ಪಠ್ಯಪುಸ್ತಕ ವಿವಾದ– ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಪ್ರಬುದ್ಧತೆ ವ್ಯಕ್ತವಾಗಲಿ:ಮುಕ್ಕಣ್ಣ ಕರಿಗಾರ

ಸರಕಾರಿ ಪ್ರೌಢಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆ ನೆಪದಲ್ಲಿ ಕೆಲವು ಜನ ಸಮಾಜಸುಧಾರಕರ ಪಠ್ಯಗಳನ್ನು ಕೈಬಿಟ್ಟಬಗ್ಗೆ ಹಾಗೂ ಕರ್ನಾಟಕದ ಬಹುತ್ವಸಂಸ್ಕೃತಿಯ ಪ್ರತಿನಿಧಿಗಳಂತಿದ್ದ ಮಹತ್ವದ ಬರಹಗಾರರ ಲೇಖನ,ಕಥೆ,ಕಾವ್ಯವನ್ನು ಪಠ್ಯಪುಸ್ತಕಗಳಿಂದ ಕೈಬಿಟ್ಟಿರುವ ವಿವಾದ ದಿನದಿಂದ ದಿನಕ್ಕೆ ಕಾವು,ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ.ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ ವ್ಯಕ್ತಿಯೊಬ್ಬರು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರು ಆದರೆ ಹೇಗೆ ಎಂದು ನಾಡಿನ ಪ್ರಜ್ಞಾವಂತರುಗಳು ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ರೋಹಿತ್ ಚಕ್ರತೀರ್ಥ ಅವರನ್ನು ಪಿಯುಸಿ ಇತಿಹಾಸ ಪಠ್ಯಪುಸ್ತಕದ ಪರಿಶೀಲನಾ ಸಮಿತಿಗೂ ಅಧ್ಯಕ್ಷರನ್ನಾಗಿ ಮಾಡಲಾಗಿದೆ.ಇದೂ ಸಾಲದಂತೆ ಹೆಸರಾಂತ ಕವಿ,ಸಾಹಿತಿ ಏನೂ ಅಲ್ಲದ ಚಕ್ರವರ್ತಿ ಸೂಲಿಬೆಲೆ ಅವರ ಲೇಖನವನ್ನು ಪಠ್ಯದಲ್ಲಿ ಸೇರಿಸಲಾಗಿದೆ.ರೋಹಿತ್ ಚಕ್ರವರ್ತಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರು ಪತ್ರಿಕೆಗಳಿಗೆ ಬರೆಯುತ್ತಿದ್ದ,ಬರೆಯುತ್ತಿರುವ ಅಂಕಣ,ಲೇಖನಗಳನ್ನು ಓದಿದವರಿಗೆ ಅವರಿಬ್ಬರ ಸಾಹಿತ್ಯದ ಸತ್ತ್ವ- ತತ್ತ್ವ ಏನೆಂದು ಚೆನ್ನಾಗಿ ಗೊತ್ತಿರುತ್ತದೆ.ಅವರಿಬ್ಬರು ಖಂಡಿತವಾಗಿ ಹಿರಿಯ ಸಾಹಿತಿಗಳಲ್ಲ,ಕರ್ನಾಟಕದ ಸಮಷ್ಟಿ ಸಂಸ್ಕೃತಿಯ ಪ್ರತಿನಿಧಿಗಳಲ್ಲ.

