರ ಶಿವ ಏನು ಪ್ರೇರಣೆ ನೀಡುತ್ತಾನೋ ಅದನ್ನೇ ಅವರಿಗೆ ಹೇಳುತ್ತೇನೆ.ಒಮ್ಮೊಮ್ಮೆ ಬಹಳ ಹೊತ್ತು ಆದರೂ ಕೂಡ ನಾನು ಭಕ್ತರೆಲ್ಲರನ್ನು ವಿಚಾರಿಸಿಯೇ ಹೋಗುತ್ತೇನೆ.ವಿಐಪಿಗಳು ಬಂದರು ಅವರನ್ನು ಮೊದಲು ವಿಚಾರಿಸಬೇಕು,ವಿಶೇಷ ಆದ್ಯತೆ ನೀಡಬೇಕು ಎನ್ನುವ ವಿಶೇಷೋಪಚಾರ ಮಹಾಶೈವ ಧರ್ಮಪೀಠದಲ್ಲಿ ಇಲ್ಲ.ಯಾರೇ ಬರಲಿ ಅವರ ಸರದಿ ಬರುವವರೆಗೆ ಕಾಯಬೇಕು.

ಗಣ್ಯರು,ಅತಿಗಣ್ಯರು ಎಂದು ಯಾರನ್ನೂ ಪರಿಗಣಿಸುವುದಿಲ್ಲ ಅಲ್ಲಿ ನಾನು.ಶ್ರೀಕ್ಷೇತ್ರ ಕೈಲಾಸದಲ್ಲಿ ಶಿವನೊಬ್ಬನೇ ದೇವರು,ಪರಮಪ್ರಭು.ಉಳಿದವರೆಲ್ಲ ಅವರು ಯಾರೇ ಆಗಿರಲಿ ಭಕ್ತರು.ಭಕ್ತರಲ್ಲಿ ತರತಮವಾಗಲಿ,ಭೇದವಾಗಲಿ ಇಲ್ಲ ಎನ್ನುವ ಕಠಿಣ ನಿಲುವನ್ನು ತಳೆದದ್ದರಿಂದ ನಮ್ಮ ಮಠಕ್ಕೆ ಜನಸಾಮಾನ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಅದು ನನಗೆ ಆನಂದದ ಸಂಗತಿಯೂ ಹೌದು.ದೇವರು,ಧರ್ಮಗಳು ಜನಸಾಮಾನ್ಯರ ಕಲ್ಯಾಣಕ್ಕಾಗಿಯೇ ಹೊರತು ಘನಮಾನ್ಯರ ಉದ್ಧಾರಕ್ಕಾಗಿ ಅಲ್ಲ.’ಸಂಕಷ್ಟಪರಿಹರಿಸಿಕೊಂಡು ಉದ್ಧಾರವಾಗಬೇಕು ಎನ್ನುವವರು ನಮ್ಮ ಬಳಿ ಬನ್ನಿ,ಪ್ರತಿಷ್ಠೆ ಮಾಡುವವರು ಬೇರೆ ಕಡೆ ಹೋಗಿ’ ಎಂದು ನಿಷ್ಠುರವಾಗಿಯೇ ಹೇಳುತ್ತೇನೆ ನಾನು.

28.05.2022

About The Author