ಕಲ್ಯಾಣಕಾವ್ಯ : ಸಂತ ಕನಕದಾಸರು

ಕಲ್ಯಾಣಕಾವ್ಯ

       ಸಂತ ಕನಕದಾಸರು

ಮುಕ್ಕಣ್ಣ ಕರಿಗಾರ

ಎಂಥ ಎತ್ತರದ ವ್ಯಕ್ತಿತ್ವ !
ನಿಂತ ನೆಲವನ್ನೆ ವೈಕುಂಠವನ್ನಾಗಿಸಿದ
ಸಂತ,ಸಿದ್ಧ
ಇಂಥವರು ಮನುಕುಲದ ಚಿಂತೆ,ವ್ಯಾಕುಲವ
ಸಂತಯಿಸಬರುತ್ತಾರೆ ಪರಮಾತ್ಮನ ವಿಭೂತಿಗಳಾಗಿ.

ಹುಟ್ಟಿದ ಕುಲವನ್ನು ಪಾವನಗೊಳಿಸಿದ
ಪುಣ್ಯಾತ್ಮರಿವರು
ಕುರುಬರೆಂದರೆ ಜಗಕೆ ಪರಮಾತ್ಮನ
ಕುರುಹತೋರಬಂದ ‘ಆದಿಗುರುಗಳು’ ಎಂಬುದ ನಿರೂಪಿಸಿದ ನಿಜಯೋಗಿಗಳಿವರು.

ಹರಿಯ ಒಲುಮೆಗೆ
ಹರಿವಗಂಗೆಯಂಥ ಶುದ್ಧಮನವಿರಬೇಕಲ್ಲದೆ
ಬರಿಯ ಬಾಯ್ಮಾತಿನ ಆಡಂಬರಕ್ಕರ್ಥವಿಲ್ಲ
ತೊರೆಯಿರಿ ಅಲ್ಪತನ , ಎದೆತುಂಬಿ ಕರೆಯೆ ಬರುವನು ಹರಿ ಎಂದವರು.

ದಣ್ಣಾಯಕರಾಗಿ ದಂಡಹಿಡಿದೂ
ಅಣ್ಣನಾದರು ದೀನದುರ್ಬಲರಿಗೆ ಸಿಕ್ಕ
ಚಿನ್ನವನ್ನೆಲ್ಲ ಬಡಬಗ್ಗರ ಕಲ್ಯಾಣಕ್ಕೆ ವ್ಯಯಿಸಿ
ನನ್ನಿಧರ್ಮದ ಸಾರವರುಹಿದ ಪರಮಗುರು ಕನಕರು.

ಶಿವಭಕ್ತರಾಗಿ ಹುಟ್ಟಿ
ಹರಿಪಥದಿ ನಡೆದೂ
ಬಿಡದೆ ಶಿವನನ್ನು ಹಿಡಿದು ಹರಿಯನ್ನು
ನಡೆದರು,ನಡೆವವರಿಗೆ ಸಾಮರಸ್ಯದ ದಾರಿ ತೋರಿದರು

ಕಂದಾಚಾರ,ಮೌಢ್ಯಗಳ ಧಿಕ್ಕರಿಸಿ
ಎಂದಿಗೂ ಸಲ್ಲದು ಪ್ರಾಣಿವಧೆಯೆಂದರುಹಿ
ಬಂಧುಗಳಂತೆ ನಡೆಯಬೇಕು ಜನರೆಲ್ಲರು
ಎಂದು ಸಾರಿದ ಮಹಾಯೋಗಿ,ವಿಶ್ವಬಂಧು.

ದಾಸರಲ್ಲಿವರು ಶ್ರೇಷ್ಠರು
ಈಶತ್ವವನ್ನು ಪಡೆದ ಭಗವನ್ ಸ್ವರೂಪಿಗಳು
ಆಶಿಸಿಬಂದವರಿಗೆ ಹರಿಯಪಥವ ತೋರುವ ಆದಿಕೇಶವನ ಪ್ರೀತಿಯ
ಕೂಸಿವರು ಕನಕದಾಸರು, ಮನುಕುಲದ ಹೆಮ್ಮೆ.