ಸರಕಾರದ ಪಠ್ಯಪುಸ್ತಕ ಪರಿಷ್ಕರಣೆಯ ಕ್ರಮವನ್ನು ಒಪ್ಪದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ ‘ ಎದೆಗೆ ಬಿದ್ದ ಅಕ್ಷರ’ ಪಾಠವನ್ನು ಪಠ್ಯದಲ್ಲಿ ಸೇರಿಸಲು ಅನುಮತಿ ನಿರಾಕರಿಸಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.ಜಿ.ರಾಮಕೃಷ್ಣ ಅವರೂ ತಮ್ಮ ಲೇಖನ ಸೇರ್ಪಡೆಗೆ ಸಮ್ಮತಿ ಇಲ್ಲ ಎಂದಿದ್ದಾರೆ.ಈ ಸಾಲಿನಲ್ಲಿ ಮತ್ತಷ್ಟು ಬರಹಗಾರರು ಸೇರಬಹುದು.ಆದರೆ ಇದು ಒಳ್ಳೆಯಬೆಳವಣಿಗೆಯಲ್ಲ ಮತ್ತು ಸರಕಾರ ಸಾಹಿತಿಗಳ ಈ ಕ್ರಮವನ್ನು ಹಗುರವಾಗಿ ಪರಿಗಣಿಸಬಾರದು.ದೇವನೂರು ಮಹಾದೇವ ಅವರು ನಾಡಿನ ಹೆಮ್ಮೆ,ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ಬರಹಗಾರರಲ್ಲೊಬ್ಬರು.ಕುವೆಂಪು ಅವರ ನಂತರ ವೈಚಾರಿಕತೆ,ಸಮಸಮಾಜ ನಿರ್ಮಾಣ,ಸರ್ವೋದಯ ಸಂಸ್ಕೃತಿಯ ನಿರ್ಮಾಣಕ್ಕೆ ಬದ್ಧರಾಗಿರುವ ಹಿರಿಯರು.ಅಂಥವರ ನೋವು,ಬೇಸರವನ್ನು ಸರಕಾರವು ಅರ್ಥಮಾಡಿಕೊಳ್ಳಬೇಕು. ರೋಹಿತ್ ಚಕ್ರತೀರ್ಥ ಅವರನ್ನು ಬೆಂಬಲಿಸುವ ಭರದಲ್ಲಿ ನಾಡಿನ ಸಾಂಸ್ಕೃತಿಕ ಪ್ರತಿನಿಧಿಗಳಾದ ಮತ್ತು ನಾಡಿನ ಸಾಹಿತ್ಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ ಕವಿ,ಸಾಹಿತಿ,ಲೇಖಕರುಗಳನ್ನು ಕಡೆಗಣಿಸಬಾರದು.ಸರಕಾರ ಯಾವುದೇ ಪಕ್ಷದ್ದಾಗಿರಲಿ ಶಿಕ್ಷಣ ನಾಡಿನ ಸರ್ವರ ಅಭ್ಯದಯದ ವಿಷಯ.ಉತ್ತಮ ಸಮಾಜದ ನಿರ್ಮಾಣ ಗುರಿ ನಮಗಿದ್ದರೆ ಉತ್ತಮ ಶಿಕ್ಷಣ ಕೊಡುವುದೂ ಕೂಡ ಮುಖ್ಯವಾಗಬೇಕು.ಉತ್ತಮ ಶಿಕ್ಷಣ ಎಂದರೆ ಪ್ರಬುದ್ಧ ಪಠ್ಯಕ್ರಮ ಎಂದರ್ಥ.

ಟಿಪ್ಪುಸುಲ್ತಾನ್ ಅವರ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು.ಆದರೆ ನಾಡು ಕಂಡ ಸರ್ವಶ್ರೇಷ್ಠ ಕವಿ,ದಾರ್ಶನಿಕ ಕುವೆಂಪು ಅವರ ಅವಹೇಳನ ಸಲ್ಲದು,ಕುವೆಂಪು ಅವರನ್ನು ಅವಹೇಳನ ಮಾಡಿದವರಿಗೆ ಮನ್ನಣೆಯೂ ಬೇಡ.ಹಾಗೆಯೇ ಮಹಾತ್ಮಗಾಂಧಿ,ಡಾ.ಬಿ ಆರ್ ಅಂಬೇಡ್ಕರ ಅವರ ಜೀವನ- ಸಾಧನೆಗಳನ್ನು ನಮ್ಮ ವಿದ್ಯಾರ್ಥಿಗಳಿಗೆ ಬೋಧಿಸಲೇಬೇಕು.ಸಮಾಜಸುಧಾರಕರುಗಳಾದ ಬಸವಣ್ಣ,ಕನಕದಾಸ,ನಾರಾಯಣಗುರು ಮತ್ತು ಪೆರಿಯಾರ ಅವರ ಸಮಸಮಾಜ ನಿರ್ಮಾಣದ ಪ್ರಯತ್ನಗಳು ಮಕ್ಕಳಲ್ಲಿ ಸ್ಫೂರ್ತಿಯನ್ನುಂಟು ಮಾಡುತ್ತವೆ.ಸಮಾಜ ಸುಧಾರಕರು ಯಾರೇ ಆಗಿರಲಿ,ಯಾವ ಜಾತಿಯವರೇ ಆಗಿರಲಿ,ಯಾವ ರಾಜ್ಯದವರೇ ಆಗಿರಲಿ ಅವರು ದೇಶಾತೀತರು,ಕಾಲಾತೀತರು,ಅವರ ಬದುಕು- ಬರಹಗಳು ಮಕ್ಕಳ ಬೌದ್ಧಿಕ ವಿಕಾಸಕ್ಕೆ ಅವಶ್ಯಕ.

