ಬೀದರ್ : (ಔರಾದ : ಸೆ 11,2025) :
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಜನರೊಂದಿಗೆ ನಿತ್ಯ ವ್ಯವಹರಿಸುವ ಇಲಾಖೆಯಾಗಿದ್ದು ಪಿಡಿಒಗಳು ಗ್ರಾಮೀಣ ಪ್ರದೇಶದ ಜನತೆಯ ಸಮಸ್ಯೆಗಳಿಗೆ ಸ್ಪಂದನಶೀಲರಾಗಿ ಪ್ರತಿಕ್ರಿಯಿಸಬೇಕು.ಗ್ರಾಮ ಪಂಚಾಯತಿಗಳು ಜನರ ಪಾಲ್ಗೊಳ್ಳುವಿಕೆಯ ಜನಾಡಳಿತದ ಕೇಂದ್ರಗಳಾಗಬೇಕು.ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರೂ ಗ್ರಾಮ ಪಂಚಾಯತಿಯ ಬಗ್ಗೆ ” ನಮ್ಮ ಪಂಚಾಯತಿ,ನಮ್ಮ ಹೆಮ್ಮೆ” ಎಂದು ಭಾವಿಸುವಂತೆ ಜನಸ್ನೇಹಿಗಳಾಗಿ ಕರ್ತವ್ಯ ನಿರ್ವಹಿಸಬೇಕು” ಎಂದು ಬೀದರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆಯವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅವರಿಂದು ಔರಾದ್ ತಾಲೂಕಾ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಔರಾದ ಮತ್ತು ಕಮಲನಗರ ತಾಲೂಕುಗಳ ಪಿಡಿಒಗಳು ಮತ್ತು ಅನುಷ್ಠಾನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎರಡು ತಾಲೂಕುಗಳ ಎಲ್ಲ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆ ಮಾಡುತ್ತ ಗಿರೀಶ ದಿಲೀಪ್ ಬದೋಲೆಯವರು’ ತೆರಿಗೆ ವಸೂಲಾತಿಯ ಸಂದರ್ಭದಲ್ಲಿ ಗ್ರಾಮೀಣ ಜನತೆಯ ಕಷ್ಟ ಸುಖಗಳನ್ನು ಅರ್ಥಮಾಡಿಕೊಂಡು ತೆರಿಗೆ ವಸೂಲಿ ಮಾಡಿ.ಮಳೆಯ ಕಾರಣದಿಂದ ಕೆಲಸ ಇಲ್ಲದೆ ಇರುವ ಬಡವರು ತೆರಿಗೆ ಕಟ್ಟಲು ಕಾಲಾವಕಾಶ ಕೇಳಿದರೆ ಅದಕ್ಕೆ ಸ್ಪಂದಿಸಿ. ಕಾರ್ಖಾನೆಗಳು, ಸಣ್ಣ ಉದ್ಯಮಗಳು,ಅಂಗಡಿಗಳು,ಹೊಟೆಲ್ ಗಳು,ವೈನ್ ಶಾಪ್ ಗಳಂತಹ ವಾಣಿಜ್ಯ ಸಂಸ್ಥೆಗಳಿಂದ ತೆರಿಗೆ ವಸೂಲು ಮಾಡಿ.ವಸೂಲಾದ ತೆರಿಗೆಯಲ್ಲಿ ಗ್ರಂಥಾಲಯ ಸೆಸ್ ತುಂಬಬೇಕು.ನರೆಗಾ ಯೋಜನೆಯಡಿ ಕೂಲಿಕಾರರಿಗೆ ಕೆಲಸ ಕೊಡಬೇಕು.ಎನ್ ಎಂ ಎಂ ಎಸ್ ಫೋಟೋಗಳು ದುರ್ಬಳಕೆ ಆಗಬಾರದು.ಕಾಮಗಾರಿಗಳ ಪೂರ್ಣಗೊಂಡ ಸರ್ಟಿಫಿಕೇಟ್ ಹಾಕಬೇಕು.ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಾಕಿ ಫಲಾನುಭವಿಗಳ ಆಯ್ಕೆ ಮತ್ತು ಜಿಪಿಎಸ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಮುಗಿಸಬೇಕು.