ಯಾದಗಿರಿ : ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಶಾಸಕ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗದ ರಾಜ್ಯ ಕಾರ್ಯದರ್ಶಿಗಳಾದ ರಂಗನಗೌಡ ಪಾಟೀಲ್ ದೇವಿಕೇರಿ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಅದರಲ್ಲೂ ಹಿಂದುಳಿದ ಕಲ್ಯಾಣ ಕರ್ನಾಟಕದಲ್ಲಿ ಪಕ್ಷ ನಿಷ್ಠೆಗೆ ಹೆಸರುವಾಸಿಯಾದ ರಾಜಾ ವೆಂಕಟಪ್ಪ ನಾಯಕರು ನಾಲ್ಕು ಸಾರಿ ಶಾಸಕರಾಗಿ ಸುರಪುರ ಮತ ಕ್ಷೇತ್ರದ ಅಭಿವೃದ್ಧಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಕಳೆದ 2023ರ ಚುನಾವಣೆಯಲ್ಲಿ ಆಯ್ಕೆಯಾದ ಮೇಲೆ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಆಯ್ಕೆಯಾದರು. ಆದರೆ ಅಧಿಕಾರ ವಹಿಸಿಕೊಂಡ ಸ್ವಲ್ಪ ದಿನದಲ್ಲೇ ನಿಧನರಾದರು. 2024ರ ಉಪ ಚುನಾವಣೆಯಲ್ಲಿ ಅವರ ಸುಪುತ್ರ ರಾಜಾ ವೇಣುಗೋಪಾಲ್ ನಾಯಕ ಸ್ಪರ್ಧೆ ಮಾಡಿ ಅತಿ ಹೆಚ್ಚು ಅಂತರದಿಂದ ಶಾಸಕರಾದರು. ಹಿಂದುಳಿದ ಭಾಗದ ಅಭಿರುದ್ದಿ ವಿಚಾರವಾಗಿ ಸುರಪುರ ಮತ ಕ್ಷೇತ್ರದ ರಾಜಾ ವೇಣುಗೋಪಾಲ್ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ವಿನಂತಿ ಮಾಡಿಕೊಂಡರು.