ಪಠ್ಯಪುಸ್ತಕ ರಚನೆ ಒಂದು ಮಹತ್ವದ ಜವಾಬ್ದಾರಿ.ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರ ನೇತೃತ್ವದಲ್ಲಿನ 27 ಸಮಿತಿಗಳು ಅದನ್ನು ಸಮರ್ಪಕವಾಗಿ,ನಾಡಿನ ಸಂಸ್ಕೃತಿಗೆ ದೇಶದ ಅಖಂಡತೆಗೆ,ಸಾರ್ವಭೌಮತೆಗೆ ಧಕ್ಕೆ ತರದ ಹಾಗೆ ನಿರ್ವಹಿಸಿವೆ.ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ರಚನೆಯಾದ ಪಠ್ಯಪುಸ್ತಕಗಳಲ್ಲಿ ಲೋಪದೋಷಗಳಿದ್ದರೆ ಪರಿಷ್ಕರಿಸಬಹುದಿತ್ತು.ಪರಿಷ್ಕರಣೆಯ ಹೆಸರಿನಲ್ಲಿ ,ಸಂವಿಧಾನದ ಆಶಯಗಳಿಗೆ,ಪಠ್ಯಪುಸ್ತಕಗಳ ಮೌಲ್ಯಕ್ಕೆ ಧಕ್ಕೆಯೊದಗಬಾರದು

ಅಂಬೇಡ್ಕರ ಅವರ ಸಂವಿಧಾನ ಇದೆಯಂದೇ ಈ ದೇಶದಲ್ಲಿ ದಲಿತರು,ಶೂದ್ರರು ,ಬಡವರು ನಿರ್ಭೀತಿಯಿಂದ ಬದುಕುತ್ತಿದ್ದಾರೆ.ನಾರಾಯಣಗುರು ಅವರು ಬ್ರಾಹ್ಮಣರ ಹುಸಿ ಪ್ರತಿಷ್ಠೆಯನ್ನು ಅಲ್ಲಗಳೆದು ದಲಿತರು,ಶೂದ್ರರಲ್ಲಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದವರು.ಬಸವಣ್ಣ,ಕನಕದಾಸ ಮತ್ತು ನಾರಾಯಣಗುರುಗಳಂತಹ ಮಹನೀಯರ ಬದುಕು ಬರಹಗಳನ್ನು ಮಕ್ಕಳು ಕಲಿತಾಗಲೇ ಅವರ ವ್ಯಕ್ತಿತ್ವ ಪೂರ್ಣವಾಗಿ ವಿಕಸನಗೊಳ್ಳುತ್ತದೆ.ಭಾರತವು ಬಹುಸಂಸ್ಕೃತಿಗಳ ನಾಡು.ಬಹುತ್ವವು ದೇಶದ ಬಲ.ಸಮರಸ,ಸೌಹಾರ್ದಗಳು ಕರ್ನಾಟಕದ ಅಂತಃಸತ್ತ್ವ.ಕರ್ನಾಟಕವು ನಿಜವಾದ ಅರ್ಥದಲ್ಲಿ ‘ ಸರ್ವಜನಾಂಗದ ಶಾಂತಿಯ ತೋಟ’.ಸರ್ವಜನಾಂಗದ ಶಾಂತಿಯ ತೋಟದ ಸಮನ್ವಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವಂತಹ ಪಠ್ಯಪುಸ್ತಕಗಳಿರಬೇಕು.ಬನ್ನಂಜೆ ಗೋವಿಂದಾಚಾರ್ಯರು ಮಾಧ್ವಸಂಸ್ಕೃತಿಯ ಪ್ರತಿಪಾದಕರು,ಶೈವ ಸಂಸ್ಕೃತಿಯ ಮೇಲೆ ಪ್ರಹಾರ ಮಾಡಿದವರು.ಉಡುಪಿಯ ಕನಕನ ಕಿಂಡಿಯ ಐತಿಹಾಸಿಕ ಸತ್ಯವನ್ನೇ ಸುಳ್ಳಾಗಿಸುವ ಪ್ರಯತ್ನ ಮಾಡಿದವರು.ಅಂಥವರ ಬದುಕು- ಬರಹಗಳನ್ನು ನಾಡಿನ ಬಹುಸಂಖ್ಯೆಯಲ್ಲಿರುವ ಹಿಂದುಳಿದ,ದಲಿತ ಮಕ್ಕಳು ಏಕೆ ಕಲಿಯಬೇಕು?