ಸ್ವಚ್ಛ ಭಾರತ ಯೋಜನೆಯಡಿ ಪ್ರಗತಿಯಲ್ಲಿ ಇರುವ ವೈಯಕ್ತಿಕ ಶೌಚಾಲಯಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು.ಬೂದು ನೀರು ನಿರ್ವಹಣಾ ಘಟಕಗಳ ಕಾಮಗಾರಿಗಳನ್ನು ಬೇಗ ಪ್ರಾರಂಭಿಸಬೇಕು ಮತ್ತು ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ ಮೆಂಟ್ ,ಮಲತ್ಯಾಜ್ಯ ವಿಲೆವಾರಿ ಘಟಕಗಳ ನಿರ್ಮಾಣ ಕಾರ್ಯ ಕಾಲಮಿತಿಯಲ್ಲಿ ಮುಗಿಸಬೇಕು ‘ ಎಂದು ಡಾಕ್ಟರ್ ಗಿರೀಶ ದಿಲೀಪ್ ಬದೋಲೆಯವರು ಔರಾದ ಮತ್ತು ಕಮಲನಗರ ತಾಲೂಕುಗಳ ಪಿಡಿಒಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕಾಲ ಮಿತಿಯಲ್ಲಿ ಮುಕ್ತಾಯಗೊಳಿಸುವ ಹಾಗೂ ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ್ ಬದೋಲೆಯವರು ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳೊಂದಿಗೆ ತಾಲೂಕುಗಳ ಪ್ರಗತಿ ಪರಿಶೀಲನೆಗೆ ” ಪ್ರಗತಿ- ಪರಿವರ್ತನೆ ” ಎನ್ನುವ ನೂತನ ಕಾರ್ಯಕ್ರಮ ಹಮ್ಮಿಕೊಂಡು ವಾರಕ್ಕೊಮ್ಮೆ ತಾಲೂಕುಗಳಿಗೆ ಭೇಟಿ ನೀಡುವ ಉದ್ದೇಶ ಹೊಂದಿದ್ದು ಅದರ ಅಂಗವಾಗಿ ಇಂದು ಔರಾದ ತಾಲೂಕಿನಲ್ಲಿ ಔರಾದ ಮತ್ತು ಕಮಲನಗರ ತಾಲೂಕುಗಳ ಪ್ರಗತಿ ಪರಿಶೀಲನೆ ಮಾಡಲಾಯಿತು.
ಇಂದಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಯೋಜನಾ ನಿರ್ದೇಶಕ ಸೂರ್ಯಕಾಂತ ಬಿರಾದರ, ಸಹಾಯಕ ಕಾರ್ಯದರ್ಶಿ ಬೀರೇಂದ್ರಸಿಂಗ್ ಠಾಕೂರ್, ಆಡಳಿತ ವಿಭಾಗದ ಸಹಾಯಕ ನಿರ್ದೇಶಕ ಜಯಪ್ರಕಾಶ ಚೌಹಾಣ್,ಔರಾದ ತಾಪಂಯ ಕಾರ್ಯನಿರ್ವಾಹಕ ಅಧಿಕಾರಿ ಕಿರಣಪಾಟೀಲ್,ಕಮಲನಗರ ತಾಲೂಕಾ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತ್ರಾಯ ಕೌಟಗೆ, ಸಹಾಯಕ ನಿರ್ದೇಶಕ ಶಿವಕುಮಾರ್ ಘಾಟೆ,ನರೆಗಾ ಎಡಿಪಿಸಿ ದೀಪಕ್ ಕಡಿಮನಿ,ಎರಡು ತಾಲೂಕುಗಳ ಪಂಚಾಯತ್ ರಾಜ್ ಇಂಜನಿಯರಿಂಗ್ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು,ವಿವಿಧ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳು, ಎರಡು ತಾಲೂಕುಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಂಡಿದ್ದರು.ಶಿವಕುಮಾರ್ ಘಾಟೆಯವರು ಕಾರ್ಯಕ್ರಮವನ್ನು ನಿರ್ವಹಿಸಿದರು.