ನಮ್ಮ ಪಠ್ಯಪುಸ್ತಕಗಳಲ್ಲಿ ಕರ್ನಾಟಕದ ಜನಪದರ ಇತಿಹಾಸ,ಸಂಸ್ಕೃತಿಗಳು ಅಭಿವ್ಯಕ್ತಗೊಳ್ಳಬೇಕು.ವಚನಸಾಹಿತ್ಯ- ದಾಸ ಸಾಹಿತ್ಯದ ಉತ್ತಮ ವಚನ ಕೀರ್ತನೆಗಳನ್ನು ಮಕ್ಕಳು ಓದಬೇಕು.ಬಸವಣ್ಣ,ಅಲ್ಲಮಪ್ರಭು,ಅಕ್ಕಮಹಾದೇವಿ,ಚೆನ್ನಬಸವಣ್ಣ,ಸಿದ್ಧರಾಮರಂತಹ ಮಹತ್ವದ ವಚನಕಾರರು,ಕನಕದಾಸರು- ಪುರಂದರದಾಸರಂತಹ ಹಿರಿಯ ದಾಸರು,ಸರ್ವಜ್ಞ,ಹರಿಹರ,ಕುಮಾರವ್ಯಾಸ,ಚಾಮರಸರಂತಹ ಕವಿಗಳಲ್ಲದೆ ನಾಡಿನ ಸಾಹಿತ್ಯಲೋಕಕ್ಕೆ ಅಪೂರ್ವ ಕೊಡುಗೆ ನೀಡಿದ ಜೈನಮತಾವಲಂಬಿಗಳಾದ ಪಂಪ,ಜನ್ನ,ರನ್ನ,ಪೊನ್ನರನ್ನು ವಿದ್ಯಾರ್ಥಿಗಳು ಓದಬೇಕು. ಜ್ಞಾನಪೀಠ ಪ್ರಶಸ್ತಿಪುರಸ್ಕೃತರ ಸಾಹಿತ್ಯ ಪರಿಚಯ ವಿದ್ಯಾರ್ಥಿಗಳಿಗೆ ಆಗಬೇಕು. ಕೆ ಎಸ್ ನಿಸಾರ್ ಅಹ್ಮದ್ ಮತ್ತು ಬಿ ಎ ಸನದಿಯವರ ಸಾಹಿತ್ಯದ ಗುಣಮೌಲ್ಯವನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು.ಶಿಶುನಾಳ ಶರೀಫರ ಸಂತ ವ್ಯಕ್ತಿತ್ವ ಮಕ್ಕಳ ಮನಸ್ಸುಗಳನ್ನು ಅರಳಿಸುತ್ತದೆ.ರಾಮಕೃಷ್ಣ ಪರಮಹಂಸರು,ವಿವೇಕಾನಂದರು,ಅರವಿಂದರು,ರಮಣಮಹರ್ಷಿಗಳು ಮತ್ತು ಮಹಾತಪಸ್ವಿ ಶ್ರೀಕುಮಾರಸ್ವಾಮಿಗಳವರ ಬದುಕು,ಅದ್ಭುತ ಸಾಧನೆಗಳ ಸಿದ್ಧ ವ್ಯಕ್ತಿತ್ವದ ಪರಿಚಯವೂ ಮಕ್ಕಳಿಗೆ ಆಗಬೇಕು.ವಿಶ್ವೇಶ್ವರಯ್ಯನವರಂತಹ ಪ್ರತಿಭಾವಂತರ ಬಗ್ಗೆಯೂ ಮಕ್ಕಳು ತಿಳಿದುಕೊಳ್ಳಬೇಕು.ಕಲಬುರ್ಗಿಯ ಶರಣಬಸವೇಶ್ವರರಂತಹ ದಾಸೋಹಿಗಳು,ಶಿವಕುಮಾರಸ್ವಾಮಿಗಳಂತಹ ತ್ರಿವಿಧ ದಾಸೋಹಿಗಳ ಲೋಕಕಲ್ಯಾಣಗುಣದ ಬಗ್ಗೆಯೂ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು.ಇಂತಹ ಮಹನೀಯರುಗಳು ನಮ್ಮ ಮಕ್ಕಳು ಕಲಿಯುತ್ತಿರುವ ಪಠ್ಯಪುಸ್ತಕಗಳಲ್ಲಿ ಇರಬೇಕು.

ಭಾರತದ ಸಂವಿಧಾನದ ಪರಿಚಯ ವಿದ್ಯಾರ್ಥಿಗಳಿಗೆ ಆಗಲೇಬೇಕು.ಭಾರತೀಯ ಸಮಾಜದ ವಿಭಿನ್ನ ಸಂಸ್ಕೃತಿ,ವಿವಿಧತೆಯಲ್ಲಿ ಏಕತೆಯ ಆದರ್ಶ ಮಕ್ಕಳನ್ನು ಸ್ಫೂರ್ತಗೊಳಿಸಬೇಕು.ಸರಕಾರದ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ನಾಡಿನ ಸಮಸ್ತ ಜನಸ್ತೋಮವನ್ನು ಪ್ರಭಾವಿಸುವ ಇಲಾಖೆಗಳು.ಈ ಎರಡು ಇಲಾಖೆಗಳು ನಾಡಿನ ಸಮಷ್ಟಿ ಹಿತವನ್ನೇ ಲಕ್ಷ್ಯದಲ್ಲಿರಿಸಿಕೊಂಡಿರಬೇಕು.

‌ 25.05.2022

About The Author